ಶುಕ್ರವಾರ, ಮಾರ್ಚ್ 5, 2021
21 °C
ಬಿಜೆಪಿ ಯುವ ಮೂರ್ಚಾ ಉಪಾಧ್ಯಕ್ಷನ ಕಚೇರಿ ಮೇಲೆ ದಾಳಿ

₹6.29 ಲಕ್ಷ ಜಪ್ತಿ; ಒಬ್ಬ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹6.29 ಲಕ್ಷ ಜಪ್ತಿ; ಒಬ್ಬ ವಶಕ್ಕೆ

ಬೆಂಗಳೂರು: ರಾಜಾಜಿನಗರದ 14ನೇ ಮುಖ್ಯರಸ್ತೆಯಲ್ಲಿರುವ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಎಸ್‌.ಎಸ್‌. ನಾಯಕ್‌ ಅವರ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿದ ಚುನಾವಣಾಧಿಕಾರಿಗಳು, ₹ 6.29 ಲಕ್ಷ ಜಪ್ತಿ ಮಾಡಿದ್ದಾರೆ.

ಬಿಲ್ಡರ್ ಆಗಿರುವ ನಾಯಕ್, ಪಕ್ಷದ ಸಾಮಾಜಿಕ ಜಾಲತಾಣಗಳ ನಿರ್ವಹಣೆಗಾಗಿ ಕಚೇರಿಯಲ್ಲಿ ಅವಕಾಶ ನೀಡಿದ್ದರು. ಅಲ್ಲಿ ಶಾಸಕ ಸುರೇಶ್‌ಕುಮಾರ್‌ ಅವರ ಪುತ್ರಿ ದಿಶಾ ಹಾಗೂ ಜಾಲತಾಣಗಳ ನಿರ್ವಹಣಾ ತಂಡದ ಪ್ರತಿನಿಧಿಯೊಬ್ಬರು ಕೆಲಸ ಮಾಡುತ್ತಿದ್ದರು.

ಮಧ್ಯಾಹ್ನ 3.15 ಗಂಟೆಯ ಸುಮಾರಿಗೆ ಕಚೇರಿಗೆ ನುಗ್ಗಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ದಿಶಾ ಹಾಗೂ ಪ್ರತಿನಿಧಿಯ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿದರು.

ಮೂರು ಪ್ರಕರಣ ದಾಖಲು: ದಾಳಿ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ರಮೇಶ್‌ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಕಚೇರಿ ಸುತ್ತಮುತ್ತ ಓಡಾಡುತ್ತಿದ್ದ ರಮೇಶ್ ಬಳಿ ₹3.50 ಲಕ್ಷ ಸಿಕ್ಕಿದೆ. ಕಚೇರಿಯಲ್ಲಿ ಪರಿಶೀಲಿಸಿದಾಗ ₹99,000 ದೊರಕಿರುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಅಧಿಕಾರಿಗಳು ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿರುವಾಗಲೇ ಯುವಕ ನೊಬ್ಬ, ಕಟ್ಟಡದಿಂದ ಜಿಗಿದು ಪರಾರಿಯಾಗಿದ್ದಾನೆ. ಆತ ಹೋಗುವಾಗ ಹಣದ ಕಂತೆಗಳನ್ನು ಬೀಳಿಸಿಕೊಂಡು ಹೋಗಿದ್ದ. ಅಂಥ ₹ 1.80 ಲಕ್ಷವನ್ನು ಚುನಾವಣಾಧಿಕಾರಿಗಳು ಸಂಗ್ರಹಿಸಿದ್ದಾರೆ’ ಎಂದರು.

ಬಿಜೆಪಿಯವರು ಹಂಚುತ್ತಿದ್ದ ಹಣ: ‘ಬಿಜೆಪಿಯವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ. ಸುರೇಶ್‌ ಕುಮಾರ್ ಅವರ ಮಗಳು ಸಹ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆರೋಪಿಸಿದರು.

ಈ ಆರೋಪವನ್ನು ತಳ್ಳಿಹಾಕಿರುವ ದಿಶಾ, ‘ಕಾಂಗ್ರೆಸ್ ಕಾರ್ಯಕರ್ತರೇ ಅಕ್ರಮವಾಗಿ ಪ್ರವೇಶಿಸಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಹೇಳಿದರು.

‘ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತೇನೆ. ಮನೆಯಲ್ಲಿ ಜಾಗವಿಲ್ಲದಿದ್ದರಿಂದ ಈ ಕಚೇರಿಗೆ ಬಂದಿದ್ದೆ. ನನ್ನನ್ನು ಹಿಂಬಾಲಿಸಿಕೊಂಡು ಬಂದು ಕಾಂಗ್ರೆಸ್‌ನವರು ಈ ರೀತಿ ಮಾಡಿದ್ದಾರೆ. ಕಾರ್ಪೊರೇಟರ್ ಕೃಷ್ಣಮೂರ್ತಿ ನನ್ನ ಮೊಬೈಲ್‌ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಆ ದೃಶ್ಯ ಸೆರೆಯಾಗಿದೆ’ ಎಂದರು.

‘ಚುನಾವಣೆ ಸಂಬಂಧ ಹಣ ಹಂಚುವಾಗಿ ನನ್ನ ಮಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬುದು ಅಪ್ಪಟ ಸುಳ್ಳು ಸುದ್ದಿ’ ಎಂದು ಶಾಸಕ ಸುರೇಶ್‌ಕುಮಾರ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.