ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪರ್ಧಾ’ ತಾಣ ವಿಜಯನಗರ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ದಶಕದ ಹಿಂದೆ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗಳಿಗೆ ತಯಾರಿ ನಡೆಸಲು ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಆಕಾಂಕ್ಷಿಗಳು ದೆಹಲಿ, ಹೈದರಾಬಾದ್‌ಗೆ ತೆರಳುತ್ತಿದ್ದರು. ಆದರೆ ಈಗ ಯುಪಿಎಸ್‌ಸಿ, ಕೆಪಿಎಸ್‌ಸಿ, ವಿವಿಧ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ರಾಜ್ಯದ ಬಹುತೇಕ ಆಕಾಂಕ್ಷಿಗಳ ಆಯ್ಕೆ ಬೆಂಗಳೂರಿನ ವಿಜಯನಗರ.

ಈ ಅವಧಿಯಲ್ಲಿ ವಿಜಯನಗರ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ತಾಣವಾಗಿ (ಹಬ್‌) ಬೆಳೆದಿದೆ. ದೆಹಲಿಯ ‘ಓಲ್ಡ್‌ ರಾಜೇಂದ್ರ ನಗರ’, ಮುಖರ್ಜಿ ನಗರ, ಹೈದರಾಬಾದಿನ ‘ಮೈತ್ರಿವನಂ’ ಪ್ರದೇಶದಲ್ಲಿ ಹೇಗೆ ಅತ್ಯಧಿಕ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಿವೆಯೋ ಅದೇ ರೀತಿ ವಿಜಯನಗರದಲ್ಲಿಯೂ (ಸುಮಾರು 25) ಇವೆ. ಎಸ್‌ಡಿಎ, ಎಫ್‌ಡಿಎ, ಶಿಕ್ಷಕರ ನೇಮಕಾತಿ, ಕಾನ್‌ಸ್ಟೆಬಲ್‌, ಪಿಎಸ್‌ಐ, ಇಎಸ್‌ಐ, ರೈಲ್ವೆ, ಬ್ಯಾಂಕಿಂಗ್‌, ಕೆಎಎಸ್‌, ಐಎಎಸ್‌ಗೆ ತರಬೇತಿ ನೀಡುತ್ತಿವೆ.

ರಾಜ್ಯದ ನಾನಾ ಭಾಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಆಕಾಂಕ್ಷಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಪಿ.ಜಿಗಳೂ ಹೆಚ್ಚಾಗಿವೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹೋಟೆಲ್‌ಗಳು ಸೇರಿದಂತೆ ಹಲವು ಹೋಟೆಲ್‌ಗಳು ತೆರೆದಿವೆ. ಇವು ವಿಜಯನಗರದ  ಬೆಳವಣಿಗೆಗೂ ಕಾರಣವಾಗಿವೆ.

‘ಕೋಚಿಂಗ್‌ ಹಬ್‌’ ಆದದ್ದು ಹೇಗೆ: ವಿಜಯನಗರ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ತಾಣವಾಗಿ ಬೆಳೆಯುವುದಕ್ಕೆ ಬುನಾದಿ ಹಾಕಿದ್ದು ಯುನಿವರ್ಸಲ್‌ ಕೋಚಿಂಗ್‌ ಸೆಂಟರ್‌. ಉಪೇಂದ್ರ ಶೆಟ್ಟಿ ಅವರು 1999ರಲ್ಲಿ ಈ ಕೇಂದ್ರವನ್ನು ವಿಜಯನಗರದ ಮಾರೇನಹಳ್ಳಿಯಲ್ಲಿ ಆರಂಭಿಸಿದರು. ಈಗ ಇದು ಹಂಪಿನಗರದ ಅತ್ತಿಗುಪ್ಪೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಳಿಕ ಬಿ.ಎಸ್‌.ವಸಂತ ಕುಮಾರ್ ಅವರು ಮನುವನದ ಬಳಿ ಸ್ಪರ್ಧಾಚೈತ್ರ ತರಬೇತಿ ಕೇಂದ್ರವನ್ನು ಆರಂಭಿಸಿದರು.

ಇದೇ ಸಮಯದಲ್ಲಿ ವಿಜಯನಗರ ಮತ್ತು ಹಂಪಿನಗರದಲ್ಲಿ ಸುಸಜ್ಜಿತ ಮತ್ತು ಹೈಟೆಕ್‌ ಗ್ರಂಥಾಲಯಗಳನ್ನು ತೆರೆಯಲಾಯಿತು. ಈ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಯಿತು. ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಅಧ್ಯಯನ ಸಾಮಗ್ರಿಗಳು ಇಲ್ಲಿಡಲಾಯಿತು. ಇವು ಸ್ಪರ್ಧಾಕಾಂಕ್ಷಿಗಳನ್ನು ಕೈಬೀಸಿ ಕರೆದವು.

‘ಸ್ಪರ್ಧಾಚೈತ್ರ’ ಪ್ರಮುಖವಾಗಿ ಕನ್ನಡ ಮಾಧ್ಯಮದಲ್ಲಿ ತರಬೇತಿ ನೀಡಲು ಮುಂದಾಯಿತು. ಇದು ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳನ್ನು ಆಕರ್ಷಿಸಿತು. ಸ್ಪರ್ಧಾಚೈತ್ರದಲ್ಲಿ ಕೆಲಸ ಮಾಡುತ್ತಿದ್ದ ಜಿನೇಂದ್ರ ಅವರು, ‘ಜೈಸ್‌’ ತರಬೇತಿ ಸಂಸ್ಥೆ ಸ್ಥಾಪಿಸಿದರು.

ಇಲಾಖೆಗಳ ಸಹಕಾರ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ದೆಹಲಿ, ಹೈದರಾಬಾದಿನ ಕೆಲವು ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯಲು ಆಕಾಂಕ್ಷಿಗಳನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದವು. ಕ್ರಮೇಣ ಈ ಇಲಾಖೆಗಳು ವಿಜಯನಗರದಲ್ಲಿನ ತರಬೇತಿ ಸಂಸ್ಥೆಗಳಿಗೂ ಅಭ್ಯರ್ಥಿಗಳನ್ನು ಕಳುಹಿಸಿ, ಅವರ ಖರ್ಚು ವೆಚ್ಚವನ್ನು ಭರಿಸಿದವು. ಹೀಗೆ ಬಂದ ಪರೀಕ್ಷಾ ಆಕಾಂಕ್ಷಿಗಳು ಕ್ರಮೇಣ ತಮ್ಮ ಸ್ನೇಹಿತರು, ಬಂಧುಗಳನ್ನೂ ತರಬೇತಿಗಾಗಿ ವಿಜಯನಗರ ತರಬೇತಿ ಕೇಂದ್ರಗಳಿಗೆ ಹೋಗುವಂತೆ ಮಾಡಿದರು. ಅದರ ಪರಿಣಾಮ ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಅದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಸಂಖ್ಯೆಯೂ ಹೆಚ್ಚತೊಡಗಿದೆ.

ಸಾಧನೆಯ ಪ್ರೇರಣೆ: 2010ರ ನಂತರ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ರಾಜ್ಯದ ಅಭ್ಯರ್ಥಿಗಳ ಸಂಖ್ಯೆ 40 ದಾಟಿತು. 2014ರಲ್ಲಿ 54, 2016ರಲ್ಲಿ 55 ಅಭ್ಯರ್ಥಿಗಳು ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಯಾದರು. 2016ನೇ ಸಾಲಿನಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದ ಕೆ.ಆರ್‌.ನಂದಿನಿ ಕರ್ನಾಟಕದವರಾಗಿದ್ದು, ಅವರು ವಿಜಯನಗರದ ‘ಇನ್‌ಸೈಟ್‌ ಐಎಎಸ್‌’ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು. ಅಲ್ಲದೆ ಯುನಿವರ್ಸಲ್‌, ಜ್ಞಾನ ಗಂಗೋತ್ರಿ, ಸ್ಪರ್ಧಾಚೈತ್ರ ಸೇರಿದಂತೆ ವಿವಿಧ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದವರು ಐಎಎಸ್‌, ಕೆಎಎಸ್‌ ಹಾಗೂ ಇತರ ಹುದ್ದೆಗಳಿಗೆ ಆಯ್ಕೆಯಾದರು. ಇದು ಹೊಸ ಸ್ಪರ್ಧಾಕಾಂಕ್ಷಿಗಳನ್ನು ವಿಜಯನಗರದತ್ತ ಬರುವಂತೆ ಮಾಡಿದೆ.

‘ಸ್ಪರ್ಧಾ ವಿಜೇತ’ದ ಮುಖ್ಯಸ್ಥರಾದ ಡಾ.ಕೆ.ಎಂ.ಸುರೇಶ್‌ ಅವರು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಉಚಿತ ಕಾರ್ಯಾಗಾರಗಳನ್ನು ನಡೆಸಿ, ಆ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳನ್ನು ವಿಜಯನಗರದತ್ತ ಸೆಳೆಯುವಂತೆ ಮಾಡಿದ್ದಾರೆ. 2017ರ ಮಾರ್ಚ್‌ನಲ್ಲಿ ಡಾ. ರಾಜ್‌ಕುಮಾರ್‌ ಸಿವಿಲ್‌ ಸರ್ವಿಸ್‌ ಅಕಾಡೆಮಿಯೂ ಆರಂಭವಾಗಿದ್ದು, 200 ಆಕಾಂಕ್ಷಿಗಳಿಗೆ ವಿದ್ಯಾರ್ಥಿ ವೇತನ ನೀಡಿ ತರಬೇತಿ ನೀಡುತ್ತಿದೆ. ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ರಾಜ್ಯದ ಕೆಲವರು ಇಲ್ಲಿ ತರಬೇತಿ ಪಡೆದಿದ್ದಾರೆ.

ಇವೇ ಅಲ್ಲದೆ ಹರಿಪ್ರಸಾದ್‌ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಐಎಎಸ್‌ ಬಾಬಾ, ಶಂಕರ್‌ ಐಎಎಸ್‌ ಅಕಾಡೆಮಿ, ಅನಲಾಗ್‌, ಅನರ್ಘ್ಯ, ಎಎಲ್‌ಎಫ್‌ (ಆಲ್ಟರ್‌ನೆಟಿವ್‌ ಲರ್ನಿಂಗ್‌ ಸಿಸ್ಟಂ), ಕಾಪರ್‌ ಏಜ್‌, ಅನಾಲೆಸಿಸ್‌, ಅಮೋಘವರ್ಷ, ಹೊಸಬೆಳಕು ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಸ್ಟಡಿ ರೂಮ್‌ಗಳು: ದೆಹಲಿ, ಹೈದರಾಬಾದ್‌ಗಳಲ್ಲಿ ಇರುವಂತೆಯೇ ವಿಜಯನಗರದಲ್ಲಿಯೂ ಸ್ಪರ್ಧಾಕಾಂಕ್ಷಿಗಳಿಗೆ ಹಲವು ಅಧ್ಯಯನ ಕೊಠಡಿಗಳು (ಸ್ಟಡಿ ರೂಮ್‌) ತಲೆಯೆತ್ತಿವೆ. ದಿನದ 24 ಗಂಟೆಯೂ ತೆರೆದಿರುವ, ಹಗಲು ಹೊತ್ತಿನಲ್ಲಿ ತೆರೆದಿರುವ ಅಧ್ಯಯನ ಕೊಠಡಿಗಳು ಇಲ್ಲಿವೆ. 100 ಆಸನದಿಂದ 3000 ಆಸನ ವ್ಯವಸ್ಥೆ ಇರುವ ಸ್ಟಡಿ ರೂಮ್‌ಗಳಿವೆ. ಇಲ್ಲಿ ಆಕಾಂಕ್ಷಿಗಳು ತಾವೇ ಪುಸ್ತಕಗಳನ್ನು ತಂದು ಓದುವುದು, ಬರೆಯುವುದು ಮಾಡಿಕೊಳ್ಳಬಹುದು. ವಿಜಯನಗರದಲ್ಲಿ 20ಕ್ಕೂ ಹೆಚ್ಚು ಅಧ್ಯಯನ ಕೊಠಡಿಗಳಿವೆ. 

ಸಂಪನ್ಮೂಲ ವ್ಯಕ್ತಿಗಳು, ಫೇಲಾದವರ ನಡೆ

ಮೊದಲಿನಿಂದಲೂ ಜಯನಗರದಲ್ಲಿನ ಜೆಎಸ್‌ಎಸ್, ಮಲ್ಲೇಶ್ವರದ ರಾವ್ಸ್‌, ಕೃಷಿಕ್‌ ಸರ್ವೋದಯ ಪ್ರತಿಷ್ಠಾನದಲ್ಲಿ ಐಎಎಸ್‌ಗೆ ತರಬೇತಿ ನೀಡಲಾಗುತ್ತಿತ್ತು. ಇಲ್ಲೆಲ್ಲ ಹೆಚ್ಚಾಗಿ ಇಂಗ್ಲಿಷ್‌ ಮಾಧ್ಯಮದಲ್ಲಿಯೇ ತರಬೇತಿ ದೊರೆಯುತ್ತಿತ್ತು. ಚಾಮರಾಜಪೇಟೆಯ ಜ್ಞಾನಭಾರತಿ ಪರೀಕ್ಷಾ ಕೇಂದ್ರದಲ್ಲಿ ಐಎಎಸ್‌ನ ಕೆಲ ವಿಷಯಗಳು, ಕೆಎಎಸ್‌ಗೆ ಕನ್ನಡದಲ್ಲಿ ತರಬೇತಿ ದೊರೆಯುತ್ತಿತ್ತು. ಆದರೆ ಅಲ್ಲಿ ನಿಗದಿತ ಸಮಯದಲ್ಲಿ ಮಾತ್ರ ತರಗತಿಗಳು ನಡೆಯುತ್ತಿದ್ದವು.

ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಯು ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿತ್ತು. ಕನ್ನಡದಲ್ಲಿ ಸಂಪನ್ಮೂಲ ವ್ಯಕ್ತಿಗಳ ಕೊರತೆ ಹಾಗೂ ಅಧ್ಯಯನ ಸಾಮಗ್ರಿಗಳ ಕೊರತೆ ತೀವ್ರವಾಗಿತ್ತು. ಜ್ಞಾನ ಭಾರತಿ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದವರು ಹಾಗೂ ಯುಪಿಎಸ್‌ಸಿ, ಕೆಪಿಎಸ್‌ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಕಾಣದ ಕೆಲವರು ಒಬ್ಬೊಬ್ಬರಾಗಿಯೇ ತಮ್ಮದೇ ಆದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲು ಮುಂದಾದರು. ಇವರಲ್ಲಿ ಬಹುತೇಕರ ಆಯ್ಕೆ ವಿಜಯನಗರವೇ ಆಗಿತ್ತು ಎಂಬುದು ವಿಶೇಷ.

ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸವಾಲುಗಳು

* ವಿಷಯವಾರು ಸಂಪನ್ಮೂಲ ವ್ಯಕ್ತಿಗಳ ತೀವ್ರ ಕೊರತೆ ಇದೆ. ಕೆಲ ವಿಷಯಗಳಿಗೆ ಹೈದರಾಬಾದ್‌, ದೆಹಲಿಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಬೇಕಾಗಿದೆ.

* ಶೇ 18ರಷ್ಟು ಜಿಎಸ್‌ಟಿ ತೆರಬೇಕಾಗಿರುವ ಕಾರಣ ಸ್ಪರ್ಧಾಕಾಂಕ್ಷಿಗಳಿಗೆ ಹೊರೆಯಾಗುತ್ತಿದೆ.

* ಪೇಯಿಂಗ್‌ ಗೆಸ್ಟ್‌ಗಳಲ್ಲಿ(ಪಿ.ಜಿ) ಬಾಡಿಗೆ ದರ ಹೆಚ್ಚಾಗಿದೆ. ತರಬೇತಿ ಕೇಂದ್ರದ ಶುಲ್ಕ ಭರಿಸುವುದಕ್ಕಿಂತ ಪಿ.ಜಿ.ಗಳ ಬಾಡಿಗೆ ಭರಿಸುವುದೇ ಸ್ಪರ್ಧಾಕಾಂಕ್ಷಿಗಳಿಗೆ ಕಷ್ಟವಾಗಿದೆ.

**

ಐಎಎಸ್‌ ಪರೀಕ್ಷೆಯ ತರಬೇತಿಗೆ ದೆಹಲಿಗೆ ಹೋಗುವ ಅಗತ್ಯವಿಲ್ಲ. ವಿಜಯನಗರಕ್ಕೆ ಬಂದರೆ ಸಾಕು
  –ಉಪೇಂದ್ರ ಶೆಟ್ಟಿ, ಮುಖ್ಯಸ್ಥ, ಯುನಿವರ್ಸಲ್‌ ಕೋಚಿಂಗ್‌ ಸೆಂಟರ್‌

**

ಇಂಗ್ಲಿಷ್‌ ಜತೆಗೆ ಕನ್ನಡ ಮಾಧ್ಯಮದಲ್ಲಿಯೂ ತರಬೇತಿ ನೀಡುವ ಕೇಂದ್ರಗಳು ವಿಜಯನಗರದಲ್ಲಿವೆ</p>
 ಬಿ.ಎಸ್‌.ವಸಂತಕುಮಾರ್‌, ನಿರ್ದೇಶಕ, ಸ್ಪರ್ಧಾಚೈತ್ರ

**

ಇಲ್ಲಿರುವ ಉತ್ತಮ ಗ್ರಂಥಾಲಯ, ಅಧ್ಯಯನ ಸಾಮಗ್ರಿ, ಸ್ಟಡಿ ರೂಮ್‌ ಮತ್ತು ಗುಣಮಟ್ಟದ ಟೆಸ್ಟ್‌ ಸರಣಿಗಳು ಸ್ಪರ್ಧಾಕಾಂಕ್ಷಿಗಳನ್ನು ವಿಜಯನಗರದತ್ತ ಸೆಳೆಯುತ್ತಿವೆ
  ಗಾಯಿತ್ರಿ, ಶೈಕ್ಷಣಿಕ ಆಡಳಿತಾಧಿಕಾರಿ, ಜ್ಞಾನ ಗಂಗೋತ್ರಿ ತರಬೇತಿ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT