ಸಿದ್ದರಾಮಯ್ಯ ಹೃದಯವನ್ನೂ ಹೊಕ್ಕಿದ್ದೇನೆ; ಮೋದಿ

7

ಸಿದ್ದರಾಮಯ್ಯ ಹೃದಯವನ್ನೂ ಹೊಕ್ಕಿದ್ದೇನೆ; ಮೋದಿ

Published:
Updated:
ಸಿದ್ದರಾಮಯ್ಯ ಹೃದಯವನ್ನೂ ಹೊಕ್ಕಿದ್ದೇನೆ; ಮೋದಿ

ಬೆಳಗಾವಿ: ‘ಇಷ್ಟು ದಿನಗಳವರೆಗೆ ಬಿಜೆಪಿಯವರು ಮೋದಿ ಮೋದಿ ಎನ್ನುತ್ತಿದ್ದರು. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಲ್ಲೂ ಮೋದಿ ಮೋದಿ ಕೇಳಿಬರುತ್ತಿದೆ. ಕಾಂಗ್ರೆಸ್ಸಿಗರ ಹೃದಯವನ್ನೂ ಈ ಮೋದಿ ಹೊಕ್ಕಿದ್ದಾನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಚಾಯಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಬಿಜೆಪಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ನರೇಂದ್ರ ಸ್ವಾಮಿ ಅವರ ಪರ ಪ್ರಚಾರ ಮಾಡುತ್ತಿದ್ದ ವೇಳೆ ಸಿದ್ದರಾಮಯ್ಯ ಅವರು, ನರೇಂದ್ರ ಮೋದಿ... ನರೇಂದ್ರ ಮೋದಿ... ಎಂದು ಬಾಯಿಬಡಿಸಿದ್ದರು. ಮನಸ್ಸಿನಲ್ಲಿ ಇರುವ ವಿಷಯ ಒಂದಿಲ್ಲ ಒಂದು ದಿನ ಹೊರಬರುತ್ತದೆ ಎನ್ನುವುದು ನಿಜವಾಯಿತು’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಬಗ್ಗೆ ಎಚ್ಚರವಾಗಿರಿ: ಮತದಾನ ನಡೆಯಲು ಎರಡು ದಿನಗಳು ಮಾತ್ರ ಉಳಿದಿವೆ. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ಸಿಗರು ಅಡ್ಡದಾರಿ ತುಳಿಯಬಹುದು. ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಿಸಬಹುದು. ಅವರು ಪಕ್ಷ ಬಿಟ್ಟರು, ಇವರು ಸೇರಿಕೊಂಡರು, ಆ ಜಾತಿ, ಈ ಜಾತಿ ಎಂದೆಲ್ಲ  ಸುಳ್ಳು ಮಾಹಿತಿ ಹರಡಿಸಬಹುದು. ಇದರ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು ಎಂದರು.

ಬೆಂಗಳೂರಿನಲ್ಲಿ 1 ಲಕ್ಷ ನಕಲಿ ಮತದಾರರ ಚೀಟಿಗಳು ಸಿಕ್ಕಿವೆ. ಇದೇ ರೀತಿ ರಾಜ್ಯದ 40ರಿಂದ 50 ಕ್ಷೇತ್ರಗಳಲ್ಲಿ ನಕಲಿ ಮತದಾರರ ಚೀಟಿಗಳನ್ನು ತಯಾರಿಸಿದ್ದಾರೆ. ಇದರ ಬಗ್ಗೆ ಎಚ್ಚರದಿಂದ ಇರಿ. ಮತದಾನವು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಇದಕ್ಕೆ ಕಳಂಕ ಬಾರದಂತೆ ನೋಡಿಕೊಳ್ಳಬೇಕು ಎಂದು ನುಡಿದರು.

ಬಾದಾಮಿಯ ಜನರೂ ಉಳಿಸುವುದಿಲ್ಲ; ಮುಖ್ಯಮಂತ್ರಿ ಅವರು ತಂಗಿದ್ದ ಬಾದಾಮಿಯ ರೆಸಾರ್ಟ್‌ ಮೇಲೆ ದಾಳಿ ನಡೆದಾಗ ಕೋಟ್ಯಾಂತರ ರೂಪಾಯಿ ಹಣ ಸಿಕ್ಕಿದೆ. ಇದರಿಂದ ಬಾದಾಯಿ ಹೆಸರಿಗೆ ಕಳಂಕ ಬಂದಿದೆ. ಹಿಂಬಾಗಿಲಿನ ಮೂಲಕ ಅಲ್ಲಿಗೆ ತೆರಳಿರುವ ಸಿದ್ದರಾಮಯ್ಯ ಅವರನ್ನು ಬಾದಾಮಿಯ ಜನರೂ ರಕ್ಷಿಸುವುದಿಲ್ಲ ಎಂದು ಹೇಳಿದರು.

ಇವಿಎಂ ವಿರುದ್ಧ ಬೊಬ್ಬೆ: ತಂತ್ರಜ್ಞಾನ ಬಳಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಕಾಂಗ್ರೆಸ್ಸಿಗರು 18ನೇ ಶತಮಾನದ ಚಿಂತನಾ ಕ್ರಮ ಹೊಂದಿದ್ದಾರೆ. ತಂತ್ರಜ್ಞಾನವನ್ನು ವಿರೋಧಿಸುತ್ತಿದ್ದಾರೆ. ಆಧಾರ್‌ ಕಾರ್ಡ್‌, ಆ್ಯಪ್‌, ಆನ್‌ಲೈನ್‌ ಬ್ಯಾಂಕಿಂಗ್‌ ವಿರುದ್ಧ ಜನರನ್ನು ಎತ್ತಿಕಟ್ಟಿದ್ದು, ಮೇ 15ರಂದು ಮಧ್ಯಾಹ್ನ 2 ಗಂಟೆಗೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಇವಿಎಂ ಯಂತ್ರಗಳ ವಿರುದ್ಧ ಹರಿಹಾಯಲಿದ್ದಾರೆ ಎಂದು ವ್ಯಂಗ್ಯವಾಡಿದರು.

10 ಪರ್ಸೆಂಟೇಜ್‌ನ ಪಾಲೇ?; ಇತ್ತೀಚೆಗೆ ರಾಜ್ಯದಲ್ಲಿ ಚಿನ್ನದ ಬಿಸ್ಕತ್ತುಗಳು, ನಗದು ಹಣ ಹಾಗೂ ಟ್ರಕ್‌ ತುಂಬ ಕುಕ್ಕರ್‌ಗಳು ಸಿಕ್ಕಿವೆ. ಇವೆಲ್ಲವೂ ಹತ್ತು ಪರ್ಸೆಂಟೇಜ್‌ನಿಂದ ಬಂದಿದ್ದೇ ಎನ್ನುವುದಕ್ಕೆ ಮುಖ್ಯಮಂತ್ರಿಯವರು  ಉತ್ತರಿಸಲಿ ಎಂದು ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry