ಭಾನುವಾರ, ಮಾರ್ಚ್ 7, 2021
30 °C
ಸುಳ್ಳುಗಾರ, ಗರ್ದಿ ಗಮ್ಮತ್ತಿನ ಗಿರಾಕಿ; ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ

ಮೋದಿ ಮಾತುಗಾರನಷ್ಟೆ; ಸೋನಿಯಾ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಮಾತುಗಾರನಷ್ಟೆ; ಸೋನಿಯಾ ವ್ಯಂಗ್ಯ

ವಿಜಯಪುರ: ‘ಮೋದಿ ಅತ್ಯುತ್ತಮ ಮಾತುಗಾರ. ಭಾಷಣಕಾರ; ಅವರ ಬಣ್ಣ ಬಣ್ಣದ ಮಾತುಗಳಿಂದ ದೇಶ ಅಭಿವೃದ್ಧಿಯಾಗಿದೆಯಾ? ಜನ ಸಾಮಾನ್ಯರಿಗೆ ಒಳಿತಾಗಿದೆಯಾ’ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪ್ರಶ್ನಿಸಿದರು.

ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಬಣ್ಣದ ಮಾತುಗಳಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ನಿರು ದ್ಯೋಗಿಗಳಿಗೆ ಕೆಲಸವೂ ಸಿಗುವುದಿಲ್ಲ’ ಎಂದು ಪ್ರಧಾನಿ ಕಾಲೆಳೆದರು.

‘ಬೆಲೆ ಏರಿಕೆಯಿಂದ ಜನ ತತ್ತರಿಸಿ ದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ, ನಮ್ಮಲ್ಲಿ ಮಾತ್ರ ದಿನೇ ದಿನೇ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಮುಖಿಯಾಗಿದೆ. ಜನರು ತೊಂದರೆಯಲ್ಲಿ ಸಿಲುಕಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಕನ್ನಡಿಗರಿಗೆ ಅಪಮಾನ: ‘ಹಿಂದಿನ ವರ್ಷ ಕರ್ನಾಟಕದಲ್ಲಿ ತೀವ್ರ ಬರಗಾಲವಿತ್ತು. ಜನರು ಸಂಕಷ್ಟದ ಸುಳಿಗೆ ಸಿಲುಕಿದ್ದರು. ಬರ ಪರಿಸ್ಥಿತಿ ನಿಭಾಯಿಸಲೆಂದು, ರೈತರ ಸಾಲ ಮನ್ನಾಕ್ಕೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಭೇಟಿಗೆ ಮುಂದಾದರೆ, ಮೋದಿ ನಿರಾಕರಿಸುವ ಮೂಲಕ ಇಲ್ಲಿನ ಜನರಿಗೆ ಅಪಮಾನ ಮಾಡಿದರು’ ಎಂದು ಸೋನಿಯಾ ಗುಡುಗಿದರು.

‘ಮೋದಿ ಅವರ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬುದು ಘೋಷಣೆಗಷ್ಟೇ ಸೀಮಿತವಾಗಿದೆ. ತಮ್ಮ ಅಧಿಕಾರದ ಅವಧಿಯಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅನುದಾನ ಒದಗಿಸಿದರೆ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಅಗತ್ಯವಿದ್ದಷ್ಟು ಅನುದಾನ ನೀಡದೆ ತಾರತಮ್ಯ ಮಾಡಲಾಗಿದೆ’ ಎಂದು ದೂರಿದರು.

ಎಂ.ಬಿ.ಪಾಟೀಲ ಟೀಕೆ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅತ್ಯದ್ಭುತ ನಟ. ಗರ್ದಿ ಗಮ್ಮತ್ತಿನ ಗಿರಾಕಿ. ಡಬ್ಬದೊಳಗೆ ಏನು ಇಲ್ಲದಿದ್ದರೂ ಎಲ್ಲವೂ ಇದೇ ಎಂದು ಸುಳ್ಳು ಹೇಳುವ ಸುಳ್ಳುಗಾರ. ಫೇಕು ಲಾಲ್‌’ ಎಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ.ಪಾಟೀಲ ವ್ಯಂಗ್ಯವಾಡಿದರು.

‘ಬಸವ ಧರ್ಮ ಜಾಗತಿಕ ಧರ್ಮವಾಗುವ ತನಕ ನಮ್ಮ ಹೋರಾಟ ನಡೆಯಲಿದೆ. ಅಧಿಕಾರ ಹೋದರೂ ಬಸವಣ್ಣನನ್ನು ಮಾತ್ರ ಬಿಡಲ್ಲ’ ಎಂದು ಸಾರವಾಡದಲ್ಲಿ ತಮ್ಮ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪಾಟೀಲ, ನಗರದ ಸೊಲ್ಲಾಪುರ ರಸ್ತೆಯಲ್ಲಿನ ಬಿಎಲ್‌ಡಿಇ ನೂತನ ಕ್ಯಾಂಪಸ್‌ ಆವರಣದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ತಿರುಗೇಟು ನೀಡಿದರು.

‘ಬಸವ ಜನ್ಮಭೂಮಿಯಲ್ಲಿ ಬಸವೇ ಶ್ವರರಿಗೆ ಅಪಮಾನಿಸುವ ಮೋದಿ, ಲಂಡನ್‌ನಲ್ಲಿ ಭಕ್ತಿ ಪೂರ್ವಕವಾಗಿ ನಮಿಸುವ ಶೋ ನೀಡುತ್ತಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಸವೇಶ್ವರರ ಭಾವಚಿತ್ರವಿದೆಯಾ’ ಎಂದು ಪ್ರಶ್ನಿಸಿದ ಎಂ.ಬಿ.ಪಾಟೀಲ, ‘ವಿಜಯಪುರದಲ್ಲಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸ್ಥಾಪಕರು ಯಾರು ಎಂಬುದು ನಿಮಗೆ ನೆನಪಿದೆಯಾ’ ಎಂದು ಕೆಣಕಿದರು.

‘ಲಿಂಗಾಯತ ಅಸ್ಮಿತೆಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ಬೌದ್ಧ ಧರ್ಮಕ್ಕೆ ಅಶೋಕ ಸಾಮ್ರಾಟ ಸಿಕ್ಕಂತೆ 12ನೇ ಶತಮಾನದಲ್ಲೇ ಪ್ರಬಲ ರಾಜರ ಆಸರೆ ಸಿಕ್ಕಿದ್ದರೆ, ಜಗತ್ತು ಬಸವ ಮಯವಾಗುತ್ತಿತ್ತು’ ಎಂದರು.

ಮುದ್ದೇಬಿಹಾಳ ಕ್ಷೇತ್ರದ ಅಭ್ಯರ್ಥಿ ಸಿ.ಎಸ್‌.ನಾಡಗೌಡ, ಪ್ರಕಾಶ ರಾಠೋಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿಗಳಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಬಿ.ಎಸ್‌.ಯಾಳಗಿ, ಮಲ್ಲಣ್ಣ ಸಾಲಿ, ವಿಠ್ಠಲ ಕಟಕದೊಂಡ, ಅಬ್ದುಲ್‌ ಹಮೀದ್ ಮುಶ್ರೀಫ್‌ ಉಪಸ್ಥಿತರಿದ್ದರು.

25 ಪರ್ಸೆಂಟ್‌ ಸರ್ಕಾರ

‘ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ 25% ಕಮಿಷನ್ ಸರ್ಕಾರ’ ಎಂದು ಎಂ.ಬಿ.ಪಾಟೀಲ ದೂರಿದರು. ‘ರಾಷ್ಟ್ರೀಯ ಹೆದ್ದಾರಿ ಯೋಜನೆ ನಿರ್ಮಾಣದಲ್ಲಿ ಮೋದಿ, ಗಡ್ಕರಿ ಸೇರಿಕೊಂಡು 25% ಕಮಿಷನ್‌ ಪಡೆಯುತ್ತಿದ್ದಾರೆ’ ಎಂದು ಇದೇ ಸಂದರ್ಭ ಗಂಭೀರ ಆರೋಪ ಮಾಡಿದರು.

‘ರಾಷ್ಟ್ರದ ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿ ಅವರೇ ನೀರವ್ ಮೋದಿ, ಲಲಿತ್ ಮೋದಿ, ವಿಜಯ ಮಲ್ಯ ದೇಶ ಬಿಟ್ಟು ಪರಾರಿಯಾಗುವಾಗ ಎಲ್ಲಿಗೆ ಹೋಗಿದ್ದೀರಿ. ನೀವೇ ಇವರಿಗೆ ರಕ್ಷಣೆ ನೀಡುತ್ತಿದ್ದೀರಿ’ ಎಂದು ಪಾಟೀಲ ದೂರಿದರು.

**

ಮೋದಿ ಸುಳ್ಳಿನ ಸರದಾರ, ರಾಜ್ಯದ ಚುನಾವಣೆ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿರುವುದನ್ನು ನೋಡಿದರೆ ಕರ್ನಾಟಕದ ಸಿ.ಎಂ ಆಗುವಂತೆ ಭಾಸವಾಗುತ್ತಿದೆ 

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಭ್ಯರ್ಥಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.