ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗುಣಾತ್ಮಕತೆಗೆ ಒತ್ತು

7
ಕೋಲಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸ್ವಾಮಿ ಹೇಳಿಕೆ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗುಣಾತ್ಮಕತೆಗೆ ಒತ್ತು

Published:
Updated:

ಕೋಲಾರ: ‘ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗುಣಾತ್ಮಕತೆಗೆ ಒತ್ತು ನೀಡಿದ್ದು, ತೇರ್ಗಡೆಯಾದ 15,519 ವಿದ್ಯಾರ್ಥಿಗಳ ಪೈಕಿ 11,851 ಮಂದಿ ಶೇ 60ಕ್ಕಿಂತ ಹೆಚ್ಚು ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶದ ಸಂಬಂಧ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದಿನ ವರ್ಷದಲ್ಲಿ ಈ ಬಾರಿ ಜಿಲ್ಲೆಯ ಫಲಿತಾಂಶ ಶೇ 5ರಷ್ಟು ಏರಿಕೆ ಕಂಡಿದೆ. ಶೇ 77ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಗಿಂತಲೂ ಹೆಚ್ಚು ಅಂಕ ಗಳಿಸಿದ್ದಾರೆ’ ಎಂದು ಹೇಳಿದರು.

‘ಅತ್ಯುನ್ನತ, ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರ ಸಂಖ್ಯೆ ಗಣನೀಯಯವಾಗಿ ಏರಿಕೆಯಾಗಿದೆ. ಹಿಂದಿನ 8 ವರ್ಷಗಳಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಏರು ಗತಿಯಲ್ಲಿದೆ ಇದೆ. ಈ ಬಾರಿ 854 ಮಂದಿ ಎ+ ಶ್ರೇಣಿ, 2,888 ವಿದ್ಯಾರ್ಥಿಗಳು ಎ ಶ್ರೇಣಿ, 4,004 ಮಂದಿ ಬಿ+ ಶ್ರೇಣಿ , 4,105 ವಿದ್ಯಾರ್ಥಿಗಳು ಬಿ ಶ್ರೇಣಿಯಲ್ಲಿ, 3,053 ಮಂದಿ ಸಿ+ ಶ್ರೇಣಿಯಲ್ಲಿ ಹಾಗೂ 615 ವಿದ್ಯಾರ್ಥಿಗಳು ಸಿ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ವಿಜ್ಞಾನವೇ ಮೇಲುಗೈ: ‘ಹಿಂದಿನ ವರ್ಷದಂತೆ ಈ ಬಾರಿಯೂ ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಶೇ 95.29ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ‘ಚಿತ್ರಮಿತ್ರ’ ಹೊತ್ತಿಗೆ ಮೂಲಕ ವಿಜ್ಞಾನದ ಚಿತ್ರಗಳನ್ನು ಮಕ್ಕಳಿಗೆ ನೀಡಿದ್ದು ಸಾರ್ಥಕವಾಗಿದೆ. ತೃತೀಯ ಭಾಷೆಯಲ್ಲಿ ಶೇ 95.06 ಮಂದಿ, ಪ್ರಥಮ ಭಾಷೆ ಕನ್ನಡದಲ್ಲಿ ಶೇ 93.60 ಮಂದಿ, ಸಮಾಜ ವಿಜ್ಞಾನದಲ್ಲಿ ಶೇ 93.20, ಇಂಗ್ಲಿಷ್‌ ವಿಷಯದಲ್ಲಿ ಶೇ 92.42 ಹಾಗೂ ಗಣಿತದಲ್ಲಿ ಶೇ 90.19 ಮಂದಿ ಉತ್ತೀರ್ಣರಾಗಿದ್ದಾರೆ’ ಎಂದು ವಿವರಿಸಿದರು.

‘ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಕುಳಿತಿದ್ದ 8,618 ಮಂದಿ ಪೈಕಿ 6,923 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 80.33 ಫಲಿತಾಂಶ ಬಂದಿದೆ. ಇಂಗ್ಲಿಷ್‌ ಮಾಧ್ಯಮದಲ್ಲಿ 9,820 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 8,594 ಮಂದಿ ತೇರ್ಗಡೆಯಾಗುವ ಮೂಲಕ ಶೇ 87ರಷ್ಟು ಫಲಿತಾಂಶ ಬಂದಿದೆ. ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 109 ವಿದ್ಯಾರ್ಥಿಗಳ ಪೈಕಿ 52 ಮಂದಿ ಉತ್ತೀರ್ಣರಾಗಿ ಶೇ 47.7 ಫಲಿತಾಂಶ ಬಂದಿದೆ’ ಎಂದರು.

‘ದೃಷ್ಟಿ, ಶ್ರವಣ ದೋಷವಿರುವ 79 ಅಂಗವಿಕಲರು ಪರೀಕ್ಷೆ ಬರೆದಿದ್ದು, ಅವರಲ್ಲಿ 59 ಮಂದಿ ಉತ್ತೀರ್ಣರಾಗುವ ಮೂಲಕ ಶೇ 74.68 ಫಲಿತಾಂಶ ಲಭಿಸಿದೆ’ ಎಂದು ತಿಳಿಸಿದರು.

ಶೇ 40ಕ್ಕಿಂತ ಕಡಿಮೆ: ‘ಜಿಲ್ಲೆಯ 96 ಸರ್ಕಾರಿ, 29 ಅನುದಾನಿತ ಮತ್ತು 117 ಖಾಸಗಿ ಶಾಲೆಗಳು ಶೇ 80ರಿಂದ 100 ಫಲಿತಾಂಶ ಸಾಧನೆ ಮಾಡಿವೆ. 33 ಸರ್ಕಾರಿ, 18 ಅನುದಾನಿತ ಹಾಗೂ 19 ಖಾಸಗಿ ಶಾಲೆಗಳು ಶೇ 60ರಿಂದ 80ರ ನಡುವಿನ ಫಲಿತಾಂಶ ಸಾಧನೆ ಮಾಡಿವೆ. 4 ಸರ್ಕಾರಿ, 6 ಅನುದಾನಿತ ಮತ್ತು 8 ಖಾಸಗಿ ಶಾಲೆಗಳು ಶೇ 40ರಿಂದ 60ರ ಫಲಿತಾಂಶ ಪಡೆದಿವೆ. 3 ಸರ್ಕಾರಿ, 2 ಅನುದಾನಿತ ಹಾಗೂ 3 ಖಾಸಗಿ ಶಾಲೆಗಳು ಶೇ 40ಕ್ಕಿಂತ ಕಡಿಮೆ ಫಲಿತಾಂಶ ಕಡಿಮೆ’ ಎಂದು ಹೇಳಿದರು.

ವರ್ಗವಾರು ಫಲಿತಾಂಶ: ‘ಪರಿಶಿಷ್ಟ ಮಕ್ಕಳಲ್ಲಿ ಶೇ 79.4 ಬಾಲಕರು, ಶೇ 83.51 ಬಾಲಕಿಯರು ತೇರ್ಗಡೆಯಾಗಿದ್ದಾರೆ, ಪರಿಶಿಷ್ಟ ಪಂಗಡದ ಮಕ್ಕಳಲ್ಲಿ ಶೇ 80.53 ಬಾಲಕರು, ಶೇ 87.47 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪ್ರವರ್ಗ- 1ರಲ್ಲಿ ಶೇ 81.92 ಬಾಲಕರು, ಶೇ 85.85 ಬಾಲಕಿಯರು, ಪ್ರವರ್ಗ 2ಎದಲ್ಲಿ ಶೇ 85.32 ಬಾಲಕರು ಹಾಗೂ ಶೇ 88.35 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಪ್ರವರ್ಗ 2ಬಿಯಲ್ಲಿ ಶೇ.64.7 ಬಾಲಕರು ಮತ್ತು ಶೇ 71.75 ಬಾಲಕಿಯರು ಉತ್ತೀರ್ಣರಾಗಿದ್ದಾರೆ’ ಎಂದರು.

‘ಪ್ರವರ್ಗ 3ಎಯಲ್ಲಿ ಶೇ 90.85 ಬಾಲಕರು, ಶೇ 93.04 ಬಾಲಕಿಯರು ತೇರ್ಗಡೆಯಾಗಿದ್ದರೆ. ಪ್ರವರ್ಗ ಎ ಬಿಯಲ್ಲಿ ಶೇ 90.56 ಬಾಲಕರು ಮತ್ತು ಶೇ 87.44 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಇತರ ವರ್ಗಗಳಲ್ಲಿ ಶೇ 90 ಬಾಲಕರು ಮತ್ತು ಶೇ 92.08 ಬಾಲಕಿಯರು ತೇರ್ಗಡೆಯಾಗಿದ್ದಾರೆ’ ಎಂದು ತಿಳಿಸಿದರು.

**

ಜಿಲ್ಲೆಯಲ್ಲಿ ಈ ಬಾರಿ ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಿನ ಅಂದರೆ 70 ಶಾಲೆಗಳು ಶೇ 100ರ ಫಲಿತಾಂಶ ಸಾಧನೆ ಮಾಡಿವೆ. 14 ಸರ್ಕಾರಿ, 3 ಅನುದಾನಿತ ಮತ್ತು 53 ಖಾಸಗಿ ಶಾಲೆಗಳು ಈ ಗೌರವಕ್ಕೆ ಪಾತ್ರವಾಗಿವೆ

– ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry