ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಯಿ ವಿನಿಮಯ ಮೌಲ್ಯ ಕುಸಿತ : ಕಡಿವಾಣ ಅಗತ್ಯ

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು ಹದಿನೈದು ತಿಂಗಳ ಹಿಂದಿನ ದಾಖಲೆ ಮಟ್ಟಕ್ಕೆ ಕುಸಿದಿದೆ. ಪ್ರತಿ ಡಾಲರ್‌ಗೆ ₹ 67.27ಕ್ಕೆ ತಲುಪಿದೆ. ಇದು ದೇಶಿ ಆರ್ಥಿಕತೆ ಮೇಲೆ ಹಲವಾರು ಬಗೆಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮೂರು ತಿಂಗಳಲ್ಲಿ ರೂಪಾಯಿ ಶೇ 4.25ರಷ್ಟು ಮೌಲ್ಯ ಕಳೆದುಕೊಂಡಿದೆ. ಇದಕ್ಕೆ ಜಾಗತಿಕ ವಿದ್ಯಮಾನಗಳೂ ಕಾರಣ. ಇದೇ ವೇಳೆಯಲ್ಲಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಏರಿಕೆಯಾಗಿರುವುದು ಈ ಕರೆನ್ಸಿ ವಿನಿಮಯ ಬಿಕ್ಕಟ್ಟನ್ನು ತೀವ್ರಗೊಳಿಸಿದೆ.

ಕಚ್ಚಾ ತೈಲ ಆಮದನ್ನು ಭಾರತ ಹೆಚ್ಚಾಗಿ ಅವಲಂಬಿಸಿರುವುದರಿಂದ ವಿತ್ತೀಯ ಮತ್ತು ಚಾಲ್ತಿ ಖಾತೆ ಕೊರತೆ ಹೆಚ್ಚಳಗೊಳ್ಳಲಿದೆ. ಆಮದು ವೆಚ್ಚ ದುಬಾರಿಯಾಗಲಿದೆ. ಅಮೆರಿಕದ ಆರ್ಥಿಕತೆ ಚೇತರಿಸಿಕೊಂಡಿರುವುದರಿಂದ ವಿಶ್ವದಾದ್ಯಂತ ಡಾಲರ್‌ಗೆ ಬೇಡಿಕೆ ಹೆಚ್ಚುತ್ತಿದೆ.

ವಿಶ್ವದ ಪ್ರಮುಖ ಕರೆನ್ಸಿಗಳ ವಿರುದ್ಧದ ಡಾಲರ್‌ನ ವಿನಿಮಯ ಮೌಲ್ಯ ಅಳೆಯುವ ಡಾಲರ್‌ ಸೂಚ್ಯಂಕವು ಈ ವರ್ಷದ ಏಪ್ರಿಲ್‌ನಲ್ಲಿ ಶೇ 92.03ಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ ಆರ್ಥಿಕ ವೃದ್ಧಿ ದರ ಹೆಚ್ಚಳಗೊಂಡು ನಿರುದ್ಯೋಗ ಕಡಿಮೆಯಾಗುತ್ತಿದ್ದಂತೆ ಡಾಲರ್‌ ಸಾಮರ್ಥ್ಯ ಇನ್ನಷ್ಟು ಬಲಗೊಳ್ಳುತ್ತಿದೆ. ದೇಶಿ ಆಮದುದಾರರು ಡಾಲರ್‌ ಖರೀದಿಗೆ ಮುಗಿಬೀಳುತ್ತಿದ್ದಾರೆ.

ಈ ವಿದ್ಯಮಾನವು ದೇಶಿ ಆರ್ಥಿಕತೆ ಮೇಲೆ ಮಿಶ್ರ ಪ್ರಭಾವ ಬೀರಲಿದೆ. ಪ್ರತಿಯೊಂದು ಡಾಲರ್‌ಗೆ ಹೆಚ್ಚು ರೂಪಾಯಿ ನೀಡಬೇಕಾಗಿ ಬಂದಿದೆ. ವಿದೇಶಗಳಲ್ಲಿ ಕಲಿಯುತ್ತಿರುವ ಮಕ್ಕಳ ವಿದ್ಯಾಭ್ಯಾಸ ವೆಚ್ಚಕ್ಕೆ ಹಣ ಕಳಿಸುವವರಿಗೆ, ವಿದೇಶಗಳಿಗೆ ಭೇಟಿ ನೀಡುವವರಿಗೆ ಇದು ಹೊರೆಯಾಗಲಿದೆ. ವಿದೇಶಗಳಿಂದ ಡಾಲರ್‌ ಸ್ವೀಕರಿಸುವವರಿಗೆ ಮಾತ್ರ ರೂಪಾಯಿ ರೂಪದಲ್ಲಿ ಹೆಚ್ಚು ಹಣ ಕೈಸೇರಲಿದೆ. ಡಾಲರ್‌ನ ಮೌಲ್ಯವರ್ಧನೆ ಮತ್ತು ರೂಪಾಯಿ ಬೆಲೆ ಕುಸಿತದ ಕಾರಣಕ್ಕೆ ಭಾರತದ ಬಂಡವಾಳ ಪೇಟೆಯಲ್ಲಿನ ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವೂ ಹೆಚ್ಚಲಿದೆ.

ಸಾಮಾನ್ಯವಾಗಿ ರೂಪಾಯಿ ಮೌಲ್ಯ ಕುಸಿತದಿಂದ ಸಿಗುವ ಬೆಲೆ ಅನುಕೂಲದಿಂದ ಭಾರತೀಯ ತಯಾರಕರು ಮತ್ತು ರಫ್ತು ವಹಿವಾಟುದಾರರಿಗೆ ಉತ್ತೇಜನ ಸಿಗುತ್ತದೆ. ಆದರೆ ಈ ಅನುಕೂಲ ಪಡೆದುಕೊಳ್ಳಲು ಭಾರತ ಸನ್ನದ್ಧವಾಗಿದೆಯೇ? ಈ ನಿಟ್ಟಿನಲ್ಲಿ ಚೀನಾಗೆ ಸ್ಪರ್ಧೆ ಕೊಡುವ ಬಲ ನಮ್ಮಲ್ಲಿದೆಯೇ ಎಂಬುದು ಪ್ರಶ್ನೆ. ಹೀಗಾಗಿ ಸಾಫ್ಟ್‌ವೇರ್, ಫಾರ್ಮಾದಂತಹ ಕೆಲವೇ ಕ್ಷೇತ್ರಗಳ ಉದ್ಯಮ ಲಾಭ ಪಡೆಯಬಹುದು.

ರಫ್ತು ಬೆಳವಣಿಗೆ ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ಹೆಚ್ಚಾಗಿಲ್ಲ ಎಂಬ ವಾಸ್ತವಕ್ಕೂ ನಾವು ಮುಖಾಮುಖಿಯಾಗಬೇಕಿದೆ. ಹಾಗೆಯೇ ಆಮದುದಾರರೂ ಹೆಚ್ಚು ‌‌‌ನಷ್ಟ ಅನುಭವಿಸಬೇಕಾದ ಸ್ಥಿತಿ ಎದುರಾಗಲಿದೆ. ಏಕೆಂದರೆ ಆಮದು ವೆಚ್ಚ ತುಟ್ಟಿಯಾಗಲಿದೆ. ಆಮದನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಹರಳು, ಚಿನ್ನಾಭರಣದಂತಹ ವಹಿವಾಟಿಗೆ ಧಕ್ಕೆ ಒದಗಲಿದೆ.

ರೂಪಾಯಿ ವಿನಿಮಯ ಮೌಲ್ಯದಲ್ಲಿನ ತೀವ್ರ ಏರುಪೇರು ಮತ್ತು ಹೂಡಿಕೆಯ ಹೊರ ಹರಿವಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಾಗಿದೆ. ಕರೆನ್ಸಿಗಳ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡಿ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿದೆ. ಇದರಿಂದಲೂ ರೂಪಾಯಿ ಮೌಲ್ಯ ಕುಸಿತವು ತಹಬಂದಿಗೆ ಬರುತ್ತಿಲ್ಲ. ವಿನಿಮಯ ದರ ವ್ಯತ್ಯಾಸವು ಸ್ಥಿರಗೊಂಡಿಲ್ಲ.

ರೂಪಾಯಿ ವಿನಿಮಯ ಮೌಲ್ಯವು ದೇಶದ ಆರ್ಥಿಕತೆಯ ಸಾಮರ್ಥ್ಯದ ದ್ಯೋತಕವಾಗಿದೆ. ಅದರ ಮೌಲ್ಯದಲ್ಲಿನ ಭಾರಿ ಏರಿಳಿತವು ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದೇ ಧ್ವನಿಸುತ್ತದೆ. ಅಧಿಕ ಮೌಲ್ಯದ ನೋಟು ರದ್ದತಿ ಹಾಗೂ ಜಿಎಸ್‌ಟಿ ಆತುರದ ಅನುಷ್ಠಾನದಿಂದ ಆರ್ಥಿಕ ರಂಗದಲ್ಲಾದ ತಳಮಳ ಈಗ ಚೇತರಿಕೆಯ ಹಾದಿಗೆ ಮರಳಿತ್ತು. ಆದರೆ ಈಗ ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವನ್ನು ನಿಯಂತ್ರಿಸಲು ವಿಫಲವಾದರೆ ಅದು ರೂಪಾಯಿ ವಿನಿಮಯ ದರದ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಒಟ್ಟು ಆಂತರಿಕ ಉತ್ಪನ್ನದಲ್ಲಿನ ಚಾಲ್ತಿ ಖಾತೆ ಕೊರತೆ ಹೆಚ್ಚಾದಷ್ಟೂ ರೂಪಾಯಿ ಬೆಲೆ ಮೇಲೆ ಒತ್ತಡ ಹೆಚ್ಚುತ್ತದೆ. ಚಿಂತೆಗೆ ಕಾರಣವಾಗಿರುವ ಕಾರ್ಮೋಡಗಳು ಸದ್ಯಕ್ಕೆ ದೂರವಾಗುವ ಲಕ್ಷಣಗಳಿಲ್ಲ. ಬಹುಬಗೆಯ ಪ್ರತಿಕೂಲ ಪರಿಣಾಮಗಳ ತೀವ್ರತೆ ತಗ್ಗಿಸಲು ಕೇಂದ್ರೀಯ ಬ್ಯಾಂಕ್‌ ಇನ್ನಷ್ಟು ರಚನಾತ್ಮಕ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT