ಮಂಗಳವಾರ, ಮಾರ್ಚ್ 2, 2021
31 °C

ಹನುಮ ಜಯಂತಿ ಬೇಕೋ? ಟಿಪ್ಪು ಜಯಂತಿ ಬೇಕೋ?: ಸಭಿಕರಿಗೆ ಯೋಗಿ ಆದಿತ್ಯನಾಥ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮ ಜಯಂತಿ ಬೇಕೋ? ಟಿಪ್ಪು ಜಯಂತಿ ಬೇಕೋ?: ಸಭಿಕರಿಗೆ ಯೋಗಿ ಆದಿತ್ಯನಾಥ ಪ್ರಶ್ನೆ

ಬೆಂಗಳೂರು: ‘ಗಣೇಶ ಚತುರ್ಥಿ, ಹನುಮ ಜಯಂತಿ ಹಾಗೂ ಶಿವಾಜಿ ಜಯಂತಿ ಆಚರಿಸಲು ಇಲ್ಲಿ ಸರ್ಕಾರದ ಅನುಮತಿ ಕಡ್ಡಾಯ. ಆದರೆ, ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಣೆ ಮಾಡುತ್ತದೆ. ಈ ಪವಿತ್ರ ಭೂಮಿಯಲ್ಲಿ ಟಿಪ್ಪು ಜಯಂತಿ ಬೇಕೋ ಅಥವಾ ಪವನಪುತ್ರ ಹನುಮನ ಜಯಂತಿ ನಡೆಯಬೇಕೋ ನೀವೇ ನಿರ್ಧರಿಸಿ’ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಸಹಕಾರನಗರ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ರವಿ ಅವರಿಗೇ ಮತ ಚಲಾಯಿಸುವಂತೆ ಸಭಿಕರಲ್ಲಿ ಮನವಿ ಮಾಡಿದ ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ನಾನಿಲ್ಲಿಗೆ ಬಂದಿರುವುದು ಸಿದ್ದರಾಮಯ್ಯ ಅವರಿಗೆ ಸ್ವಲ್ಪವೂ ಇಷ್ಟವಿಲ್ಲ. ಈ ರಾಜ್ಯದ ಜತೆ ನಾನು ಉತ್ತಮ ಭಾಂದವ್ಯ ಹೊಂದಿದ್ದೇನೆ. ಉತ್ತರ ಪ್ರದೇಶದಲ್ಲಿ ಜನಿಸಿದ ರಾಮನಿಗೆ, ‌ವನವಾಸದಲ್ಲಿ ಸಿಕ್ಕ ಅತ್ಯಂತ ನಿಕಟಪೂರ್ವ ಸಹಯೋಗಿ ಎಂದರೆ ಅದು ಕರ್ನಾಟಕದ ಹನುಮಂತ. ರಾಮ-ಹನುಮರ ಜೋಡಿಯಂತೆ ಇಂದು ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕಿದೆ. ಮುಖ್ಯಮಂತ್ರಿಗಳೇ... ಆ ಕನಸ್ಸನ್ನು ಹೊತ್ತು ನಾನಿಲ್ಲಿಗೆ ಬಂದಿದ್ದೇನೆ’ ಎಂದರು.

‘ಉತ್ತರ ಪ್ರದೇಶದ ಗೋರಕ್ಷನಾಥನ ಸಂಪ್ರದಾಯಕ್ಕೂ, ಕರ್ನಾಟಕದ ಮಂಜುನಾಥ ಸ್ವಾಮಿ ಪರಂಪರೆಗೂ ಸಾಮ್ಯತೆಯಿದೆ. ಹೀಗಾಗಿ, ನನಗೆ ಈ ಎರಡೂ ರಾಜ್ಯಗಳು ಬೇರೆ ಬೇರೆ ಎನಿಸುವುದಿಲ್ಲ. ನನ್ನ ರಾಜ್ಯವನ್ನು ಕಾಪಾಡಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ.’

‘ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ರಾಜ್ಯದ ಕೃಷಿ ಮಂತ್ರಿಗಳಿಗೆ ನನ್ನ ಪ್ರಶ್ನೆ. ಐದು ವರ್ಷಗಳಲ್ಲಿ 3,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರಲ್ಲ. ಆ ಸಾವಿನ ಹೊಣೆಯನ್ನು ಹೊರಲು ನೀವು ಸಿದ್ಧರಿದ್ದೀರೇ? ಈಗ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರಿಗೆ ಹಂಚಲು ತಮ್ಮ ಬಳಿ ಹಣವಿದೆ. ಆದರೆ, ಈ ರೈತರ ಕುಟುಂಬಗಳಿಗೆ ಕೊಡುವುದಕ್ಕೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಅಲ್ಲವೇ? ದಯವಿಟ್ಟು ಉತ್ತರ ಕೊಡಿ ಮಂತ್ರಿಗಳೇ.‘

'ಜಿಗಾದಿ ತತ್ವಗಳಿಗೆ ಆಶ್ರಯ'

‘ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 24 ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆದಿದೆ. ಆದರೆ, ಸರ್ಕಾರ ಮೃತರ ಕುಟುಂಬದೊಂದಿಗೆ ಸಂವೇದನೆಯಿಂದ ನಡೆದುಕೊಳ್ಳಲಿಲ್ಲ. ಅದರ ಬದಲಿಗೆ, ಅವರನ್ನು ಹತ್ಯೆಗೈದ ಜಿಹಾದಿ ತತ್ವಗಳಿಗೆ ಆಶ್ರಯ ನೀಡುತ್ತಾ ಬಂತು. ಯಾಸಿನ್ ಭಟ್ಕಳ ಹಾಗೂ ಒವೈಸಿ ಅವರಂಥ ಸಮಾಜಘಾತುಕರ ಜತೆಗೆ ಸಂಬಂಧ ವೃದ್ಧಿಸಿಕೊಂಡಿತು. ಇಂಥ ಸರ್ಕಾರ ನಿಮಗೆ ಅಗತ್ಯವಿದೆಯೇ? ಕಿತ್ತೊಗೆಯಿರಿ ಕಾಂಗ್ರೆಸ್ಸನ್ನು’ ಎಂದು ಯೋಗಿ ಆದಿತ್ಯನಾಥ ಗುಡುಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.