ನೀವು ನಮ್ಮನ್ನು ಎದುರಿಸಲಾರಿರಿ, ಆಜಾದಿ ಧಕ್ಕುವುದಿಲ್ಲ: ಕಾಶ್ಮೀರಿ ಯುವಕರಿಗೆ ರಾವತ್‌ ಕಿವಿಮಾತು

7

ನೀವು ನಮ್ಮನ್ನು ಎದುರಿಸಲಾರಿರಿ, ಆಜಾದಿ ಧಕ್ಕುವುದಿಲ್ಲ: ಕಾಶ್ಮೀರಿ ಯುವಕರಿಗೆ ರಾವತ್‌ ಕಿವಿಮಾತು

Published:
Updated:
ನೀವು ನಮ್ಮನ್ನು ಎದುರಿಸಲಾರಿರಿ, ಆಜಾದಿ ಧಕ್ಕುವುದಿಲ್ಲ: ಕಾಶ್ಮೀರಿ ಯುವಕರಿಗೆ ರಾವತ್‌ ಕಿವಿಮಾತು

ಶ್ರೀನಗರ: ‘ಕಾಶ್ಮೀರ ಯುವಕರು ಅನಗತ್ಯವಾಗಿ ಕಲಹ ಸೃಷ್ಟಿಸುವುದು ಬೇಡ. ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡಲು ಸೇನೆ ಸದಾ ಸಿದ್ಧವಿರುವುದರಿಂದ ಆಜಾದಿ(ಸ್ವಾತಂತ್ರ್ಯ) ಧಕ್ಕುವುದಿಲ್ಲ’ ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಗುರುವಾರ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರಾವತ್‌, ‘ಆಜಾದಿ ಪಡೆಯುವ ಸಲುವಾಗಿ ರಾಜ್ಯದಲ್ಲಿನ ಯುವಕರು ಬಂದೂಕುಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅದು ಅವರನ್ನು ದಾರಿ ತಪ್ಪಿಸುತ್ತಿದೆ’ ಎಂದಿದ್ದಾರೆ.

‘ಸೇನೆ ಜೊತೆಗಿನ ಗುಂಡಿನ ಕಾಳಗದಲ್ಲಿ ಸತ್ತವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ನಿರಂತರವಾಗಿ ನಡೆಯುತ್ತಲೇ ಇರುವುದು ನನಗೆ ತಿಳಿದಿದೆ. ಇಂತಹ ಹೋರಾಟಗಳು ನಿರರ್ಥಕ ಎಂಬುದನ್ನು ಒತ್ತಿಹೇಳಲು ಬಯಸುತ್ತೇನೆ. ಇದರಿಂದ ಏನನ್ನೂ ಸಾಧಿಸಲಾಗದು. ಸದ್ಯ ಹೊಸ ನೇಮಕಾತಿಗಳು ನಡೆಯುತ್ತಿವೆ. ನೀವು ಸೇನೆಯನ್ನು ಎದುರಿಸಲಾರಿರಿ’ ಎಂದು ಹೇಳಿದ್ದಾರೆ.

‘ನಾವು ಕೊಲ್ಲುವುದನ್ನು ಇಷ್ಟಪಡುವುದಿಲ್ಲ. ಆದರೆ, ಯಾರಾದರೂ ನಮ್ಮೊಡನೆ ಹೋರಾಟಕ್ಕೆ ಬಂದರೆ ಪೂರ್ಣ ಶಕ್ತಿಯೊಡನೆ ಹೋರಾಡುತ್ತೇವೆ’ ಎಂದೂ ಎಚ್ಚರಿಸಿದ್ದಾರೆ.

https://bit.ly/2I3TV4t

‘ಸೇನಾ ಪಡೆಗಳು ಕ್ರೂರಿಗಳಲ್ಲ ಎಂಬುದನ್ನು ಕಾಶ್ಮೀರಿಗಳು ಅರ್ಥಮಾಡಿಕೊಳ್ಳಬೇಕು. ಪಾಕಿಸ್ತಾನ ಇಲ್ಲವೇ ಸಿರಿಯಾ ದೇಶಗಳತ್ತ ನೋಡಿ. ಅಲ್ಲಿ ಇಂತಹ ಸನ್ನಿವೇಶಗಳಲ್ಲಿ ಟ್ಯಾಂಕರ್‌, ವಾಯು ದಾಳಿಗಳನ್ನು ನಡೆಸಲಾಗುತ್ತದೆ.‌ ಆದರೆ ನಮ್ಮ ಸೇನೆ ನಾಗರಿಕರ ಸಾವಿನ ಸಂಖ್ಯೆ ಏರಿಕೆಯಾಗದಂತೆ ನೋಡಿಕೊಳ್ಳಲು ತಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ಯುವಕರು ನಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂಬುದು ಗೊತ್ತು. ಆದರೆ ಸೇನಾಪಡೆಗಳ ವಿರುದ್ಧ ತಿರುಗಿ ದಾಳಿ ನಡೆಸುವುದು, ಕಲ್ಲು ತೂರುವುದು ಪರಿಹಾರವಲ್ಲ. ಉಗ್ರರ ಜೊತೆಗಿನ ಗುಂಡಿನ ಚಕಮಕಿ ವೇಳೆ ಇಲ್ಲಿನ ಜನರು ಸೇನೆಯತ್ತ ಕಲ್ಲುಗಳನ್ನು ತೂರಿ ಸೇನೆ ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿ ನಡೆಸಲು ಪ್ರೇರೇಪಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನಮ್ಮ ಕಾರ್ಯಾಚರಣೆಗೆ ಅಡ್ಡಿ ಪಡಿಸಲು ದೊಡ್ಡ ಸಂಖ್ಯೆಯಲ್ಲಿ ಜನರು ಬರುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಯಾರು ಇವರನ್ನು ಪ್ರಚೋದಿಸುತ್ತಿದ್ದಾರೆ? ಅವರು(ಕಾಶ್ಮೀರಿಗಳು) ಉಗ್ರಗಾಮಿಗಳು ನಮ್ಮನ್ನು ಕೊಲ್ಲುವುದಿಲ್ಲ ಎಂದು ಭಾವಿಸಿದ್ದರೆ, ಅವರು ಹೋಗಿ ‘ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೊರಗೆ ಬರುವಂತೆ’ ಉಗ್ರರಿಗೆ ಹೇಳಲಿ. ಆಗ ಯಾರನ್ನೂ ಕೊಲ್ಲುವುದಿಲ್ಲ. ನಮ್ಮ ಕಾರ್ಯಾಚರಣೆಯನ್ನೂ ನಿಲ್ಲಿಸುತ್ತೇವೆ. ನಮ್ಮ ಕಾರ್ಯಾಚರಣೆಗಳಿಗೆ ಅಡ್ಡಿಪಡಿಸಲು ಹಾಗೂ ತಪ್ಪಿಸಿಕೊಳ್ಳಲು ಭಯೋತ್ಪಾದಕರಿಗೆ ಸಹಾಯ ಮಾಡುವುದಕ್ಕೆ ಜನರಿಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸುವುದಕ್ಕೆ ಟೀಕೆ ವ್ಯಕ್ತವಾದುದ್ದರಿಂದ ’ಮೃದು ಧೋರಣೆ’ಯನ್ನೂ ಅನುಸರಿಸಲಾಗಿತ್ತು. 2016ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಯ ಉಗ್ರ ಬುರ್ಹಾನ್‌ ವಾನಿ ಹತ್ಯೆಯಾದದ್ದು ರಾಷ್ಟ್ರದಾದ್ಯಂತ ಗಮನ ಸೆಳೆದಿತ್ತು. ‘2016ರ ಜೂನ್‌ ವರೆಗೆ ಎಲ್ಲವೂ ಸರಿಯಿತ್ತು. ಬುರ್ಹಾನ್‌ ವಾನಿ ಎನ್‌ಕೌಂಟರ್‌ ಪ್ರಕರಣ ಹಲವರನ್ನು ತನ್ನತ್ತ ಸೆಳೆಯಿತು. ಕೆಲವೇ ದಿನಗಳಲ್ಲಿ ಇಡೀ ದಕ್ಷಿಣ ಕಾಶ್ಮೀರದ ಬೀದಿಗಳಲ್ಲಿ ನಮ್ಮ ವಿರುದ್ಧ ಕಲ್ಲು ತೂರಾಟ ಸೇರಿದಂತೆ ಹಲವು ಹೋರಾಟಗಳು ಆರಂಭವಾದವು’ ಎಂದು ಅವರು ಹೇಳಿದರು.

ಇಲ್ಲಿನ ಜನರಿಗೆ ’ಆಜಾದಿ ದೂರವಿಲ್ಲ’ ಎಂಬ ಸಂದೇಶ ನೀಡಲಾಗುತ್ತಿದೆ. ಇದಕ್ಕಾಗಿ ಹಲವು ಜನರನನ್ನು ಮಂದೆ ತಳ್ಳಲಾಗುತ್ತಿದೆ. ನಮ್ಮ ಮೇಲೂ ನಿರಂತರವಾಗಿ ದಾಳಿಗಳನ್ನು ನಡೆಸಲಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲೇಬೇಕಿದೆ. ನಾವು ಎಲ್ಲವನ್ನೂ ಪಡೆಯಲಾಗದು. ಆಜಾದಿ ಸಾಧ್ಯವಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿದೆ’ ಎಂದಿದ್ದಾರೆ.

ಇಷ್ಟಕ್ಕೂ ಬುರ್ಹಾನ್‌ ವಾನಿ ಪ್ರಕರಣ ರಾಜ್ಯದಲ್ಲಾದ ಮೊದಲ ಎನ್‌ಕೌಂಟರ್‌ ಏನೂ ಅಲ್ಲ. ಹಾಗಿದ್ದರೂ ಜನರಲ್ಲಿ ಇಷ್ಟು ಆಕ್ರೋಶ ಮೂಡಲು ಏನು ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಲು ಇಂದಿಗೂ ಪ್ರಯತ್ನಿಸುತ್ತಿದ್ದೇನೆ.

‘ಈ ಸಮಸ್ಯೆಗೆ ಮಿಲಿಟರಿಯಿಂದ ಪರಿಹಾರ ಸಾಧ್ಯವಿಲ್ಲ. ರಾಜಕಾರಣಿಗಳು ಹಾಗೂ ರಾಜಕೀಯ ಪ್ರತಿನಿಧಿಗಳು ಜನರೊಂದಿಗೆ ಮಾತನಾಡಿ ಸಮಸ್ಯೆ ಬಗೆ ಹರಿಸಬೇಕಿದೆ’ ಎಂದು ವಿನಂತಿಸಿದ್ದಾರೆ.

‘ಬಂದೂಕು ಹಿಡಿದಿರುವ ಯುವಕರು, ಉಗ್ರರು ಸೇನೆಗೆ ದೊಡ್ಡ ಸವಾಲಾಗಲಾರರು. ಆದರೂ ಸೇನೆ ಪದೇ ಪದೇ ವಿನಂತಿಸಿಕೊಳ್ಳುತ್ತಿದೆ. ನಾಗರೀಕರ ಹತ್ಯೆ ತಡೆಯಲು ‘ಕಾರ್ಯಾಚರಣೆ ನಿಲ್ಲಿಸಲು ಸಿದ್ಧ’ ಎಂದು ಹೇಳುವ ರಾವತ್‌, ರಕ್ಷಣಾ ಪಡೆಗಳ ಮೇಲೆ ದಾಳಿಯಾಗುವುದಿಲ್ಲ ಎನ್ನುವುದನ್ನು ಯಾರು ಖಾತರಿಪಡಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

‘ಯುವಕರು ಐಎಸ್‌ ಉಗ್ರ ಸಂಘಟನೆಯ ಧ್ವಜಗಳಿಂದ ಪ್ರೇರೇಪಿತರಾಗುತ್ತಿದ್ದೀರಿ. ಅದರ ಅರ್ಥವೇನು ಎಂಬುದು ನಿಮಗೆ ಗೊತ್ತಿದೆಯೇ? ಕಾಶ್ಮೀರವನ್ನು ತಾಲಿಬಾನಿಗಳ ರಾಜ್ಯವಾಗಿಸಲು ಬಯಸುತ್ತೀರಾ? ಅಂತಹ ವಾತಾವರಣದಲ್ಲಿ ಬದುಕಲು ಬಯಸುತ್ತೀರಾ? ಎಂದೂ ಕಾಶ್ಮೀರಿ ಯುವಕರನ್ನು ಪ್ರಶ್ನಿಸಿದ್ದಾರೆ.

ರಾಜ್ಯವೂ ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಎನ್ನುವ ಅವರು, ‘ಶೀಘ್ರದಲ್ಲೇ ದೇಶದ ಉಳಿದ ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳು ಕಣಿವೆ ರಾಜ್ಯದಲ್ಲಿಯೂ ಸಂಚರಿಸಲಿವೆ. ಇದರಿಂದ ಜನರ ಬದುಕು ಬದಲಾಗಲಿದೆ. ಇಲ್ಲಿ ಬೆಳೆಯುವ ಸೇಬನ್ನು ದೇಶದ ಯಾವ ಭಾಗಕ್ಕಾದರೂ ಕಳುಹಿಸಬಹುದು. ಇಂತಹ ಬೆಳವಣಿಗೆಗಳನ್ನು ಗುರುತಿಸುವ ಹಾಗೂ ಅದಕ್ಕಾಗಿ ಕೃತಜ್ಞರಾಗಿರುವ ಪ್ರಕ್ರಿಯೆಗಳು ನಡೆಯಬೇಕು’ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry