ಭಾನುವಾರ, ಮಾರ್ಚ್ 7, 2021
20 °C

ಕಂಗೆರಬೆಟ್ಟುವಿನ ಯುವ ಭಗೀರಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಗೆರಬೆಟ್ಟುವಿನ ಯುವ ಭಗೀರಥ

ಮೂಡುಬಿದ್ರೆಯಿಂದ ಸಿದ್ದಕಟ್ಟೆ ಬಸ್‌ ನಿಲ್ದಾಣದಲ್ಲಿ ಇಳಿದು ಎಡಬದಿಯ ರಸ್ತೆಯಲ್ಲಿ ಒಂದು ಕಿ.ಮೀ. ಕ್ರಮಿಸಿದರೆ ಸಿಗುವುದೇ ಕಂಗೆರಬೆಟ್ಟು. ಇಲ್ಲಿಯ ಅಭಿಷೇಕ್ ಗಟ್ಟಿಯವರು ಭೌತವಿಜ್ಞಾನದಲ್ಲಿ ಎಂ.ಎಸ್ಸಿ. ಪದವೀಧರರು, ಬೆಲ್ಜಿಯಂನಲ್ಲಿ ಉದ್ಯೋಗಿಯಾಗಿದ್ದರು. ಅವರಿಗೆ ಅದರಲ್ಲಿ ತೃಪ್ತಿ ಇರಲಿಲ್ಲ, ನಂತರ ಮತ್ತೊಂದು ಕಂಪನಿ ಸೇರಿ ಸ್ವೀಡನ್‌ಗೆ ಸ್ಥಳಾಂತರಗೊಂಡರು.

ಆದರೆ, ಊರಿಗೆ ಹೋಗಿ ಕೃಷಿ ಮಾಡಬೇಕು ಎನ್ನುವ ಆಸೆ ಸದಾ ಕಾಡುತ್ತಿತ್ತು. ಈ ಸೆಳೆತ ಹೆಚ್ಚಾದಾಗ ಉದ್ಯೋಗ ತ್ಯಜಿಸಿ ಊರಿಗೆ ಬಂದರು. ಅವರು ಬಂದಾಗ ನಿರ್ವಹಿಸಿದ ಮೊಟ್ಟಮೊದಲ ಕೆಲಸ ಕಾಡು ಗುಡ್ಡೆಯಾಗಿದ್ದ ಭೂಮಿಯನ್ನು ಸಮತಟ್ಟುಗೊಳಿಸಿದ್ದು. ಆರು ಎಕರೆಯ ಬೃಹತ್ ಕಾಡುಗುಡ್ಡೆಯ ಜಾಗದಲ್ಲಿ 52 ಸೆಂಟ್ಸ್‌ ಜಾಗವನ್ನು ಕೃಷಿಗೆ ಅಣಿಗೊಳಿಸಿದರು. ಆ ಭೂಮಿಯ ನಡುವಿನಲ್ಲೇ ಕೃಷಿ ಕಾಯಕಕ್ಕಾಗಿ ಒಂದು ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡರು. ನೀರಿನ ಆಸರೆಗಾಗಿ ತಾವೇ ಬಾವಿ ತೋಡತೊಡಗಿದರು. 24 ಅಡಿ ಆಳಕ್ಕೆ ತೋಡುವಾಗ ಮಣ್ಣು ಕುಸಿಯ ತೊಡಗಿತು. ಅದಕ್ಕೆ ರಿಂಗ್ ಹಾಕದೆ ಬೇರೆ ಮಾರ್ಗವೇ ಇರಲಿಲ್ಲ. ಬಾವಿಯಲ್ಲಿ ನೀರಿನ ಜರಿಗಳು ಕಾಣಿಸಿಕೊಂಡಿದ್ದು, ಕೃಷಿಗೆ ಅದರ ನೀರೇ ಆಸರೆಯಾಗಿದೆ.

ಅಭಿಷೇಕ್ ಅವರು ನೀರಿಗಾಗಿ ಅಳವಡಿಸಿದ ಇನ್ನೊಂದು ವಿನೂತನ ಕ್ರಮವೇನೆಂದರೆ ತೋಡಿನಲ್ಲಿ ಹರಿಯುತ್ತಿದ್ದ ನೀರಿಗೆ ಕಟ್ಟ ಹಾಕಿದ್ದು. ನಾಲ್ಕು ಉದ್ದ ಕಂಬಗಳನ್ನು ಹುಗಿದು, ಅದಕ್ಕೆ ನಾಲ್ಕು ಅಡ್ಡ ಕಂಬಗಳನ್ನು ಕಟ್ಟಿ, ಎರಡು ಅಡಿ ಮಣ್ಣು ಹಾಕುತ್ತಾ ಅದರ ಮೇಲ್ಮೈಗೆ ಹುಲ್ಲನ್ನು ಹಾಕುತ್ತಾ ಹೋದರು. ಹೀಗೆ ಐದು ಪದರದಲ್ಲಿ ಕಟ್ಟ ನಿರ್ಮಿಸಿದರು. ಇದರ ಫಲವಾಗಿ ಅವರ ಭೂಮಿಯಲ್ಲಿ ಈಗ ನೀರಿನ ಪಸೆಯಿದೆ.

ಸುಮಾರು 10 ಸೆಂಟ್ಸ್ ಜಾಗದಲ್ಲಿ ಬಾಳೆ ಕೃಷಿ ಮಾಡಿದ್ದಾರೆ. ಇದಕ್ಕೆ ತರಗೆಲೆ, ಸಗಣಿ, ಜೀವಾಮೃತವನ್ನಷ್ಟೇ ಹಾಕುತ್ತಾರೆ. ವಾರಕ್ಕೊಮ್ಮೆ ನೀರು ಪೂರೈಸುತ್ತಾರೆ. ಕದೋಳಿ, ಬೂದು, ನೇಂದ್ರ ಬಾಳೆಯ ಗೊನೆಗಳು ಇವರ ತೋಟದಲ್ಲಿ ತೂಗುತ್ತವೆ.

ಸುಮಾರು 20 ಸೆಂಟ್ಸ್ ಜಾಗದಲ್ಲಿ ನಿರಂತರ ಇಳುವರಿ ಪಡೆಯುವ ತೊಂಡೆ, ಅಲಸಂದೆ, ಪಡುವಲಕಾಯಿ, ಬಸಳೆ, ಮುಳ್ಳುಸೌತೆ, ಹರಿವೆಯನ್ನು ನಾಟಿ ಮಾಡಿದ್ದಾರೆ.

ಕಾಡಿನ ನಡುವೆ ಬೆಳೆದ ಶುಂಠಿ, ಅರಿಷಿಣ, ಮೆಣಸು, ಜೀರಿಗೆ, ಲಾವಂಚ, ವಿಟಮಿನ್ ಸೊಪ್ಪನ್ನು ಶೇಖರಿಸಿ ಮಾರಾಟ ಮಾಡುತ್ತಾರೆ.

10 ಸಾಲು ಗೆಣಸು ಬೆಳೆಯಿಸಿದ್ದು, ಅದರಿಂದ ಪಡೆದ ಬೃಹತ್ ಇಳುವರಿಯನ್ನು ಅವರು ಸ್ಮರಿಸಿಕೊಳ್ಳುತ್ತಾರೆ. ಹಾಗೆಯೇ ಕೃಷಿ ಜಾಗದಲ್ಲಿ ಬದಿಯಲ್ಲಿ ಮರಗೆಣಸು ಹಾಕಿದ್ದು ಅದರಲ್ಲಿ 40 ರಿಂದ 80 ಕೆ.ಜಿಯಷ್ಟು ತೂಕದ ಗೆಣಸು ಪಡೆದಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಮರಗೆಣಸನ್ನು ಬೆಳಿಗ್ಗೆ 7ಕ್ಕೆ ಮಾರಾಟಕ್ಕೆ ಕೃಷಿ ಕೇಂದ್ರಕ್ಕೆ ಕೊಂಡೊಯ್ದಾಗ ಅರ್ಧ ಗಂಟೆಯಲ್ಲಿ ಖಾಲಿಯಾಗಿ ಬಹಳಷ್ಟು ಮಂದಿ ಬೇಡಿಕೆ ಸಲ್ಲಿಸಿದ್ದರಂತೆ. ದಕ್ಷಿಣ ಕನ್ನಡದಲ್ಲಿ ತೊಗರಿಬೇಳೆ ಬೆಳೆಯುವುದಿಲ್ಲ ಎಂಬ ಮಾತಿದೆ. ಆದರೆ, ಪ್ರಯೋಗಾತ್ಮಕವಾಗಿ ತೊಗರಿಬೇಳೆ ಬೆಳೆದಿರುವ ಅಭಿಷೇಕ್‌, ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆಯುವ ಯೋಜನೆ ಹಾಕಿಕೊಂಡಿದ್ದಾರೆ.

ನಶಿಸಿ ಹೋಗುತ್ತಿರುವ ತಳಿಗಳ ಭತ್ತವನ್ನು ಬೆಳೆಸಿದ್ದಲ್ಲದೆ, ಇಳುವರಿ ಪಡೆದಿದ್ದನ್ನು ಬೇಯಿಸಿ ತಾವೇ ಕುಟ್ಟಿ ಅಕ್ಕಿ ಮಾಡಿರುತ್ತಾರೆ. ಇವರು ಅಕ್ಕಿ ಕೊಂಡು ಹೋದ ಕೆಲವೇ ಸೆಕೆಂಡಿನಲ್ಲಿ ಮಾರಾಟವಾಗುತ್ತದೆ.

ಅಭಿಷೇಕ್‌ ಸಂಪರ್ಕಕ್ಕೆ: 9686753573

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.