‘ನಾನೇನು ಅಂತ ಶಾಂತಿನಗರ ಕ್ಷೇತ್ರದ ಜನರಿಗೆ ಗೊತ್ತು’

7

‘ನಾನೇನು ಅಂತ ಶಾಂತಿನಗರ ಕ್ಷೇತ್ರದ ಜನರಿಗೆ ಗೊತ್ತು’

Published:
Updated:
‘ನಾನೇನು ಅಂತ ಶಾಂತಿನಗರ ಕ್ಷೇತ್ರದ ಜನರಿಗೆ ಗೊತ್ತು’

ಬೆಂಗಳೂರು: ಇನ್ನೇನು ಚುನಾವಣೆ ಸಮೀಪಿಸಿತು ಎನ್ನುವಾಗ ಶಾಸಕನ ಪುತ್ರ ನಡೆಸಿದ ಹಲ್ಲೆಯ ಕಾರಣದಿಂದಾಗಿ ಗಮನ ಸೆಳೆದಿದ್ದ ಕ್ಷೇತ್ರ ಶಾಂತಿನಗರ. ‘ಹ್ಯಾಟ್ರಿಕ್’ ಗೆಲುವಿನ ಕನಸು ಹೊತ್ತಿರುವ ಇಲ್ಲಿನ ಶಾಸಕ ಎನ್‌.ಎ.ಹ್ಯಾರಿಸ್‌ ಈ ಬಾರಿಯ ಚುನಾವಣಾ ಕಣದ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

* ಮಗನ ದುಂಡಾವರ್ತನೆ ಪ್ರಕರಣ ಚುನಾವಣೆ ಮೇಲೆ ಪರಿಣಾಮ ಬೀರುವುದೇ?

ಇಂತಹ ಪ್ರಕರಣ ನಡೆಯಬಾರದಿತ್ತು. ಸಜ್ಜನ ವ್ಯಕ್ತಿಯಾಗಿ, ಶಾಸಕನಾಗಿ, ದೇಶದ ಪ್ರಜೆಯಾಗಿ ಮಗನನ್ನು 24 ಗಂಟೆಯೊಳಗೆ ಪೊಲೀಸರ ವಶಕ್ಕೆ ಒಪ್ಪಿಸಿದ್ದೇನೆ. 80 ದಿನಗಳಿಂದ ಆತ ಜೈಲಿನಲ್ಲೇ ಇದ್ದಾನೆ. ಅವನೆಸಗಿದ ತಪ್ಪಿಗೆ ಕಾನೂನು ಪ್ರಕಾರ ಕ್ರಮ ಆಗಲಿ. ಅದಕ್ಕೂ, ಚುನಾವಣೆಗೂ ಸಂಬಂಧವಿಲ್ಲ. ನಾನು ಕ್ಷೇತ್ರದ ಜನರೊಂದಿಗೆ ಬೆರೆತು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಹ್ಯಾರಿಸ್ ಏನು ಎಂಬುದು ಬೆಂಗಳೂರಿನ ಜನರಿಗೆ ಗೊತ್ತಿದೆ.

* ಪಕ್ಷವು ನಿಮಗೆ ಕೊನೆಯ ಕ್ಷಣದಲ್ಲಿ ನಿಮಗೆ ಟಿಕೆಟ್‌ ನೀಡಿದ್ದೇಕೆ?

ಅದು ಪಕ್ಷದ ತೀರ್ಮಾನ. ತಡವಾಗಿ ಏಕೆ ಕೊಟ್ಟಿದ್ದೀರಿ ಎಂದು ನಾನು ಕೇಳಲಿಕ್ಕೆ ಆಗುತ್ತದೆಯೇ. ಸಾಕಷ್ಟು ಶಾಸಕರಿಗೆ ಪಕ್ಷ ಟಿಕೆಟ್‌ ನಿರಾಕರಿಸಿದೆ. ನಾನು ಕಾಂಗ್ರೆಸ್‌ನವ. ನನ್ನ ಜೀವ ಕಾಂಗ್ರೆಸ್‌. ಕೊನೆಯವರೆಗೂ ಇದರಲ್ಲೇ ಇರುತ್ತೇನೆ.

* ಮೋದಿ ಅವರು ನಗರದ ಮೂವರು ಶಾಸಕರನ್ನು ಗುರಿಯಾಗಿಸಿಕೊಂಡು ‘ತ್ರಿವಳಿ ಕುಖ್ಯಾತರ ಕೈಗೆ ಸಿಕ್ಕಿ ಬೆಂಗಳೂರು ಹೈರಾಣಾಗಿದೆ’ ಎಂದು ಕುಹಕವಾಡಿದ್ದಾರಲ್ಲ?

ನಾವೇನು ಕೆಲಸ ಮಾಡಿದ್ದೇವೆ ಎಂಬುದನ್ನು ಬೆಂಗಳೂರಿನ ಜನ ನೋಡಿದ್ದಾರೆ. ನಮ್ಮ ಸಾಧನೆ ನೋಡಿ ಕೆಲವರಿಗೆ ಹೊಟ್ಟೆ ಉರಿ. ಅವರು ಹೇಳಿಕೊಟ್ಟಿದ್ದನ್ನು ಮೋದಿ ಅವರು ಸಮಾವೇಶದಲ್ಲಿ ಹೇಳಿದ್ದಾರೆ ಅಷ್ಟೇ. ಇದೊಂದು ರಾಜಕೀಯ ಗಿಮಿಕ್‌. ಚುನಾವಣಾ ರಾಜಕಾರಣ ಮಾಡಿದ್ದಾರೆ. ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿ ಕೆ.ಜೆ.ಜಾರ್ಜ್‌ ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಗರಕ್ಕೆ ಅತ್ಯಧಿಕ ಅನುದಾನ ತಂದಿದ್ದಾರೆ. ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸ ನೋಡಿ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು (ಬಿ.ಪ್ಯಾಕ್‌) ಜಾರ್ಜ್‌ ಅವರಿಗೆ 87 ಅಂಕ ಹಾಗೂ ನನಗೆ 84 ಅಂಕ ಕೊಟ್ಟಿದೆ. ಪಾಪ, ಮೋದಿ ಅವರಿಗೆ ಇಲ್ಲೇನು ಆಗುತ್ತಿದೆ ಎಂಬುದು ಗೊತ್ತೇ ಇಲ್ಲ.

* ಕ್ಷೇತ್ರದಲ್ಲಿ ಫ್ಲೆಕ್ಸ್‌ ಹಾವಳಿ ವಿಪರೀತವಾಗಿದೆಯಲ್ಲ?

ಆಮ್‌ ಆದ್ಮಿ ಪಾರ್ಟಿಯವರು (ಎಎಪಿ) ಕೆಲವು ದಿನಗಳ ಹಿಂದೆ ಕ್ಷೇತ್ರದಾದ್ಯಂತ ಪೋಸ್ಟರ್‌ಗಳನ್ನು ಹಾಕಿ ಗಲೀಜು ಮಾಡಿದರು. ಆಗ ನೀವು ಯಾರಾದರೂ ಮಾತನಾಡಿದ್ದೀರಾ. ಪ್ರಧಾನಿ ಮೋದಿ ಬಂದಾಗ ಇಡೀ ಊರಿನಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳು ಹಾಕುತ್ತಾರೆ. ಅದನ್ನು ನೀವು ಬರೆಯುವುದಿಲ್ಲ. ನನ್ನ ಕ್ಷೇತ್ರದ ಫ್ಲೆಕ್ಸ್‌ ಹಾವಳಿ ಬಗ್ಗೆ ಮಾತ್ರ ಏಕೆ ಬರೆಯುತ್ತೀರಿ ಎಂಬುದು ಗೊತ್ತಾಗುತ್ತಿಲ್ಲ. ನನ್ನ ಬೆಂಬಲಿಗರು ಪ್ರೀತಿ, ಅಭಿಮಾನದಿಂದ ಅವುಗಳನ್ನು ಹಾಕಿಸುತ್ತಾರೆ. ಒಂದು ಸಲ ನಾನೇ ಖುದ್ದಾಗಿ ಅವುಗಳನ್ನೆಲ್ಲ ತೆಗೆಸಿದ್ದೇನೆ. ಇನ್ನು ಮುಂದೆ ಹಾಕಬೇಡಿ ಎಂದೂ ಹಲವು ಸಲ ಸೂಚಿಸಿದ್ದೇನೆ. ನಮ್ಮಲ್ಲಿ ಫ್ಲೆಕ್ಸ್‌ ಹಾಕುವುದು ಸಂಸ್ಕೃತಿ. ನಗರದ ಎಲ್ಲ ಕ್ಷೇತ್ರಗಳಲ್ಲೂ ಈ ಸಂಸ್ಕೃತಿ ಇದೆ. ಆದರೆ, ಅದನ್ನು ಯಾರೂ ನೋಡಲ್ಲ. ಹೆಚ್ಚಿನ ಮಾಧ್ಯಮ ಸಂಸ್ಥೆಗಳ ಕಚೇರಿ ನನ್ನ ಕ್ಷೇತ್ರದಲ್ಲೇ ಇದೆ. ಸಣ್ಣ ಘಟನೆ ಘಟಿಸಿದರೂ ಬರೆಯುತ್ತೀರಿ.

* ಕ್ಷೇತ್ರದಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಂತಹ ಸುಸಜ್ಜಿತ ಪ್ರದೇಶಗಳು ಇವೆ. ಮೂಲಸೌಕರ್ಯಗಳಿಲ್ಲದ ಕೊಳೆಗೇರಿಗಳೂ ಇವೆ. ಈ ಅಸಮಾನತೆ ಹೇಗೆ ಹೋಗಲಾಡಿಸುತ್ತೀರಿ?

ಕ್ಷೇತ್ರದಲ್ಲಿ ಮಾಯಾ ಬಜಾರ್‌ ಹಾಗೂ ದೊಮ್ಮಲೂರಿನಲ್ಲಿ ಗೌತಮ್‌ ಕಾಲೊನಿ ಕೊಳೆಗೇರಿಗಳು ಇವೆ. ಸೇನೆಯ ಜತೆಗಿನ ವಿವಾದ ಕೊಳೆಗೇರಿಗಳ ಅಭಿವೃದ್ಧಿಗೆ ಅಡ್ಡಿಯಾಗಿದೆ. ಸಮಸ್ಯೆ ಬಗೆಹರಿಸಲು ಸೇನಾ ಅಧಿಕಾರಿಗಳ ಜತೆಗೆ ಮಾತುಕತೆತ ನಡೆದಿದೆ.

* ಸಣ್ಣ ಮಳೆ ಬಂದರೂ ಕ್ಷೇತ್ರದ ತಗ್ಗು ‍ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ?

ಸ್ವಾತಂತ್ರ್ಯಪೂರ್ವದಲ್ಲಿ ಅಭಿವೃದ್ಧಿಯಾಗಿದ್ದ ಸಾಕಷ್ಟು ಪ್ರದೇಶಗಳು ಇಲ್ಲಿವೆ. ಈ ಕ್ಷೇತ್ರದ ಬಹುಪಾಲು ತಗ್ಗುಪ್ರದೇಶದಲ್ಲಿದೆ. ಬೇರೆ ಕಡೆ ಮಳೆಯಾದರೂ ಇಲ್ಲಿ ಪ್ರವಾಹ ಕಾಣಿಸಿಕೊಳ್ಳುತ್ತದೆ. 10 ವರ್ಷಗಳ ಹಿಂದೆ ರಾಜಕಾಲುವೆಗಳ ಸ್ಥಿತಿ ದಯನೀಯವಾಗಿತ್ತು. ಅವುಗಳನ್ನು ಅಭಿವೃದ್ಧಿಪಡಿಸಿ, ತಡೆಗೋಡೆ ನಿರ್ಮಿಸಲಾಗಿದೆ. ಶೇ 98ರಷ್ಟು ಸಮಸ್ಯೆ ಬಗೆಹರಿದಿದೆ.

* ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ಹಲವು ಕಡೆ ಮಹಿಳಾ ದೌರ್ಜನ್ಯ ನಡೆದಿವೆ. ಇಂತಹ ಕೃತ್ಯ ತಡೆಯಲು ಕೈಗೊಂಡ ಕ್ರಮ ಏನು?

ಕ್ಷೇತ್ರದಲ್ಲಿ ಇಲ್ಲಿಯವರೆಗೆ 300 ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದೇವೆ. ಇನ್ನೂ 2 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಆಗ ಇಡೀ ಕ್ಷೇತ್ರವೇ ಸುರಕ್ಷಿತ ವಲಯ ಆಗಲಿದ್ದು, ಮಹಿಳೆಯರು ನಿರ್ಭಯದಿಂದ ಸಂಚರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry