ಇರಾನ್‌ ಜತೆಗಿನ ಪರಮಾಣು ಒಪ್ಪಂದ: ಅಮೆರಿಕ ಹಿಂದಕ್ಕೆ

7
ಆರ್ಥಿಕ ನಿರ್ಬಂಧ ಹೇರಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಇರಾನ್‌ ಜತೆಗಿನ ಪರಮಾಣು ಒಪ್ಪಂದ: ಅಮೆರಿಕ ಹಿಂದಕ್ಕೆ

Published:
Updated:

ವಾಷಿಂಗ್ಟನ್‌: ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಅವಧಿಯಲ್ಲಿ ಆಗಿದ್ದ ಇರಾನ್‌ ಜೊತೆಗಿನ 2015ರ ಐತಿಹಾಸಿಕ ಪರಮಾಣು ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರದ್ದುಗೊಳಿಸಿದ್ದಾರೆ. ಅಲ್ಲದೇ, ಇರಾನ್‌ ಮೇಲೆ ಹೊಸತಾಗಿ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದಾರೆ.

‘ಇರಾನ್‌ ಪರಮಾಣು ಒಪ್ಪಂದವು ಹಲವು ನ್ಯೂನತೆಗಳನ್ನು ಹೊಂದಿತ್ತು. ಈ ಕಾರಣದಿಂದ ಅಮೆರಿಕವು ಈ ಒಪ್ಪಂದದಿಂದ ಹಿಂದೆ ಸರಿಯುತ್ತಿದೆ ಎಂದು ಘೋಷಣೆ ಮಾಡುತ್ತಿದ್ದೇನೆ’ ಎಂದು ಬುಧವಾರ ಟ್ರಂಪ್‌ ಪ್ರಕಟಿಸಿದ್ದಾರೆ.

ಇದಾದ ಬೆನ್ನಲ್ಲೇ ಇರಾನ್‌ ಮೇಲೆ ಹೇರಲಾದ ಹೊಸ ನಿರ್ಬಂಧಗಳಿಗೆ ಟ್ರಂಪ್‌ ಅವರು ಸಹಿಹಾಕಿದರು. ‘ವಿವಾದಾಸ್ಪದ ಒಪ್ಪಂದದ ವಿಚಾರದಲ್ಲಿ ಇತರೆ ರಾಷ್ಟ್ರಗಳು ಸಹಕಾರ ಮುಂದುವರಿಸಿದರೆ, ಅಂತಹ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಇದೇ ವೇಳೆ ಅವರು ಎಚ್ಚರಿಕೆ ನೀಡಿದ್ದಾರೆ.

‘ಅನಾಹುತಕಾರಿ ಒಪ್ಪಂದದಿಂದ ಇರಾನ್‌ಗೆ ಮಿಲಿಯನ್‌ ಡಾಲರ್‌ನಷ್ಟು ನಗದು ಹರಿದುಬರುತ್ತದೆ, ಆದರೆ ಆ ರಾಷ್ಟ್ರವು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದನ್ನು ತಡೆಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಒಪ್ಪಂದ ರದ್ದುಗೊಳಿಸಿದರೆ, ಸಂಘರ್ಷ ಉಂಟಾಗಿ ಅಮೆರಿಕದ ವಿಶ್ವಾಸರ್ಹತೆಗೆ ಧಕ್ಕೆ ಉಂಟಾಗಬಹುದು’ ಎಂಬ ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದ ಡೆಮಾಕ್ರಟಿಕ್‌ ನಾಯಕರ ಸಲಹೆಯನ್ನು ಟ್ರಂಪ್‌ ತಿರಸ್ಕರಿಸಿದ್ದಾರೆ. ಒಪ್ಪಂದದಿಂದ ಹಿಂದೆ ಸರಿದಿರುವುದು ತಪ್ಪು  ಎಂದು ಮಾಜಿ ಅಧ್ಯಕ್ಷ  ಒಬಾಮ ತಿಳಿಸಿದ್ದಾರೆ.

*ಇರಾನ್‌ನ ದುರುದ್ದೇಶದ ವರ್ತನೆಯಿಂದಲೇ ಈ ಒಪ‍್ಪಂದ ರದ್ದುಗೊಂಡಿದೆ. ಅಲ್ಲದೇ, ಆ ದೇಶದ ಮೇಲೆ ಹೇರಲಾದ ಆರ್ಥಿಕ ದಿಗ್ಬಂಧನಗಳು ತಕ್ಷಣದಿಂದ ಜಾರಿಗೆ ಬರಲಿದೆ

–ಶ್ವೇತಭವನ 

‘ಐರೋಪ್ಯ ಒಕ್ಕೂಟ ಖಾತರಿ ನೀಡದಿದ್ದರೆ ಒಪ್ಪಂದದಿಂದ ಹೊರಕ್ಕೆ’

ಟೆಹರಾನ್‌ (ಎಎಫ್‌ಪಿ):  ಐರೋಪ್ಯ ಒಕ್ಕೂಟವು ಖಾತರಿ ಒದಗಿಸದಿದ್ದರೆ, ಪರಮಾಣು ಒಪ್ಪಂದದಿಂದ ಟೆಹರಾನ್‌ ಹಿಂದೆ ಸರಿಯಲಿದೆ’ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತಿಳಿಸಿದ್ದಾರೆ.

ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಒಪ್ಪಂದದ ಬಗ್ಗೆ ಖಚಿತ ಖಾತರಿ ಸಿಗದಿದ್ದರೆ, ಈಗಿನ ಸ್ಥಿತಿಯಲ್ಲಿ ನಾವು ಮುಂದುವರಿಯುವುದು ಕಷ್ಟ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry