ಗುರುವಾರ , ಮಾರ್ಚ್ 4, 2021
18 °C
ಚಿತ್ತಾಪುರ: ಕಾಂಗ್ರೆಸ್, ಬಿಜೆಪಿ ನೇರಾನೇರ ಸೆಣಸಾಟ

ಅಭಿವೃದ್ಧಿಯ ಓಟ; ಅನುಕಂಪದ ನೋಟ

ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಅಭಿವೃದ್ಧಿಯ ಓಟ; ಅನುಕಂಪದ ನೋಟ

ಕಲಬುರ್ಗಿ: ಚಿತ್ತಾಪುರ ವಿಧಾನಸಭಾ ಕ್ಷೇತ್ರ ತೀವ್ರ ಜಿದ್ದಾಜಿದ್ದಿಯಿಂದ ಕುತೂಹಲ ಮೂಡಿಸಿದೆ.

2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ಈ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದರು. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಪ್ರಿಯಾಂಕ್ ಖರ್ಗೆ ಸೋಲು ಅನುಭವಿಸಿದ್ದರು. ಇವರ ವಿರುದ್ಧ ಬಿಜೆಪಿಯ ವಾಲ್ಮೀಕ ನಾಯಕ ವಿಜಯ ಪತಾಕೆ ಹಾರಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ವಿಜಯದ ಮಾಲೆಯನ್ನು ತಮ್ಮದಾಗಿಸಿಕೊಂಡರು.

ಇದೀಗ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಪ್ರಿಯಾಂಕ್ ಮತ್ತೊಮ್ಮೆ ಕಣದಲ್ಲಿದ್ದಾರೆ. ವಾಲ್ಮೀಕಿ ನಾಯಕ ಬಿಜೆಪಿ ಹುರಿಯಾಳು. ಜೆಡಿಎಸ್ ಈ ಕ್ಷೇತ್ರವನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿದೆ. ಹೀಗಾಗಿ ದೇವರಾಜ ವಿ.ಕೆ. ಬಿಎಸ್‌ಪಿಯಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್‌ನಲ್ಲಿದ್ದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ, ಚಿತ್ತಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಾಲ್ಮೀಕ ನಾಯಕ ಪರ ಪ್ರಚಾರ ಕೈಗೊಂಡು, ಪ್ರಿಯಾಂಕ್ ವಿರುದ್ಧ ವಾಗ್ದಾಳಿ ನಡೆಸಿದರು. ಮಾಲೀಕಯ್ಯ ಅವರ ನಡೆ ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ.

‘ಅಕ್ರಮ ಮರಳು ಸಾಗಣೆ, ನೀರಾವರಿ ಸೌಲಭ್ಯ ಕಲ್ಪಿಸದಿರುವುದು, ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮಕೈಗೊಳ್ಳದಿರುವುದು ಮತ್ತು ಗ್ರಾಮೀಣ ಪ್ರದೇಶದ ಕೆಲ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ ಪ್ರಿಯಾಂಕ್ ಅವರು ಆದ್ಯತೆ ನೀಡಿಲ್ಲ’ ಎಂಬ ಆರೋಪ ಇದೆ. ಅಲ್ಲದೆ, ‘ದೊಡ್ಡವರಿಗೆ ಗೌರವ ಕೊಡುವುದಿಲ್ಲ’ ಎಂಬ ಗಂಭೀರ ಆರೋಪವೂ ಇವರ ವಿರುದ್ಧ ಕೇಳಿ ಬರುತ್ತಿದೆ.

‘ಪ್ರಿಯಾಂಕ್ ಅವರು ₹2,727 ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ₹160 ಕೋಟಿ ವೆಚ್ಚದಲ್ಲಿ ಬೆಣ್ಣೆತೊರಾ ಜಲಾಶಯದ ನವೀಕರಣ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಂಡಿದ್ದಾರೆ. ಶಾಲಾ–ಕಾಲೇಜು, ಹಾಸ್ಟೆಲ್‌ಗಳನ್ನು ಮಂಜೂರು ಮಾಡಿಸಿದ್ದಾರೆ. ಅಭಿವೃದ್ಧಿ ಎಂದರೆ ಪ್ರಿಯಾಂಕ್ ಎನ್ನುವ ಮಟ್ಟಿಗೆ ಕಾಮಗಾರಿಗಳನ್ನು ಕೈಗೊಂಡಿದ್ದಾರೆ’ ಎಂದು ಕಾಂಗ್ರೆಸ್‌ನವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ಜನತಾ ಪರಿವಾರದ ನಾಯಕ ವಿಶ್ವನಾಥ ಪಾಟೀಲ ಹೆಬ್ಬಾಳ ಮತ್ತು ಇವರ ಬೆಂಬಲಿಗರಾದ ಲಿಂಗಾರೆಡ್ಡಿ ಬಸರೆಡ್ಡಿ, ಶಶಿಕಾಂತ ಪಾಟೀಲ ಭಂಕೂರ, ಶ್ರೀನಿವಾಸ ಹಗರ, ಬಾಬುಮಿಯ್ಯಾ ಕಲಗುರ್ತಿ ಮತ್ತು ಬಸವರಾಜ ಶಿವಗೋಳ ಬಿಜೆಪಿ ಜತೆ ಗುರುತಿಸಿಕೊಂಡಿದ್ದು, ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

‘ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ. ಪ್ರಿಯಾಂಕ್ ದೊಡ್ಡವರನ್ನು ಕಡೆಗಣಿಸುತ್ತಾರೆ. ಅಲ್ಲದೆ ಕ್ಷೇತ್ರದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಕಲಬುರ್ಗಿ ಮತ್ತು ಬೆಂಗಳೂರಿನಲ್ಲೇ ಇರುತ್ತಾರೆ’ ಎಂದು ಬಿಜೆಪಿಯವರು ದೂರುತ್ತಾರೆ.

‘ವಾಲ್ಮೀಕ ನಾಯಕ ಅವರು ಈ ಹಿಂದೆ ಮಾಡಿದ್ದ ಅಭಿವೃದ್ಧಿ ಕೆಲಸದ ಜತೆಗೆ ಅನುಕಂಪವನ್ನು ನೆಚ್ಚಿಕೊಂಡಿದ್ದಾರೆ. ಮೋದಿ ‘ಹವಾ’, ಯಡಿಯೂರಪ್ಪನವರ ‘ಪರಿವರ್ತನಾ ಯಾತ್ರೆ’ ಮತ್ತು ಅಮಿತ್ ಶಾ ಅವರ ‘ಕರುನಾಡ ಯಾತ್ರೆ’ ಎಲ್ಲವೂ ಮೇಳೈಸಿದರೆ ಗೆಲುವಿನ ದಡ ಸೇರುವುದು ಖಚಿತ’ ಎಂಬ ಲೆಕ್ಕಾಚಾರ ಬಿಜೆಪಿಯದು.

‘ಬಿಎಸ್‌ಪಿ ಅಭ್ಯರ್ಥಿ ದೇವರಾಜ ವಿ.ಕೆ. ಕ್ಷೇತ್ರದ ಹೊರಗಿನವರು. ಅವರ ಪ್ರಚಾರವೂ ಅಷ್ಟಕಷ್ಟೆ’ ಎಂದು ಜನರು ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.