ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಕ: ಬಿಜೆಪಿಯನ್ನು ಪಾರು ಮಾಡುವುದೇ ಮೋದಿ ವರ್ಚಸ್ಸು?

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಪರೇಶ್ ಮೇಸ್ತಾ ನಿಗೂಢ ಸಾವು, ಗೋರಕ್ಷಣೆ ಹಾಗೂ ‘ಜಿಹಾದಿ’ ವಿಷಯಗಳ ಸುತ್ತ ಉತ್ತರ ಕನ್ನಡದಲ್ಲಿ ಬಿತ್ತಿ ಬೆಳೆದಿದ್ದ ಅಬ್ಬರ, ಚುನಾವಣೆಯ ಹೊತ್ತಿಗೆ ಅಡಗಿ ಹೋಯಿತೇ?

ಮಲೆನಾಡು, ಕರಾವಳಿ, ಅರೆಮಲೆನಾಡು, ಬಯಲುಸೀಮೆ ಎಲ್ಲವನ್ನೂ ಒಡಲಲ್ಲಿ ಅಡಗಿಸಿಕೊಂಡಿರುವ ಈ ಜಿಲ್ಲೆಯೊಳಗೊಂದು ಸುತ್ತು ಹಾಕಿದರೆ ಈ ಪ್ರಶ್ನೆಗೆ ಉತ್ತರ ಸಿಕ್ಕೀತು. ಮೇಸ್ತಾ ಸಾವಿಗೆ ಪರಿಹಾರ ನೀಡಿಕೆ ಕುರಿತು ತಾನು ಮಾಡಿದ ರಾಜಕಾರಣ, ತೋರಿದ ತೀವ್ರ ಮುಸ್ಲಿಂ ದ್ವೇಷಕ್ಕೆ ಕಿರೀಟ ಇಟ್ಟಂತೆ ಇದೀಗ ಚುನಾವಣಾ ಟಿಕೆಟ್ ಹಂಚಿಕೆಯಲ್ಲಿ ನಿಷ್ಠಾವಂತರನ್ನು ನಿರ್ಲಕ್ಷಿಸಿ ಮುಗ್ಗರಿಸಿದೆ ಬಿಜೆಪಿ. ಟಿಕೆಟ್ ವಂಚಿತ ಬಿಜೆಪಿ ಆಕಾಂಕ್ಷಿಗಳು ಪಕ್ಷಕ್ಕೆ ಮುಳುವಾಗಲಿದ್ದಾರೆ. ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರೆ, ಉಳಿದವರು ಒಳಗೊಳಗೇ ಹಲ್ಲು ಮಸೆದಿದ್ದಾರೆ.

ಪರಿಣಾಮವಾಗಿ ಕಾರವಾರ, ಶಿರಸಿ, ಹಳಿಯಾಳ, ಕುಮಟಾ, ಭಟ್ಕಳ ಹಾಗೂ ಯಲ್ಲಾಪುರದ ಆರಕ್ಕೆ ಆರೂ ಸೀಟುಗಳು ತನ್ನ ಕೈ ತಪ್ಪಿದರೆ, ಕೇಸರಿ ಪಕ್ಷ ತನ್ನನ್ನು ತಾನೇ ದೂಷಿಸಿಕೊಳ್ಳಬೇಕು. ಇಲ್ಲವಾದರೆ ನರೇಂದ್ರ ಮೋದಿಯವರ ವರ್ಚಸ್ಸೇ ಕೈ ಹಿಡಿದು ಕಾಪಾಡಬೇಕು. ಆದರೆ ಅವರು ಹಾಲಿ ಚುನಾವಣೆಯಲ್ಲಿ ಈ ಜಿಲ್ಲೆಯತ್ತ ಮುಖ ಮಾಡಲೇ ಇಲ್ಲ. ಮೋದಿ ಈ ಭಾಗಕ್ಕೆ ಬಾರದಿದ್ದರೂ, ಅವರ ಕುರಿತ ಆಸಕ್ತಿ, ಅಭಿಮಾನ ಇಲ್ಲಿ ಒಡೆದು ಕಾಣುತ್ತವೆ. ನಿಗೂಢ ಸಾವಿಗೀಡಾದ ಪರೇಶ್ ಮೇಸ್ತಾ ಮನೆಗೆ ಭೇಟಿ ನೀಡಿದ್ದು ಬಿಟ್ಟರೆ, ಬಿಜೆಪಿಯ ಅಮಿತ್ ಶಾ ಈ ಜಿಲ್ಲೆಯಲ್ಲಿ ತಿರುಗಾಡಲಿಲ್ಲ. ಸೋಲು ಅಥವಾ ಗೆಲುವಿನ ಹೊಣೆಯನ್ನು ಸಂಪೂರ್ಣವಾಗಿ, ಇದೇ ಜಿಲ್ಲೆಗೆ ಸೇರಿದ ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆ ಅವರಿಗೆ ಬಿಟ್ಟಂತೆ ತೋರುತ್ತದೆ.

ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಸಲ ಕಠಿಣ ಸ್ಪರ್ಧೆ ಎದುರಿಸಿದ್ದಾರೆ. ಕಾಂಗ್ರೆಸ್ ಎದುರಾಳಿ ಭೀಮಣ್ಣ ನಾಯಕ ನಾಮಧಾರಿ, ಸರಳ ವ್ಯಕ್ತಿ. ಹಲವು ಸಲ ಟಿಕೆಟ್ ವಂಚಿತ ಎಂಬ ಸಹಾನುಭೂತಿ ಅವರ ಪರವಾಗಿ ಕೆಲಸ ಮಾಡಿದೆ. ಜಾತ್ಯತೀತ ಜನತಾದಳದ ಅಭ್ಯರ್ಥಿ ಶಶಿಭೂಷಣ ಹೆಗಡೆ ಸಾಧಾರಣ ಪ್ರತಿಸ್ಪರ್ಧಿಯಲ್ಲ. ರಾಮಕೃಷ್ಣ ಹೆಗಡೆಯವರ ಅಣ್ಣ ಗಣೇಶ ಹೆಗಡೆಯವರ ಮೊಮ್ಮಗ. ಕುಮಟಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋತವರು ಅವರು. ಭೀಮಣ್ಣ-ಶಶಿಭೂಷಣ ನಡುವೆ ನೇರ ಸ್ಪರ್ಧೆ ಏರ್ಪಟ್ಟರೂ ಅಚ್ಚರಿಯಿಲ್ಲ ಎನ್ನುವ ಸ್ಥಿತಿ ಇದೆ.

ಈ ಸಲ ಕಾಂಗ್ರೆಸ್ಸಿನಲ್ಲಿ ದೇಶಪಾಂಡೆ ಬಣ ಮತ್ತು ಮಾರ್ಗರೆಟ್ ಆಳ್ವ ಬಣ ಇಲ್ಲದಿರುವುದು ಬಿಜೆಪಿಯ ಮತ್ತೊಂದು ದುರದೃಷ್ಟ. ಇಬ್ಬರು ಮುಂದಾಳುಗಳ ಗುದ್ದಾಟದಲ್ಲಿ ಮೂರನೆಯವರು ಲಾಭ ಪಡೆಯುತ್ತಿದ್ದರು. ಒಂದು ಬಣದವರು ಇನ್ನೊಂದು ಬಣದ ಅಭ್ಯರ್ಥಿಯನ್ನು ಸೋಲಿಸಲು ಎದುರಾಳಿ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡಿರುತ್ತಿದ್ದ ಸ್ಥಿತಿ ಇಲ್ಲ. ಜಾತ್ಯತೀತ ಜನತಾದಳ ಪುನಃ ಒಂದೆರಡು ಸ್ಥಾನ ಗೆಲ್ಲುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಕುಮಟಾ ಒಂದರಲ್ಲೇ ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮಠಾಧೀಶರೊಬ್ಬರ ಆಶೀರ್ವಾದ ಪಡೆದು ಬಂದೆನೆಂದು ಸಾರಿದ ನಂತರ ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಆ ಮಠದ ವಿರುದ್ಧದ ಗುಂಪು ತಿರುಗಿ ಬಿದ್ದಿದೆ. ಮತ್ತೊಂದು ಕ್ಷೇತ್ರದಲ್ಲಿ, ಪರೇಶ್ ಮೇಸ್ತಾ ಗಲಭೆಯಲ್ಲಿ ಜೈಲಿಗೆ ಹೋದ ಎಪ್ಪತ್ತಕ್ಕೂ ಹೆಚ್ಚು ಹುಡುಗರ ಜಾಮೀನು ರದ್ದಾದ ಬೆಳವಣಿಗೆ ಆ ಪಕ್ಷದ ಅಭ್ಯರ್ಥಿಗೆ ಲಾಭ ಗಳಿಸಿ ಕೊಟ್ಟಿಲ್ಲ. ಕೇಂದ್ರ ಸಚಿವರೊಬ್ಬರ ಬೆಂಬಲವೂ ಈ ಅಭ್ಯರ್ಥಿಗೆ ಲಭ್ಯವಿಲ್ಲ.

ಅನಂತಕುಮಾರ ಹೆಗಡೆ ನೇರಾನೇರ ಮುಸಲ್ಮಾನರ ಮೇಲಿನ ವಾಗ್ದಾಳಿಗೆ ಹೆಸರುವಾಸಿಯಾಗಿ ತಮ್ಮದೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಭಟ್ಕಳದಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯನ್ನು ತಂಝೀಮ್‌ ಸಂಸ್ಥೆ ಬೆಂಬಲಿಸುತ್ತಿತ್ತು. ಈ ಸಲ ಅಲ್ಲಿಯ ಮುಸ್ಲಿಮರು ಕಾಂಗ್ರೆಸ್ಸಿಗೆ ಬೆಂಬಲ ನೀಡಿರುವುದು ಇಡೀ ಜಿಲ್ಲೆಯವರಿಗೆ ನೀಡಿರುವ ಸ್ಪಷ್ಟ ಪರೋಕ್ಷ ಸಂದೇಶ ಎಂದೇ ಬಗೆಯಲಾಗಿದೆ.

ಅಡಗಿರುವಂತೆ ಕಾಣುವ ಹಿಂದುತ್ವದ ಅಂಜಿಕೆ ಹಳಿಯಾಳದಲ್ಲಿ ಕಾಂಗ್ರೆಸ್ ತಲೆಯಾಳು ಆರ್.ವಿ.ದೇಶಪಾಂಡೆಯವರನ್ನೂ ಬಿಟ್ಟಿಲ್ಲ. ಅವರದೊಂದು ಇಳಿಹೊತ್ತಿನ ಬಹಿರಂಗ ಸಭೆ. ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನರಲ್ಲಿ ಮುಸ್ಲಿಮರು, ಸಿದ್ದಿಗಳು ಎದ್ದು ಕಾಣುತ್ತಿದ್ದರು.

ದಿನದ 24 ತಾಸು ದುಡಿದರೂ ನಿಮ್ಮ ಋಣ ತೀರಿಸುವುದು ಸಾಧ್ಯವಿಲ್ಲ ಎಂದು ಮತದಾರರನ್ನು ಪುಸಲಾಯಿಸಿದ ದೇಶಪಾಂಡೆ, ಬಿಜೆಪಿಯ ರಾಮಮಂದಿರ ರಾಜಕಾರಣ ಮತ್ತು ಮೋದಿಯವರ ಈಡೇರದ ಭರವಸೆಗಳ ಮೇಲೆ ದಾಳಿ ನಡೆಸುತ್ತಾರೆ. ಅದಕ್ಕೆ ಮುನ್ನ ತಾವೂ ರಾಮಭಕ್ತರೆಂದು ಪೀಠಿಕೆ ಹಾಕುತ್ತಾರೆ. ‘ನಾನು ರಘುನಾಥ ರಾವ್, ನಾನು ರಾಮಭಕ್ತ, ನಾನು ಶಿವಭಕ್ತ, ನಾನು ತುಳಜಾ ಭವಾನಿಯ ಭಕ್ತ... ರಾಮನಿಗೆ ಗುಡಿ ಕಟ್ಟುತ್ತೇವೆಂದು ಹೇಳಿದವರು ಎಲ್ಲಿ ಹೋದರು... ಸಂಗ್ರಹಿಸಿದ ಇಟ್ಟಿಗೆ, ಹಣದ ಲೆಕ್ಕವನ್ನು ಜನ ಅವರಿಂದ ಕೇಳಬೇಕು’ ಎಂದು ಆಗ್ರಹಿಸುತ್ತಾರೆ. ಚುನಾವಣಾ ರಾಜಕೀಯದಲ್ಲಿ ದಶಕಗಳಿಂದ ಪಳಗಿರುವ ದೇಶಪಾಂಡೆ ಈ ಸಂಗತಿಯನ್ನು ಅರಿಯದವರೇನೂ ಅಲ್ಲ. ಮೆದು ಹಿಂದುತ್ವಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ರಾಜಕಾರಣವನ್ನೂ ಅವರು ಬಲ್ಲರು. ಮಠಗಳನ್ನು ಎದುರು ಹಾಕಿಕೊಳ್ಳದೆ ರಾಜಕಾರಣ ನಡೆಸುತ್ತಾ ಬಂದವರು.

ಜಿಹಾದಿಗಳ ಸಸಿತೋಟ ಎಂದೇ ಬಿಜೆಪಿ ಬಣ್ಣಿಸುತ್ತಾ ಬಂದಿರುವ ಭಟ್ಕಳದಲ್ಲಿ ತಂಝೀಮ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ತನ್ನ ಸಮುದಾಯಕ್ಕೆ ಆದೇಶ ನೀಡಿದೆ. ಇಂತಹ ಬಹಿರಂಗ ಕರೆಯು ಹಿಂದೂಗಳ ತಿರುಗೇಟಿಗೂ ದಾರಿ ಮಾಡತೊಡಗಿದೆ. ಜಾತ್ಯತೀತ ಜನತಾದಳದ ಅಭ್ಯರ್ಥಿ ಕಡೆಯ ಗಳಿಗೆಯಲ್ಲಿ ತಮ್ಮ ನಾಮಪತ್ರ ವಾಪಸು ಪಡೆದಿದ್ದಾರೆ.

ಈ ನಡುವೆ, ನಿಜವಾಗಿಯೂ ಚುನಾವಣಾ ವಿಷಯಗಳಾಗಬೇಕಿದ್ದ ಸಂಗತಿಗಳು ಎಂದಿನಂತೆ ಹಿನ್ನೆಲೆಗೆ ಸರಿದಿವೆ. ಕೈಗಾರಿಕೆಗಳು ತಲೆಯೆತ್ತದೆ ನಿರುದ್ಯೋಗ ವಿಷಮಿಸಿದೆ. ಉದ್ಯೋಗವನ್ನರಸಿ ನೆರೆಯ ಗೋವಾಕ್ಕೆ ಧಾವಿಸುವವರ ಸಂಖ್ಯೆ ನಿತ್ಯ ಏರತೊಡಗಿದೆ. ಕಾರವಾರದಿಂದ ನಸುಕಿನಲ್ಲೇ ಟ್ರೇನು ಭರ್ತಿ ಜನ ಗೋವಾಕ್ಕೆ ಹೋಗಿ ರಾತ್ರಿ ಮರಳುತ್ತಾರೆ. ಅರಣ್ಯಭೂಮಿ ಅತಿಕ್ರಮಣವನ್ನು ಸಕ್ರಮಗೊಳಿಸದೇ ಇರುವ ಸಮಸ್ಯೆ ಬೃಹದಾಕಾರಕ್ಕೆ ಬೆಳೆದಿದೆ. ನೀಡಬೇಕಿರುವ ಪಟ್ಟಾಗಳ ಸಂಖ್ಯೆ 70 ಸಾವಿರಕ್ಕೂ ಹೆಚ್ಚು. ನೀಡಿರುವ ಪಟ್ಟಾಗಳ ಸಂಖ್ಯೆ ಸಾವಿರವನ್ನೂ ಮೀರಿಲ್ಲ. ಅಡವಿ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆ ಇಲ್ಲ. ಮೀನುಗಾರರ ಸಮಸ್ಯೆಗಳನ್ನು ಕೇಳುವವರಿಲ್ಲ. ಇಲ್ಲಿ ಹಿಡಿದ ಮೀನಿಗೆ ಸೂಕ್ತ ಮಾರುಕಟ್ಟೆಗಳಿಲ್ಲ. ಮೀನು ಸಂಸ್ಕರಣಾ ಘಟಕಗಳಿಲ್ಲ. ಎಲ್ಲವನ್ನೂ ಗೋವಾಕ್ಕೆ, ಕೇರಳಕ್ಕೆ ಕಳಿಸಲಾಗುತ್ತಿದೆ. ಹಾಲಕ್ಕಿ ಒಕ್ಕಲಿಗ ಮತ್ತು ಕುಣಬಿ ಬುಡಕಟ್ಟುಗಳ ಮೂಗಿಗೆ ಪರಿಶಿಷ್ಟ ಪಂಗಡ ಸ್ಥಾನಮಾನದ ಭರವಸೆಯ ತುಪ್ಪ ಸವರಿ ಕೂರಿಸಲಾಗಿದೆ. ಈ ವಿಷಯಗಳನ್ನು ಎತ್ತುವ ಏಕೈಕ ಪಕ್ಷ ಸಿಪಿಎಂನ ಅಭ್ಯರ್ಥಿ ಯಮುನಾ ಗಾಂವಕರ್ ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ನಡೆದ ಕಾವೇರಿದ ಚರ್ಚೆ ಚುನಾವಣೆಯ ಹೊತ್ತಿನಲ್ಲಿ ತಣ್ಣಗಾಗಿದೆ. ಅಧಿಕಾರಸ್ಥರ ಕಿಸೆ ತುಂಬಿಸುವ ರಸ್ತೆ-ಸೇತುವೆ- ಕಟ್ಟಡಗಳ ನಿರ್ಮಾಣಗಳೇ ಅಭಿವೃದ್ಧಿಯ ಮಾನದಂಡಗಳಾಗಿಬಿಟ್ಟಿವೆ.

ಚತುರ ರಾಜಕಾರಣಿಗಳು ನೇಯ್ದ ಬಲೆಗೆ ಮತದಾರರು ಕಣ್ಣು ಮುಚ್ಚಿ ಬೀಳತೊಡಗಿರುವುದು ಮತ್ತೊಂದು ದುರಂತ. ಕಾರವಾರ ಹೊರವಲಯದ ಹಳ್ಳಿಗಳು, ರಾಜಕೀಯ ಪಕ್ಷಗಳು ನಡೆಸುವ ಕಡೆಯ ಗಳಿಗೆಯ ಹಣ ಹಂಚಿಕೆಗೆ ಬಾಯಿ ತೆರೆದು ಕುಳಿತಿರುವುದು ಕಠೋರ ಸತ್ಯ. ರಾತ್ರಿ ವೇಳೆ ನಡೆಯುವ ಹಳ್ಳಿಗರ ಸಭೆಗಳು ಹಣ ಹಂಚಿಕೆಯನ್ನು ಆಧರಿಸಿ ಯಾರಿಗೆ ಮತ ನೀಡುವುದೆಂದು ತೀರ್ಮಾನಿಸುತ್ತವೆ. ಮನೋಜ್ ಅಂಬಿಗೇರ್, ಅರ್ಜುನ್ ಕಲುಟ್ಕರ್, ನಾಗೇಶ್ ಸೈಲ್ ಮುಂತಾದ ಅನೇಕರು ಈ ಸಂಗತಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಳ್ಳಲು ಹಿಂಜರಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT