ಚುನಾವಣೆ: ಬಸ್‌ ಪ್ರಯಾಣ ದರ ದುಪ್ಪಟ್ಟು

7
ಸಾರಿಗೆ ನಿಗಮಗಳ ದರವೂ ಹೆಚ್ಚಳ: ರೈಲು ಸೀಟುಗಳು ಬಹುತೇಕ ಭರ್ತಿ

ಚುನಾವಣೆ: ಬಸ್‌ ಪ್ರಯಾಣ ದರ ದುಪ್ಪಟ್ಟು

Published:
Updated:
ಚುನಾವಣೆ: ಬಸ್‌ ಪ್ರಯಾಣ ದರ ದುಪ್ಪಟ್ಟು

ಬೆಂಗಳೂರು: ನಗರದಲ್ಲಿ ವಾಸವಾಗಿರುವ ಹೊರ ಜಿಲ್ಲೆಗಳ ಜನರು ಮತದಾನ ಮಾಡಲು ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ. ಇದರಿಂದಾಗಿ ಬಸ್‌ಗಳ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಬಂದಿದ್ದು, ಲಾಭದ ಆಸೆಗೆ ಬಿದ್ದಿರುವ ಖಾಸಗಿ ಕಂಪನಿಗಳು ಪ್ರಯಾಣ ದರವನ್ನು ಏಕಾಏಕಿ ದುಪ್ಪಟ್ಟು ಮಾಡಿವೆ.

ಮೇ 12ರಂದು ಮತದಾನ ನಡೆಯಲಿದ್ದು, ಅದಕ್ಕೂ ಮೊದಲು ಟಿಕೆಟ್‌ ಮುಂಗಡ ಕಾಯ್ದಿರಿಸುವಿಕೆಗೆ ಹೆಚ್ಚಿನ ಬೇಡಿಕೆ ಬಂದಿದೆ.

ಕಂಪನಿಗಳ ಕಚೇರಿ, ಏಜೆನ್ಸಿ ಹಾಗೂ ಹಲವು ಜಾಲತಾಣಗಳಲ್ಲಿ ಬಸ್‌ಗಳ ಸೀಟು ಕಾಯ್ದಿರಿಸುವಿಕೆ ಪ್ರಕ್ರಿಯೆ ಬಿರುಸುಗೊಂಡಿದೆ. ರಾಜಧಾನಿಯಿಂದ ಹೊರಗಿನ ಊರುಗಳಿಗೆ ಹೋಗುವ ಬಸ್‌ಗಳ ದರ ಸಾಮಾನ್ಯ ದಿನಗಳಲ್ಲಿ ಕನಿಷ್ಠ ₹500 ಹಾಗೂ ಗರಿಷ್ಠ ₹ 1,300 ಇರುತ್ತಿತ್ತು. ಈಗ ಕನಿಷ್ಠ ₹1,050 ಹಾಗೂ ಗರಿಷ್ಠ ₹2,800ಕ್ಕೆ ಏರಿಕೆ ಆಗಿದೆ. ಮತದಾನ ಮಾಡಲೇ ಬೇಕು ಎನ್ನುತ್ತಿರುವ ಪ್ರಯಾಣಿಕರು, ದರದ ಬಗ್ಗೆ ತಲೆಕೆಡಿಸಿಕೊಳ್ಳದೆ ಸೀಟುಗಳನ್ನು ಕಾಯ್ದಿರಿಸುತ್ತಿದ್ದಾರೆ.

‘ಹಕ್ಕು ಚಲಾಯಿಸಲೇ ಬೇಕು ಎಂಬ ಹಟವಿದೆ. ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗುತ್ತಿತ್ತು. ಈ ಬಾರಿ ಮತದಾನ ದಿನದಂದೇ ದುಬಾರಿ ಮಾಡಲಾಗಿದೆ’ ಎಂದರು ಖಾಸಗಿ ಕಂಪನಿ ಉದ್ಯೋಗಿ ಪ್ರವೀಣ್‌..

ಬಹುತೇಕ ಸೀಟುಗಳು ಭರ್ತಿ: ಬೆಂಗಳೂರಿನಿಂದ ಧಾರವಾಡ, ಕಲಬುರ್ಗಿ, ಕೊಪ್ಪಳ, ಮಂಗಳೂರು, ವಿಜಯಪುರ, ಬೆಳಗಾವಿ ಸೇರಿದಂತೆ ಹಲವು ನಗರ

ಗಳಿಗೆ ಹೊರಡುವ ಖಾಸಗಿ ಬಸ್‌ಗಳ ಬಹುತೇಕ ಸೀಟುಗಳು ಈಗಾಗಲೇ ಭರ್ತಿ ಆಗಿವೆ.

‘ನಗರದಲ್ಲಿ 25ಕ್ಕೂ ಹೆಚ್ಚು ಖಾಸಗಿ ಕಂಪನಿಗಳಿದ್ದು, 9 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿವೆ. ಅವೆಲ್ಲ ಬಸ್‌ಗಳ ಸೀಟುಗಳು ಭರ್ತಿಯಾಗುವ ಸಾಧ್ಯತೆ ಇದೆ. ಹೆಚ್ಚುವರಿ ಬಸ್‌ಗಳ ಅಗತ್ಯ ಬಿದ್ದರೆ, ಹೊರ ರಾಜ್ಯಗಳಿಂದ ತರಿಸಲಿದ್ದೇವೆ’ ಎಂದರು.

ಸಾರಿಗೆ ನಿಗಮದ ದರವೂ ಹೆಚ್ಚಳ: ಕೆಎಸ್‌ಆರ್‌ಟಿಸಿ ನಿಗಮದ 8,796 ಬಸ್‌ಗಳ ಪೈಕಿ 4 ಸಾವಿರ ಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ಕಳುಹಿಸಿದೆ. ಉಳಿದ ಬಸ್‌ಗಳನ್ನಷ್ಟೇ ಪ್ರಯಾಣಿಕರ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.

ಜತೆಗೆ, ಕೆಲ ಮಾರ್ಗಗಳಲ್ಲಿ ವಿಶೇಷ ಬಸ್‌ಗಳನ್ನು ಓಡಿಸಲು ನಿಗಮ ತೀರ್ಮಾನಿಸಿದೆ. ಆದರೆ, ಅವುಗಳ ಪ್ರಯಾಣ ದರವನ್ನು ಶೇ 15ರಿಂದ 20ರಷ್ಟು ಹೆಚ್ಚಳಮಾಡಲಾಗಿದೆ.

ರೈಲು ಸೀಟುಗಳೂ ಭರ್ತಿ: ‘ನಗರದಿಂದ ಹೊರ ಜಿಲ್ಲೆಗಳಿಗೆ ಹೋಗುವ ರೈಲುಗಳ ಸೀಟುಗಳು ಸಹ ಭರ್ತಿ ಆಗಿವೆ. ಪ್ರತಿ ರೈಲಿನಲ್ಲೂ 200ರಿಂದ 300ರಷ್ಟು ಮಂದಿ ಹೆಸರುಗಳು ಕಾಯ್ದಿರಿಸಿದ ಪಟ್ಟಿಯಲ್ಲಿವೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕರ್ತವ್ಯಕ್ಕೆ 80 ಸಾವಿರ ವಾಹನ

ಚುನಾವಣೆ ಕರ್ತವ್ಯಕ್ಕೆ 80 ಸಾವಿರ ವಾಹನಗಳ ಅಗತ್ಯವಿದ್ದು, ಆಯೋಗವು ಈಗಾಗಲೇ 74 ಸಾವಿರ ವಾಹನಗಳ ವ್ಯವಸ್ಥೆ ಮಾಡಿಕೊಂಡಿದೆ.

‘40 ಸಾವಿರ ಸರ್ಕಾರಿ ವಾಹನಗಳು ಹಾಗೂ 40 ಸಾವಿರ ಖಾಸಗಿ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲು ಆಯೋಗ ತೀರ್ಮಾನಿಸಿದೆ. ಅಂದುಕೊಂಡಷ್ಟು ಸರ್ಕಾರಿ ವಾಹನಗಳು ಲಭ್ಯವಾಗಿವೆ. ಆದರೆ, ಖಾಸಗಿಯವರಿಂದ 34 ಸಾವಿರ ವಾಹನಗಳು ಮಾತ್ರ ಸಿಕ್ಕಿವೆ. 6 ಸಾವಿರ ವಾಹನಗಳ ಕೊರತೆ ಇದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry