‘ಅದೃಷ್ಟದ ಬಾಗಿಲ’ಲ್ಲಿ ದಳ– ಕಾಂಗ್ರೆಸ್‌

7
ನಾಟಕೀಯ ಬೆಳವಣಿಗೆಗಳಿಂದ ಸದ್ದು ಮಾಡಿರುವ ‘ಮೂಡಣ ಬಾಗಿಲು’

‘ಅದೃಷ್ಟದ ಬಾಗಿಲ’ಲ್ಲಿ ದಳ– ಕಾಂಗ್ರೆಸ್‌

Published:
Updated:

ಕೋಲಾರ: ನಾಟಕೀಯ ಬೆಳವಣಿಗೆಗಳಿಂದಲೇ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿರುವ ಜಿಲ್ಲೆಯ ‘ಮೂಡಣ ಬಾಗಿಲು’ (ಮುಳಬಾಗಿಲು) ಮೀಸಲು ವಿಧಾನಸಭಾ ಕ್ಷೇತ್ರ ಕದನ ರೋಚಕ ಘಟ್ಟ ತಲುಪಿದೆ.

ಟಿಕೆಟ್‌ ಹಂಚಿಕೆಯಿಂದ ಪ್ರಚಾರದ ಹಂತದವರೆಗೂ ಕ್ಷೇತ್ರವು ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದಲೇ ಕುತೂಹಲ ಕಾಯ್ದುಕೊಂಡಿದೆ. ಕ್ಷೇತ್ರದ ಹಾಲಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ರ ಜಾತಿ ಪ್ರಮಾಣಪತ್ರ ಸಂಬಂಧ ಹೈಕೋರ್ಟ್‌ ನೀಡಿದ ತೀರ್ಪು ರಾಜಕೀಯ ಚಿತ್ರಣವನ್ನೇ ಬದಲಿಸಿದೆ.

ರಾಜ್ಯದ ‘ಮೂಡಣ ಬಾಗಿಲು’ ಎಂದೇ ಹೆಸರಾಗಿರುವ ಈ ಕ್ಷೇತ್ರವು ರಾಜಕೀಯ ಪಕ್ಷಗಳ ಪಾಲಿಗೆ ಅದೃಷ್ಟದ ಬಾಗಿಲು. ಇಲ್ಲಿಂದ ಚುನಾವಣಾ ಪ್ರಚಾರ ಆರಂಭಿಸಿದರೆ ಯಶಸ್ಸು ಶತಸಿದ್ಧ ಎಂಬ ನಂಬಿಕೆ ಪಕ್ಷಗಳಲ್ಲಿ ಬೇರೂರಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದವು. ಆದರೆ, ಕಾಂಗ್ರೆಸ್‌ ಪಾಲಿಗೆ ಇಲ್ಲಿಯೇ ಆರಂಭಿಕ ವಿಘ್ನ ಎದುರಾಯಿತು.

‘ಕೈ’ ಪಾಳಯದ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ರ ಜಾತಿ ಪ್ರಮಾಣ ಪತ್ರವನ್ನು ಹೈಕೋರ್ಟ್‌ ಅಸಿಂಧುಗೊಳಿಸಿ

ದ್ದರಿಂದ ಅವರ ನಾಮಪತ್ರ ತಿರಸ್ಕೃತವಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯೇ ಇಲ್ಲದಂತಾಗಿದೆ. ಪಕ್ಷವು ಸಾಕಷ್ಟು ಅಳೆದು ತೂಗಿ ಪಕ್ಷೇತರ ಅಭ್ಯರ್ಥಿ ಎಚ್‌.ನಾಗೇಶ್‌ರನ್ನು ಬೆಂಬಲಿಸುವ ನಿರ್ಣಯ ಕೈಗೊಂಡು ಆರಂಭಿಕ ಹಿನ್ನಡೆಯಿಂದ ಹೊರ ಬಂದಿದೆ.

ಕೊತ್ತೂರು ಮಂಜುನಾಥ್, ನಾಗೇಶ್‌ರ ಬೆನ್ನಿಗೆ ನಿಂತು ಸಾರಥಿಯಂತೆ ಕಾಂಗ್ರೆಸ್‌ ರಥ ಮುನ್ನಡೆಸುತ್ತಿದ್ದಾರೆ. ಶತಾಯಗತಾಯ ನಾಗೇಶ್‌ರನ್ನು ಗೆಲ್ಲಿಸಿಯೇ ತೀರುವುದಾಗಿ ವರಿಷ್ಠರಿಗೆ ಮಾತು ಕೊಟ್ಟಿರುವ ಮಂಜುನಾಥ್‌ ತಾನೇ ಅಭ್ಯರ್ಥಿ ಎಂಬಂತೆ ಕ್ಷೇತ್ರದ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ. ಅವರು ಹೋದ ಕಡೆಯಲ್ಲೆಲ್ಲಾ ಕಾರ್ಯಕರ್ತರು ಹಾಗೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಸಮೃದ್ಧಿ ಚಕ್ರವ್ಯೂಹ: ಆರಂಭಿಕ ಹಂತದಲ್ಲಿ ಕೊಂಚ ಮಂಕಾಗಿದ್ದ ಜೆಡಿಎಸ್‌ ಪಾಳಯವು ಕೊತ್ತೂರು ಮಂಜುನಾಥ್‌ರ ನಾಮಪತ್ರ ತಿರಸ್ಕೃತವಾದ ನಂತರ ಚುರುಕುಗೊಂಡಿದೆ. ಜೆಡಿಎಸ್‌ ಅಭ್ಯರ್ಥಿ ಸಮೃದ್ಧಿ ಮಂಜುನಾಥ್‌, ‘ಕೈ’ ಪಡೆಗೆ ಸೋಲಿನ ಮರ್ಮಾಘಾತ ನೀಡಲು ಚಕ್ರವ್ಯೂಹ ರಚಿಸುತ್ತಿದ್ದಾರೆ. ಅವರು ಕೊತ್ತೂರು ಮಂಜುನಾಥ್‌ ಹಾಗೂ ಕಾಂಗ್ರೆಸ್‌ ಪಾಳಯದ ಮುಖಂಡರಿಗೆ ಗಾಳ ಬೀಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೊತ್ತೂರು ಮಂಜುನಾಥ್‌ ಜೆಡಿಎಸ್‌ ಹಾಗೂ ಬಿಜೆಪಿಯಲ್ಲಿನ ಪ್ರಭಾವಿ ಮುಖಂಡರನ್ನು ತಮ್ಮತ್ತ ಸೆಳೆದು ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಎರಡೂ ಕಡೆ ಪಕ್ಷಾಂತರ ಪರ್ವ ಜೋರಾಗಿದೆ.

ಕ್ಷೇತ್ರದ ವ್ಯಾಪ್ತಿಯ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಯಲ್ಲಿವೆ. ತಾಲ್ಲೂಕು ಪಂಚಾಯಿತಿ, ನಗರಸಭೆ, ಎಪಿಎಂಸಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲೆಲ್ಲಾ ‘ಕೈ’ ಪಾಳಯವೇ ಅಧಿಕಾರದಲ್ಲಿದೆ. ಕ್ಷೇತ್ರದ 30 ಗ್ರಾಮ ಪಂಚಾಯಿತಿಗಳ ಪೈಕಿ 24ರಲ್ಲಿ ಕಾಂಗ್ರೆಸ್‌ ಆಡಳಿತವಿದೆ. ರಾಜಕೀಯಕ್ಕೆ ಹೊಸಬರಾದ ನಾಗೇಶ್‌ ಕ್ಷೇತ್ರದ ಮತದಾರರಿಗೆ ಹೆಚ್ಚು ಚಿರಪರಿಚಿತರಲ್ಲ. ಕಾಂಗ್ರೆಸ್‌ ಪಕ್ಷದ ಬಲ ಹಾಗೂ ಕೊತ್ತೂರು ಪ್ರಕಾಶ್‌ರ ವರ್ಚಸ್ಸಿನ ಮೇಲೆ ಅವರು ಪ್ರಚಾರ ನಡೆಸುತ್ತಿದ್ದಾರೆ.

ಮತ ಚದುರುವ ಭೀತಿ: ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ಅಸಮಾಧಾನಗೊಂಡು ಬಿಜೆಪಿ ಸೇರಿರುವ ಮಾಜಿ ಶಾಸಕ ಅಮರೇಶ್‌ ಕಮಲ ಪಾಳಯದಿಂದ ಸ್ಪರ್ಧೆ ಮಾಡಿದ್ದಾರೆ. ಅಮರೇಶ್‌ ಪಕ್ಷ ತೊರೆದಿರುವುದರಿಂದ ಕಾಂಗ್ರೆಸ್‌ಗೆ ತನ್ನ ಸಾಂಪ್ರದಾಯಿಕ ಮತಗಳು ಚದುರುವ ಭೀತಿ ಎದುರಾಗಿದೆ. ಮತ್ತೊಂದೆಡೆ ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಕೊತ್ತೂರು ಮಂಜುನಾಥ್‌ ಸಂಬಂಧ ಹಳಸಿದ್ದು, ಮುನಿಯಪ್ಪ ಬೆಂಬಲಿಗರು ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ನಾಗೇಶ್‌ ಮತ್ತು ಜೆಡಿಎಸ್‌ನ ಸಮೃದ್ಧಿ ಮಂಜುನಾಥ್‌ ನಡುವೆ ನೇರ ಹಣಾಹಣಿ ಇದ್ದು, ಮತದಾರರ ಓಲೈಕೆಗೆ ಪಕ್ಷಗಳು ತಂತ್ರ ಪ್ರತಿತಂತ್ರ ರೂಪಿಸುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry