ಲಾಲುಗೆ ಪೆರೋಲ್

ರಾಂಚಿ: ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಮೂರು ದಿನಗಳ ಪೆರೋಲ್ ನೀಡಲಾಗಿದೆ ಎಂದು ಜೈಲಿನ ಇನ್ಸ್ ಪೆಕ್ಟರ್ ಜನರಲ್ ಹರ್ಷ ಮಾಂಗ್ಲಾ ತಿಳಿಸಿದರು.
ಲಾಲು ಪ್ರಸಾದ್ ಹಿರಿಯ ಮಗ ತೇಜ್ ಪ್ರತಾಪ್ ಮದುವೆ ಆರ್‌ಜೆಡಿ ಶಾಸಕ ಚಂದ್ರಿಕಾ ರೈ ಮಗಳ ಜತೆ ಮೇ 12ಕ್ಕೆ ನಿಗದಿಯಾಗಿದೆ.
*
ರಾಮ್‌ದೇವ್ ಪುಸ್ತಕಕ್ಕೆ ತಡೆ
ನವದೆಹಲಿ (ಪಿಟಿಐ): ಯೋಗ ಗುರು ಬಾಬಾ ರಾಮ್‌ದೇವ್ ಜೀವನ ಕುರಿತ ಪುಸ್ತಕ ಪ್ರಕಟಣೆ ಹಾಗೂ ಮಾರಾಟದ ಮೇಲಿನ ನಿಷೇಧವನ್ನು ದೆಹಲಿ ಹೈಕೋರ್ಟ್ ಮುಂದುವರಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ಪುಸ್ತಕ ಪ್ರಕಟಣೆ ಮತ್ತು ಮಾರಾಟದ ಮೇಲೆ ಅಧೀನ ನ್ಯಾಯಾಲಯ ಹೇರಿದ್ದ ನಿಷೇಧವನ್ನು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ತೆರವುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಬಾಬಾ ರಾಮ್‌ದೇವ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಆರ್.ಕೆ.ಗೌಬಾ, ನಿಷೇಧವನ್ನು ಮುಂದುವರಿಸಿ ಗುರುವಾರ ಮಧ್ಯಂತರ ಆದೇಶ ಹೊರಡಿಸಿದರು.
*
‘ಬಿಡುಗಡೆ ಪ್ರಯತ್ನ’
ನವದೆಹಲಿ (ಪಿಟಿಐ): ಅಫ್ಗಾನಿಸ್ತಾನದಲ್ಲಿ ಅಪಹರಣಕ್ಕೆ ಒಳಗಾಗಿರುವ ಏಳು ಮಂದಿ ಭಾರತೀಯ ಎಂಜಿನಿಯರ್‌ಗಳ ಬಿಡುಗಡೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಆದರೆ, ನಿರ್ದಿಷ್ಟವಾಗಿ ಯಾವ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು. ‘ಇದು ಸೂಕ್ಷ್ಮ ವಿಷಯವಾಗಿರುವ ಕಾರಣ ಹೆಚ್ಚಿನ ವಿವರ ನೀಡುವುದಿಲ್ಲ’ ಎಂದರು.
*
ತನಿಖೆಗೆ ಆಗ್ರಹ
ಕಣ್ಣೂರು (ಪಿಟಿಐ): ಮಾಹೆಗೆ ಸಮೀಪದ ಪಲ್ಲೂರ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತನ ಕೊಲೆ ಪ್ರಕರಣ ಸಂಬಂಧ ಎಸ್‌ಐಟಿ ರಚಿಸಿ ತನಿಖೆ ನಡೆಸುವಂತೆ ಪುದುಚೇರಿ ಸರ್ಕಾರವನ್ನು ಸಿಪಿಎಂ ಒತ್ತಾಯಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.