ಕೋಟ್ಯಂತರ ರೂಪಾಯಿ ವ್ಯವಹಾರದ ದಾಖಲೆ ಪತ್ತೆ: ಪ್ರಧಾನಿ ಮೋದಿ

7

ಕೋಟ್ಯಂತರ ರೂಪಾಯಿ ವ್ಯವಹಾರದ ದಾಖಲೆ ಪತ್ತೆ: ಪ್ರಧಾನಿ ಮೋದಿ

Published:
Updated:
ಕೋಟ್ಯಂತರ ರೂಪಾಯಿ ವ್ಯವಹಾರದ ದಾಖಲೆ ಪತ್ತೆ: ಪ್ರಧಾನಿ ಮೋದಿ

ಚಿಕ್ಕಮಗಳೂರು: ‘ಬಾದಾಮಿ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಒಬ್ಬರು ಆ ಊರಿನ ಹೆಸರನ್ನು ಹಾಳು ಮಾಡುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸದೆ ಛೇಡಿಸಿದರು.

ಇಲ್ಲಿನ ನೇತಾಜಿ ಸುಭಾಷ್‌ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಬಿಜೆಪಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಬಾದಾಮಿಯ ಹೋಟೆಲ್‌ಗೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿ ಮಾಡಿದಾಗ ಕೋಟ್ಯಂತರ ರೂಪಾಯಿ ವ್ಯವಹಾರದ ದಾಖಲೆಗಳು ಸಿಕ್ಕಿವೆ. ಐಟಿ ತಂಡ ದಾಳಿ ಮಾಡುವ ಕೆಲವೇ ಗಂಟೆಗಳ ಮೊದಲು ಸಿದ್ದರಾಮಯ್ಯ ಆ ಹೋಟೆಲ್‌ನಲ್ಲಿ ತಂಗಿದ್ದರು. ರಾಜ್ಯದಲ್ಲಿ ಈವರೆಗೆ ನೀತಿ ಸಂಹಿತೆ ಪ್ರಕರಣಗಳಡಿ ಆಯೋಗವು ₹ 130 ಕೋಟಿ ಮೌಲ್ಯದ ವಸ್ತುಗಳು, ಅಕ್ರಮ ಮದ್ಯ, ನಗದು ವಶಪಡಿಸಿಕೊಂಡಿದೆ’ ಎಂದು ಹೇಳಿದರು.

‘ಅಪವಾದದಿಂದ ಪಾರಾಗಲು ದಾಳಿ’

ಮೈಸೂರು:
‘ಕಾಂಗ್ರೆಸ್ ನಾಯಕರ ನಿವಾಸ, ಉಳಿದುಕೊಂಡಿದ್ದ ಕೊಠಡಿಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತವಲ್ಲ ಎಂಬುದನ್ನು ತೋರಿಸಿಕೊಳ್ಳಲು ಬಿಜೆಪಿ ಮುಖಂಡರ ನಿವಾಸದ ಮೇಲೂ ದಾಳಿ ನಡೆದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಬುಧವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಅಪವಾದದಿಂದ ಪಾರಾಗಲು ಕೊನೆ ಕ್ಷಣದಲ್ಲಿ ಅವರೇ ಹೇಳಿ ದಾಳಿ ಮಾಡಿಸಿಕೊಂಡಂತಿದೆ. ಆದರೆ, ಉದ್ದೇಶಪೂರ್ವಕವಾಗಿ ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿ ಬಿಜೆಪಿ ದಾಳಿ ಮಾಡಿಸುತ್ತಿದೆ. ನಾನು ಹನ್ನೆರಡು ಚುನಾವಣೆಗಳನ್ನು ನೋಡಿದ್ದೇನೆ. ಯಾವ ಕಾಲದಲ್ಲೂ ಚುನಾವಣೆ ವೇಳೆ ಈ ರೀತಿ ದಾಳಿ ನಡೆದಿರಲಿಲ್ಲ’ ಎಂದರು.

ಸಚಿವ ರೈ ಆಪ್ತರ ಕಚೇರಿ ಮೇಲೆ ಐಟಿ ದಾಳಿ

ಮಂಗಳೂರು:
ಅರಣ್ಯ ಸಚಿವ ಬಿ.ರಮಾನಾಥ ರೈ ಅವರಿಗೆ ಆಪ್ತರಾಗಿರುವ ಇಬ್ಬರು ಉದ್ಯಮಿಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿಮಾಡಿ, ಶೋಧ ನಡೆಸಿದ್ದಾರೆ.

ಮಂಗಳೂರಿನ ಕಾವೂರಿನಲ್ಲಿರುವ ಸುಧಾಕರ ಶೆಟ್ಟಿ ಒಡೆತನದ ಮೊಗ್ರೋಡಿ ಕನ್‌ಸ್ಟ್ರಕ್ಷನ್ಸ್‌ ಕಚೇರಿ ಹಾಗೂ ಬಂಟ್ವಾಳ ತಾಲ್ಲೂಕಿನ ಮೇಲ್ಕಾರ್‌ನಲ್ಲಿರುವ ಸಂಜೀವ ಪೂಜಾರಿ ಒಡೆತನದ ಬಿರ್ವ ಸೆಂಟರ್‌ ಮೇಲೆ ಮಂಗಳವಾರ ಮಧ್ಯಾಹ್ನ ದಾಳಿ ನಡೆಸಲಾಗಿದೆ. ಎರಡೂ ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ತೆರಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry