ದೇವರು ಅರಳಿಸಿದ ಪಾರಿಜಾತ

7

ದೇವರು ಅರಳಿಸಿದ ಪಾರಿಜಾತ

Published:
Updated:
ದೇವರು ಅರಳಿಸಿದ ಪಾರಿಜಾತ

ಅದು ಈ ಜಗತ್ತಿನ ಪರಮವೈರಿ, ಅದನ್ನು ಗೆಲ್ಲುವ ಸಲುವಾಗಿಯೇ ಮನುಜ, ಪಶು, ಪಕ್ಷಿ, ಹುಳ-ಹುಪ್ಪಟೆ ಅಷ್ಟೇ ಯಾಕೆ, ಸೂಕ್ಷ್ಮ ಜೀವಿಗಳು ಸಹ ನಿರಂತರವಾಗಿ ಹೋರಾಡುತ್ತಿವೆ. ಅದು ನಿಷ್ಕರುಣಿ. ಅದಕ್ಕೆ ನಮ್ಮನ್ನು ಅಲ್ಲಾಡಿಸಿ ಬಿಸಾಕುವ ತಾಕತ್ತಿದೆ. ಅದು ದಾಳಿ ಮಾಡಲು ಶುರುವಿಟ್ಟರೆ ಎಂಥವರೂ ಸಹಿತ ಅದರ ಮುಂದೆ ತಲೆ ತಗ್ಗಿಸಲೇಬೇಕು. ರಣಹದ್ದು ಕೊಕ್ಕಿನ ಮುಖೇನ ಪುಟ್ಟ ಕಂದಮ್ಮನ ಮೇಲೆ ಕಣ್ಣು ಹಾಕುತ್ತಿದ್ದ ನೋಟ ಸೆರೆ ಹಿಡಿದುದ್ದಕ್ಕಾಗಿ ಆ ಛಾಯಾಗ್ರಾಹಕನಿಗೆ ಪ್ರಶಸ್ತಿಯನ್ನು ತಂದುಕೊಡಲು ಕಾರಣವಾಗಿದ್ದೂ ಅದೇ. ಅದರ ಹೆಸರು 'ಹಸಿವು' ಅಂತ.

ಇಂತಿಪ್ಪ ಹಸಿವು ನನ್ನನ್ನು ಕಾಡಿದ ಪರಿ ಮಾತ್ರ ಕೊಂಚವೇ. ಆದರೆ, ಅದು ನನಗೆ ಮಾನವ ಪ್ರೇಮ ಇನ್ನೂ ಈ ಸಮಾಜದಲ್ಲಿ ಉಳಿದಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ಆದದ್ದಿಷ್ಟು: ಆತ್ಮೀಯ ಸ್ನೇಹಿತರೊಬ್ಬರ ಮದುವೆ ಮುಗಿಸಿ ಬೀದರ್‌ನಿಂದ ಬೆಂಗಳೂರಿಗೆ ಹೊರಡುವ ಸಲುವಾಗಿ ಸಂಜೆ ಆರು ಗಂಟೆಗೆ ನಾನು ಮತ್ತು ನನ್ನ ಚಿಕ್ಕಪ್ಪನ ಮಗ ರೈಲು ಹತ್ತಿ ಕುಳಿತುಕೊಂಡೆವು. ಹೇಗಿದ್ದರೂ ರೈಲಿನಲ್ಲಿ ಊಟ ಸಿಗುತ್ತದೆ ಎನ್ನುವ ನಂಬಿಕೆಯಿಂದ ನಾವು ಊಟ ಅಥವಾ ತಿಂಡಿ ಕಟ್ಟಿಸಿಕೊಂಡಿರಲಿಲ್ಲ.

ರೈಲಿನೊಳಗೆ ಹೀಗೇ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತಾ, ನಡುವೆ ಮೊಬೈಲ್ ಫೋನನ್ನು ಆಗಾಗ ವಿಚಾರಿಸಿಕೊಳ್ಳುತ್ತಾ, ವಾಟ್ಸ್‌ಆ್ಯಪ್ , ಫೇಸ್ಬುಕ್ ಎನ್ನುತ್ತಾ ಪ್ರಯಾಣಿಸುತ್ತಿದ್ದೆವು. ಒಂದೆರಡು ಗಂಟೆ ಆಗುತ್ತಿದ್ದ ಹಾಗೆ, ಹೊಟ್ಟೆ ಹಸಿಯಲು ಶುರುವಾಯಿತು. ಇನ್ನೇನು ಊಟ ಮಾಡೋಣ ಎಂದುಕೊಂಡು ರೈಲಿನಲ್ಲಿ ಸಿಗುವ ಅದೇ ಅಂಡಾ ಬಿರಿಯಾನಿ, ವೆಜ್ ಪಲಾವ್‌ಗಳ ನಿರೀಕ್ಷೆಯಲ್ಲಿ ಇದ್ದ ನಮಗೆ ರಾತ್ರಿ ಒಂಬತ್ತಾದರೂ ಊಟದ ಪೊಟ್ಟಣ ಮಾರುವ ವ್ಯಕ್ತಿಗಳ ಧ್ವನಿ ಕೇಳಲೇ ಇಲ್ಲ.

ಅಷ್ಟೊತ್ತಿಗೆಲ್ಲಾ ಹೊಟ್ಟೆಯ ಒಳಗಡೆ ಹಸಿವು ಎಂಬ ಹುರುಪಿನ ಹುಡುಗ, ಸ್ವಾತಂತ್ರ್ಯ ದಿವಸಕ್ಕೆ ಬ್ಯಾಂಡ್ ಸೆಟ್ಟು ಬಾರಿಸುವ ವಿದ್ಯಾರ್ಥಿಯಂತೆ ಒಂದೇ ಸಮನೆ ಬಾರಿಸಲು ಶುರು ಮಾಡಿದ. ಊಟ ಸಿಗಬಹುದಾದ ನಮ್ಮ ನಿರೀಕ್ಷೆ ಹುಸಿಯಾಗಲು ಶುರುವಾಯಿತು. ಬೀದರ್‌ನಿಂದ ಹೊರಟ ರೈಲು ಸೇಡಂ ತಲುಪುವ ಹೊತ್ತಿಗೆ ಹಸಿವಿನ ಮೇಲಿನ ನಮ್ಮ ಸೇಡು ಕೂಡ ಜಾಸ್ತಿ ಆಗುತ್ತಾ ಹೋಯಿತು. ಇದರ ನಡುವೆ ಪಿಲ್ಲೋ, ಬೆಡ್ ಶೀಟು ಕೊಡಲು ಬಂದ ವ್ಯಕ್ತಿಯನ್ನು ಊಟದ ಬಗ್ಗೆ ಕೇಳಿದ್ದಕ್ಕೆ ಆತ ‘ರೈಲಲ್ಲಿ ಈವತ್ತು ಊಟ ಸಿಗೋದು ಡೌಟು ಸಾರ್, ಮುಂದೆ ಯಾವ್ದಾದ್ರೂ ಸ್ಟೇಶನ್‌ನಲ್ಲಿ ಟ್ರೈ ಮಾಡಿ’ ಅಂತ ಹೊರಟು ಹೋದ.

ನಮ್ಮ ದುರಾದೃಷ್ಟವಶಾತ್ ರೈಲಿನಲ್ಲಿ ಊಟ ಬೇಡ, ಕಡೇ ಪಕ್ಷ ಚಿಪ್ಸು, ಬಿಸ್ಕೆಟ್, ಬೇಲ್ ಪುರಿ, ಮಸಾಲ್ ವಡಾಗಳನ್ನು ಮಾರುವವರು ಸಹ ಬರಲಿಲ್ಲ. ಅಷ್ಟೊತ್ತಿಗೆ ರೈಲು ಚಿತ್ತಾಪೂರವನ್ನು ತಲುಪಿತ್ತು. ಹಸಿವಿನಿಂದ ನಮ್ಮ ಚಿತ್ತ ಪೂರಾ ಕೆಟ್ಟಿತ್ತು. ಇದರ ನಡುವೆ ಎರಡು ಬಾಟಲಿ ನೀರನ್ನು ಮುಲಾಜಿಲ್ಲದೆ ಮುಗಿಸಿದ್ದೆವು. ಸಮಯ ರಾತ್ರಿ ಹತ್ತುಗಂಟೆ ಆಗಿತ್ತು, ಅಂತಹ ಹೊತ್ತಿನಲ್ಲಿ ನಮ್ಮ ಪಕ್ಕದ ಸೀಟಿನವರು ಮಾತ್ರ ಗಡದ್ದಾಗಿ ಚಪಾತಿಗಳನ್ನು ಚಚ್ಚುತ್ತಿದ್ದರೆ, ನಮಗೂ ತಿನ್ನಲು ಚಪಾತಿ ಏನಾದರೂ ಕೊಟ್ಟಾರೇನೋ ಅಂತ ಆಸೆಗಣ್ಣಿನಿಂದ ನೋಡಿದ್ದು ಉಪಯೋಗಕ್ಕೆ ಬರಲಿಲ್ಲ.

ಏನೇನೆಲ್ಲಾ ಪವಾಡಗಳನ್ನು ಮಾಡಿದ್ದ ಯೇಸುಕ್ರಿಸ್ತ ಪ್ರತ್ಯಕ್ಷವಾಗಿ ತನ್ನ ಪವಾಡದಿಂದ ರೊಟ್ಟಿಗಳನ್ನು ನಮಗಾಗಿ ಈಗ ಸೃಷ್ಟಿಸಿ ಕೊಡಬಾರದೇ ಎಂದೆನಿಸುತ್ತಿತ್ತು. ನನ್ನ ಹೊಟ್ಟೆಯ ಮೇಲೆ ಹಸಿವು ಎಂಬ ಸೈನಿಕರು ಆಕ್ರಮಣ ಮಾಡುತ್ತಿದ್ದರೂ, ಪರ್ಸಿನೊಳಗಿಟ್ಟ ದುಡ್ಡಿನೊಳಗೆ ಗಾಂಧೀ ತಾತ ನಮಗೆ ಹಸಿವಿನಿಂದ ಸ್ವಾತಂತ್ರ್ಯ ಕೊಡಿಸದೆ ಅಸಹಾಯಕನಾಗಿದ್ದ. ಫೇಸ್ಬುಕ್ಕಿನಲ್ಲಿ ಹಾಕಿದ್ದ ಮದುವೆಯ ಫೋಟೋಗೆ ಪಟ ಪಟ ಅಂತ ಲೈಕುಗಳು ಬೀಳುತ್ತಿದ್ದರೂ ಮನಸ್ಸಿಗೆ ಖುಷಿಯಾಗಲಿಲ್ಲ.

ಹಸಿವು ಹಿಂಡುತ್ತಿತ್ತು. ಹಸಿದ ಹೊಟ್ಟೆಯಲ್ಲಿ ಮಲಗಿದರೆ ನಿದ್ರೆ ಹತ್ತುವುದಿಲ್ಲ ಎಂದು ತಿಳಿದಿದ್ದರಿಂದ ರಾತ್ರಿಯನ್ನು ಹೇಗೆ ಕಳೆಯುವುದು ಎಂದು ದಿಗಿಲಾಗಿತ್ತು. ಏನೂ ಮಾಡಲಾಗದೆ ಒದ್ದಾಡುತ್ತಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ಡುಮ್ಮ ಹೊಟ್ಟೆಯ ಬ್ಯಾಂಕಿನೊಳಗೆ ನಾನು ಇಷ್ಟು ದಿನದಿಂದ ಠೇವಣಿ ಇಟ್ಟುಕೊಂಡಿದ್ದ ಕೊಬ್ಬಿನಾಂಶ ಕೂಡ ನನ್ನ ಹಸಿವನ್ನು ನೀಗಿಸುವಲ್ಲಿ ವಿಫಲವಾಗುತ್ತಾ ಹೋಯಿತು. ಮದುವೆಯ ಹಿಂದಿನ ದಿನ ರಾತ್ರಿ ಪಾರ್ಟಿಯೊಳಗೆ ನಾವು ವೇಸ್ಟ್ ಮಾಡಿದ್ದ ರೋಟಿ, ತಂದೂರಿ ಚಿಕನ್ ಪೀಸುಗಳು ಥೇಟು ಕೊಳ್ಳಿ ದೆವ್ವಗಳಂತೆ ನಮ್ಮ ಕಣ್ಣಮುಂದೆ ಸುಳಿದಾಡಲು ಶುರುವಾದವು. ಹಸಿವು ಇಷ್ಟೊತ್ತಿಗಾಗಲೇ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು, ನಮ್ಮೊಂದಿಗೆ ಗಾಢವಾಗಿ ಸ್ನೇಹ ಬೆಳಸಿಕೊಂಡು ಬಿಟ್ಟಿತ್ತು. ದುಡ್ಡು, ಪೇಟಿಎಂ, ಡೆಬಿಟ್ ಕಾರ್ಡುಗಳಾವುವೂ ನಮ್ಮ ಹಸಿವನ್ನು ನೀಗಿಸದೆ ತೆಪ್ಪಗಿದ್ದವು.

ನಂಬಿಕೆ ಕಳೆದುಕೊಂಡು ಕುಳಿತಿದ್ದ ನಮ್ಮನ್ನು ಮತ್ತೆ ಅದೇ ಪಿಲ್ಲೋ ಬೆಡ್ಶೀಟು ಮಾರುವ ವ್ಯಕ್ತಿ ಒಂದರ್ಧ ಗಂಟೆಯ ಬಳಿಕ ಬಂದು ‘ಸಾರ್ ಊಟ ಸಿಕ್ತಾ?’ ಅಂತ ಕೇಳಿದ್ದಕ್ಕೆ ನಾವಿಬ್ಬರೂ ‘ಇಲ್ಲಾ’ ಅಂತ ದುಃಖಭರಿತವಾಗಿ ಹೇಳಿದೆವು. ನಮ್ಮ ಸ್ಥಿತಿಯನ್ನು ಕಂಡು ಆತನಿಗೂ ನಮ್ಮ ಮೇಲೆ ಕನಿಕರ ಮೂಡಿತು. ಅದಕ್ಕೆ ಆತ ‘ಸಾರ್ ನನ್ಹತ್ರ ಎರಡು ಊಟದ ಪ್ಯಾಕ್‌ಗಳಿವೆ. ಒಂದನ್ನು ಬೇಕಾದ್ರೆ ನಿಮಗೆ ಕೊಡ್ತೀನಿ. ಅನ್ನ, ಪಲ್ಯ, ಸಾರು, ಮೊಸರು ಎಲ್ಲಾ ಇವೆ. ಆದರೆ, ಹಪ್ಪಳ ಮಾತ್ರ ನಾನು ತಿಂದುಬಿಟ್ಟಿದ್ದೀನಿ, ಬನ್ನಿ ಸಾರ್ ಕೊಡ್ತೀನಿ’ ಅಂತ ಹೇಳಿದಾಗ ಆದ ಖುಷಿ ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ಕಪ್ಪು ಹಣಕ್ಕಿಂತ ಜಾಸ್ತಿ ಆಗಿತ್ತು.

ಅನಿರೀಕ್ಷಿತ ಆಹ್ವಾನದ ಕರೆಯನ್ನು ಕೇಳಿದ್ದೇ ತಡ ನನಗೆ ಚೈತನ್ಯ ಬಂದು ಬಿಟ್ಟಿತು. ಆದರೂ ನಾಮಕಾವಸ್ಥೆಗೆ ‘ಅಯ್ಯೋ ಬೇಡ ಬಿಡಿ, ನೀವು ಊಟ ಮಾಡಿ’ ಎಂದೆ, ಅದಕ್ಕಾತ ‘ಖಾಲಿ ಹೊಟ್ಟೆಯಲ್ಲಿ ಮಲ್ಗೋಕಾಗಲ್ಲ ಬನ್ನಿ ಸಾರ್, ಎ.ಸಿ ಕೋಚ್ ಹತ್ರ’ ಅಂತೇಳಿ ಮುಂದೆ ಹೊರಟ.

ನಾನು ಆತನ ಹಿಂದೆ ಹಸಿದ ಕರುವು, ಹಾಲಿಗಾಗಿ ತನ್ನ ತಾಯಿಯ ಬೆನ್ನು ಹತ್ತುವಂತೆ, ಧಾವಂತವಾಗಿ ಹೊರಟೆ. ಪುಣ್ಯಾತ್ಮ ತನಗಾಗಿ ಇಟ್ಟುಕೊಂಡಿದ್ದ ಊಟದ ಪಾಲನ್ನು ನಮಗೆ ಕೊಟ್ಟ. ಪ್ರತಿಫಲವಾಗಿ ನಾನು ನೂರು ರೂಪಾಯಿ ಕೊಡಲು ಹೋದೆ. ಅದಕ್ಕಾತ ಪ್ರಾರಂಭದಲ್ಲಿ ನಿರಾಕರಿಸಿದ, ನಾನು ಬಲವಂತ ಮಾಡಿದ್ದಕ್ಕೆ, ತಾನು ಊಟಕ್ಕಾಗಿ ತೆತ್ತಿದ್ದ ಐವತ್ತು ರೂಪಾಯಿಯನ್ನಷ್ಟೇ ತೆಗೆದುಕೊಂಡು ಉಳಿದ ಚಿಲ್ಲರೆ ಕೊಟ್ಟ. ನಾನು ಆತನಿಗೆ ಕಣ್ಣಲ್ಲೇ ಸಂತಸ ಸೂಚಿಸಿ, ಆ ಅನ್ನದ ಪೊಟ್ಟಣವನ್ನು, ಅಮೃತವೆಂಬಂತೆ ಜೋಪನಾವಾಗಿ ಹಿಡಿದುಕೊಂಡು ಬಂದು ನಮ್ಮ ಸೀಟಿನ ಮೇಲೆ ಕುಳಿತು, ನಾನು ನಮ್ಮ ಚಿಕ್ಕಪ್ಪನ ಮಗ ತಡ ಮಾಡದೇ, ಊಟವನ್ನು ಅನುಭವಿಸುತ್ತಾ ‘ಭೂತಯ್ಯನ ಮಗ ಅಯ್ಯು’ ಸಿನಿಮಾದಲ್ಲಿ ಬರುವ ಊಟದ ಸೀನಿನಂತೆ ತಿಂದು ಮುಗಿಸಿದೆವು. ಉಳಿದ ನೀರು ಕುಡಿದು ನೆಮ್ಮದಿಯ ತೇಗು ತೆಗೆದು, ಮಲಗಿಕೊಂಡೆವು.

ಏನೆಲ್ಲಾ ಇದ್ದರೂ ಹಸಿವು ನೀಗಿಸಿಕೊಳ್ಳಲಾಗದೇ ಇದ್ದ ನಮಗೆ, ದೇವರು ಪಿಲ್ಲೋ-ಬೆಡ್ಶೀಟು ಮಾರುವ ಆ ವ್ಯಕ್ತಿಯ (ಅರುಣ್) ರೂಪದಲ್ಲಿ ಬಂದು ಪ್ರಸಾದ ದಯಪಾಲಿಸಿದ್ದ. ಮಾನವೀಯತೆ ಎಂಬ ಪಾರಿಜಾತದ ಹೂವನ್ನು ನಮ್ಮ ರೈಲಿನ ಬೋಗಿಯೊಳಗೆ ಅರಳಿಸಿ ಹೋಗಿದ್ದ. ಅಂತಹ ಆಪತ್ಕಾಲದಲ್ಲಿ ನಮ್ಮ ಹೊಟ್ಟೆಯೊಳಗೆ ಗಹಗಹಿಸಿ ನಗುತ್ತಿದ್ದ ಹಸಿವಿನ ರಾಕ್ಷಸನನ್ನು, ಸಂಹಾರ ಮಾಡಿದ ಆ ಅಪರಿಚಿತ ದೇವರಿಗೊಂದು ಧನ್ಯವಾದ ಹೇಳುವ ಸಲುವಾಗಿ ಇಷ್ಟೆಲ್ಲಾ ಬರೆಯಬೇಕಾಯಿತು. ಇಂತಹ ಸಹಜ ಮಾನವ ಪ್ರೀತಿ ಕೊನೆಯಾಗದಿರಲಿ. ನಿಮಗೂ ಮನುಷ್ಯತ್ವದ ಮೇಲಿನ ನಂಬಿಕೆ ನೂರ್ಮಡಿಯಾಗಲಿ ಎಂಬುದೊಂದೇ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry