ಗಂಡನ ಕೊಲೆ: ಪತ್ನಿ, ಪ್ರಿಯಕರನಿಗೆ ಜೀವಾವಧಿ

7

ಗಂಡನ ಕೊಲೆ: ಪತ್ನಿ, ಪ್ರಿಯಕರನಿಗೆ ಜೀವಾವಧಿ

Published:
Updated:

ಮಂಗಳೂರು: 2914ರ ಏಪ್ರಿಲ್‌ 19ರಂದು ಬೆಳ್ತಂಗಡಿ ತಾಲ್ಲೂಕಿನ ಕಳೆಂಜದಲ್ಲಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯೊಂದಿಗೆ ಕೈಜೋಡಿಸಿದ್ದ ಪ್ರಿಯಕರನಿಗೆ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹ 2.50 ಲಕ್ಷ ದಂಡ ವಿಧಿಸಿದೆ.

ಕಳೆಂಜ ಗ್ರಾಮದ ಶಾಲೆಮನೆ ಅಣ್ಣಯ್ಯಗೌಡರ ಪತ್ನಿ ಅಮಿತಾ ಅಲಿಯಾಸ್ ದೇವಕಿ (42) ಮತ್ತು ಕಳೆಂಜದ ಉಪ ವಲಯ ಅರಣ್ಯಧಿಕಾರಿಯಾಗಿದ್ದ ಆಕೆಯ ಪ್ರಿಯಕರ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಸಿದ್ದಾಪುರ ತಾಂಡಾ ನಿವಾಸಿ ಟಿ.ರುದ್ರೇಶ (32) ಶಿಕ್ಷೆಗೊಳಗಾದವರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಶಾರದಾ ಬಿ. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

ಅಮಿತಾ ಮತ್ತು ರುದ್ರೇಶನ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರದಲ್ಲಿ ಕೋಪಗೊಂಡಿದ್ದ ಅಣ್ಣಯ್ಯಗೌಡ ಅವರನ್ನು ಇಬ್ಬರೂ ಸೇರಿಕೊಂಡು ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಅಮಿತಾ, ಮೂವರು ಮುಸುಕುಧಾರಿಗಳು ಮನೆಗೆ ನುಗ್ಗಲು ಯತ್ನಿಸಿ, ಪತಿಯನ್ನು ಹೊಡೆದು ಕೊಂದಿದ್ದಾರೆ ಎಂದು ತಿಳಿಸಿದ್ದಳು. ಪ್ರಕರಣದ ತನಿಖೆ ನಡೆಸಿದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುರೇಶ್‌ ಕುಮಾರ್‌, ಏ. 22ರಂದು ಅಮಿತಾ ಮತ್ತು ರುದ್ರೇಶನನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್ ರಾಜು ಪೂಜಾರಿ ಬನ್ನಾಡಿ ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ್ದರು.

ಕೊಲೆ ಮಾಡಿರುವುದಕ್ಕೆ ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ₹ 50,000 ದಂಡ ವಿಧಿಸಲಾಗಿದೆ. ಕೊಲೆಗೆ ಒಳಸಂಚು ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ₹ 50,000 ದಂಡ ವಿಧಿಸಲಾಗಿದೆ. ಎರಡೂ ಶಿಕ್ಷೆಯಲ್ಲಿ ದಂಡ ಪಾವತಿಗೆ ತಪ್ಪಿದರೆ ತಲಾ ಒಂದು ವರ್ಷ ಸಜೆ ಅನುಭವಿಸುವಂತೆ ನ್ಯಾಯಾಲಯ ಹೇಳಿದೆ.

ಸಾಕ್ಷ್ಯ ನಾಶ ಅಪರಾಧಕ್ಕೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ₹ 15,000 ದಂಡ ವಿಧಿಸಲಾಗಿದೆ. ದಂಡ ಪಾವತಿಗೆ ತಪ್ಪಿದರೆ ಆರು ತಿಂಗಳ ಸಜೆ ವಿಧಿಸಲಾಗಿದೆ. ಸುಳ್ಳು ಮಾಹಿತಿ ನೀಡಿರುವುದಕ್ಕೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹ 10,000 ದಂಡ ವಿಧಿಸಿದ್ದು, ದಂಡ ಪಾವತಿಗೆ ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಲಾಗಿದೆ. ದಂಡದ ಮೊತ್ತವನ್ನು ಕೊಲೆಯಾದ ಅಣ್ಣಯ್ಯಗೌಡರ ಮೂವರು ಮಕ್ಕಳಿಗೆ ನೀಡುವಂತೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry