ಮಂಗಳವಾರ, ಮಾರ್ಚ್ 9, 2021
18 °C
ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರಗಳಲ್ಲಿ ಉತ್ತಮ ಅವಕಾಶ

ಕೌಶಲಕ್ಕೆ ‘ಸಾಣೆ’ ಹಿಡಿಯುವ ಕೋರ್ಸ್‌

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಕೌಶಲಕ್ಕೆ ‘ಸಾಣೆ’ ಹಿಡಿಯುವ ಕೋರ್ಸ್‌

ಬೆಳಗಾವಿ: ಸೃಜನಶೀಲತೆ ಮತ್ತು ಎಂಜಿನಿಯರಿಂಗ್‌ನ ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸುವ ಕ್ಷಮತೆ ಸಂಪಾದಿಸುವ ‘ಟೂಲ್ ಮೇಕರ್‌’ಗಳಿಗೆ ಬಹಳ ಬೇಡಿಕೆ ಇದೆ. ಐಟಿ ಕಂಪನಿಗಳೂ ಸೇರಿದಂತೆ ಎಲ್ಲ ವಿಧದ ಉದ್ದಿಮೆಗಳಲ್ಲೂ ಈ ನೌಕರರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ಪ್ರತಿಭೆಗಳಿಗೆ ಕೌಶಲ ವೃದ್ಧಿಸಿಕೊಳ್ಳುವ ‘ಸಾಣೆ’ ಹಿಡಿಯುವ ಕೆಲಸವನ್ನು ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರಗಳಲ್ಲಿ ಮಾಡಲಾಗುತ್ತಿದೆ.

ಈ ಕೇಂದ್ರದಲ್ಲಿ ಲಭ್ಯವಿರುವ ಕೋರ್ಸ್‌ಗಳಿಗೆ ಎಸ್‌ಎಸ್ಎಲ್‌ಸಿ ವಿದ್ಯಾರ್ಹತೆಯವರು ಪ್ರವೇಶ ಪಡೆಯಬಹುದು. 4 ವರ್ಷ ಕಲಿಕೆಯ ಈ ಕೋರ್ಸ್‌ಗಳಿಗೆ ರೋಸ್ಟರ್ ಹಾಗೂ ಮೆರಿಟ್‌ ಆಧರಿಸಿ ಸೀಟುಗಳನ್ನು ನೀಡಲಾಗುತ್ತದೆ. ಬೆಳಗಾವಿಯ ಕೈಗಾರಿಕಾ ಪ್ರದೇಶದಲ್ಲಿ

ಇರುವ ಉದ್ಯಮಬಾಗ್‌ ಹಾಗೂ ಚಿಕ್ಕೋಡಿಯಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮೇ 8ರಿಂದ ಅರ್ಜಿಗಳ ವಿತರಣೆ ಪ್ರಕ್ರಿಯೆ ಆರಂಭಗೊಂಡಿದೆ.

ಬೆಳಗಾವಿಯಲ್ಲಿ ಡಿಪ್ಲೊಮಾ ಇನ್‌ ಟೂಲ್ ಅಂಡ್‌ ಡೈ ಮೇಕಿಂಗ್‌, ಡಿಪ್ಲೊಮಾ ಇನ್‌ ಪ್ರಿಸಿಸನ್‌ ಮ್ಯಾನಿಫ್ಯಾಕ್ಚರಿಂಗ್‌ ಕೋರ್ಸ್‌ಗಳಿವೆ. 90 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ. ಚಿಕ್ಕೋಡಿಯಲ್ಲಿ ಡಿಪ್ಲೊಮಾ ಇನ್‌ ಟೂಲ್ ಅಂಡ್‌ ಡೈ ಮೇಕಿಂಗ್‌, ಡಿಪ್ಲೊಮಾ ಇನ್‌ ಪ್ರಿಸಿಸನ್‌ ಮ್ಯಾನಿಫ್ಯಾಕ್ಚರಿಂಗ್‌ ಹಾಗೂ ಡಿಪ್ಲೊಮಾ ಇನ್‌ ಮೆಕಾಟ್ರಾನಿಕ್ಸ್‌ ಕೋರ್ಸ್‌ಗಳು ಲಭ್ಯವಿದೆ. ಇಲ್ಲಿ 180 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಇಲ್ಲಿನ ಕೋರ್ಸ್‌ಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾನ್ಯತೆಯ ಮುದ್ರೆ ಒತ್ತಿದೆ.

ಏನಿದು ಕೋರ್ಸ್‌?: ಪ್ರತಿ ವಸ್ತುವೂ ಗುಣಮಟ್ಟದ್ದಾಗಿರಬೇಕು, ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರಬೇಕು ಮತ್ತು ಬೆಲೆ ಕೂಡ ಕಡಿಮೆ ಆಗಿರಬೇಕು ಎಂದು ಗ್ರಾಹಕರು ಅಪೇಕ್ಷಿಸುತ್ತಾರೆ. ಈ ಬೇಡಿಕೆಗೆ ಅನುಗುಣವಾಗಿ ವಸ್ತು (ಕಾಂಪೊನೆಂಟ್) ಬೇಕಾಗಿದ್ದರೆ, ಅದಕ್ಕೊಂದು ವಿಶೇಷ ಟೂಲ್ ಅಗತ್ಯವಾಗುತ್ತದೆ. ಇಂತಹ ಟೂಲ್‌ಗಳನ್ನು ವಿನ್ಯಾಸಮಾಡಿ, ತಯಾರಿಸಿ, ಅಂತಿಮವಾಗಿ ಕಾಂಪೊನೆಂಟ್‌ಗಳನ್ನು ಉತ್ಪಾದಿಸುವಂತೆ ಅಣಿಗೊಳಿಸುವ ಅದ್ಭುತ ತಂತ್ರಜ್ಞಾನವೇ ಟೂಲ್ ಅಂಡ್ ಡೈ ಮೇಕಿಂಗ್. ಇಲ್ಲಿ ಪ್ಲಾಸ್ಟಿಕ್, ಶೀಟ್ ಮೆಟಲ್, ಮಿಶ್ರಲೋಹ (ಅಲಾಯ್) ಹಾಗೂ ಎಂಜಿನಿಯರಿಂಗ್ ಕಾಂಪೊನೆಂಟ್‌ಗಳಿಗಾಗಿ ಟೂಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಈ ತಂತ್ರಜ್ಞಾನವನ್ನು ಕಲಿಸಿಕೊಡುವುದಕ್ಕಾಗಿ ಸರ್ಕಾರದಿಂದ ತರಬೇತಿ ಕೇಂದ್ರ ಆರಂಭಿಸಲಾಗಿದೆ. 2 ಸೆಮಿಸ್ಟರ್‌ಗೆ ₹ 25 ಸಾವಿರ ಶುಲ್ಕ (ಟ್ಯೂಷನ್‌ ಫೀ) ನಿಗದಿಪಡಿಸಲಾಗಿದೆ. ಇದನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಲಾಗುತ್ತದೆ.

‘ಜಿಟಿಟಿಸಿಯಲ್ಲಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ವಿದ್ಯಾರ್ಥಿಗಳು ತರಬೇತಿ ಪಡೆದು ಭವಿಷ್ಯ ರೂಪಿಸಿಕೊಳ್ಳಬಹುದು. ಕೆಲ ತಾಲ್ಲೂಕು ಕೇಂದ್ರ ಒಳಗೊಂಡಂತೆ ರಾಜ್ಯದ 22 ನಗರಗಳಲ್ಲಿ ಮಾತ್ರ ಡಿಪ್ಲೊಮಾ ಇನ್‌ ಟೂಲ್‌ ಆಂಡ್‌ ಡೈ ಮೇಕಿಂಗ್‌ ಮತ್ತು ಡಿಪ್ಲೊಮಾ ಇನ್‌

ಪ್ರಿಸಿಷನ್‌ ಮ್ಯಾನಿಫ್ಯಾಕ್ಚರಿಂಗ್‌ ಕೋರ್ಸ್‌ಗಳಿವೆ. ಟೂಲ್‌ ರೂಂ ಮಶಿನಿಷ್ಟ್‌, ಟೂಲ್‌ ಆಂಡ್‌ ಡೈ ಟೆಕ್ನೀಷಿಯನ್‌, ಸಿಎನ್‌ಸಿ ಟೆಕ್ನಾಲಜಿ, ಮಾಸ್ಟರ್‌ ಇನ್‌ ಕ್ಯಾಡ್‌-ಕ್ಯಾಮ್‌, ಟರ್ನರ್‌, ಮಿಲ್ಲರ್‌, ಗ್ರ್ಯಾಂಡರ್‌... ಒಂದು ತಿಂಗಳಿನಿಂದ ಆರು ತಿಂಗಳಾವಧಿಯ ಅಲ್ಪಾವಧಿ ಕೋರ್ಸ್‌

ಗಳೂ ಇವೆ’ ಎಂದು ಜಿಟಿಟಿಸಿ ಪ್ರಾಚಾರ್ಯ ಬಿ.ಜಿ. ಮೊಗೇರ ತಿಳಿಸಿದರು.

ಅತ್ಯಾಧುನಿಕ ಯಂತ್ರಗಳು: ‘ಬೆಳಗಾವಿಯಲ್ಲಿ ₹ 3.50 ಕೋಟಿಗೂ ಹೆಚ್ಚು ಹಾಗೂ ಚಿಕ್ಕೋಡಿಯಲ್ಲಿ ₹ 4.50 ಕೋಟಿಗೂ ಹೆಚ್ಚು ಮೌಲ್ಯದ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಐಟಿಐ ಪಾಸಾದ ವಿದ್ಯಾರ್ಥಿಗಳು 3ನೇ ಸೆಮಿಸ್ಟರ್‌ಗೆ  ನೇರವಾಗಿ ಪ್ರವೇಶ ದೊರೆಯುತ್ತದೆ. ಶೇ 100ರಷ್ಟು ಉದ್ಯೋಗದ ಅವಕಾಶಗಳಿವೆ. ಈಚೆಗೆ ಹೊರಬಂದ ತಂಡದ 45 ವಿದ್ಯಾರ್ಥಿಗಳಿಗೂ  ಉದ್ಯೋಗ ಸಿಕ್ಕಿದೆ. ಕೇಂದ್ರಗಳಿಗೆ ಆಗಮಿಸಿ, ಖಾಸಗಿ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸುತ್ತವೆ. ಪ್ರತಿಬ್ಯಾಚ್‌ನಲ್ಲೂ ಒಂದಿಬ್ಬರು ವಿದೇಶಗಳಿಗೆ ಹೋಗುತ್ತಿದ್ದಾರೆ. 4–5 ಮಂದಿ ಎಂಜಿನಿಯರಿಂಗ್‌ ಪ್ರವೇಶ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಆಸಕ್ತರು ಹೆಚ್ಚಿನ ಮಾಹಿತಿಗೆ ದೂ: 0831-2442407, ಮೊ: 91416 30309 ಅಥವಾ http://www.karnataka.gov.in ಸಂಪರ್ಕಿಸಬಹುದು.

**

ಶಿಷ್ಯವೇತನ ಉಂಟು

4 ವರ್ಷದ ಡಿಪ್ಲೊಮಾ ಕೋರ್ಸ್‌ಗಳಿವು. 3 ವರ್ಷ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. 4ನೇ ವರ್ಷ ಕೈಗಾರಿಕೆಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕು. ಆ ವೇಳೆ ₹ 10 ಸಾವಿರದಿಂದ ₹ 15 ಸಾವಿರ ಶಿಷ್ಯವೇತನ ಸಿಗುತ್ತದೆ ಎಂದು ಪ್ರಾಚಾರ್ಯ ಬಿ.ಜಿ.ಮೊಗೇರ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.