ಭಾನುವಾರ, ಫೆಬ್ರವರಿ 28, 2021
31 °C

ಮತದ ಮೌಲ್ಯ ಉಳಿಯಲಿ

ಡಾ. ಶಿವಮೂರ್ತಿ ಮುರುಘಾ ಶರಣರು Updated:

ಅಕ್ಷರ ಗಾತ್ರ : | |

ಮತದ ಮೌಲ್ಯ ಉಳಿಯಲಿ

ಜನಪ್ರತಿನಿಧಿಯ ಆಯ್ಕೆ ಪ್ರಕ್ರಿಯೆ ಮಾಲಿನ್ಯಕ್ಕೆ ಒಳಗಾಗಿದೆ. ರಾಜಕಾರಣ ಇರುವುದೇ ಲೋಕಕಲ್ಯಾಣಕ್ಕೆ ಎಂಬ ಮಾತು ಹುಸಿ ಆಗಿದೆ. ಬದಲಾಗಿ ರಾಜಕಾರಣವು ದಂಧೆ ಆಗುತ್ತಿದೆ. ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ಮೊದಲು ಆಲೋಚಿಸುವುದೇ ಹಣವನ್ನು ಕುರಿತು. ಅತಿಹೆಚ್ಚು ಹಣ ಖರ್ಚು ಮಾಡಿದವನು ಗೆಲ್ಲುತ್ತಾನೆ; ಕಡಿಮೆ ಖರ್ಚು ಮಾಡಿದವನು ಸೋಲುತ್ತಾನೆ. ಸೋತವನು ಆರ್ಥಿಕವಾಗಿ ಸಾಯುತ್ತಾನೆ ಎಂಬ ಭಾವನೆ ದಟ್ಟವಾಗಿದೆ. ಗೆದ್ದವನಿಗೆ ತಾನು ಚುನಾವಣೆಗೆ ವ್ಯಯಿಸಿದ ಹಣವನ್ನು ವಸೂಲಿ ಮಾಡುವುದೇ ದೊಡ್ಡ ಕಾರ್ಯಕ್ರಮ. ಅದಕ್ಕಾಗಿ ಅಕ್ರಮದ ಹಾದಿಯನ್ನು ಹಿಡಿಯುತ್ತಾನೆ. ಪ್ರತಿಯೊಂದು ಇಲಾಖೆಯಲ್ಲೂ ಮಾಮೂಲಿಗಾಗಿ ಕೈಚಾಚುತ್ತಾನೆ.

ಹಿಂದಿನ ದಿನಗಳಲ್ಲಿ ಮತದಾರರು ಅಭ್ಯರ್ಥಿಗಳಿಂದ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ, ಯಾವ ಆಮಿಷಕ್ಕೂ ಒಳಗಾಗುತ್ತಿರಲಿಲ್ಲ. ಸ್ಪರ್ಧೆಯ ಭರಾಟೆ ಹೆಚ್ಚಾದಾಗ ಯಾರೋ ಕೆಲವರು ಸೋಲುತ್ತೇವೆಂಬ ಹತಾಶೆಯಲ್ಲಿ ಮತದಾರರಿಗೆ ಆರಂಭದಲ್ಲಿ ಕೆಲವಸ್ತುಗಳನ್ನು ಹಂಚಲು ಮುಂದಾಗುತ್ತಾರೆ. ಇವತ್ತು ಕೂಡಾ ಬೆಳ್ಳಿ ಬಟ್ಟಲು, ಸೀರೆ ಮತ್ತಿತರ ಸಾಮಾನುಗಳನ್ನು ಹಂಚುವ ಪದ್ಧತಿ ಚಾಲ್ತಿಯಲ್ಲಿದೆ. ಇನ್ನು ಕೆಲವರು ವಸ್ತುಗಳಿಗೆ ಬದಲಾಗಿ ಹಣವನ್ನು ಹಂಚುವ ಪರಿಪಾಟ ಆರಂಭಿಸಿರುತ್ತಾರೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಒಮ್ಮೊಮ್ಮೆ ಕೋಟಿಗಟ್ಟಲೆ ಹಣವನ್ನು ಹಂಚಲಾಗುತ್ತದೆ. ಇನ್ನು ವಿಧಾನಸಭೆಗೆ ನಡೆಯುವ ಚುನಾವಣೆ ವೆಚ್ಚ ₹ 5 ಕೋಟಿಯಿಂದ ಬರುಬರುತ್ತ ₹ 10 ಕೋಟಿ. ಈಗ ₹ 20-25 ಕೋಟಿ ತಲುಪಿದೆಯೆಂದು ಹೇಳಲಾಗುತ್ತದೆ.

ಜನಸಾಮಾನ್ಯರ ಮತ ಮಾರಾಟದ ಪರಿಸ್ಥಿತಿ ಹೀಗಾದರೆ, ಧಾರ್ಮಿಕ ಕ್ಷೇತ್ರವೂ ಈ ಆರೋಪದಿಂದ ಮುಕ್ತವಾಗಿಲ್ಲ. ಕೆಲಧಾರ್ಮಿಕರು ತಮ್ಮ ಅಭ್ಯರ್ಥಿಯು ಗೆಲ್ಲಬೇಕೆಂದು ಅವರ ಪರವಾಗಿ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರೆ, ಮುಂದೆ ಆತನಿಂದ ತಮ್ಮ ಮಠಕ್ಕೆ ಕೋಟಿಗಟ್ಟಲೆ ಹಣ ಹರಿದುಬರುತ್ತದೆಂಬ ದುರಾಸೆ. ವಿಜಾತಿಯ ಕೆಲ ಅಭ್ಯರ್ಥಿಗಳು ಧಾರ್ಮಿಕರ ಹತ್ತಿರ ಹೋಗಿ ತಮ್ಮ ಕುಲಬಾಂಧವರಿಂದ ಮತಚಲಾವಣೆ ಮಾಡಿಸಬೇಕೆಂದು ಕೇಳಿಕೊಳ್ಳುತ್ತಾರೆ. ಈ ಹಂತದಲ್ಲೂ ಕೆಲ ‘ಕಮಿಟ್‍ಮೆಂಟ್’ ಏರ್ಪಡುತ್ತದೆಂದು ಹೇಳಲಾಗುತ್ತದೆ.

ಇದೇ ಭಾವನೆಯನ್ನು ಕರ್ನಾಟಕದಲ್ಲಿ ಆರಂಭವಾಗಿರುವ ಸ್ವತಂತ್ರಧರ್ಮ ಹೋರಾಟದ ಮುಂಚೂಣಿ ಧಾರ್ಮಿಕರ ಮೇಲೂ ಆರೋಪಿಸಲಾಗುತ್ತಿದೆ. ಯಾವುದೇ ಹಿತಾಸಕ್ತಿಗೆ ಒಳಗಾಗಿ ಹೋರಾಡಿದರೆ, ಹೋರಾಟವು ಗಟ್ಟಿ ನೆಲೆಯನ್ನು ಕಳೆದುಕೊಳ್ಳುತ್ತದೆ. ಈ ಸಂಬಂಧ ನಿಖರವಾದ ಸಾಕ್ಷ್ಯಗಳು ಮತ್ತು ಆಧಾರಗಳು ದೊರಕುವುದಿಲ್ಲ. ಆರೋಪಕ್ಕೆ ಸಾಕ್ಷ್ಯಾಧಾರಗಳು ದೊರಕದಿದ್ದಲ್ಲಿ ಅಂಥ ಆರೋಪಗಳು ನಿರಾಧಾರ.

ಸೂಕ್ತ ಸಾಕ್ಷ್ಯಾಧಾರಗಳು ದೊರಕಿದಲ್ಲಿ ಮಾತ್ರ ಆರೋಪಗಳಿಗೆ ಪುಷ್ಟಿ. ಆರೋಪಕ್ಕಾಗಿ ಕೆಲವರು ಆರೋಪಿಸುತ್ತಾರೆ. ಕಾಮಾಲೆ ಆದವನ ಕಣ್ಣಿಗೆ ಎಲ್ಲ ಕಡೆಯೂ ಹಳದಿಯೇ ಕಂಡುಬರುವಂತೆ ಸಂಕುಚಿತ ಭಾವನೆಯ ಕನ್ನಡಕ ಹಾಕಿಕೊಂಡು ನೋಡುವ ಕಣ್ಣಿಗೆ ಎಲ್ಲ ಕಡೆಯೂ ಭ್ರಷ್ಟತನವೇ ಕಾಣುತ್ತದೆ. ಅಂಥ ಆಮಿಷಕ್ಕೆ ಒಳಗಾಗುವ ದುಃಸ್ಥಿತಿಯು ನನ(ಮ)ಗಿಲ್ಲ. ಒಂದು ಹೋರಾಟವನ್ನೇ ಹೀಗೆ ಸಂದೇಹಾಸ್ಪದವಾಗಿ ನೋಡುವುದಾದರೆ, ಪ್ರತಿಯೊಬ್ಬ ಧಾರ್ಮಿಕನ ಸುತ್ತಲೂ ಅನುಮಾನದ ಹುತ್ತ ಕಟ್ಟಿಕೊಳ್ಳುತ್ತ ಹೋಗುತ್ತದೆ. ಹೋರಾಟದ ಹಿನ್ನೆಲೆಗೂ ಮತ್ತು ಚುನಾವಣೆ ವಾತಾವರಣಕ್ಕೂ ಸಾಕಷ್ಟು ಅಂತರ.

ಚುನಾವಣಾ ಆಯೋಗದ ದಿಟ್ಟ ಕ್ರಮದಿಂದಾಗಿ ಇತ್ತೀಚೆಗೆ ಪೋಸ್ಟರ್ ಮತ್ತು ಫ್ಲೆಕ್ಸ್‌ಗಳು ರಾರಾಜಿಸುತ್ತಿಲ್ಲ. ಗೋಡೆಗಳ ಮೇಲಿನ ವೈಯಕ್ತಿಕ ಪ್ರಚಾರದ ಫ್ಲೆಕ್ಸ್‌ಗಳನ್ನು ತೆಗೆಸಿ ಹಾಕಲಾಗಿದೆ. ಇದು ಕಠಿಣತರವಾದ ಕ್ರಮವಾಗಿದ್ದು, ಜಿಲ್ಲಾಡಳಿತಕ್ಕೆ ಅದರ ಜವಾಬ್ದಾರಿ. ಇದರಷ್ಟೇ ಮುಖ್ಯವಾದ ಕ್ರಮವೆಂದರೆ, ಧ್ವನಿವರ್ಧಕಗಳ ಹಾವಳಿ ತಪ್ಪಿಸಿರುವುದು. ಚುನಾವಣೆ ಸಂದರ್ಭ ದಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದು ಒಳ್ಳೆಯ ಬೆಳವಣಿಗೆ.

ಕೆಲ ಮಠಾಧೀಶರ ಅಂತರಂಗದಲ್ಲಿ ಕೆಲವರನ್ನು ಗೆಲ್ಲಿಸಬೇಕು ಎಂಬ ಅಪೇಕ್ಷೆ. ತಮ್ಮವರು ಗೆಲ್ಲಬೇಕೆಂಬ ಅಪೇಕ್ಷೆಯಲ್ಲಿ ತಮಗಾಗದವರು ಸೋಲಬೇಕೆಂಬ ಅಭೀಪ್ಸೆ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕೇವಲ ಹಣದ ಪಾತ್ರವಲ್ಲ; ಜಾತಿಯೂ ಮುಖ್ಯ ಆಗುತ್ತದೆ. ಅದು ಜಾತಿಯ ಲೆಕ್ಕಾಚಾರ. ಹಣದ ಲೆಕ್ಕಾಚಾರವನ್ನು ನೋಡಿ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗುತ್ತದೆ. ಹಣದ ಹಪಾಹಪಿ ಇಲ್ಲದವರು ಅದನ್ನು ಶೇಖರಿಸಲು ಕೊಂಚಮಟ್ಟಿಗೆ ಹಿಂಜರಿಯುತ್ತಾರೆ. ಚುನಾವಣಾ ಸಂದರ್ಭದಲ್ಲಿ ಹಣ ಇಲ್ಲವೆಂಬ ಕಾರಣಕ್ಕಾಗಿ ಕೆಲವರಿಗೆ ಟಿಕೆಟ್ ನಿರಾಕರಿಸಿದ ಉದಾಹರಣೆಗಳಿವೆ. ಕೆಲ ಸಂದರ್ಭದಲ್ಲಿ ಜಾತಿ ಲೆಕ್ಕಾಚಾರ. ಯಾವ ಜಾತಿಗೆ ಸೇರಿದವರು ಆ ಕ್ಷೇತ್ರದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದನ್ನು ಪರಿಗಣಿಸಿ, ಟಿಕೆಟ್ ನೀಡಲಾಗುತ್ತದೆ.

ಮತದಾರರು, ಮಠಾಧೀಶರು ಮತ್ತು ಅಭ್ಯರ್ಥಿಗಳು ಈ ಹಂತದಲ್ಲಿ ತಮ್ಮ ಅಂತರಂಗದ ಅವಲೋಕನ ಮಾಡಿಕೊಳ್ಳುವುದು ಸೂಕ್ತ. ಅನಧಿಕೃತವಾದುದು ಅಂತಸಾಕ್ಷಿಯನ್ನು ವಂಚನೆಗೆ ಒಳಪಡಿಸುತ್ತದೆ. ಅಧಿಕೃತವಾದುದು ಅಸ್ಮಿತೆಗೆ ಸಾಕ್ಷಿ ಆಗುತ್ತದೆ. ಪ್ರಜೆಗಳು ತಮ್ಮ ಮತದ ಮೌಲ್ಯವನ್ನು ಅರಿಯುವುದು ಅಷ್ಟೇ ಅಗತ್ಯ. ಮಾನವ ಜನ್ಮದ ಮೌಲ್ಯವು ಮಾನವೀಯ ಮೌಲ್ಯಗಳಿಂದ ಅಧಿಕವಾಗುತ್ತದೆ. ಮತಕ್ಕೆ ಮೌಲ್ಯವನ್ನು ತಂದುಕೊಂಡಲ್ಲಿ ಅಂತಹ ಮತದಾನಕ್ಕೆ ಎಲ್ಲಿಲ್ಲದ ನೈತಿಕತೆ. ಕಳೆದ 15 ವರ್ಷಗಳಿಂದ ಚುನಾವಣಾ ಸಂದರ್ಭದಲ್ಲಿ ಶ್ರೀಮಠದಿಂದ ರಾಜ್ಯದಾದ್ಯಂತ ತಂಡಗಳನ್ನು ಕಳುಹಿಸಿಕೊಟ್ಟು ಮತದಾನ ಕುರಿತು ಜಾಗೃತಿ ಮೂಡಿಸುತ್ತ ಬರಲಾಗಿದೆ.

ಈ ಸಲದ ವಿಧಾನಸಭಾ ಚುನಾವಣೆಯಲ್ಲೂ ಆ ಕಾರ್ಯಕ್ಕೆ ವಿವಿಧ ಸಂಘಟನೆಗಳೊಟ್ಟಿಗೆ ಮುಂದಾದಾಗ (ಏ. 3), ಒಬ್ಬ ಯುವಕ ಜಾಗೃತಿ ಜಾಥಾದಲ್ಲಿ ಸೇರಿಕೊಂಡಿದ್ದ. ಕಾರ್ಯಕರ್ತರ ಬಳಿ ಆತನು- ‘ನಮ್ಮ ಮನೆಯಲ್ಲಿ ಎಂಟು ಮತಗಳು ಇವೆ, ಎಷ್ಟು ಕೊಡುತ್ತೀರಿ’ ಎಂದು ಪ್ರಶ್ನಿಸಿರುತ್ತಾನೆ. ಅದನ್ನು ಆ ಕಾರ್ಯಕರ್ತ ನನ್ನ ಬಳಿ ಪ್ರಸ್ತಾಪಿಸಿದರು. ಇದು ಮತವನ್ನು ಮಾರಿಕೊಳ್ಳುವ ಅಭಿಯಾನ ಅಲ್ಲ; ಮತಕ್ಕೆ ಮೌಲ್ಯ ತಂದುಕೊಡುವ ಜಾಗೃತಿಯಾತ್ರೆ ಎಂದು ಆತನಿಗೆ ತಿಳಿಸಿಹೇಳಲಾಯಿತು.

ಏನೆಲ್ಲ ಚುನಾವಣಾ ಸುಧಾರಣೆಗಳು ಜಾರಿಯಲ್ಲಿ ಇದ್ದಾಗ್ಯೂ ‘ಎಲೆಕ್ಷನ್’ ಎಂದರೆ ‘ಕಲೆಕ್ಷನ್’ ಎನ್ನುವಂಥ ವಾತಾವರಣ ಸೃಷ್ಟಿ ಆಗಿದೆ. ಚುನಾವಣೆ ಎಂದರೆ ಹಣದ ಚಲಾವಣೆ ಎಂಬಂತಾಗಿದೆ. ಕಲೆಕ್ಷನ್ ಹಾವಳಿಯನ್ನು ತಪ್ಪಿಸುವುದು ಹೇಗೆ ಎಂಬುದು ಪ್ರಶ್ನೆ. ಮತದಾರರು ಮತದ ಮೌಲ್ಯವನ್ನು ಕಾಪಾಡಿಕೊಳ್ಳಬೇಕು.

ಅಭ್ಯರ್ಥಿಗಳು ಹಣವನ್ನು ಹಂಚಲು ಬಂದಾಗ ಅದನ್ನು ನಿರಾಕರಿಸುವುದರಿಂದ ಮಾತ್ರ ಇಂಥ ಪಿಡುಗುಗಳನ್ನು ತಪ್ಪಿಸಬಹುದು. ಮತದಾರರು ಧೈರ್ಯ ತೋರಿಸುವರೇ? ಒಂದು ಬಲಿಷ್ಠ ಸರ್ಕಾರವನ್ನು ಆಯ್ಕೆ ಮಾಡುವ ಮತ್ತು ಸಮರ್ಥ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಮತದಾರರ ಬದುಕು ಉದ್ಧಾರ ಆಗುತ್ತದೆ ಎಂಬುದನ್ನು ಅರಿಯಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.