ಸ್ಥಳೀಯ ವಿಷಯ, ಮಹಿಳಾ ಕೇಂದ್ರಿತ ಭಾಷಣ

7
ಕೊಪ್ಪಳ: ಯುವಕರಲ್ಲಿ ಕನಸು, ಭರವಸೆ ಬಿತ್ತಿದ ಪ್ರಧಾನಿ ನರೇಂದ್ರ ಮೋದಿ

ಸ್ಥಳೀಯ ವಿಷಯ, ಮಹಿಳಾ ಕೇಂದ್ರಿತ ಭಾಷಣ

Published:
Updated:
ಸ್ಥಳೀಯ ವಿಷಯ, ಮಹಿಳಾ ಕೇಂದ್ರಿತ ಭಾಷಣ

ಕೊಪ್ಪಳ: ಮಹಿಳೆಯರು ಮತ್ತು ಸ್ಥಳೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ಜನರಲ್ಲಿ ಮತ್ತಷ್ಟು ಕನಸುಗಳನ್ನು ಬಿತ್ತುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಭಾಷಣ ಕೇಂದ್ರೀಕೃತವಾಗಿತ್ತು.

ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ಕೊಟ್ಟಿರುವುದು, ಸುಕನ್ಯಾ ಸಮೃದ್ಧಿ ಯೋಜನೆ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ನಿರ್ಧರಿಸಿ ಸುಗ್ರೀವಾಜ್ಞೆ ಹೊರಡಿಸುವುದು, ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಭೇಟಿ ಬಚಾವೋ ಆಂದೋಲನ ತಂದಿರುವುದು, ಸ್ತ್ರೀ ಉನ್ನತಿ ನಿಧಿಯನ್ನು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವುದು, ಮಹಿಳಾ ಸ್ವಸಹಾಯ ಸಂಘಗಳಿಗೆ ₹2 ಲಕ್ಷದವರೆಗೆ ಶೇ 1ರ ಬಡ್ಡಿದರದಲ್ಲಿ ಸಾಲ ಕೊಡುವುದು, ಡೈರಿ ಫಾರಂಗೆ ₹100 ಕೋಟಿ ಮೀಸಲು ಹಣ ನಿಗದಿಪಡಿಸುವುದು ಇತ್ಯಾದಿ ಮಹಿಳಾ ಕೇಂದ್ರಿತ ವಿಚಾರಗಳು ಭಾಷಣದಲ್ಲಿ ಗಿರಕಿ ಹೊಡೆದವು.

ಕೊಪ್ಪಳ ಜೈನ ಕಾಶಿಯಾಗಿರುವುದು, ಜಿಲ್ಲೆ ಸಂತರ, ಶರಣರ ಕ್ಷೇತ್ರವಾಗಿರುವುದನ್ನು ಪದೇಪದೇ ಪ್ರಸ್ತಾಪಿಸಿದ ಮೋದಿ, ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಜಲಸಂರಕ್ಷಣೆ ಕುರಿತು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ. ಅವರ ಜಲದೀಕ್ಷೆ ಪರಿಕಲ್ಷನೆ ದೇಶಕ್ಕೇ ಮಾದರಿ ಎಂದು ಕೊಂಡಾಡಿದರು.

ರೈತರನ್ನು ಸಶಕ್ತಗೊಳಿಸಬೇಕು. ಅದಕ್ಕಾಗಿ ಕೃಷಿ ಸಿಂಚಾಯಿ ಯೋಜನೆ ಮೂಲಕ 5 ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಪ್ರತಿ ರೈತರಿಗೆ 4ರಿಂದ 5 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಸರಿಯಾದ ಮಾರುಕಟ್ಟೆ ಸಿಗುವಂತಾಗಬೇಕು ಎಂದರು.

ಪೆಂಡಾಲ್‌ ಹೊರಗೂ ಸೇರಿದ್ದ ಜನಸ್ತೋಮ ವೀಕ್ಷಿಸಿ ಅವರತ್ತ ಕೈಬೀಸಿದ ಪ್ರಧಾನಿ ನಿರೀಕ್ಷೆಗೂ ಮೀರಿ ಸೇರಿದ್ದೀರಿ. ನಿಮ್ಮ ತಪಸ್ಸು ವ್ಯರ್ಥವಾಗಲು ಬಿಡುವುದಿಲ್ಲ. ರೈತಪರ, ಅಭಿವೃದ್ಧಿಪರ ಸರ್ಕಾರವನ್ನು ರಾಜ್ಯದಲ್ಲಿ ತರಬೇಕಿದೆ. ಅದಕ್ಕಾಗಿ ಕಾರ್ಯಕರ್ತರು ಮನೆ‌ಮನೆಗೆ ಹೋಗಿ ಮತದಾರರನ್ನು ಕರೆಸಿ ಮತದಾನ ಮಾಡಿಸಿ. ಕಾಂಗ್ರೆಸ್‌ ಸರ್ಕಾರವನ್ನು ಕೆಳಗಿಳಿಸಿ, ಸ್ವಚ್ಛ, ಸುರಕ್ಷಿತ, ಸುಂದರ ಕರ್ನಾಟಕ ಕಟ್ಟೋಣ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ಘೋಷಣೆ ಕೂಗುವ ಮೂಲಕ ಕೋರಿದರು.

ಪ್ರಧಾನಿ ಮೋದಿ  ಭಾಷಣ ಮಾಡುತ್ತಿದ್ದಂತೆಯೇ ಯುವ ಕಾರ್ಯಕರ್ತರ ಗುಂಪು ಮೋದಿ, ಮೋದಿ ಎಂದು  ಕೂಗುತ್ತಿದ್ದರು. ಎರಡು ಬೆಂಗಾವಲು ಹೆಲಿಕಾಪ್ಟರ್‌ಗಳ ಸಹಿತ ಆಗಮಿಸಿದ ಮೋದಿ ಅವರನ್ನು ನೋಡಲು ಜನರ ಕುತೂಹಲ ಹೆಚ್ಚಿತ್ತು. ನಸುಗುಲಾಬಿ ಬಣ್ಣದ ಕುರ್ತಾ, ಬಿಳಿ ಪ್ಯಾಂಟ್‌ ಧರಿಸಿದ್ದ ಮೋದಿ ವೇದಿಕೆ ಏರಿ ಮೋದಿ ಕೈ ಬೀಸುತ್ತಿದ್ದಂತೆಯೇ ಜನರೂ ಕೂಡಾ ಕೂಗುತ್ತಾ, ಕೈಬೀಸಿ ಪ್ರತಿಕ್ರಿಯೆ ತೋರಿದರು. ಮೋದಿ ಹಿಂದಿ ಭಾಷಣವನ್ನು ಹಿರಿಯ ಮುಖಂಡ ತ್ರಿವಿಕ್ರಮ ಜೋಷಿ ಭಾಷಾಂತರಿಸಿದರು. ಮೋದಿ ಆಗಮನಕ್ಕೂ ಮುನ್ನ ಅಭ್ಯರ್ಥಿಗಳಾದ ಅಮರೇಶ್‌ ಕರಡಿ, ದೊಡ್ಡನಗೌಡ ಪಾಟೀಲ, ಹಾಲಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು ಮಾತನಾಡಿದರು.

ಹೈ.ಕ ಭಾಗದ ಚುನಾವಣಾ ಪ್ರಚಾರದ ಉಸ್ತುವಾರಿ ಪುರಂದರೇಶ್ವರಿ, ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಚಂದ್ರು ಕವಲೂರು, ರಾಜು ಬಾಕಳೆ, ಸಂಸದ ಸಂಗಣ್ಣ ಕರಡಿ ಇದ್ದರು.

**

ಅಹಂಕಾರಿ ಮುಖ್ಯಮಂತ್ರಿ, ಸರ್ಕಾರ ತಾನೇನೂ ಮಾಡುವುದಿಲ್ಲ. ಬೇರೆಯವರಿಂದಲೂ ಕಲಿಯಲು ಸಿದ್ಧವಿಲ್ಲ

– ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry