ಸಮಾಜದಲ್ಲಿ ಸಮಾನತೆ ನಿರ್ಮಿಸಲು ಜೀವನ ಸಮರ್ಪಿಸಿದರು ಮಾದಾರ ಚನ್ನಯ್ಯ, ಬಸವಣ್ಣ: ಮೋದಿ

7
ಬಿಜೆಪಿಯ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಸ್ಲಂ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ

ಸಮಾಜದಲ್ಲಿ ಸಮಾನತೆ ನಿರ್ಮಿಸಲು ಜೀವನ ಸಮರ್ಪಿಸಿದರು ಮಾದಾರ ಚನ್ನಯ್ಯ, ಬಸವಣ್ಣ: ಮೋದಿ

Published:
Updated:
ಸಮಾಜದಲ್ಲಿ ಸಮಾನತೆ ನಿರ್ಮಿಸಲು ಜೀವನ ಸಮರ್ಪಿಸಿದರು ಮಾದಾರ ಚನ್ನಯ್ಯ, ಬಸವಣ್ಣ: ಮೋದಿ

ಬೆಂಗಳೂರು: ದಲಿತ ಮತ್ತು ಹಿಂದುಳಿದ ವರ್ಗದ ಅತಿ ಹೆಚ್ಚು ಸಂಸದರನ್ನು ಚುನಾಯಿಸಿ ಬಿಜೆಪಿ ಲೋಕಸಭೆಗೆ ಕಳುಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಿಜೆಪಿ ರಾಜ್ಯ ಘಟಕದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಸ್ಲಂ ಮೋರ್ಚಾ ಕಾರ್ಯಕರ್ತರನ್ನು ಉದ್ದೇಶಿಸಿ ಗುರುವಾರ ನಮೋ ಆ್ಯಪ್‌ ಮೂಲಕ ಮಾತನಾಡಿದರು.

'ಸಂತ ಕಬೀರ ದಾಸರು ಮತ್ತು ರೊಹಿದಾಸರು ಜಾತಿಯ ಸಂಕೋಲೆಗಳನ್ನು ನಮ್ಮ ಸಮಾಜದಿಂದ ತೆಗೆಯಬೇಕೆಂದು ಪ್ರಯತ್ನ ಮಾಡಿದರು. ಅದೇ ರೀತಿ ಬಸವಣ್ಣ, ಮಾದಾರ ಚನ್ನಯ್ಯ ಮತ್ತು ಇತರೆ ವಚನಕಾರರು ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ತಮ್ಮ ಜೀವನವನ್ನು ಸಮರ್ಪಿಸಿದರು. ಅಡೆತಡೆಗಳ ನಡುವೆಯೂ ಭಾರತ ಜಗತ್ತಿನ ಅತ್ಯುನ್ನತ ಸ್ಥಾನಕ್ಕೇರುವುದು ನಿಶ್ಚಿತ ಎಂದು ಅಂಬೇಡ್ಕರ್ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅಂಬೇಡ್ಕರ್‌ ಅವರಿಗೂ ಮುನ್ನ ಮಹಾತ್ಮ ಫುಲೆ ಜಾತಿಯ ತಾರತಮ್ಯದ ವಿರುದ್ಧ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ್ದರು' ಎಂದು ಇತಿಹಾಸ ಮೆಲುಕು ಹಾಕಿದರು.

'ಅಂಬೇಡ್ಕರ್ ವಿಚಾರಗಳು, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಗಳನ್ನು ಬಿಜೆಪಿ ಆಸಕ್ತಿಯಿಂದ ಕೈಗೊಳ್ಳುತ್ತಿದೆ. ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದಂತೆ 5 ಪ್ರಮುಖ ಸ್ಥಳಗಳನ್ನು 'ಪಂಚ ತೀರ್ಥ' ಕ್ಷೇತ್ರಗಳಾಗಿ ಅಭಿವೃದ್ಧಿಪಡಿಸಿ ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ. ಈ ತೀರ್ಥ ಕ್ಷೇತ್ರಗಳ ಭೇಟಿಗಾಗಿ ನಿಧಿ ಸ್ಥಾಪಿಸಿ ಹಣ ಮೀಸಲಿಡಲಾಗುವುದು ಎಂದರು.

ಶೌಚಾಲಯ ನಿರ್ಮಾಣ ಅಭಿಯಾನ ಪ್ರಾರಂಭಿಸಿದಾಗ ನಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವ್ಯಂಗ್ಯವಾಡಿತ್ತು. ಆದರೆ, ಇಂದು ಇಡೀ ದೇಶದಲ್ಲಿ ಈ ಅಭಿಯಾನ ವ್ಯಾಪಕವಾಗಿದೆ. ದಾಖಲೆಯ ಮಟ್ಟದಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಕಷ್ಟಗಳಿಗೆ ಸ್ಪಂದಿಸಿದ್ದೇವೆ.

ಕಾಂಗ್ರೆಸ್‌ಗೆ ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಲೋಕಸಭೆಯಲ್ಲಿ ನಾವು ಒಬಿಸಿ ಬಿಲ್ ಪಾಸ್‌ ಮಾಡಿದ್ದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮೊಂಡುತನದಿಂದ ವಿರೋಧ ವ್ಯಕ್ತವಾಯಿತು ಎಂದು ಆರೋಪಿಸಿದರು.

ದಲಿತರನ್ನು ಅವಮಾನಪಡಿಸುವ ಯಾವುದೇ ಕೃತ್ಯವನ್ನು ಬಿಜೆಪಿ ಸಮರ್ಥಿಸುವದಿಲ್ಲ. ಆ ಸಮಾಜಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಹಾಗೂ ದಲಿತರನ್ನು ಉನ್ನತಿಗೆ ಕೊಂಡೊಯ್ಯುವ ಎಲ್ಲ ಕೆಲಸಗಳಿಗೆ ಬಿಜೆಪಿ ತನ್ನನ್ನು ಸಮರ್ಪಿಸಿಕೊಂಡಿದೆ. ದಲಿತ ಸಮುದಾಯದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡುವ ಮೂಲಕ ಆ ಸಮಾಜಕ್ಕೆ ಸಿಗಬೇಕಾದ ಗೌರವವನ್ನು ಒದಗಿಸಿದ ತೃಪ್ತಿ ಇದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry