ಸ್ಟಾರ್ಟ್‌ಅಪ್‌ನ ಅತಿದೊಡ್ಡ ಯಶೋಗಾಥೆ

7

ಸ್ಟಾರ್ಟ್‌ಅಪ್‌ನ ಅತಿದೊಡ್ಡ ಯಶೋಗಾಥೆ

Published:
Updated:
ಸ್ಟಾರ್ಟ್‌ಅಪ್‌ನ ಅತಿದೊಡ್ಡ ಯಶೋಗಾಥೆ

ನವದೆಹಲಿ: ಆರಂಭದಲ್ಲಿ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ನಡೆಸುತ್ತಿದ್ದ ಫ್ಲಿಪ್‌ಕಾರ್ಟ್‌, ವಿಶ್ವದ ಅತಿದೊಡ್ಡ ರಿಟೇಲ್‌ ಸಂಸ್ಥೆ ವಾಲ್‌ಮಾರ್ಟ್‌ಗೆ ₹ 1.07 ಲಕ್ಷ ಕೋಟಿಗೆ ಮಾರಾಟವಾಗಿರುವುದು ದೇಶದ ಸ್ಟಾರ್ಟ್‌ಅಪ್‌ಗಳ ಯಶೋಗಾಥೆಗೆ ನಿದರ್ಶನವಾಗಿದೆ.

ಅಮೆರಿಕದ ಇನ್ನೊಂದು ಇ–ಕಾಮರ್ಸ್‌ ಸಂಸ್ಥೆ ಅಮೆಜಾನ್‌ ಉದ್ಯೋಗಿಗಳಾಗಿದ್ದ ಸಚಿನ್‌ ಮತ್ತು ಬಿನ್ನಿ ಬನ್ಸಲ್‌, 2005ರಲ್ಲಿ ದೆಹಲಿಯ ಐಐಟಿಯಲ್ಲಿ ಭೇಟಿಯಾಗಿದ್ದರು. ಇಬ್ಬರೂ ಜತೆಯಾಗಿ 2007ರ ಅಕ್ಟೋಬರ್‌ನಲ್ಲಿ ಫ್ಲಿಪ್‌ಕಾರ್ಟ್‌ ಸ್ಥಾಪಿಸಿದ್ದರು.

ಆರಂಭದಲ್ಲಿ ಅವರ ವಹಿವಾಟಿನ ಸ್ವರೂಪ ತುಂಬ ಸರಳವಾಗಿತ್ತು. ಗ್ರಾಹಕರು ಆನ್‌ಲೈನ್‌ನಲ್ಲಿ ಪುಸ್ತಕ ಖರೀದಿಗೆ ಬೇಡಿಕೆ ಸಲ್ಲಿಸಿದ್ದರೆ, ಅವರ ಮನೆ ಬಾಗಿಲಿಗೆ ತಲುಪಿಸುವ ವಹಿವಾಟು ಅದಾಗಿತ್ತು. ಆರಂಭದಲ್ಲಿ ಈ ವಹಿವಾಟು ಅತ್ಯಲ್ಪ ಪ್ರಮಾಣದಲ್ಲಿ ಇತ್ತು. ಈ ‘ಇ–ಕಾಮರ್ಸ್‌’ ವಹಿವಾಟಿಗೆ ಅನೇಕ ಅಡಚಣೆಗಳಿದ್ದವು. ಅವೆಲ್ಲವುಗಳನ್ನು ಸಂಸ್ಥೆಯು ನಿವಾರಿಸಿಕೊಂಡು ಯಶಸ್ವಿಯಾಗಿ ಮುನ್ನಡೆದಿತ್ತು.

ದಶಕದ ಹಿಂದೆ ಇಂಟರ್‌ನೆಟ್‌ ಸೌಲಭ್ಯ ತೀರ ಕಡಿಮೆ ಮಟ್ಟದಲ್ಲಿತ್ತು. ಆ ದಿನಗಳಲ್ಲಿ ಭಾರತದಲ್ಲಿ ಇ–ಕಾಮರ್ಸ್‌ ಬಗ್ಗೆ ಯಾರೊಬ್ಬರೂ ಕೇಳಿರಲಿಲ್ಲ.   ಯಾವುದೇ ಸರಕು ಖರೀದಿಸಲು ಅದನ್ನು ಮುಟ್ಟಿ ನೋಡಿದ ನಂತರವೇ ನಿರ್ಧಾರಕ್ಕೆ ಬರುವ ಪ್ರವೃತ್ತಿಯು  ಗ್ರಾಹಕರ ಮನದಲ್ಲಿ ದೃಢವಾಗಿ ಬೇರೂರಿತ್ತು. ಒಂದು ದಶಕದ ಅವಧಿಯಲ್ಲಿ ಈ ವಹಿವಾಟಿನ ಸ್ವರೂಪ ಅಗಾಧವಾಗಿ ಬದಲಾಗಿದೆ. ಫ್ಲಿಪ್‌ಕಾರ್ಟ್‌, ಅತ್ಯಲ್ಪ ಅವಧಿಯಲ್ಲಿ ದೇಶಿ ಗ್ರಾಹಕರ ಮನ ಗೆಲ್ಲುವಲ್ಲಿ ಸಫಲವಾಗಿದೆ.

ಬೆಂಗಳೂರಿನ ಕೋರಮಂಗಲದ ಎರಡು ಬೆಡ್‌ರೂಂ ಅಪಾರ್ಟ್‌ಮೆಂಟ್‌ನಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಂಸ್ಥೆಯು ಈಗ 1 ಲಕ್ಷ ಚದರ ಅಡಿಯ ಹೊಸ ಕ್ಯಾಂಪಸ್‌ನಿಂದ ತನ್ನ ವಹಿವಾಟನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದಿದೆ. ದೇಶದಾದ್ಯಂತ ಕಚೇರಿಗಳನ್ನು ಹೊಂದಿದೆ. ಸಂಸ್ಥೆಯ ಉದ್ಯೋಗಿಗಳ ಸಂಖ್ಯೆ 6,800ಕ್ಕೆ ತಲುಪಿದೆ.

ಅಸ್ತಿತ್ವಕ್ಕೆ ಬಂದ ಎರಡು ವರ್ಷಗಳ ನಂತರ ಸಂಸ್ಥೆಯು ಎ. ಅಯ್ಯಪ್ಪ ಅವರನ್ನು ತನ್ನ ಮೊದಲ ಪೂರ್ಣಾವಧಿ ಸಿಬ್ಬಂದಿಯಾಗಿ ನೇಮಿಸಿಕೊಂಡಿತ್ತು. ಉದ್ಯೋಗಿಯ ಷೇರು ಮಾಲೀಕತ್ವ ಯೋಜನೆಯ (ಇಎಸ್‌ಒಪಿ) ಫಲವಾಗಿ ಅವರೀಗ ಲಕ್ಷಾಧಿಪತಿ ಆಗಿದ್ದಾರೆ.

ಬಂಡವಾಳ ಹೂಡಿಕೆ: ನಂತರದ ದಿನಗಳಲ್ಲಿ ಸಂಸ್ಥೆಯು ತನ್ನ ವಹಿವಾಟು ವಿಸ್ತರಿಸಲು ಇತರ ಬಂಡವಾಳ ಹೂಡಿಕೆದಾರರ ನೆರವು ಪಡೆಯತೊಡಗಿತು. ಮೊದಲಿಗೆ ಅಸೆಲ್‌ ಪಾರ್ಟನರ್ಸ್‌ ಸಂಸ್ಥೆಯು ₹ 5 ಕೋಟಿಗಳಷ್ಟು ಬಂಡವಾಳ ತೊಡಗಿಸಿತು.

ಆನಂತರ ಅಮೆರಿಕದ ಟೈಗರ್‌ ಗ್ಲೋಬಲ್‌, ಟೆನ್ಸೆಂಟ್‌, ಇ–ಬೇ, ಮೈಕ್ರೊಸಾಫ್ಟ್‌ ಮತ್ತು ಸಾಫ್ಟ್‌ಬ್ಯಾಂಕ್‌  ಫ್ಲಿಪ್‌ಕಾರ್ಟ್‌ನಲ್ಲಿ ಬಂಡವಾಳ ತೊಡಗಿಸಿದವು.

2010ರಲ್ಲಿ ಸಂಸ್ಥೆಯು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್‌ ಸರಕುಗಳ ಮಾರಾಟಕ್ಕೆ ತೆರೆದುಕೊಂಡಿತು. ಇದು ಸಂಸ್ಥೆಯ ವಹಿವಾಟಿಗೆ ದೊಡ್ಡ ತಿರುವು ನೀಡಿತು. ಸಂಸ್ಥೆಯ ವಹಿವಾಟು ಹೆಚ್ಚಳಕ್ಕೆ ಈ ಸರಕುಗಳು ಗಮನಾರ್ಹ ಕೊಡುಗೆ ನೀಡುತ್ತಿವೆ.

ಮನೆ ಬಾಗಿಲಿಗೆ ಸರಕು ಪೂರೈಸಿದ ನಂತರವೇ ಹಣ ಪಾವತಿಸುವ ಸೌಲಭ್ಯವನ್ನೂ ಸಂಸ್ಥೆಯು ಅದೇ ವರ್ಷ ಜಾರಿಗೆ  ತಂದಿತು. ಸರಕುಗಳನ್ನು ಗ್ರಾಹಕರಿಗೆ ತಲುಪಿಸಲು ಪ್ರತ್ಯೇಕ ‘ಇಕಾರ್ಟ್‌’ ಘಟಕ ಸ್ಥಾಪಿಸಿತ್ತು

2016ರಲ್ಲಿ ಸಂಸ್ಥೆಯ ನೋಂದಾಯಿತ ಗ್ರಾಹಕರ ಸಂಖ್ಯೆ 10 ಕೋಟಿಗೆ ತಲುಪಿತು. ಟೈಮ್‌ ನಿಯತಕಾಲಿಕೆಯು ಗುರುತಿಸಿದ ವಿಶ್ವದ 100 ಮಂದಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ  ಸಚಿನ್‌ ಮತ್ತು ಬಿನ್ನಿ ಬನ್ಸಲ್‌ ಸೇರಿದ್ದರು.

ಸ್ವಾಧೀನ: ಸಂಸ್ಥೆಯು ಮೊದಲಿಗೆ ಸ್ವಾಧೀನಪಡಿಸಿಕೊಂಡ ಸಂಸ್ಥೆಯ ಹೆಸರು ವಿರೀಡ್‌. ಆನಂತರ ಸಂಸ್ಥೆಯು ಎಫ್‌ಎಕ್ಸ್‌ ಮಾರ್ಟ್‌, ಮಿಂತ್ರಾ, ಫೋನ್‌ಪೇಗಳನ್ನು ಖರೀದಿಸಿತು.

ಸದ್ಯಕ್ಕೆ ದೇಶಿ ಇ–ವಾಣಿಜ್ಯ ವಹಿವಾಟು ₹ 2.01 ಲಕ್ಷ ಕೋಟಿಗೆ ತಲುಪಿದೆ.  2026ರ ವೇಳೆಗೆ ಇದು ₹ 13.40 ಲಕ್ಷ ಕೋಟಿಗೆ ತಲುಪಲಿದೆ ಎಂದು ಮಾರುಕಟ್ಟೆ ಪರಿಣತರು ಅಂದಾಜಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry