ಸೋಮವಾರ, ಮಾರ್ಚ್ 1, 2021
31 °C

ಆನೆಗಳ ರಕ್ಷಣೆಗೆ ಜೇನ್ನೊಣದ ಝೇಂಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಆನೆಗಳ ರಕ್ಷಣೆಗೆ ಜೇನ್ನೊಣದ ಝೇಂಕಾರ

ಗುವಾಹಟಿ: ಕಾಡಿನಲ್ಲಿ ಮತ್ತು ಕಾಡಿನ ಸಮೀಪದಲ್ಲಿರುವ ರೈಲು ಹಳಿಗಳಲ್ಲಿ ರೈಲು ಸಾಗುವಾಗ ಅದಕ್ಕೆ ಆನೆಗಳು ಸಿಕ್ಕಿ ಸಾಯುವುದು ದೊಡ್ಡ ಸಮಸ್ಯೆ. ಇಂತಹ ಅಪಘಾತಗಳನ್ನು ತಡೆಯುವುದಕ್ಕೆ ಈಶಾನ್ಯ ಗಡಿ ರೈಲ್ವೆ (ಎನ್‌ಎಫ್‌ಆರ್‌) ಕೈಗೊಂಡ ಉಪಾಯ ಫಲ ಕೊಟ್ಟಿದೆ. ಜೇನ್ನೊಣದ ಝೇಂಕಾರದ ಸದ್ದನ್ನು ಅಂತರ್ಜಾಲದಿಂದ ಡೌನ್‌ಲೋಡ್‌ ಮಾಡಿ ಇಂತಹ ರೈಲು ಹಳಿಗಳ ಸಮೀಪ ಹಾಡಿಸಿದ್ದರಿಂದ ಆನೆಗಳು ಹತ್ತಿರ ಬರುವುದನ್ನು ತಡೆಯಲು ಸಾಧ್ಯವಾಗಿದೆ.

ಎನ್‌ಎಫ್‌ಆರ್‌ ವ್ಯಾಪ್ತಿಯಲ್ಲಿ ನಾಲ್ಕು ಆನೆ ವಲಯಗಳಿವೆ. ಈ ವಲಯಗಳಲ್ಲಿ ಆನೆಗಳು ಹಳಿ ದಾಟುವ ಸ್ಥಳಗಳಲ್ಲಿ ಜೇನ್ನೊಣದ ಝೇಂಕಾರದ ಸದ್ದನ್ನು ಬಳಸಿಕೊಳ್ಳಲಾಗುತ್ತಿದೆ. ಪರಿಣಾಮವಾಗಿ ರೈಲಿಗೆ ಸಿಕ್ಕಿ ಆನೆಗಳು ಸಾಯುವುದು ಗಣನೀಯವಾಗಿ ಕಡಿಮೆಯಾಗಿದೆ.

2017ರ ಕೊನೆಯಲ್ಲಿ ಈ ತಂತ್ರವನ್ನು ಅನುಸರಿಸಲಾಯಿತು. ಅದರ ಬಳಿಕ ಅಲ್ಲಿ ರೈಲಿಗೆ ಸಿಕ್ಕು ಸತ್ತ ಆನೆಗಳ ಸಂಖ್ಯೆ ಆರು ಮಾತ್ರ. 2013ರಲ್ಲಿ 19 ಆನೆಗಳು ಸತ್ತಿದ್ದವು. 2014ರಲ್ಲಿ ಮಾತ್ರ ಈ ಸಂಖ್ಯೆ ಐದರಷ್ಟು ಕಡಿಮೆ ಇತ್ತು. 2015ರಲ್ಲಿ 12, 2016ರಲ್ಲಿ 9 ಮತ್ತು 2017ರಲ್ಲಿ 10 ಆನೆಗಳು ಸತ್ತಿದ್ದವು.

‘ಮೊದಲಿಗೆ ರಣಿಂಗ್ಯಾ ವಿಭಾಗದಲ್ಲಿ ಇದನ್ನು ಅಳವಡಿಸಲಾಯಿತು. ಅಲ್ಲಿನ ಯಶಸ್ಸಿನ ಆಧಾರದಲ್ಲಿ ಎಲ್ಲ ವಿಭಾಗಗಳಲ್ಲಿಯೂ ಅದನ್ನು ಅನುಸರಿಸಲಾಗಿದೆ. ಆರು ತಿಂಗಳ ಹಿಂದಷ್ಟೇ ಇದು ಆರಂಭವಾಗಿದೆ’ ಎಂದು ಎನ್‌ಎಫ್‌ಆರ್‌ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಲೋಕೇಶ್‌ ನಾರಾಯಣ್‌ ಅವರು ತಿಳಿಸಿದ್ದಾರೆ.

ಕೆನ್ಯಾದಲ್ಲಿ ಜೇನುಗೂಡುಗಳನ್ನೇ ಬಳಸಿ ಆನೆಗಳನ್ನು ದೂರ ಇರಿಸಲು ಪ್ರಯತ್ನಿಸಲಾಗುತ್ತದೆ. ಅಲ್ಲಿ ರೈಲು ಹಳಿ ಸಮೀಪದ ಬೇಲಿಗೆ ಜೇನುಗೂಡುಗಳನ್ನು ತೂಗಿ ಬಿಡುತ್ತಾರೆ. ಆನೆಗಳು ಬೇಲಿಯನ್ನು ಸ್ಪರ್ಶಿಸಿದರೆ, ಅದು ಅಲುಗಾಡುವುದರಿಂದ ಜೇನುನೊಣಗಳು ಎಚ್ಚರಗೊಳ್ಳುತ್ತವೆ. ಆಗ ಅವುಗಳ ಝೇಂಕಾರವನ್ನು ಕೇಳಿ ಆನೆಗಳು ದೂರ ಸರಿಯುತ್ತವೆ.

ವೇಗ ಮಿತಿ

ಆನೆಗಳು ಮತ್ತು ಇತರ ಪ್ರಾಣಿಗಳು ರೈಲಿಗೆ ಸಿಕ್ಕಿ ಸಾಯುವುದನ್ನು ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 109 ಕಿ.ಮೀ. ಉದ್ದದ ಹಳಿಯಲ್ಲಿ 49 ಕಡೆಗಳಲ್ಲಿ ವೇಗ ಮಿತಿ ವಿಧಿಸಲಾಗಿದೆ.

ಚಾಲಕನಿಗೆ ಮಾಹಿತಿ

ಅರಣ್ಯ ಅಧಿಕಾರಿಗಳ ವಾಟ್ಸ್‌ಆ್ಯಪ್‌ ಗುಂಪು ಮಾಡಿಕೊಂಡು ಹಳಿ ಸಮೀಪ ಪ್ರಾಣಿಗಳು ಕಂಡರೆ ತಕ್ಷಣವೇ ರೈಲು ಚಾಲಕನಿಗೆ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ. ಆ ಮಾಹಿತಿ ದೊರೆತ ತಕ್ಷಣ ಚಾಲಕ ಎಚ್ಚರಿಕೆ ವಹಿಸುತ್ತಾನೆ.

ಹೆಚ್ಚು ಪರಿಣಾಮಕಾರಿ

ಈ ಹಿಂದೆ ಮೆಣಸಿನ ಬಾಂಬ್‌, ಬೇಲಿಗೆ ವಿದ್ಯುತ್‌ ಹರಿಸುವುದು ಮುಂತಾದ ತಂತ್ರಗಳನ್ನು ಹಿಂದೆ ಬಳಸಲಾಗಿತ್ತು. ಆದರೆ, ಅವುಗಳಿಗೆ ಹೋಲಿಸಿದರೆ ಜೇನ್ನೊಣದ ಸದ್ದು ಹೆಚ್ಚು ಮಿತವ್ಯಯಕರ ಮತ್ತು ಹೆಚ್ಚು ಪ‍ರಿಣಾಮಕಾರಿ ಎಂದು ಎನ್‌ಎಫ್‌ಆರ್‌ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.