ಮಹದೇವಪ್ಪ ಪ್ರಾಬಲ್ಯ ಮುರಿಯಲು ಕಸರತ್ತು

7
ತಿ.ನರಸೀಪುರ ಕ್ಷೇತ್ರ: ಕಾಂಗ್ರೆಸ್‌–ಜೆಡಿಎಸ್‌ ನಡುವೆ ಪೈಪೋಟಿ

ಮಹದೇವಪ್ಪ ಪ್ರಾಬಲ್ಯ ಮುರಿಯಲು ಕಸರತ್ತು

Published:
Updated:
ಮಹದೇವಪ್ಪ ಪ್ರಾಬಲ್ಯ ಮುರಿಯಲು ಕಸರತ್ತು

ಮೈಸೂರು: ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ತಿ.ನರಸೀಪುರ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿದ್ದು ಐದು ಸಲ ಗೆದ್ದಿದ್ದಾರೆ. ಎಂಟನೇ ಚುನಾವಣೆಯಲ್ಲಿ ಅವರಿಗೆ ಪ್ರಬಲ ಪೈಪೋಟಿ ಎದುರಾಗಿದೆ.

ಸೋಮನಾಥಪುರ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಅಶ್ವಿನ್‌ ಕುಮಾರ್‌ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಎಚ್‌.ಎಸ್‌.ಶಂಕರ್‌ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌– ಜೆಡಿಎಸ್‌ ನಡುವೆ ನೇರ ಹಣಾಹಣಿ ನಡೆದಿದ್ದು,  ಬಿಜೆಪಿ ಪೈಪೋಟಿ ನೀಡಿದೆ. ಅಶ್ವಿನ್‌ ಮತ್ತು ಶಂಕರ್‌ ಇಬ್ಬರಿಗೂ ಇದು ಮೊದಲ ವಿಧಾನಸಭೆ ಚುನಾವಣೆ.

ಮಹದೇವಪ್ಪ ಕಳೆದ ಚುನಾವಣೆಯಲ್ಲಿ ಕೇವಲ 323 ಮತಗಳ ಅಂತರದ ಗೆಲುವು ಪಡೆದಿದ್ದರು. ಈ ಬಾರಿ ಅವರು ಸ್ಪರ್ಧಿಸುವುದು ಕೊನೆಯ ಕ್ಷಣದವರೆಗೂ ಖಚಿತವಾಗಿರಲಿಲ್ಲ. ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡಲು ಸಿದ್ದತೆ ನಡೆಸಿದ್ದರು. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ಮಗನಿಗೆ ಟಿಕೆಟ್ ನೀಡದ ಕಾರಣ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ.

ಐದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಶ್ರೀರಕ್ಷೆ ಬೆನ್ನಿಗಿದೆ ಎಂಬ ವಿಶ್ವಾಸದಲ್ಲಿ ಅವರು ಇಲ್ಲಿ ಆರನೇ ಗೆಲುವಿನ ಕನಸಿನಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ ನಿರಂತರ ಪ್ರಚಾರವನ್ನೂ ನಡೆಸುತ್ತಿದ್ದಾರೆ.

ಆದರೆ, ಮಹದೇವಪ್ಪ ಮೇಲೆ ನಕಾರಾತ್ಮಕ ಪರಿಣಾಮ ಬೀರ ಬಲ್ಲ ಅಂಶಗಳೂ ಇವೆ. ಪಕ್ಷದ ಕಾರ್ಯ ಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು ಮತ್ತು ಜನಸಾಮಾನ್ಯರ ಕೈಗೆ ಸುಲಭದಲ್ಲಿ ಸಿಗದಿರುವುದು ಅದರಲ್ಲಿ ಪ್ರಮುಖವಾದವು.

‘ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಅದರಲ್ಲಿ ಎರಡು ಮಾತಿಲ್ಲ. ಕಾರ್ಯಕರ್ತರು ಮತ್ತು ಜನಸಾಮಾನ್ಯರ ಕೈಗೆ ಸಿಗದ ಅಭ್ಯರ್ಥಿ ನಮಗೆ ಬೇಕೇ’ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಮಹದೇವಪ್ಪ ಅವರು ಅಧಿಕಾರ ದಲ್ಲಿದ್ದ ಅವಧಿಯಲ್ಲಿ ತಮ್ಮನ್ನು ಸರಿ ಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವನ್ನು ಕಾರ್ಯಕರ್ತರು ಹೊರಹಾಕಿರುವುದು ಗುಟ್ಟಾಗಿ ಉಳಿ ದಿಲ್ಲ. ‘ನಮ್ಮ ಅಹವಾಲು ಸ್ವೀಕರಿಸಲು ಒಮ್ಮೆಯೂ ಕ್ಷೇತ್ರಕ್ಕೆ ಬಂದಿಲ್ಲ. ಸಮಸ್ಯೆ ಗಳನ್ನು ಆಲಿಸಿಲ್ಲ’ ಎಂಬುದು ಸಾಮಾನ್ಯ ಮತದಾರರ ದೂರು. ಅಧಿಕಾರಿಗಳ ಸಭೆಯನ್ನು ಕ್ಷೇತ್ರ ದಲ್ಲಿ ನಡೆಸುವ ಬದಲು ಮೈಸೂರಿನಲ್ಲೇ ಹೆಚ್ಚಾಗಿ ನಡೆಸುತ್ತಿದ್ದರು ಎಂಬುದು ಅವರ ಮೇಲಿರುವ ಇನ್ನೊಂದು ಆರೋಪ.

ಕ್ಷೇತ್ರವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮಗ ಸುನಿಲ್‌ ಬೋಸ್‌ಗೆ ನೀಡಿದ್ದರು. ಆದರೆ, ಮಗ ಕೂಡಾ ಕೆಲವೇ ಮಂದಿಗೆ ಸೀಮಿತವಾಗಿದ್ದರು ಎಂಬ ಟೀಕೆಯೂ ಇದೆ.

ಮಹದೇವಪ್ಪ ಅವರು ಕಳೆದ ಕೆಲ ದಿನಗಳಿಂದ ನಿರಂತರ ಪ್ರಚಾರ, ಸಭೆಗಳನ್ನು ನಡೆಸಿದ್ದಾರೆ. ಮುನಿಸಿಕೊಂಡಿದ್ದ ಕಾರ್ಯಕರ್ತರನ್ನು ಒಲಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಲಭಿಸಬಹುದೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಜೆಡಿಎಸ್‌ಗೆ ಆತ್ಮವಿಶ್ವಾಸ: ಜೆಡಿಎಸ್‌ನಲ್ಲಿ ಹಲವು ಆಕಾಂಕ್ಷಿಗಳಿದ್ದರೂ ಪಕ್ಷದ ಹೈಕಮಾಂಡ್‌ ಅಶ್ವಿನ್‌ ಕುಮಾರ್‌ಗೆ ಟಿಕೆಟ್ ನೀಡಿತ್ತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆಡಳಿತ ವಿರೋಧಿ ಅಲೆಯ ಲಾಭವನ್ನು ಗಿಟ್ಟಿಸಿಕೊಳ್ಳುವುದು ಜೆಡಿಎಸ್ ಲೆಕ್ಕಾಚಾರ.

ಜೆಡಿಎಸ್‌ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂಬ ಮಾತುಗಳು ಆರಂಭದಲ್ಲಿ ಕೇಳಿಬಂದಿದ್ದವು. ಆದರೆ ಚುನಾವಣೆ ಸಮೀಪಿಸಿದಂತೆ ಪಕ್ಷದ ಬಲ ಹೆಚ್ಚತೊಡಗಿದೆ. ಇದರಿಂದ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.

ಜೆಡಿಎಸ್‌ ಪರ ಒಲವು ಇಲ್ಲದಿದ್ದರೂ ಮಹದೇವಪ್ಪ ಅವರನ್ನು ವಿರೋಧಿಸಬೇಕು ಎಂಬ ಏಕೈಕ ಕಾರಣದಿಂದ ಕೆಲವರು ಅಶ್ವಿನ್‌ ಅವರನ್ನು ಬೆಂಬಲಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮೇಲ್ನೋಟಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆಯಾದರೂ, ಬಿಜೆಪಿಯ ಶಂಕರ್‌ ಒಂದಷ್ಟು ಪೈಪೋಟಿಯ ಸೂಚನೆ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಶಂಕರ್‌ ಅವರು ಟಿಕೆಟ್‌ ದೊರೆಯುವ ನಿರೀಕ್ಷೆಯಿಂದ ಜೆಡಿಎಸ್‌ಗೆ ಹೋಗಿದ್ದರು. ಅಲ್ಲೂ ಟಿಕೆಟ್‌ ಲಭಿಸದ ಕಾರಣ ಬಿಜೆಪಿ ಸೇರಿ ಟಿಕೆಟ್‌ ಪಡೆದುಕೊಂಡಿದ್ದರು.

ಜಾತಿ ಲೆಕ್ಕಾಚಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಒಕ್ಕಲಿಗರು, ವೀರಶೈವ– ಲಿಂಗಾಯತ ಮತದಾರರು ಇದ್ದಾರೆ. ದಲಿತರ ಮತಗಳು ಮೂವರು ಅಭ್ಯರ್ಥಿಗಳ ನಡುವೆ ಹಂಚಿಹೋಗಲಿವೆ. ಇದರಿಂದ ಒಕ್ಕಲಿಗ ಮತ್ತು ಲಿಂಗಾಯತ ಮತಗಳು ನಿರ್ಣಾಯಕ ಎನಿಸಿವೆ.

ಪರಿಶಿಷ್ಟ ಜಾತಿಯಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳ ಮತಗಳು ಯಾರಿಗೆ ಬೀಳಲಿವೆ ಎಂಬುದೂ ಮುಖ್ಯವೆನಿಸುತ್ತದೆ. ಶಂಕರ್‌ ಅವರು ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದರೆ, ಮಹದೇವಪ್ಪ ಬಲಗೈ ಸಮುದಾಯಕ್ಕೆ ಸೇರಿದವರು. ಎಡಗೈ ಸಮುದಾಯದ ಮತದಾರರು ಬಿಜೆಪಿಗೆ ಪೂರ್ಣ ಬೆಂಬಲ ನೀಡಿದರೆ ಕಾಂಗ್ರೆಸ್‌ಗೆ ಮುಳುವಾಗಲೂಬಹುದು.

ಒಟ್ಟಿನಲ್ಲಿ ‘ಹಳೆಹುಲಿ’ಯ ಎದುರು ಹೊಸಬರಿಬ್ಬರು ತೊಡೆತಟ್ಟಿ ನಿಂತಿರುವುದರಿಂದ ತಿ.ನರಸೀಪುರ ಕ್ಷೇತ್ರದ ಚುನಾವಣಾ ಫಲಿತಾಂಶ ಕುತೂಹಲದ ಗಣಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry