ಶನಿವಾರ, ಮೇ 15, 2021
25 °C

ಬಿಸಿ ಬಿಸಿ ಕಜ್ಜಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿ ಬಿಸಿ ಕಜ್ಜಾಯ

ನಾನು 1971ರಲ್ಲಿ ಮದುವೆಯಾಗಿ ಗಂಡನ ಮನೆಗೆ ಬಂದ ಹೊಸತರಲ್ಲಿ ಒಬ್ಬಳೇ ಅಡುಗೆ ಮಾಡಿ ಗೊತ್ತಿರಲಿಲ್ಲ. ಸ್ವಲ್ಪ ಸಮಯದಲ್ಲೇ ದೀಪಾವಳಿ ಹಬ್ಬ ಬಂತು. ಅತ್ತೆ ನನ್ನನ್ನು ಕರೆದು ‘ನಿಮ್ಮ ಊರಲ್ಲಿ ಕಜ್ಜಾಯ ಚೆನ್ನಾಗಿ ಮಾಡುತ್ತಾರಲ್ವ, ನಿನಗೂ ಬರಬಹುದು ಈ ದೀಪಾವಳಿ ಹಬ್ಬಕ್ಕೆ ಮಾಡು’ ಎಂದರು. ಅತ್ತೆ ಹತ್ರ ಕಜ್ಜಾಯ ಮಾಡೋಕೆ ಬರಲ್ಲ ಎಂದು ಹೇಳಲಾರದೆ ಬರುವವರಿಂದ ತಿಳಿದುಕೊಂಡರಾಯಿತು ಎಂದು ಧೈರ್ಯ ಮಾಡಿ ಆಯಿತು ಎಂದೆ.

ನನ್ನ ಕಿರಿಯ ಮೈದುನನ ಸಹಾಯ ತೆಗೆದುಕೊಂಡು ಅಕ್ಕಿ ನೆನಸಿ ಕುಟ್ಟಿ ಪುಡಿ ಮಾಡಿ ಜರಡಿ ಹಿಡಿದು ಬೆಲ್ಲದ ಪಾಕ ತೆಗೆದು ಕಜ್ಜಾಯದ ಹಿಟ್ಟು ಮಾಡಿ ಒಂದು ‍ಪಾತ್ರೆಗೆ ಅದುಮಿ ಅದುಮಿ ತುಂಬಿದೆ. ನನಗೆ ಕಜ್ಜಾಯ ಮಾಡುವ ವಿಧಾನ ಹೇಳಿಕೊಟ್ಟವರು ಹಿಟ್ಟನ್ನು 2–3 ದಿನ ಬಿಟ್ಟು ಕಜ್ಜಾಯ ಮಾಡು ಎಂದು ತಿಳಿಸಿದ್ದರು. ಅದರಂತೆ ಹಬ್ಬದ ದಿನ ಮನೆಯವರಿಗೆಲ್ಲ ಬನ್ನಿ.. ಬನ್ನಿ... ಬಿಸಿ ಬಿಸಿ ಕಜ್ಜಾಯ ಮಾಡಿ ಕೊಡುವೆ ಎಂದು ಒಲೆ ಮೇಲೆ ತೇಲಿಸಲು ಎಣ್ಣೆ ಇಟ್ಟು, ಪಾಕ ತೆಗೆದ ಹಿಟ್ಟನ್ನು ತೆಗೆಯಲು ಹೋದರೆ ಜಪ್ಪಯ್ಯ ಎಂದರೂ ‍ಪಾತ್ರೆ ಬಿಟ್ಟು ಬರಲೇ ಇಲ್ಲ.

ಹಿಟ್ಟು ತುಂಬಿಸಿದ್ದ ಪಾತ್ರೆಗೆ ಮೇಲಿಂದ ಬಿಸಿ ನೀರು ಸುರಿದೆ. ಬಕೆಟ್ಟಿನಲ್ಲಿ ನೆನಸಿಟ್ಟ ಹಿಟ್ಟು ಸುತಾರಾಂ ಬಿಡಲೇ ಇಲ್ಲ. ಕಡೆಗೆ ನನ್ನ ಮೈದುನ ಸುತ್ತಿಗೆ ತೆಗೆದುಕೊಂಡು ಪಾತ್ರೆಗೆ ಹಿಂದಿನಿಂದ ಹೊಡೆದು ಹೊಡೆದು ಚೂರು ಚೂರೇ ಅಂತೂ ಇಂತೂ ಬಿಡಿಸಿದ. ‍‍ಪಾತ್ರೆ ತಳಭಾಗ ಪೂರ್ತಿ ಜರಡಿ ತೂತಿನಂತೆ ಆಗಿತ್ತು. ನನ್ನ ಪತಿ ನಗುತ್ತಾ ‘ಈ ಕಾಂಕ್ರೀಟ್‌ಗೆ ಏನು ಮಿಕ್ಸ್ ಮಾಡಿದ್ದೆ ಹೇಳು, ಈ ಫಾರ್ಮೂಲ ಯಾವುದಾದರೂ ಎಂಜಿನಿಯರ್‌ಗೆ ಕೋಡೋಣ. ಈ ಹದದಲ್ಲಿ ಮಿಕ್ಸ್ ಮಾಡಿ ಮನೆ ಕಟ್ಟಿದರೆ ಯಾವ ಭೂಕಂಪ, ಸುನಾಮಿಗೂ ಮನೆ ಜಗ್ಗುವುದಿಲ್ಲ’ ಎಂದು ತಮಾಷೆ ಮಾಡಿದರು.

ಈಚೆಗೆ 30 ವರುಷದ ಹಿಂದೆ ಅಟ್ಟದ ಮೇಲಿದ್ದ ಆ ‍ಪಾತ್ರೆ ನನ್ನ ಮೈದಾನನ ಕೈಗೆ ಸಿಕ್ಕಾಗ ರೇಗಿಸಿದ್ದೇ ಬಂತು. ಇದನ್ನು ಮ್ಯೂಸಿಯಂಗೆ ಕಳಿಸೋಣ ಎಂದು ಆಡಿಕೊಂಡು ನಕ್ಕರು. ಆದರೆ ಇಂದು ನಾನು ಕುಕ್ಕಿಂಗ್ ಎಕ್ಸ್‌ಪರ್ಟ್. ಪಾಕಶಾಸ್ತ್ರ ಪ್ರವೀಣೆಯಾಗಿ ನೂರಾರು ಮಹಿಳೆಯರಿಗೆ ಅಡುಗೆ ತರಬೇತಿ ಕೊಟ್ಟಿರುವೆ.

–ಗೀತಾ ವಿರೂಪಾಕ್ಷ, ಜಯನಗರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.