ಕಾಂಗ್ರೆಸ್ ಮುಖಂಡನ ಮೇಲೆ‌ ಬಿಜೆಪಿ ಕಾರ್ಯಕರ್ತರಿಂದ ದಾಳಿ: ಕೊಲೆ ಯತ್ನ ಆರೋಪ

7

ಕಾಂಗ್ರೆಸ್ ಮುಖಂಡನ ಮೇಲೆ‌ ಬಿಜೆಪಿ ಕಾರ್ಯಕರ್ತರಿಂದ ದಾಳಿ: ಕೊಲೆ ಯತ್ನ ಆರೋಪ

Published:
Updated:
ಕಾಂಗ್ರೆಸ್ ಮುಖಂಡನ ಮೇಲೆ‌ ಬಿಜೆಪಿ ಕಾರ್ಯಕರ್ತರಿಂದ ದಾಳಿ: ಕೊಲೆ ಯತ್ನ ಆರೋಪ

ಮಂಗಳೂರು: ಸಚಿವ ಬಿ.ರಮಾನಾಥ ರೈ ಅವರ ಆಪ್ತರೂ ಆಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಅವರ ಮನೆ ಮೇಲೆ ಗುರುವಾರ ರಾತ್ರಿ ದಾಳಿ ಮಾಡಿರುವ ಬಿಜೆಪಿ ಕಾರ್ಯಕರ್ತರ ಗುಂಪು ಪೂಜಾರಿ ದಂಪತಿ ಮೇಲೆ ಹಲ್ಲೆ ನಡೆಸಿದೆ. ಕಾರುಗಳ ಮೇಲೆ ಕಲ್ಲು ಎತ್ತಿಹಾಕಿ ಹಾನಿಗೊಳಿಸಿದ್ದು, ಮನೆಗೂ ಹಾನಿ ಮಾಡಿದೆ.

ಗುರುವಾರ ರಾತ್ರಿ 11.30ರ ಸುಮಾರಿಗೆ ಬಂಟ್ವಾಳ ಸಮೀಪದ ಮೆಲ್ಕಾರ್ ನಲ್ಲಿ ಘಟನೆ ನಡೆದಿದೆ. ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಘಟಕದ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ನೇತೃತ್ವದ ಗುಂಪು ತಮ್ಮ ಕೊಲೆಗೆ ಯತ್ನಿಸಿದೆ ಎಂದು ಸಂಜೀವ ಪೂಜಾರಿ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದೆ. ಸಂಜೀವ ಪೂಜಾರಿ, ಅವರ ಪತ್ನಿ ಮತ್ತು ಕೆಲವು ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ನಡೆದಿದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಕುರಿತು ' ಪ್ರಜಾವಾಣಿ' ಜೊತೆ ಮಾತನಾಡಿದ ‌ಸಂಜೀವ ಪೂಜಾರಿ, ' ರಾತ್ರಿ 11.30ರ ಸುಮಾರಿಗೆ ನಾನು ಕಾಂಗ್ರೆಸ್ ಕಚೇರಿಯಿಂದ ವಾಪಸು ಬಂದೆ. ಸ್ನೇಹಿತರು ನನ್ನನ್ನು ಮನೆಗೆ ಬಿಡಲು ಕಾರಿನಲ್ಲಿ ಬಂದಿದ್ದರು. ನಾನು ಮನೆಯ ಒಳಗೆ ಹೋಗುತ್ತಿದ್ದಂತೆ ದಾಳಿ ಮಾಡಿದ‌ ಶ್ರೀಕಾಂತ್ ಶೆಟ್ಟಿ ನೇತೃತ್ವದ ಗುಂಪು ಕಿಟಕಿ ಗಾಜುಗಳನ್ನು ಒಡೆದು ದಾಂಧಲೆ‌ ಮಾಡಿತು' ಎಂದರು.

ಆರೋಪಿಗಳು ಬಿಎಂಡಬ್ಲ್ಯು ಸೇರಿದಂತೆ ಎರಡು ಕಾರುಗಳ ಮೇಲೆ ಕಲ್ಲು ಎತ್ತಿ ಹಾಕಿ ಪುಡಿ ಮಾಡಿದರು. ತಡೆಯಲು ಬಂದ ಸ್ನೇಹಿತರನ್ನು ಅವರ ಕಾರಿನಿಂದ ಹೊರಕ್ಕೆ ಎಳೆದು ಹಲ್ಲೆ ಮಾಡಿದರು. ಅವರನ್ನು ಬಿಡಿಸಲು ಬಂದ ಪತ್ನಿ ವಸಂತಿ ಮೇಲೂ ಹಲ್ಲೆ ಮಾಡಿದರು ಎಂದರು.

' ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದಾಗ ನಾನು ತಡೆಯಲು ಬಂದೆ. ಆಗ ನನ್ನನ್ನು ಮನೆಯಿಂದ ಹೊರಕ್ಕೆ ಎಳೆದು ಹಲ್ಲೆ ಮಾಡಿದರು. ಪೊಲೀಸರಿಗೆ ಮಾಹಿತಿ ತಲುಪುತ್ತಿದ್ದಂತೆ ಪರಾರಿಯಾದರು. ನಮ್ಮನ್ನು ಕೊಲೆ ಮಾಡುವುದಕ್ಕಾಗಿಯೇ ಅವರು ಬಂದಿದ್ದರು' ಎಂದು ಹೇಳಿದರು.

ಶ್ರೀಕಾಂತ್ ಶೆಟ್ಟಿ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. ಇತ್ತೀಚೆಗೆ ಬಿಜೆಪಿ ಸೇರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry