ಪ್ರಚಾರದ ರಂಗೇರಿಸಿದ ಸಿನಿಮಾ ನಟರು

7

ಪ್ರಚಾರದ ರಂಗೇರಿಸಿದ ಸಿನಿಮಾ ನಟರು

Published:
Updated:
ಪ್ರಚಾರದ ರಂಗೇರಿಸಿದ ಸಿನಿಮಾ ನಟರು

ಬೆಂಗಳೂರು: ಬೈಕ್‌ನಲ್ಲಿ ಹೊರಟ ನೂರಾರು ಕಾರ್ಯಕರ್ತರು, ಅವರ ಹಿಂದೆ ಜೀಪ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌, ಶ್ರೀನಗರ ಕಿಟ್ಟಿ. ಇವರ ನಡುವೆ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ ರಸ್ತೆ ಇಕ್ಕೆಲಗಳಲ್ಲಿ ಸೇರಿದ್ದ ಜನರತ್ತ ಕೈ ಬೀಸುತ್ತಾ ಮತ ಕೇಳಿದರು.

ಬೆಳಿಗ್ಗೆ 5 ಗಂಟೆಗೆ ಎದ್ದ ಶಾಸಕರು, 7 ಗಂಟೆಗೆ ಉದ್ಯಾನದಲ್ಲಿ ಒಂದು ಸುತ್ತು ವಾಕಿಂಗ್ ಮಾಡಿದರು. ಬಳಿಕ ಹೋಟೆಲ್‌ನಲ್ಲಿ ತಿಂಡಿ ಸೇವಿಸಿ ಮನೆಗೆ ಮರಳಿದರು. ನಂತರ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ 8.30ಕ್ಕೆ ಪ್ರಚಾರಕ್ಕೆ ಹೊರಟರು. ಪಾದಯಾತ್ರೆ ಮೂಲಕ ಮನೆ ಮನೆಗೆ ಹೋಗಿ ಮತ ಯಾಚಿಸಿದರು.

ಸಂಜೆ 4 ಗಂಟೆಗೆ ಸಿನಿಮಾ ನಟರೊಂದಿಗೆ ಬೈಕ್‌ ರ‍್ಯಾಲಿ ನಿಗದಿಯಾಗಿತ್ತು. ಬೈಕ್‌ ಏರಿದ್ದ ನೂರಾರು ಕಾರ್ಯಕರ್ತರು ಕದಿರೇನಹಳ್ಳಿ ಗಣೇಶ ದೇವಸ್ಥಾನದ ಬಳಿ ನಾಯಕನಿಗಾಗಿ ಕಾಯುತ್ತಿದ್ದರು. 4.30ಕ್ಕೆ ಬಂದ ಅಭ್ಯರ್ಥಿಗೆ ಆರತಿ ಎತ್ತಿ, ಹೂವಿನ ಹಾರ ಹಾಕಿ ಜೈಕಾರದ ಮೂಲಕ ಬರಮಾಡಿಕೊಂಡರು. ಅಲ್ಲಿಂದ ಆರಂಭವಾದ ರ‍್ಯಾಲಿ ರಾತ್ರಿ 8.30ರವರೆಗೆ ನಡೆಯಿತು.

‘ಅಶೋಕ್‌ ಅಣ್ಣನನ್ನು ಗೆಲ್ಸಿ ಹ್ಯಾಟ್ರಿಕ್‌ ಬಾರ್ಸೋಣ’ ಎನ್ನುವ ಹಾಡು ಮೈಕ್‌ನಲ್ಲಿ ಮೊಳಗಿದಾಗ ಕೈ ಎತ್ತಿ ಜೈ ಎಂದ ಕಾರ್ಯಕರ್ತರು ಹಾರ್ನ್‌ ಮಾಡುತ್ತಾ ಮುಂದೆ ನುಗ್ಗಿದರು. ಸಿನಿಮಾ ನಟರನ್ನು ನೋಡಲು ರಸ್ತೆಯ ಎರಡೂ ಬದಿಯಲ್ಲಿ ನಿಂತುಕೊಂಡಿದ್ದ ಜನರು ಓಡಿ ಬಂದು ಅವರ ಕೈಕುಲುಕಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಜನದಟ್ಟಣೆ ಹೆಚ್ಚಾಗಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಇದನ್ನು ಮನಗಂಡ ಕಾರ್ಯಕರ್ತರು ಬೈಕ್ ವೇಗವನ್ನು ಹೆಚ್ಚಿಸಿದರು.

ಪದ್ಮನಾಭನಗರದ ಬೀದಿಗಳಲ್ಲಿ ಜೀಪ್ ಸಾಗುತ್ತಿದ್ದಾಗ ಪಕ್ಕದಲ್ಲಿ ಬರುತ್ತಿದ್ದ ಬಸ್‌, ಕಾರುಗಳ ಕಿಂಡಿಗಳಲ್ಲೂ ಕಾರ್ಯಕರ್ತರು ಕರಪತ್ರಗಳನ್ನು ತೂರಿಸಿದರು. ಅಶೋಕ ಅವರು ಕೈ ಮಾಡಿ ‘ಒಂದನೇ ಸಂಖ್ಯೆಗೆ ಮತ ನೀಡಿ’ ಎಂದು ಹೇಳುತ್ತಿದ್ದರು. ದಯಾನಂದ ಸಾಗರ್‌ ಕಾಲೇಜಿನತ್ತ ರ‍್ಯಾಲಿ ಸಾಗಿದಾಗ ಸಂಜೆಯಾಗಿತ್ತು. ಈ ವೇಳೆ ಚಾಟ್ಸ್, ಜ್ಯೂಸ್‌, ಜೆರಾಕ್ಸ್ ಅಂಗಡಿಗಳಲ್ಲಿ ಸೇರಿಕೊಂಡಿದ್ದ ವಿದ್ಯಾರ್ಥಿಗಳು ನಟ ಗಣೇಶ್‌ ಅವರತ್ತ ಕೈಬೀಸಿದರು.

ಕಾಲೇಜಿನ ಹೊರಗಿದ್ದ ವಾತಾವರಣವನ್ನು ಬಳಸಿಕೊಂಡ ಕಾರ್ಯಕರ್ತರು ತುಸು ಹೊತ್ತು ಅಲ್ಲಿಯೇ ಜೀಪ್ ನಿಲ್ಲಿಸಿ ಪ್ರಚಾರ ನಡೆಸಿದರು. ಆ ಬಡಾವಣೆಯ ಮಹಿಳಾ ಕಾರ್ಯಕರ್ತರು ತಮ್ಮ ಅಭ್ಯರ್ಥಿಗೆ ದೃಷ್ಟಿ ತೆಗೆದು ಮುಂದೆ ಹೋಗಲು ದಾರಿಮಾಡಿಕೊಟ್ಟರು. ಹೂವು ಮಾರುವವರ ಬಳಿ ಮತ ಕೇಳಿದ ಕಾರ್ಯಕರ್ತರು ಅಲ್ಲಿಯೇ ಗುಲಾಬಿ ದಳ ಹಾಗೂ ಮಲ್ಲಿಗೆಯನ್ನು ಖರೀದಿಸಿದರು. ಮಹಡಿ ಮೇಲೆ ಹತ್ತಿ, ಜೀಪ್‌ನಲ್ಲಿ ತೆರಳುತ್ತಿದ್ದ ತಮ್ಮ ನಾಯಕನ ಮೇಲೆ ಹೂವಿನ ಮಳೆಗರೆದರು.

ಶಾಪಿಂಗ್ ಮಾಲ್‌, ಅಂಗಡಿಗಳಲ್ಲಿ  ವ್ಯಾಪಾರ ಮಾಡುತ್ತಿದ್ದವರು, ಬೀದಿಯಲ್ಲಿ ಆಡುತ್ತಿದ್ದ ಮಕ್ಕಳು ಸಿನಿಮಾ ನಟರನ್ನು ಅಭಿಮಾನದಿಂದ ನೋಡುತ್ತಿದ್ದ ಪರಿ ಪ್ರಚಾರದ ರಂಗನ್ನು ಹೆಚ್ಚಿಸಿತ್ತು.

ಪಕ್ಷಕ್ಕಲ್ಲ, ಅಭ್ಯರ್ಥಿಗೆ ಬೆಂಬಲ: ಗಣೇಶ್‌

‘ನಾನು ಯಾವ ಪಕ್ಷದ ಪರವೂ ಅಲ್ಲ. ಆರ್‌.ಅಶೋಕ ನನ್ನ ಸ್ನೇಹಿತರು. ಸಾರಿಗೆ ಸಚಿವರಾಗಿದ್ದಾಗ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಒಳ್ಳೆಯ ಮನುಷ್ಯ. ಮೂರು ವರ್ಷಗಳಿಂದ ಅವರಿಗೆ ಬೆಂಬಲ ಸೂಚಿಸುತ್ತಿದ್ದೇನೆ’ ಎಂದು ನಟ ಗಣೇಶ್ ಹೇಳಿದರು.

ನಟ ಶ್ರೀನಗರ ಕಿಟ್ಟಿ ಅವರೂ, ‘ನನ್ನದೂ ಅದೇ ಅಭಿಪ್ರಾಯ’ ಎಂದು ತಿಳಿಸಿದರು.

ಎದುರಾದ ಜೆಡಿಎಸ್‌ ಕಾರ್ಯಕರ್ತರು

ಒಂದು ಸುತ್ತಿನ ಪ್ರಚಾರ ಮುಗಿಸಿದ್ದ ಜೆಡಿಎಸ್‌ ಕಾರ್ಯಕರ್ತರ ದಂಡು ಹೊಟೇಲ್‌ನಲ್ಲಿ ತಿಂಡಿ ತಿಂದು ಕೈ ಒರೆಸುತ್ತಾ ನಿಂತಿತ್ತು. ಅಶೋಕ ಅವರ ಪ್ರಚಾರದ ರ‍್ಯಾಲಿ ಅದೇ ದಾರಿಯಲ್ಲಿ ಸಾಗಿಬಂತು. ಜೆಡಿಎಸ್‌ ಕಾರ್ಯಕರ್ತರನ್ನು ಕಂಡಾಗ ಬಿಜೆಪಿ ಕಾರ್ಯಕರ್ತರ ಕೂಗು ಮುಗಿಲು ಮುಟ್ಟಿತು. ಮೈಕ್‌ನಲ್ಲಿ ಜೋರಾಗಿ ಕೂಗುತ್ತಾ ‘ನೀವು ಕೂಡ ಮತ ಹಾಕಿ’ ‘ನಮಗೇ ಮತ ಹಾಕಿ’ ಎಂದು ಕೂಗಿದರು. ಆಗ ಎದುರಿನ ಗುಂಪಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ‘ಆಗಲಿ ಮುಂದೆ ಹೋಗಿ’ ಎಂದಾಗ ಶಾಸಕರು ಸೇರಿದಂತೆ ಎಲ್ಲರೂ ನಗೆಗಡಲಿನಲ್ಲಿ ತೇಲಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry