ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟೊಂದು ಮನೆ... ಇಲ್ಲಿ ಎಲ್ಲಿ ನನ್ಮನೆ

Last Updated 9 ಮೇ 2018, 19:30 IST
ಅಕ್ಷರ ಗಾತ್ರ

‘ನಿ ಮ್ಮ ಫ್ಯಾಮಿಲಿ ಜೊತೆಗೆ ತಂದೆ ಅಥವಾ ತಾಯಿ ಇದ್ದಾರಾ ?’ ಮೊದಲ ಮಹಡಿಯ ಬಾಲ್ಕನಿಯಲ್ಲಿ ನಿಂತು ಆ ಮನುಷ್ಯ ಹೀಗೆ ಕೇಳಿದ್ದಕ್ಕೆ ಆಶ್ಚರ್ಯವಾಯಿತು. ತಂದೆ–ತಾಯಿ ಇದ್ದರೆ ತಾನೆ ಅದು ಫ್ಯಾಮಿಲಿ.  ‘ತಂದೆ ಇಲ್ಲ. ತಾಯಿ ಜೊತೆಗಿರುತ್ತಾರೆ’ ಎಂದೆ.  ‘ಒಟ್ಟು ಎಷ್ಟು ಜನ ಇರ್ತೀರಿ’ ಪ್ರಶ್ನೆ ಮುಂದುವರಿಯಿತು. ‘ಐದು ಜನ. ತಾಯಿ, ಪತ್ನಿ, ಇಬ್ಬರು ಮಕ್ಕಳು ಮತ್ತು ನಾನು’ ಎಂದುತ್ತರಿಸಿದೆ. ‘ಏ.. ಆಗೋದಿಲ್ಲ, ಐದು ಜನ ಇದ್ದರೆ ನೀರು ಹೆಚ್ಚು ಖರ್ಚಾಗುತ್ತೆ. ಮನೆ ಕೊಡೋಕಾಗೋದಿಲ್ಲ’ ಎಂದವನೇ ಆ ವ್ಯಕ್ತಿ ಮನೆಯ ಒಳಗೆ ಓಡಿದ.

ಮತ್ತೊಂದು ಮನೆ. ಡಬಲ್‌ ಬೆಡ್‌ರೂಂ. ಸಾಮಾನ್ಯಕ್ಕಿಂತ ದುಪ್ಪಟ್ಟು ಬಾಡಿಗೆ. ಆ ಮನೆ ಮಾಲೀಕನದೂ ಅದೇ ವರಸೆ. ‘ಐದು ಜನ ಇದ್ದರೆ ಆಗೋದಿಲ್ಲ ರೀ.. ಗಂಡ–ಹೆಂಡತಿ ಒಂದು ಮಗು ಇದ್ದವರಿಗೆ ಮಾತ್ರ ಕೊಡುತ್ತೀವಿ !’. ಅಯ್ಯೋ ಶಿವನೆ, ಇವರ ಮನೆ ಸಲುವಾಗಿ ನಾನು ನನ್ನ ಕುಟುಂಬವನ್ನ ಸಣ್ಣದು ಮಾಡಿಕೊಳ್ಳಬೇಕಾ ಎಂದು ಸಿಟ್ಟು ಬಂತು. ಜೊತೆಗೆ, ಭಾರತ ಸರ್ಕಾರದವರು ಕುಟುಂಬ ಯೋಜನೆ ಅನುಷ್ಠಾನದ ಜವಾಬ್ದಾರಿ ಇವರಿಗೇ ಕೊಟ್ಟಿದಾರೇನೋ ಎಂಬ ಅನುಮಾನವೂ ಬಂತು. ಅಲ್ಲದೆ, ಯಾವುದೇ ಆಪರೇಶನ್‌ ಇಲ್ಲದೆ ಜನಸಂಖ್ಯಾ ನಿಯಂತ್ರಣ ಮಾಡುವುದೆಂದರೆ ಇದೇ ಇರಬೇಕು ಎಂದುಕೊಂಡೆ !

‘ಅಲ್ಲ ರೀ, ಡಬಲ್‌ ಬೆಡ್‌ರೂಂ ಮನೆ ಇದೆ. ಬರೀ ಮೂರೇ ಜನ ಇರಬೇಕು ಅಂತೀರಲ್ಲ.. ಐದು ಜನ ಇದ್ದಿದ್ದಕ್ಕೆ ತಾನೇ ನಾನು ದೊಡ್ಡ ಮನೆ ಕೇಳ್ತಿರೋದು’ ಎಂದೆ. ‘ಅದೆಲ್ಲ ಗೊತ್ತಿಲ್ಲ ರೀ, ತುಂಬಾ ಜನ ಇದ್ದರೆ ಗಲಾಟೆ ಜಾಸ್ತಿ, ನೀರು ಬಳಸಿಕೊಳ್ಳೋದು ಹೆಚ್ಚು’ ಎಂದರು. ‘ಬಳಸಿದ ನೀರಿಗೆ ಶುಲ್ಕ ಕಟ್ತೀವಲ್ಲ’ ಎಂದೆ. ಮುಖಕ್ಕೆ ಹೊಡೆದಂತೆ ಆ ವ್ಯಕ್ತಿ ಬಾಗಿಲು ಹಾಕಿದ !

ಹುಬ್ಬಳ್ಳಿಯಿಂದ ವರ್ಗಾವಣೆಯಾಗಿ ಬೆಂಗಳೂರಿಗೆ ಬಂದಾಗ ಬಾಡಿಗೆ ಮನೆ ಹುಡುಕುವ ವೇಳೆ ಪಟ್ಟ ಪಡಿಪಾಟಲು ಇದು. ಬ್ರೋಕರ್‌ಗೆ ಒಂದು ತಿಂಗಳು ಬಾಡಿಗೆಯನ್ನು ‘ದಂಡ’ದಂತೆ ಕಟ್ಟಲು ಇಷ್ಟವಿಲ್ಲದ ಕಾರಣ ನಾನೇ ಬೆಂಗಳೂರು ಸುತ್ತಿದೆ. TO-LET ಬೋರ್ಡ್‌ಗಳು ಕಂಡೊಡನೆ ಕುತೂಹಲ–ನಿರೀಕ್ಷೆಗಳೊಂದಿಗೆ ಹೆಜ್ಜೆ ಹಾಕಿದರೆ, ಬಹುಪಾಲು ನಿರಾಸೆಯೇ ಎದುರಾಗುತ್ತಿತ್ತು.

‘ನೀವು ನಾನ್‌ವೆಜ್‌ ತಿನ್ನುತ್ತೀರಾ’ ಮನೆಯೊಡೆಯ–ಒಡತಿಯರ ಮತ್ತೊಂದು ಪ್ರಶ್ನೆ. ‘ಹೌದು’. ‘ಸಾರಿ. ನಾನ್‌ವೆಜ್‌ ತಿನ್ನುವವರಿಗೆ ಮನೆ ಕೊಡೋದಿಲ್ಲ’. ನಾವು ‘ನಮ್ಮ ಮನೆಯಲ್ಲಿ’ (ಬಾಡಿಗೆಗೆ ಪಡೆದ ಮೇಲೆ ಅದು ನಮ್ಮದೇ ಅಲ್ಲವೇ ?) ಮಾಂಸ ತಿಂದರೆ ಇವರು ಮೈಲಿಗೆಯಾಗುತ್ತಾರಾ ಎಂದುಕೊಂಡೆ. ಚಿಕನ್‌, ಮಟನ್‌ ರೇಟು ಗಗನಕ್ಕೇರಿರುವ ಈ ಸಮಯದಲ್ಲಿ ನಾವು ನಾನ್‌ವೆಜ್‌ ತಿನ್ನುತ್ತಿರುವುದೇ ಹೆಚ್ಚು. ಅದಕ್ಕಾಗಿ ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಬದಲು, ತಿರಸ್ಕರಿಸುತ್ತಿದ್ದಾರಲ್ಲ ಎಂದು ಖೇದವಾಯಿತು.

ಹುಬ್ಬಳ್ಳಿಯಲ್ಲಿ ಮನೆ ಹುಡುಕುವಾಗಲೂ ಈ ‘ನಾನ್‌ವೆಜ್‌’ ಸಮಸ್ಯೆ ನನ್ನನ್ನು ಅತಿಯಾಗಿ ಬಾಧಿಸಿತ್ತು. ಬೆಂಗಳೂರಿನಂತಹ ವೈಚಾರಿಕ ಪ್ರಜ್ಞೆಯುಳ್ಳ, ಮುಂದುವರಿದ ನಗರದಲ್ಲಿ ಯಾರೂ ಇಂತಹ ‘ಸಿಲ್ಲಿ’ ಕಂಡೀಶನ್‌ ಹಾಕುವುದಿಲ್ಲ ಎಂದುಕೊಂಡಿದ್ದೆ. ಆದರೆ, ನಿರೀಕ್ಷೆ ಸುಳ್ಳಾಯಿತು !

ಸುತ್ತಿ–ಸುತ್ತಿ ಸಾಕಾದಾಗ, ಪರಿಹಾರವಾಗಿ ಕಂಡದ್ದು ಕೆಲವು ವೆಬ್‌ಸೈಟ್‌ಗಳು. ಮನೆಗಳು, ಅವುಗಳ ಬಾಡಿಗೆ, ಇರುವ ಸ್ಥಳ, ಸ್ವರೂಪ, ಮಾಲೀಕರ ಸಂಪರ್ಕ ಸಂಖ್ಯೆ ಒಳಗೊಂಡ ಮಾಹಿತಿ ನೀಡುವ ಉದ್ದೇಶಕ್ಕಾಗಿಯೇ ಇರುವ ಈ ವೆಬ್‌ಸೈಟ್‌ಗಳು ತಕ್ಷಣಕ್ಕೆ ಎಲ್ಲರನ್ನೂ ಆಕರ್ಷಿಸುತ್ತವೆ. ಆದರೆ, ಇಲ್ಲಿ ಹಾಕಲಾಗುವ ಎಲ್ಲ ಮಾಹಿತಿ ಅಷ್ಟೊಂದು ಸರಿಯಾಗಿರುವುದಿಲ್ಲ ಎಂಬುದು ಅನುಭವದಿಂದ ತಿಳಿಯಿತು.

ಶೇಷಾದ್ರಿಪುರಂನಲ್ಲಿ ಸಿಂಗಲ್‌ ಬೆಡ್‌ರೂಂ. 600 ಚದರ ಅಡಿ ವಿಸ್ತಾರ. ಕೇವಲ ₹5 ಸಾವಿರ ಬಾಡಿಗೆ ! ಜಾಹೀರಾತು ನೋಡಿದ ಕೂಡಲೇ ಖುಷಿಯಾಯಿತು. ತಕ್ಷಣಕ್ಕೆ ಮನೆ ಮಾಲೀಕನ ನಂಬರ್‌ಗೆ ಕರೆ ಮಾಡಿದೆ. ‘ಸರ್‌, ಅದು ಫ್ಯಾಮಿಲಿಗೆ ಆಗಲ್ಲ. ಒಂದೇ ರೂಂ ಇದೆ’ ಮಾಲೀಕ ಹೇಳಿದ. ‘ಸಿಂಗಲ್‌ ಬೆಡ್‌ರೂಂ ಮನೆ ಅಂತಾ ಹಾಕಿದೀರಲ್ರೀ’ ಎಂದೆ. ‘ವೆಬ್‌ಸೈಟ್‌ನಲ್ಲಿ ಸಿಂಗಲ್‌ ರೂಂ ಅಂತಾ ಆಪ್ಷನ್‌ ಇರಲಿಲ್ಲ ಸರ್. ಅದಕ್ಕೆ ಸಿಂಗಲ್‌ ಬೆಡ್‌ರೂಂ ಅಂತಾ ಹಾಕಿದೆ. 220 ಚದರ ಅಡಿ ವಿಸ್ತಾರದ ಕೋಣೆ ಅಷ್ಟೆ. ಟಾಯ್ಲೆಟ್‌ ಹೊರಗಡೆ ಇದೆ...’ ಅವನು ಇನ್ನೂ ಮಾತನಾಡುತ್ತಿದ್ದಂತೆ ಕರೆಯನ್ನು ನಿರ್ದಾಕ್ಷಿಣ್ಯವಾಗಿ ‘ಕತ್ತರಿಸಿದೆ’.

ಮಲ್ಲೇಶ್ವರಂ 5ನೇ ಕ್ರಾಸ್‌ ಬಳಿ. ತಿಂಗಳಿಗೆ ₹10 ಸಾವಿರ ಬಾಡಿಗೆ. ಡಬಲ್‌ ಬೆಡ್‌ರೂಂ. ಅಬ್ಬಾ, ನಾನು ಬಯಸಿದ ಏರಿಯಾದಲ್ಲಿ ಮನೆ ಸಿಕ್ಕೇ ಬಿಟ್ಟಿತು ಎನ್ನುವ ಖುಷಿಯಲ್ಲಿ ಕರೆ ಮಾಡಿದೆ. ‘ಸರ್, ಮಲ್ಲೇಶ್ವರಂ ಐದನೇ ಕ್ರಾಸ್‌ಗೆ ಬನ್ನಿ. ಅಲ್ಲಿಂದ ಒಂದೆರಡು ಕಿ.ಮೀ. ಮುಂದೆ ಬಂದರೆ ದೊಡ್ಡ ಮೋರಿ ಸಿಗುತ್ತದೆ. ಅಲ್ಲಿಂದ ಎಡಗಡೆ ಕ್ರಾಸ್‌ ಮಾಡಿ  3 ಕಿ.ಮೀ. ಬನ್ನಿ. ಅಲ್ಲೊಂದು ಗುಡಿ ಇದೆ. ಅಲ್ಲಿಂದ ಎರಡು ಕ್ರಾಸ್‌ ಹಿಂದೆ ಬಂದರೆ ಸಿಗುವುದೇ ನಮ್ಮ ಮನೆ’ ಎಂದ ! ‘ಅಲ್ಲ ರೀ ಮಲ್ಲೇಶ್ವರಂ ಐದನೇ ಕ್ರಾಸ್‌ ಎಂದಿದ್ರಿ...’ ಎಂದೆ. ‘ಇಲ್ಲ ಸರ್. ಮಲ್ಲೇಶ್ವರಂ ಬಳಿ ಎಂದು ಹಾಕಿದ್ದೇನೆ’ ಎಂದ. ಹುಬ್ಬಳ್ಳಿ ‘ಸಂಸ್ಕೃತ’ ಬಾಯಿ ತುದಿಗೇ ಬಂದಿತ್ತು. ಹೊರಗೆ ಬರಲಿಲ್ಲ !

ಕೆಲವರು ಮನೆಯ ವಿವರ ಹಾಕಿ, ಅದರ ಫೋಟೊ ಹಾಕದೆ ಜಾಣ್ಮೆ ಮೆರೆಯುತ್ತಾರೆ. ಮನೆಯ ವಿವರ ನೋಡಿ ಅಲ್ಲಿಗೆ ತೆರಳಿದರೆ ಅದರ ಚಿತ್ರಣವೇ ಬೇರೆ ಇರುತ್ತದೆ. ಕಡಿಮೆ ಬಾಡಿಗೆ ಮತ್ತು ಓಡಾಡಲು ತೊಂದರೆಯಿಲ್ಲ ಎಂದುಕೊಂಡು ಗ್ರೌಂಡ್‌ಫ್ಲೋರ್‌ನಲ್ಲಿರುವ ಮನೆ ನೋಡಲು ಹೋದರೆ, ಚೂರೇ ಚೂರು ಗಾಳಿ–ಬೆಳಕು ಬರುವಂತಿರುವುದಿಲ್ಲ. ಆ ಮನೆಗೆ ಹೋದರೆ, ದುಡಿದ ಹಣವನ್ನೆಲ್ಲ ಆಸ್ಪತ್ರೆಗೆ ಹಾಕಬೇಕಾಗುತ್ತದೆ ! ಒಂದೇ ಕೋಣೆಯನ್ನು ಆಸ್ಪತ್ರೆ ವಾರ್ಡ್‌ನಂತೆ ಎರಡು ಭಾಗ ಮಾಡಿ ಅದಕ್ಕೆ ‘ಡಬಲ್‌ ಬೆಡ್‌ರೂಂ’ ಎಂದು ಹೆಸರಿಟ್ಟಿರುತ್ತಾರೆ. ಬಾಡಿಗೆ ಮಾತ್ರ ₹12 ಸಾವಿರ ! ಇಂತಹ ಮನೆಗಳನ್ನು ನೋಡಿದಾಗ ದುಡ್ಡು ಇಷ್ಟು ಅಗ್ಗವಾಗಿ ಹೋಯಿತಾ ಎಂದು ಬೇಸರವಾಗದೇ ಇರುತ್ತಿರಲಿಲ್ಲ. ಎದ್ದು ನಿಂತರೆ ಫ್ಯಾನು ತಲೆಗೆ ಬಡಿಯುವಷ್ಟು ಎತ್ತರದ ಮನೆಗೂ ₹10 ಸಾವಿರ ಬಾಡಿಗೆ ಹೇಳಿದಾಗ ಕಣ್ಣು ಕೆಂಪಾಗುತ್ತದೆ. ಆದರೇನು ಮಾಡೋದು? ‘ನಾವು, ನಮ್ಮನೆ, ನಮ್ಮಿಷ್ಟ. ಕಂಡೀಷನ್‌ಗಳು ಒಪ್ಪಿಗೆಯಾದ್ರೆ ಇರಿ, ಇಲ್ಲ ಹೊರಡಿ’ ಎಂದು ನಿಷ್ಠುರವಾಗಿ ಕಣ್ಣಲ್ಲೇ ಮಾತನಾಡುತ್ತಾರೆ ಮನೆ ಮಾಲೀಕರು.

ಇಂತಿಷ್ಟು ವಿಸ್ತಾರದ ಮನೆಗೆ, ಇಂತಿಷ್ಟೇ ಬಾಡಿಗೆ ನಿಗದಿ ಮಾಡಲು ಸರ್ಕಾರದಿಂದ ಸಾಧ್ಯವಿಲ್ಲವೇ ಎಂಬ ಕ್ರಾಂತಿಕಾರಕ ಆಲೋಚನೆ ತಲೆಯಲ್ಲಿ ಬರುತ್ತಲೇ ಇರುತ್ತದೆ. ನನಗೆ ಮನೆ ಸಿಗುವವರೆಗೆ ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT