‘ಪೆಟ್ರೋಲಿಯಂ ಕೋಕ್ ನಿಷೇಧ ಜೂನ್ 30ರೊಳಗೆ ನಿರ್ಧರಿಸಿ’

ನವದೆಹಲಿ: ಪೆಟ್ರೋಲಿಯಂ ಕೋಕ್ ಆಮದು ನಿಷೇಧಿಸುವ ಕುರಿತು ಜೂನ್ 30ರೊಳಗೆ ನಿರ್ಣಯ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಆದೇಶಿಸಿದೆ.
ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಕೆಯಾಗುವ ಈ ಪೆಟ್ರೋಲಿಯಂ ಕೋಕ್‌ನಿಂದ ಅತಿಯಾದ ಮಾಲಿನ್ಯವಾಗುತ್ತದೆ. ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ಇದರ ಬಳಕೆ ಮತ್ತು ಮಾರಾಟವನ್ನು ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್‌ನಲ್ಲಿ ನಿಷೇಧಿಸಿದೆ. ಪೆಟ್ರೋಲಿಯಂ ಕೋಕ್ ಬಳಕೆ ನಿಷೇಧಿಸುವುದನ್ನು ಪರಿಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಏಪ್ರಿಲ್‌ನಲ್ಲಿ ಸುಪ್ರೀಂಗೆ ತಿಳಿಸಿತ್ತು.
ದೆಹಲಿಯಲ್ಲಿ ಅನುಷ್ಠಾನಗೊಳಿಸಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದಿಂದ ಜನರು ‘ಸಂಕಷ್ಟ’ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ವಾಯು ಶುದ್ಧೀಕರಣ ಕಾರ್ಯಕ್ರಮವನ್ನು (ಎನ್‌ಸಿಎಪಿ) ಮೊದಲು ದೆಹಲಿಯಲ್ಲಿ ಅನುಷ್ಠಾನಕ್ಕೆ ತರುವ ಕುರಿತು ಸರ್ಕಾರ ಪರಿಶೀಲಿಸಬೇಕು. ಎಂದು ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
‘ನೀವು ಸಾಕಷ್ಟು ಯೋಜನೆಗಳನ್ನು ಹೊಂದಿದ್ದೀರಿ. ದೆಹಲಿಯಲ್ಲಿಯೇ ನಿಮಗೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿಲ್ಲ. ಬದಲಿಗೆ ಇಡೀ ದೇಶದ ಕುರಿತು ಮಾತನಾಡುತ್ತೀರಿ’ ಎಂದು ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಗಳ ಪರವಾಗಿ ವಾದ ಮಂಡಿಸುತ್ತಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್. ನಾಡಕರ್ಣಿ ಅವರಿಗೆ ಪೀಠ ಹೇಳಿದೆ.
ಎನ್‌ಸಿಪಿಎ ದೇಶದ 100 ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಿಸುವ ಗುರಿ ಹೊಂದಿದೆ. ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿನ ವಾಯುಮಾಲಿನ್ಯ (ಎನ್‌ಸಿಆರ್) ಕುರಿತು ಪರಿಸರವಾದಿ ಎಂ.ಸಿ. ಮೆಹ್ತಾ ಅವರು 1985ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಆಲಿಸುತ್ತಿತ್ತು.
ದೆಹಲಿ–ಎನ್‌ಸಿಆರ್ ವಲಯದಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಕೈಗೊಳ್ಳಲಾದ ಸಮಗ್ರ ಕ್ರಿಯಾ ಯೋಜನೆಯ ಕೆಲವು ಅಂಶಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಸಮಗ್ರ ವರದಿಯನ್ನು ಇನ್ನು ನಾಲ್ಕು ವಾರಗಳ ಒಳಗಾಗಿ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ನಾಡಕರ್ಣಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.