ಶುಕ್ರವಾರ, ಮಾರ್ಚ್ 5, 2021
18 °C
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ; 625ಕ್ಕೆ 620 ಅಂಕ ಗಳಿಸಿದ ಎಕ್ಸಲೆಂಟ್‌ ವಿದ್ಯಾರ್ಥಿ

ಮನೆಪಾಠವಿಲ್ಲದೆ ಸಾಧನೆ ಮಾಡಿದ ವಿಶ್ವರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಪಾಠವಿಲ್ಲದೆ ಸಾಧನೆ ಮಾಡಿದ ವಿಶ್ವರೆಡ್ಡಿ

ವಿಜಯಪುರ: ಮನೆ ಪಾಠಕ್ಕೆ ತೆರಳದ ಇಟ್ಟಂಗಿಹಾಳದ ಎಕ್ಸಲೆಂಟ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ವಿಶ್ವರೆಡ್ಡಿ, ಮನೆಯಲ್ಲೇ ಅಭ್ಯಾಸ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕ ಗಳಿಸುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಮನೆ ಪಾಠಕ್ಕೆ ವೃಥಾ ಹಣ ಖರ್ಚು ಮಾಡುವುದು ಬೇಡ ಎಂದು ನಿರ್ಧರಿಸಿದ ವಿಶ್ವರೆಡ್ಡಿ, ಪಾಲಕರ ಸಹಕಾರ, ಶಿಕ್ಷಕರ ಮಾರ್ಗದರ್ಶನ ದೊಂದಿಗೆ ಅತ್ಯುನ್ನತ ಸಾಧನೆ ಗೈದಿದ್ದಾರೆ.

ಇಂಗ್ಲಿಷ್‌–122, ಕನ್ನಡ–100, ಹಿಂದಿ–99, ಗಣಿತ–100, ವಿಜ್ಞಾನ–99, ಸಮಾಜ ವಿಜ್ಞಾನದಲ್ಲಿ 100 ಅಂಕ ಗಳಿಸಿದ್ದಾರೆ. ‘ನಿತ್ಯ ಶಾಲೆಯಲ್ಲಿ ಬೋಧಿಸಿದ ಪಾಠವನ್ನು ಮನೆಗೆ ಮರಳುತ್ತಿದ್ದಂತೆ, ಸಂಜೆ 6.30ರಿಂದ 8.30ರವರೆಗೆ ಎರಡು ತಾಸು ಅಧ್ಯಯನ ನಡೆಸುತ್ತಿದ್ದೆ. ನಸುಕಿನ 6ರಿಂದ 8.30ರವರೆಗೆ ಮತ್ತೆ ಪುನರ್‌ ಮನನ ಮಾಡಿಕೊಳ್ಳುತ್ತಿದೆ. ಹೀಗೆ ನಿತ್ಯ ಐದೂವರೆ ತಾಸು ಅಧ್ಯಯನ ನಡೆಸಿದೆ.

ಓದುವ ಸಂದರ್ಭ ಕಠಿಣ ಎನ್ನುವ ವಿಷಯವನ್ನು ನೇರವಾಗಿ ಶಿಕ್ಷಕರಿಗೆ ಫೋನಚ್ಚಿ ಕೇಳಿ ಪರಿಹರಿಸಿಕೊಳ್ಳುತ್ತಿದೆ. ಅತ್ತೆಯ ಮಗ ದೀಪಕರೆಡ್ಡಿ ಸಹ ಆಗಾಗ ಸಲಹೆ ನೀಡುತ್ತಿದ್ದ. ಇವರೆಲ್ಲರ ಸಲಹೆ, ಸೂಚನೆ, ಪ್ರೋತ್ಸಾಹದೊಂದಿಗೆ ಯಾವುದೇ ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಎದುರಿಸಿದ್ದೆ. ಅಂದುಕೊಂಡಂತೆ 620 ಅಂಕಗಳು ಬಂದಿವೆ’ ಎಂದು ವಿಶ್ವರೆಡ್ಡಿ ತಮ್ಮ ಸಾಧನೆಯ ಹಾದಿ ಕುರಿತು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಗನ ಸಾಧನೆ ರಾಜ್ಯದ ಜನರು ಮೆಚ್ಚುವಂತದ್ದು. ಜೀವನದಲ್ಲಿ ಸಾಧನೆ ಮಾಡಬೇಕೆಂಬ ಕನಸಿನೊಂದಿಗೆ ಶ್ರಮ ಪಡುತ್ತಿದ್ದಾನೆ. ಸಾಧನೆಗೆ ಮೊದಲ ಮೆಟ್ಟಿಲಾಗಿ ಎಸ್‌.ಎಸ್‌.ಎಲ್‌.ಸಿ ಸಾಧನೆ. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಸಂಜೆ ಮತ್ತು ಬೆಳಿಗ್ಗೆ ತಪ್ಪದೇ ಮನೆಯಲ್ಲಿ ಮರು ಅಧ್ಯಯನ ನಡೆಸುತ್ತಿದ್ದ. ಹೆಚ್ಚು ಸಮಯ ಓದಿನಲ್ಲಿ ತೊಡಗಿಕೊಳ್ಳದಿದ್ದರೂ, ನಾಲ್ಕಾರು ತಾಸು ಶ್ರದ್ಧೆಯಿಂದ ಓದಿನಲ್ಲಿ ತಲ್ಲೀನನಾಗುತ್ತಿದ್ದ’ ಎಂದು ಸಾಧಕ ವಿಶ್ವರೆಡ್ಡಿ ತಂದೆ ಸುಧೀರ ಬಿರಾದಾರ ಹೇಳಿದರು.

ಶೇ 100ರಷ್ಟು ಫಲಿತಾಂಶ

ತಾಳಿಕೋಟೆ: ಸ್ಥಳೀಯ ಸೆಕ್ರೆಡ್‌ ಹಾರ್ಟ್‌ ಪ್ರೌಢಶಾಲೆಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯು -2018ರ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಸಾಧನೆ ಮಾಡಿದೆ.

ಪರೀಕ್ಷೆಗೆ ಕುಳಿತ ಎಲ್ಲ 37 ಮಕ್ಕಳೂ ಉತ್ತೀರ್ಣರಾಗಿದ್ದು, 10 ವಿದ್ಯಾರ್ಥಿಗಳು ಶೇ 90ಕ್ಕಿಂತ ಅಧಿಕ ಅಂಕ, 14 ವಿದ್ಯಾರ್ಥಿಗಳು ಶೇ 80ಕ್ಕಿಂತ ಹೆಚ್ಚು ಅಂಕ ಹಾಗೂ 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸ್ನೇಹಾ ಸಜ್ಜನ್ 584 (93.44) ಅಂಕ ಗಳಿಸಿ ಶಾಲೆಗೆ ಮೊದಲ ಸ್ಥಾನ ಗಳಿಸಿದ್ದಾಳೆ. ಕನ್ನಡ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಹಿಂದಿಯಲ್ಲಿ ಮೂವರು ಶೇ 100 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಶಾಲಾ ವ್ಯವಸ್ಥಾಪಕ ಫಾ.ವಿಕ್ಟರ್ ಅನಿಲ್ ವಾಸ್ ಹಾಗೂ ಮುಖ್ಯಶಿಕ್ಷಕಿ ಸಿಸ್ಟರ್ ಎಲಿಜಬೆತ್ ಅಭಿನಂದಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.