ನಲಪಾಡ್‌ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

5

ನಲಪಾಡ್‌ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

Published:
Updated:
ನಲಪಾಡ್‌ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು: ಉದ್ಯಮಿ ಲೋಕನಾಥನ್‌ ಪುತ್ರ ವಿದ್ವತ್ (24) ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಜೈಲು ಸೇರಿರುವ ಮೊಹಮದ್ ನಲಪಾಡ್ (24) ಹಾಗೂ ಆತನ ಸಹಚರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ.

ಯು.ಬಿ. ಸಿಟಿಯ ಫರ್ಜಿ ಕೆಫೆಯಲ್ಲಿ ಫೆ. 17ರಂದು ರಾತ್ರಿ ನಡೆದಿದ್ದ ಘಟನೆ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಎರಡನೇ ತಿಂಗಳಿನಲ್ಲಿ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು, 600ಕ್ಕೂ‌ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

‘ಇದು ಗಂಭೀರ ಪ್ರಕರಣ. ತ್ವರಿತವಾಗಿ ತನಿಖೆ ಕೈಗೊಂಡು 10 ದಿನಗಳ ಹಿಂದೆಯೇ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದೇವೆ. ನ್ಯಾಯಾಲಯದಲ್ಲಿ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಸತೀಶ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಲೆ ಯತ್ನ ಸಾಬೀತು?: ಆರೋಪಿಗಳ ಮೇಲೆ ದಾಖಲಾಗಿದ್ದ ಕೊಲೆ ಯತ್ನ ಆರೋಪವು ತನಿಖೆಯಲ್ಲಿ ಸಾಬೀತಾಗಿದೆ. ಆರೋಪಕ್ಕೆ ಸಂಬಂಧಪಟ್ಟ ಪುರಾವೆಗಳನ್ನೂ ದೋಷಾರೋಪ ಪಟ್ಟಿಯಲ್ಲಿ ಲಗತ್ತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ವಿದ್ವತ್‌ ಸ್ನೇಹಿತ ಪ್ರವೀಣ್ ವೆಂಕಟಾಚಲಯ್ಯ ದೂರು ನೀಡಿದ್ದರು. ಗಂಭೀರ ಸ್ವರೂಪದ ಹಲ್ಲೆ (ಐಪಿಸಿ 326), ಅಕ್ರಮ ಬಂಧನ (ಐಪಿಸಿ 341), ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ಹಲ್ಲೆಯು ತೀವ್ರ ಸ್ವರೂಪದ್ದಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ನಂತರ, ಕೊಲೆ ಯತ್ನ (ಐಪಿಸಿ 307) ಆರೋಪವನ್ನು ಎಫ್‌ಐಆರ್‌ನಲ್ಲಿ ಸೇರಿಸಿದ್ದರು.

60ಕ್ಕೂ ಹೆಚ್ಚು ಮಂದಿ ಹೇಳಿಕೆ ಉಲ್ಲೇಖ: ಹಲ್ಲೆಗೀಡಾಗಿದ್ದ ವಿದ್ವತ್‌, ಆತನ ಸ್ನೇಹಿತರು, ಮಲ್ಯ ಆಸ್ಪತ್ರೆಯ ವೈದ್ಯರು ಹಾಗೂ ಪ್ರತ್ಯಕ್ಷದರ್ಶಿಗಳು ಸೇರಿದಂತೆ 60ಕ್ಕೂ ಹೆಚ್ಚು ಮಂದಿಯ ಹೇಳಿಕೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಆರೋಪಿ ಶ್ರೀಕೃಷ್ಣನಿಗೆ ಹುಡುಕಾಟ

ನಲಪಾಡ್‌ ಹಾಗೂ ಆತನ ಆರು ಮಂದಿ ಸಹಚರರ ವಿರುದ್ಧವಷ್ಟೇ ಈಗ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇನ್ನೊಬ್ಬ ಆರೋಪಿ ಶ್ರೀಕೃಷ್ಣ (24) ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

’2014ರಿಂದಲೇ ಶ್ರೀಕೃಷ್ಣ ಮೊಬೈಲ್‌ ಬಳಸುತ್ತಿಲ್ಲ. ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ. ಆತನ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ. ಆತ ಸಿಕ್ಕ ಬಳಿಕ ಪ್ರತ್ಯೇಕವಾಗಿ ದೋಷಾರೋಪ ಪಟ್ಟಿ ಸಲ್ಲಿಸಲಿದ್ದೇವೆ’ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry