ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ದಿನವೂ ‘ಸ್ಲಿಪ್‌’ ವಿತರಣೆ

ಜಿಲ್ಲಾಧಿಕಾರಿ ಎಸ್‌. ಸಸಿಕಾಂತ್ ಸೆಂಥಿಲ್‌ ಹೇಳಿಕೆ
Last Updated 10 ಮೇ 2018, 9:59 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿರುವ ಶನಿವಾರವೂ ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಭಾವಚಿತ್ರ ಸಹಿತ ಸ್ಲಿಪ್‌ಗಳನ್ನು ವಿತರಿಸಲಾಗುತ್ತದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಪರಿಷ್ಕೃತ ಆದೇಶ ಹೊರಡಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್‌.ಸಸಿಕಾಂತ್ ಸೆಂಥಿಲ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಈಗಾಗಲೇ ಮತಗಟ್ಟೆ ಹಂತದ ಅಧಿಕಾರಿಗಳು ಸ್ಲಿಪ್‌ಗಳನ್ನು ವಿತರಿಸುತ್ತಿದ್ದಾರೆ. ಇನ್ನೂ ಬಾಕಿ ಉಳಿಯುವ ಸ್ಲಿಪ್‌ಗಳನ್ನು ಮತದಾನದ ದಿನದಂದು ಆಯಾ ಮತಗಟ್ಟೆಗಳಲ್ಲಿ ಮತದಾರರ ನೆರವು ಕೇಂದ್ರ
ದಲ್ಲಿ ವಿತರಣೆ ಮಾಡಲಾಗುವುದು’ ಎಂದರು.

ವಿಶೇಷ ಬಸ್‌ ವ್ಯವಸ್ಥೆ: ಬಸ್‌ ಸಂಪರ್ಕ ಇಲ್ಲದ 33 ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಮತದಾನದ ದಿನ ವಿಶೇಷ ಸೇವೆ ಒದಗಿಸಲಿದೆ. ಮತಗಟ್ಟೆ ಸಿಬ್ಬಂದಿ ಮತ್ತು ಮತ ಯಂತ್ರಗಳನ್ನು ಸಾಗಿಸಲು 160 ಬಸ್‌ಗಳನ್ನು ಬಳಸಲಾಗುತ್ತಿದೆ. ಬಿಡುವಿನ ಅವಧಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಎರಡರಿಂದ ಮೂರು ಟ್ರಿಪ್‌ ಉಚಿತ ಸೇವೆ ಒದಗಿಸುವ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಕ್ಲಿಷ್ಟಕರ ಮತಗಟ್ಟೆಗಳ ಪೈಕಿ 91 ಮತಗಟ್ಟೆಗಳ ಮತದಾನ ಪ್ರಕ್ರಿಯೆಯನ್ನು ವೆಬ್‌ ಕಾಸ್ಟ್ ಮೂಲಕ ನೇರಪ್ರಸಾರ ಮಾಡಲಾಗುತ್ತದೆ. 221 ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗುವುದು. 40 ಮತಗಟ್ಟೆಗಳಲ್ಲಿ ಹ್ಯಾಂಡಿ ಕ್ಯಾಮೆರಾ ಮೂಲಕ ಮತದಾನ ಪ್ರಕ್ರಿಯೆಯನ್ನು ಚಿತ್ರೀಕರಿಸಲಾಗುವುದು ಎಂದರು.

ಶೇಕಡ 40ರಷ್ಟು ಬ್ಯಾಲೆಟ್ ಯೂನಿಟ್, ಶೇ 30ರಷ್ಟು ಕಂಟ್ರೋಲ್ ಯೂನಿಟ್‌ ಮತ್ತು ಶೇ 40ರಷ್ಟು ವಿವಿಪ್ಯಾಟ್ ಯಂತ್ರಗಳನ್ನು ಹೆಚ್ಚುವರಿ
ಯಾಗಿ ಕಾಯ್ದಿರಿಸಲಾಗಿದೆ. ಸರಿಪಡಿಸಲಾಗದ ರೀತಿಯ ತಾಂತ್ರಿಕ ದೋಷಗಳು ಕಂಡುಬಂದರೆ ಅಂತಹ ಕಡೆಗಳಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಬದಲಿಸಲಾಗುವುದು ಎಂದು ಹೇಳಿದರು.

ಬಹಿರಂಗ ಪ್ರಚಾರ ಅಂತ್ಯ: ಗುರುವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಆ ಬಳಿಕ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ಸಕಾಲಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳಿಸುವಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಕೇಂದ್ರ ಚುನಾವಣಾ ಆಯೋಗವು ವಿದ್ಯುನ್ಮಾನ ಮಾಧ್ಯಮಗಳು ಎಂದು ಪರಿಗಣಿಸಿದೆ. ಈ ಮಾಧ್ಯಮಗಳಲ್ಲಿ ಚುನಾವಣೆಯ ಮೇಲೆ ಪ್ರಭಾವ ಬೀರುವಂತಹ ಕೆಲಸ ಮಾಡುವುದು ಮತ್ತು ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಉಪ ಚುನಾವಣಾಧಿಕಾರಿಯಾಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT