ಎರಡೂ ವಿ.ವಿಗಳಿಗೆ ಮೊದಲ ಶೈಕ್ಷಣಿಕ ವರ್ಷ

7

ಎರಡೂ ವಿ.ವಿಗಳಿಗೆ ಮೊದಲ ಶೈಕ್ಷಣಿಕ ವರ್ಷ

Published:
Updated:
ಎರಡೂ ವಿ.ವಿಗಳಿಗೆ ಮೊದಲ ಶೈಕ್ಷಣಿಕ ವರ್ಷ

* ನಿಮ್ಮ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳೆಷ್ಟು?

ಜಾಫೆಟ್‌: ಬೆಂಗಳೂರು ಕೇಂದ್ರೀಯ ವಿ.ವಿ ವ್ಯಾಪ್ತಿಯಲ್ಲಿ ಒಟ್ಟು 239 ಕಾಲೇಜುಗಳಿವೆ. ಇದರಲ್ಲಿ 10 ಸ್ವಾಯತ್ತ, ಏಳು ಸರ್ಕಾರಿ, 34 ಅನುದಾನಿತ, 20 ಶಾಶ್ವತ ಸಂಯೋಜನೆ ಪಡೆದಿರುವ ಹಾಗೂ 168 ಖಾಸಗಿ ಕಾಲೇಜುಗಳಿವೆ. ನಮ್ಮದು ಸಂಪೂರ್ಣ ನಗರ ಕೇಂದ್ರಿತ ವಿಶ್ವವಿದ್ಯಾಲಯ. ನಗರದ ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಬಡಾವಣೆ, ಜಯನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳು ವಿ.ವಿ ವ್ಯಾಪ್ತಿಯಲ್ಲಿವೆ.

‌ಕೆಂಪರಾಜು: ಬೆಂಗಳೂರು ಉತ್ತರ ವಿ.ವಿ ವ್ಯಾಪ್ತಿಯಲ್ಲಿ ಒಟ್ಟು 240 ಕಾಲೇಜುಗಳಿವೆ. ಇದರಲ್ಲಿ ಒಂದು ಸ್ವಾಯತ್ತ ಕಾಲೇಜು, 20 ಸರ್ಕಾರಿ ಕಾಲೇಜುಗಳಿವೆ. ಉಳಿದವು ಖಾಸಗಿ ಮತ್ತು ಅನುದಾನಿತ ಕಾಲೇಜುಗಳು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜತೆಗೆ ಬೆಂಗಳೂರು ನಗರದ ಕೆಲ ಭಾಗದ ಕಾಲೇಜುಗಳು ನಮ್ಮ ವಿ.ವಿ ವ್ಯಾಪ್ತಿಗೆ ಬರುತ್ತವೆ. ಕೋಲಾರ, ಮಾಲೂರು, ಕೆ.ಆರ್‌. ಪುರ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್‌ ನಗರ, ಮಹದೇವಪುರ, ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ದೇವನಹಳ್ಳಿ, ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ.

* ಶೈಕ್ಷಣಿಕ ಚಟುವಟಿಕೆ ಆರಂಭಿಸಲು ವಿಶ್ವವಿದ್ಯಾಲಯ ಸಜ್ಜಾಗಿದೆಯಾ?

ಜಾಫೆಟ್‌: ಈ ವರ್ಷದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ನಡೆಸಲು ವಿ.ವಿ ಸಜ್ಜಾಗಿದೆ. ಈಗಾಗಲೇ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಸಿಬ್ಬಂದಿಯ ನಿಯೋಜನೆ ಜತೆಗೆ ಮೂಲಸೌಕರ್ಯವನ್ನು ಕಲ್ಪಿಸಲಿದ್ದೇವೆ.

ಕೆಂಪರಾಜು: ಈಗಾಗಲೇ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಅದರಂತೆ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿವೆ. ಸ್ನಾತಕೋತ್ತರ ಕೋರ್ಸ್‌ಗಳಿಗೆ ಆಗಸ್ಟ್‌ನಲ್ಲಿ ಪ್ರವೇಶ ಆರಂಭವಾಗಲಿವೆ. ಈ ವರ್ಷ ಪದವಿ ಕೋರ್ಸ್‌ಗಳ ಮೊದಲ ವರ್ಷದ ವಿದ್ಯಾರ್ಥಿಗಳು ನಮ್ಮ ವಿ.ವಿ ವ್ಯಾಪ್ತಿಗೆ ಬರುತ್ತಾರೆ, ಎರಡು ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ಮುಂದುವರೆಯುತ್ತಾರೆ. ಹಾಗಾಗಿ ಎರಡೂ ವಿ.ವಿಯ ವೇಳಾಪಟ್ಟಿ, ನಿಯಮವನ್ನು ಕಾಲೇಜುಗಳು ಅನುಸರಿಸಲೇಬೇಕು.

* ಈ ವರ್ಷ ಆರಂಭವಾಗುತ್ತಿರುವ ಹೊಸ ಪದವಿ ಕೋರ್ಸ್‌ಗಳು ಯಾವುವು?

ಜಾಫೆಟ್‌: ಸಾಂಪ್ರದಾಯಿಕ ಕೋರ್ಸ್‌ಗಳ ಜತೆಗೆ ಕೆಲ ಹೊಸ ಸಂಯೋಜನೆ (ಕಾಂಬಿನೇಷನ್‌) ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಕೈಗಾರಿಕೆ ಮತ್ತು ಉದ್ಯೋಗಾಧಾರಿತ ಕೊರ್ಸ್‌ಗಳನ್ನು ತರಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಬಿಬಿಎ (ಏವಿಯೇಷನ್‌ ಮ್ಯಾನೇಜ್‌ಮೆಂಟ್‌), ಬಿ.ಕಾಂ (ಅಕೌಂಟಿಂಗ್‌ ಅಂಡ್‌ ಫೈನಾನ್ಸ್‌ ಸ್ಪೆಷಲೈಜೇಷನ್‌), ಬಿ.ಕಾಂ (ಇನ್ಷುರೆನ್ಸ್‌ ಅಂಡ್‌ ಆ್ಯಕ್ಚುಯಲ್‌ ಸ್ಟಡಿಸ್‌), ಬಿ.ಕಾಂ (ಹಾನರ್ಸ್‌), ಬಿ.ಕಾಂ (ಲಾಗೆಸ್ಟಿಕ್ಸ್‌ ಮತ್ತು ಸಪ್ಲೆ ಚೈನ್‌ ಮ್ಯಾನೇಜ್‌ಮೆಂಟ್‌) ಕೋರ್ಸ್‌ಗಳು ಬರಲಿವೆ. ಕಲಾ ವಿಭಾಗದಲ್ಲಿ ಪತ್ರಿಕೋದ್ಯಮ, ಅರ್ಥಶಾಸ್ತ್ರ, ಇಂಗ್ಲಿಷ್‌ (ಜಿಇಇ), ಮನಃಶಾಸ್ತ್ರ, ಪತ್ರಿಕೋದ್ಯಮ, ಇಂಗ್ಲಿಷ್‌ (ಪಿಜೆಇ), ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ (ಇಎಸ್‌ಪಿ), ಇತಿಹಾಸ, ಪ್ರವಾಸೋದ್ಯಮ, ಜರ್ನಲಿಸಂ (ಎಚ್‌ಟಿಜೆ) ಕೋರ್ಸ್‌ಗಳು ಹಾಗೂ ಬಿ.ಎಸ್ಸಿಯಲ್ಲಿ ಮನಃಶಾಶ್ತ್ರ, ಜರ್ನಲಿಸಂ, ಕಂಪ್ಯೂಟರ್‌ ಸೈನ್ಸ್‌ (ಪಿಜೆಸಿಎಸ್‌) ಸಂಯೋಜನೆಗಳನ್ನು ತರಲಾಗುತ್ತಿದೆ. ಈಗಾಗಲೇ ವಿ.ವಿ ವ್ಯಾಪ್ತಿಯ 15 ಕಾಲೇಜುಗಳು ಈ ಕೋರ್ಸ್‌ಗಳನ್ನು ಆರಂಭಿಸಲು ಮುಂದೆ ಬಂದಿವೆ. ಹೊಸದಾಗಿ ಕೆಲ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿಸಲಿದ್ದೇವೆ.

ಕೆಂಪರಾಜು: ಸಾಂಪ್ರದಾಯಿಕ ಪದವಿ ಕೋರ್ಸ್‌ಗಳು ಮತ್ತು ಸಂಯೋಜನೆಗಳು ಮುಂದುವರೆಯಲಿವೆ. ಬಿಬಿಎನಲ್ಲಿ ಏವಿಯೇಷನ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಅನ್ನು ಈ ವರ್ಷ ಹೊಸದಾಗಿ ಜಾರಿಗೊಳಿಸಲಾಗುತ್ತಿದೆ. ಕೋಲಾರ ಪಿ.ಜಿ ಕೇಂದ್ರದಲ್ಲಿರುವ ಎಂಟು ಕೋರ್ಸ್‌ಗಳ ಜತೆಗೆ ಹೊಸದಾಗಿ ಎಂಟು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಈ ಬಾರಿ ಜಾರಿಗೊಳಿಸುತ್ತಿದೆ. ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ, ಭೌತವಿಜ್ಞಾನ, ಕಂಪ್ಯೂಟರ್‌ ಸೈನ್ಸ್‌, ಗಣಿತ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್‌.

* ವಿಶ್ವವಿದ್ಯಾಲಯ ಪಠ್ಯದಲ್ಲಿ ಬದಲಾವಣೆ ಅಥವಾ ಪರಿಷ್ಕರಣೆ ಆಗಿದೆಯಾ?

ಜಾಫೆಟ್‌: ಪ್ರತ್ಯೇಕ ವಿಶ್ವವಿದ್ಯಾಲಯ ಆದ್ದರಿಂದ ಪ್ರತ್ಯೇಕ ಪಠ್ಯಕ್ರಮ ಇರಬೇಕು. ಈ ಶೈಕ್ಷಣಿಕ ವರ್ಷದಿಂದಲೇ ಹೊಸ ಪಠ್ಯ ಅಥವಾ ಪರಿಷ್ಕೃತ ಪಠ್ಯ ಜಾರಿಗೊಳಿಸಬೇಕು ಎಂಬ ಇಚ್ಛೆಯಿತ್ತು. ಆದರೆ ‘ಬೋರ್ಡ್‌ ಆಫ್‌ ಸ್ಟಡಿಸ್‌’ (ಬಿಒಎಸ್‌) ಇನ್ನೂ ರಚನೆಯಾಗಿಲ್ಲ. ಈ ವಾರದಲ್ಲಿ ಬಿಒಎಸ್‌ ರಚನೆಯಾಗಿಲಿದ್ದು, ಅಲ್ಲಿನ ಸದಸ್ಯರು ಹೊಸ ಪಠ್ಯವನ್ನು ರಚಿಸುವರು.

ಹೊಸ ಪಠ್ಯ ರಚನೆಯಾದ ನಂತರ ಅದರ ಕರಡನ್ನು ವಿ.ವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ವಿದ್ಯಾರ್ಥಿಗಳು, ವಿಷಯ ತಜ್ಞರು, ಔದ್ಯೋಗಿಕ ಕ್ಷೇತ್ರದವರಿಂದ ಸಲಹೆಗಳನ್ನು ಪಡೆದು ಪಠ್ಯವನ್ನು ಅಂತಿಮಗೊಳಿಸಲಾಗುವುದು. ಇದಕ್ಕೆ ಸಾಕಷ್ಟು ಸಮಯಾವಕಾಶ ಬೇಕು. ಹಾಗಾಗಿ ಹಿಂದಿನ ವರ್ಷದ (ಬೆಂಗಳೂರು ವಿ.ವಿ ಪಠ್ಯ) ಪಠ್ಯವೇ ಈ ಬಾರಿಯೂ ಮುಂದುವರೆಯುತ್ತದೆ.

ಕೆಂಪರಾಜು: ಈಗಾಗಲೇ ವಿಷಯವಾರು ಬಿಒಎಸ್‌ ರಚನೆಯಾಗಿದೆ. ಪಠ್ಯ ರಚನಾ ಕ್ರಮಕ್ಕೆ ಇತ್ತೀಚೆಗಷ್ಟೇ ಚಾಲನೆ ದೊರೆತಿದೆ. ಹಾಗಾಗಿ ನಮ್ಮ ವಿ.ವಿ ವ್ಯಾಪ್ತಿಯ ವಿದ್ಯಾರ್ಥಿಗಳು ಈ ವರ್ಷವೂ ಹಿಂದಿನ ವರ್ಷದ ಪಠ್ಯವನ್ನೇ ಓದಲಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯ ಅನುಷ್ಠಾನಗೊಳಿಸುತ್ತೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry