ಬಸವಣ್ಣ, ನಾರಾಯಣ ಗುರು ವಿಕಾಸದ ಮಾದರಿ ಬೇಕು: ಜಿಗ್ನೇಶ್‌ ಮೆವಾನಿ ಅಭಿಮತ

7

ಬಸವಣ್ಣ, ನಾರಾಯಣ ಗುರು ವಿಕಾಸದ ಮಾದರಿ ಬೇಕು: ಜಿಗ್ನೇಶ್‌ ಮೆವಾನಿ ಅಭಿಮತ

Published:
Updated:
ಬಸವಣ್ಣ, ನಾರಾಯಣ ಗುರು ವಿಕಾಸದ ಮಾದರಿ ಬೇಕು: ಜಿಗ್ನೇಶ್‌ ಮೆವಾನಿ ಅಭಿಮತ

ಬೆಂಗಳೂರು: ‘ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಮೋದಿ ಹಾಗೂ ಯೋಗಿ ಆದಿತ್ಯನಾಥ ಅವರ ಸರ್ಕಾರದ ಮಾದರಿ ಬೇಡ. ಬದಲಾಗಿ ಕೇರಳದ ನಾರಾಯಣ ಗುರು ಹಾಗೂ ಬಸವಣ್ಣನವರ ವಿಕಾಸದ ಮಾದರಿ ಬೇಕಾಗಿದೆ‘ ಎಂದು ಗುಜರಾತಿನ ಶಾಸಕ ಜಿಗ್ನೇಶ್‌ ಮೆವಾನಿ ಹೇಳಿದರು.

‘ಸಂವಿಧಾನದ ಉಳಿವಿಗಾಗಿ ಕರ್ನಾಟಕ’ ಗುರುವಾರ ಆಯೋಜಿಸಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ‘ಕಾನೂನಾತ್ಮಕ ರಾಜ್ಯ ಬೇಕೋ, ಜಂಗಲ್‌ ರಾಜ್ಯ ಬೇಕೋ ಎನ್ನುವುದನ್ನು ಜನ ತೀರ್ಮಾನಿಸಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಪೊಲೀಸ್‌ ರಾಜ್ಯ ನಡೆಯುತ್ತಿದೆ. ಅಮಾಯಕರ ಮೇಲೆ ನಿರಂತರ ಎನ್‌ಕೌಂಟರ್‌ ನಡೆಯುತ್ತಿದೆ. ಯೋಗಿ ಮುಖ್ಯಮಂತ್ರಿ ಆದಮೇಲೆ ಇದುವರೆಗೆ 2,000 ಎನ್‌ಕೌಂಟರ್‌ಗಳು ನಡೆದಿವೆ. ದಲಿತರು, ಮುಸ್ಲಿಮರು, ಬಡವರ ಮೇಲೆ ಕಾರಣವೇ ಇಲ್ಲದೆ ಹಲ್ಲೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಇಂಥ ದುರಾಡಳಿತ ನಡೆಸುತ್ತಿರುವ ಯೋಗಿ ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರ ಮಾಡುತ್ತಿರುವುದು ವಿಪರ್ಯಾಸ’ ಎಂದರು.

ಜೆಡಿಎಸ್‌ ಕೂಡ ಬಿಜೆಪಿ ಹಾದಿಯಲ್ಲೇ ನಡೆಯುತ್ತಿದೆ. ಕರ್ನಾಟಕದ ಪ್ರಜ್ಞಾವಂತ ಮತದಾರರು ಯೋಚಿಸಿ ಮತ ಹಾಕಬೇಕು ಎಂದರು.

‘ರೆಡ್‌ ಅಲರ್ಟ್‌– ದೇಶ ಆಪತ್ತಿನಲ್ಲಿ’ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು. ಸಾಮಾಜಿಕ ಕಾರ್ಯಕರ್ತ ನದೀಂ ಖಾನ್‌, ನ್ಯಾಷನಲ್‌ ಲಾ ಸ್ಕೂಲ್‌ನ ಪ್ರಾಧ್ಯಾಪಕ ಕ್ಷಿತಿಜ್‌ ಅರಸ್‌, ಕರ್ನಾಟಕ ಜನ ಆರೋಗ್ಯ ಚಳವಳಿಯ ಅಖಿಲಾ ವಾಸನ್‌ ಇದ್ದರು.

'ಯು.ಪಿ ಮಾದರಿ ಕರ್ನಾಟಕಕ್ಕೆ ಬೇಡ’

ಗೋರಖ್‌ಪುರ ಆಸ್ಪತ್ರೆಯಲ್ಲಿ ಮಕ್ಕಳ ಸರಣಿ ಸಾವಿನ ಆರೋಪದಡಿ ಎಂಟು ತಿಂಗಳು ಜೈಲು ವಾಸ ಅನುಭವಿಸಿದ್ದ ವೈದ್ಯ ಖಫಿಲ್‌ ಖಾನ್‌ ತಮ್ಮ ನೋವಿನ ಕ್ಷಣಗಳನ್ನು ಹಂಚಿಕೊಂಡರು.

‘ವಿದ್ಯಾಭ್ಯಾಸ, ವೈದ್ಯ ವೃತ್ತಿ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ 12 ವರ್ಷ ಇದ್ದೆ. ಸುಳ್ಳು ಆರೋಪ ಮಾಡಿ ನನ್ನನ್ನು ಜೈಲಿಗೆ ಹಾಕಿದಾಗ, ಕರ್ನಾಟಕದ ಜನ ನನ್ನ ಪರವಾಗಿ ನಿಂತರು. ಉತ್ತರ ಪ್ರದೇಶದ ಸರ್ಕಾರ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿತು. ಈಗಲೂ ಅಲ್ಲಿ ವರ್ಷಕ್ಕೆ ಸಾವಿರಾರು ಮಕ್ಕಳು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಯೂ ಇಲ್ಲ’ ಎಂದರು.

‘ಕರ್ನಾಟಕಕ್ಕೆ ಇಂಥ ಸರ್ಕಾರ ಬೇಡ. ಪಕ್ಷೇತರರೇ ಆದರೂ ಸರಿ. ಯೋಗ್ಯ ವ್ಯಕ್ತಿಗೆ ಮತ ಹಾಕಿ, ಸಂವಿಧಾನ ಉಳಿಸಿ‘ ಎಂದು ಹೇಳಿದರು.

‘ಮಾಲ್ಕು ನಿಮಿಷ ಮಾತನಾಡಿ ಸಾಕು’

‘ನೀವೇ ಭರವಸೆ ನೀಡಿದಂತೆ ನಾಲ್ಕೂವರೆ ವರ್ಷದಲ್ಲಿ 9 ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಭ್ರಷ್ಟಾಚಾರ ನಿಯಂತ್ರಿಸುತ್ತೇವೆ ಎಂದಿದ್ದಿರಿ. ಬ್ಯಾಂಕ್‌ ಮೂಲಕ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆಯಿತಲ್ಲ. ರೈತರ ಆತ್ಮಹತ್ಯೆ ನಿಲ್ಲಿಸುತ್ತೇನೆ ಎಂದಿದ್ದಿರಿ. ಇಂದಿಗೂ ಸಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರಲ್ಲ. ಕಾನೂನಿನ ನಿಯಮವೇ ಅಂತಿಮ ಅಂದಿದ್ದಿರಿ. ಈಗ ಸಂವಿಧಾನ ಬದಲಿಸುತ್ತೇನೆ ಎನ್ನುತ್ತಿದ್ದೀರಿ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಕನಿಷ್ಠ ನಾಲ್ಕು ನಿಮಿಷ ಮಾತನಾಡಿ ನೋಡೋಣ’ ಎಂದು ಮೋದಿ ಅವರಿಗೆ ಜಿಗ್ನೇಶ್‌ ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry