ಶುಕ್ರವಾರ, ಮಾರ್ಚ್ 5, 2021
27 °C

‘ಕೇಪ್‌ ಟು ಕೈರೋ’ ಯಾನ

ಅಭಿಲಾಷ್ ಎಸ್‌.ಡಿ Updated:

ಅಕ್ಷರ ಗಾತ್ರ : | |

‘ಕೇಪ್‌ ಟು ಕೈರೋ’ ಯಾನ

‘ಮನೆಯಲ್ಲೇ ಕೂರುವುದಕ್ಕಿಂದ ಹೊರಗೆ ಹೋಗಿ ಏನಿದೆ ಎಂದು ನೋಡುವ ಸೊಗಸೇ ಬೇರೆ. ದಿನಕ್ಕೊಂದು ಜಾಗದಿಂದ ಪ್ರಯಾಣಕ್ಕೆ ಸಿದ್ಧತೆಮಾಡಿಕೊಳ್ಳುತ್ತಾ.. ನಿತ್ಯದ ಅಭ್ಯಾಸಗಳಿಂದ ಬಿಡಿಸಿಕೊಳ್ಳುತ್ತಾ ಸಾಗುವ ಅನುಭವವೇ ಬದುಕು ರೂಪಿಸುವ ಮಾರ್ಗದರ್ಶಿ’ ಎಂದು ಮಾತು ಆರಂಭಿಸಿದರು ಸಂದೇಶ್‌.

ಜಗತ್ತಿನ ಎಲ್ಲ ಸಂಸ್ಕೃತಿಗಳ ಬಗ್ಗೆ ತಿಳಿಯಬೇಕೆಂಬ ಹಂಬಲ ಹೊಂದಿರುವ ಸಂದೇಶ್ ತುರುವೇಕೆರೆ ಸಮೀಪದ ಗೊಟ್ಟಿಗೆರೆಯವರು. ಈ ಯಾನ ಮೋಹಿ 2016ರಲ್ಲಿ ಈಶಾನ್ಯ ರಾಜ್ಯಗಳನ್ನು ಒಂಟಿಯಾಗಿ ಸುತ್ತಿ ಬಂದಿದ್ದರು. ಸುಮಾರು 10 ಸಾವಿರ ಕಿ.ಮೀ ದೂರದ ಹಾದಿಯನ್ನು 40 ದಿನಗಳಲ್ಲಿ ಸವೆಸಿದ್ದ ಅವರು ಪ್ರವಾಸದ ಬಳಿಕ ‘ಈಶಾನ್ಯ ರಾಜ್ಯಗಳೆಂದರೆ ಗಲಭೆ ಪೀಡಿತ ಪ್ರದೇಶಗಳು’ ಎಂಬ ತಮ್ಮ ಭಾವನೆ ಬದಲಿಸಿಕೊಂಡಿದ್ದರು.

‘ಒಂದು ಸಮುದಾಯ ನೆಲೆಸಿರುವ ಪ್ರದೇಶವೆಂದ ಮೇಲೆ ಅಲ್ಲಿ ಸಾಮರಸ್ಯಕ್ಕೇನೂ ಕೊರತೆ ಇರದು’ ಎಂಬುದು ಮನವರಿಕೆಯಾಗಿತ್ತು.

ಏತಕ್ಕಾಗಿ ಈ ಯಾನ?

ಯುರೋಪಿನ ಯಾವುದೇ ಹಳ್ಳಿಯ ಮಾಹಿತಿಯನ್ನಾದರೂ ಕೂತಲ್ಲಿಗೇ ತಂದುಕೊಳ್ಳಬಹುದು. ಆದರೆ ಆಫ್ರಿಕಾ ದೇಶಗಳ ಕಥೆಯೇ ಬೇರೆ. ಈ ಕಾರಣಕ್ಕೆ ಸಂದೇಶ್ ಅವರಲ್ಲಿ ಮೊದಲಿನಿಂದಲೂ ಆಫ್ರಿಕಾ ಬಗ್ಗೆ ಕುತೂಹಲವಿತ್ತು.

ಈಗಾಗಲೇ ಈಶಾನ್ಯ ರಾಜ್ಯಗಳ ಅಲ್ಲಲ್ಲಿ ಬೈಕ್‌ ನಿಲ್ಲಿಸಿರುವ ಸಂದೇಶ್‌ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿನ ಪ್ರಯಾಣದ ಅನುಭವ ಪಡೆದು, ಆಫ್ರಿಕಾದಲ್ಲಿನ ಜನಜೀವನದ ಬಗ್ಗೆ ತಿಳಿಯಲು ಈ ಯಾನ ಆರಂಭಿಸಿದ್ದಾರೆ.

‘ಇದುವರೆಗೆ ದೇಶದೊಳಗೆಯೇ ಸುತ್ತಿಕೊಂಡಿದ್ದ ನನಗೆ ಮತ್ತೊಂದು ಖಂಡದಲ್ಲಿನ ಈ ಪ್ರಯಾಣ ವಿಶೇಷ ಅನುಭವ ನೀಡಲಿದೆ’ ಎನ್ನುವ ಸಂದೇಶ್, ₹ 8– ₹ 10 ಲಕ್ಷ ಪ್ರಯಾಣ ವೆಚ್ಚದ ಅಂದಾಜಿನಲ್ಲಿದ್ದಾರೆ. 2021ರ ವೇಳೆಗೆ ಇರಾನ್‌ನಿಂದ ಯುರೋಪಿನತ್ತ ಪ್ರಯಾಣಿಸುವ ಕನಸನ್ನೂ ಎಣೆದುಕೊಂಡಿದ್ದಾರೆ.

ಬಂಡಿ ಸಾಗುವ ಹಾದಿ

‘ಸಿಎಸ್‌ಜಿ ಇಂಟರ್‌ನ್ಯಾಷನಲ್‌’ ಎಂಬ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡಿಕೊಂಡಿರುವ ಸಂದೇಶ್, 90 ದಿನಗಳ ಸುದೀರ್ಘ ರಜೆ ಪಡೆದಿದ್ದಾರೆ.

ಡರ್ಬನ್‌ನಿಂದ ಏಪ್ರಿಲ್‌ 30 ರಂದು ಪ್ರಯಾಣ ಆರಂಭಿಸಿರುವ ಅವರು ಮೊದಲು ಕೇಪ್ ಟೌನ್ ತಲುಪಿ ಅಲ್ಲಿಂದ ಜಿಂಬಾಬ್ವೆ, ಝಾಂಬಿಯಾ, ತಾಂಜೇನಿಯಾ, ಕೆನ್ಯಾ, ಇಥಿಯೋಪಿಯಾ, ಸುಡಾನ್‌ ದೇಶಗಳಲ್ಲಿ ಸಾಗಿ ಈಜಿಪ್ಟ್‌ನ ಕೈರೋ ನಗರದಲ್ಲಿ ಪ್ರಯಾಣ ಕೊನೆಗೊಳಿಸಲಿದ್ದಾರೆ. ನಂತರ ವಿಮಾನದ ಮೂಲಕ ದೇಶಕ್ಕೆ ಮರಳಲಿದ್ದಾರೆ.

ಸುಮಾರು 12 ಸಾವಿರ ಕಿ.ಮೀ ಉದ್ದದ ಈ ದೂರವನ್ನು ಕ್ರಮಿಸಲು ಗರಿಷ್ಠ 85 ದಿನಗಳು ಬೇಕು. ‘ಗಡಿ ಪ್ರದೇಶಗಳಲ್ಲಿ ಕತ್ತಲಾದ ಮೇಲಿನ ಪ್ರಯಾಣ ತುಂಬಾ ಸವಾಲಿನದ್ದು. ಆದಷ್ಟೂ ಬೆಳಕಿದ್ದಾಗಲೇ ಪ್ರಯಾಣ ನಿಲ್ಲಿಸಬೇಕು’ ಎಂದೂ ತಿಳಿದಿರುವ ಸಂದೇಶ್, ಕೇವಲ 65 ದಿನಗಳೊಳಗೆ ಹಾದಿ ಸವೆಸುವ ಆಲೋಚನೆಯಲ್ಲಿದ್ದಾರೆ.

‘ಕೇಪ್ ಟು ಕೈರೋ’ ಎಂದೇ ಜನಪ್ರಿಯವಾಗಿರುವ ಈ ಮಾರ್ಗದಲ್ಲಿ ನಿತ್ಯ ಕನಿಷ್ಠ 360–400 ಕಿ.ಮೀ ವೇಗದಲ್ಲಿ ಚಕ್ರದೂಡಲಿದ್ದಾರೆ.

ಕಾಡದಿರಲಿ ಆಫ್ರಿಕಾ ‘ದಾಹ’

ಆಫ್ರಿಕಾದ ಹಲವು ನಗರಗಳಲ್ಲಿನ ‘ಜಲ ಕ್ಷಾಮ’ ಸದ್ಯ ವಿಶ್ವಮಟ್ಟದಲ್ಲಿ ದೊಡ್ಡ ಸುದ್ದಿಯಲ್ಲಿದೆ. ಬರೋಬ್ಬರಿ ಎರಡು ತಿಂಗಳ ಕಾಲ ಪ್ರಯಾಣಕ್ಕೆ ಪೂರ್ವಸಿದ್ಧತೆ ನಡೆಸಿರುವ ಸಂದೇಶ್ ಆಫ್ರಿಕಾದ ಬೇಸಿಗೆಯ ಬಗ್ಗೆಯೂ ತಿಳಿದಿದ್ದಾರೆ.

‘ಆಫ್ರಿಕಾದಲ್ಲಿನ ಬೇಸಿಗೆ ಇಲ್ಲಿಗಿಂತ ತುಸು ಹೆಚ್ಚಿನದು. ಡರ್ಬನ್‌ನಲ್ಲಿ ಬಾಟಲಿ ನೀರು ಕೊಳ್ಳುವವರಿಗೆ ಅಷ್ಟೇನೂ ತೊಂದರೆಯಿಲ್ಲವಾದರೂ, ಸುಡಾನ್‌ನಲ್ಲಿ ನೀರಿಗೆ ತೀವ್ರ ತೊಂದರೆಯಿದೆ. ಹೀಗಾಗಿ ಎಚ್ಚರ ವಹಿಸಿದ್ದೇನೆ. ಓಆರ್‌ಎಸ್‌ ಪೊಟ್ಟಣಗಳು ಸದಾ ನನ್ನೊಟ್ಟಿಗೆ ಇರಲಿವೆ' ಎನ್ನುತ್ತಾರೆ.

ತಂಗುದಾಣಗಳು..

ಕೇಪ್‌ಟೌನ್‌ನಲ್ಲಿ ಪರಿಚಯದವರ ಮನೆಯಲ್ಲಿ ಉಳಿಯಲಿರುವ ಸಂದೇಶ್‌, ಲೋನ್ಲಿ ಪ್ಲಾನೆಟ್‌(Lonely Planet) ವೆಬ್‌ಸೈಟ್‌ ತೋರಿದ ಮಾಹಿತಿ ಆಧರಿಸಿ ಪ್ರಯಾಣದುದ್ದಕ್ಕೂ ಸಿಗುವ ಹೋಟೆಲ್‌ಗಳ ಪಟ್ಟಿ ಮಾಡಿಕೊಂಡಿದ್ದಾರೆ. ಟ್ರಾವೆಲ್‌ ಬ್ಲಾಗ್‌ಗಳಿಂದಲೂ ಸಾಕಷ್ಟು ಮಾಹಿತಿ ಪಡೆದು ಪ್ರದೇಶಕ್ಕೊಂದು ಹೋಟೆಲ್‌ ಬುಕ್‌ ಮಾಡಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಕ್ಯಾಂಪ್‌ ಹಾಕಿಕೊಳ್ಳುವ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.

KTM duke 390 ಸಿದ್ಧತೆ

ಪ್ರಯಾಣಕ್ಕೆ ಬಳಸುತ್ತಿರುವ KTM duke 390 ಬೈಕ್‌ ಅನ್ನು ಏಪ್ರಿಲ್‌ 18 ರಂದೇ ಡರ್ಬನ್‌ಗೆ ಕಳುಹಿಸಲಾಗಿತ್ತು.

ಲಗೇಜ್‌ ಇಟ್ಟುಕೊಳ್ಳಲು ಹಾಗೂ ಬೈಕ್‌ಗೆ ಬೇಕಾಗುವ ಹೆಚ್ಚುವರಿ ಬಿಡಿ ಭಾಗಗಳನ್ನು ಹಾಗೂ ದುರಸ್ತಿ ಸಲಕರಣೆಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ರ‍್ಯಾಕ್‌ಗಳನ್ನು ಸಿದ್ಧ ಪಡಿಸಲಾಗಿದೆ.

ಫುಲ್ ಟ್ಯಾಂಕ್ ಇದ್ದರೆ 180ಕಿ. ಮೀ. ಸಾಗುವ ಬೈಕ್‌ನಲ್ಲಿ ಹೆಚ್ಚುವರಿಯಾಗಿ ತಲಾ 5 ಲೀ. ಸಾಮರ್ಥ್ಯದ ಎರಡು ಪೆಟ್ರೋಲ್‌ ಕ್ಯಾನ್‌ಗಳ ವ್ಯವಸ್ಥೆ ಮಾಡಲಾಗಿದೆ. 

**

ಆಫ್ರಿಕಾ ಕೂಡ ಸೇಫ್‌ ಏನೋ ಆಗುತ್ತೆ ಎಂಬ ಭಯದಲ್ಲಿದ್ದರೆ ಏನನ್ನೂ ಮಾಡಲಾಗದು. ಹಾಗಾಗಿ ಮನೆಯಿಂದ ಹೊರಟರೆ ಸಾಕು. ಎಂಥದೇ ವಾತಾವರಣಕ್ಕೂ ಹೊಗ್ಗಿಕೊಳ್ಳುವ ಶಕ್ತಿಯನ್ನು ಪ್ರಕೃತಿ ನಮಗೆ ನೀಡಿದೆ. ಬಣ್ಣ, ಭಾಷೆ, ಉಡುಗೆಯನ್ನು ಬಿಟ್ಟು ಪ್ರಪಂಚದ ಎಲ್ಲ ಭಾಗದ ಜನರ ಭಾವನೆಗಳಲ್ಲೂ ಸಾಮ್ಯತೆಯಿದೆ ಎಂಬುದು ಹಿಂದಿನ ಯಾನದಿಂದ ಮನವರಿಕೆಯಾಗಿದೆ. ಹಾಗಾಗಿ ಆಫ್ರಿಕಾ ಕೂಡ ಸೇಫ್‌

  –ಸಂದೇಶ್‌ ಗೊಟ್ಟಿಗೆರೆ ಶಿವರಾಜು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.