ಗಾಳಿ- ಮಳೆ: ಧರೆಗುರುಳಿದ ಮರ

7
ಜಿಲ್ಲೆಯ ವಿವಿಧೆಡೆ ಅಬ್ಬರಿಸಿದ ವರುಣ

ಗಾಳಿ- ಮಳೆ: ಧರೆಗುರುಳಿದ ಮರ

Published:
Updated:
ಗಾಳಿ- ಮಳೆ: ಧರೆಗುರುಳಿದ ಮರ

ಬೆಳಗಾವಿ: ನಗರದಲ್ಲಿ ಗುರುವಾರ ಸಂಜೆ ಸುಮಾರು ಒಂದೂವರೆ ಗಂಟೆ ರಭಸದ ಮಳೆಯಾಯಿತು. ಮಳೆಯ ಜೊತೆ ಜೋರಾದ ಗಾಳಿ ಬೀಸಿದ್ದರಿಂದ ಮರಗಳು ಧರೆಗುರುಳಿವೆ.

ಕೆಲವು ಕಡೆ ಮರಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಬೆಳಗಾವಿ ಅಲ್ಲದೇ  ಬಸವನ ಕುಡಚಿ, ಶಿಂದೊಳ್ಳಿ, ಪಂತ ಬಾಳೇಕುಂದ್ರಿ, ನಿಪ್ಪಾಣಿ, ಹುಕ್ಕೇರಿ, ಕಿತ್ತೂರು ಹಾಗೂ ಯಮಕನಮರಡಿಯಲ್ಲಿ ಮಳೆಯಾಗಿದೆ. 

ಮಧ್ಯಾಹ್ನ 3.30 ಸುಮಾರಿಗೆ ಮಳೆ ಆರಂಭವಾಯಿತು. ನಿಧಾನ ಗತಿಯಲ್ಲಿ ಆರಂಭವಾದ ಮಳೆ ನಂತರ ತೀವ್ರವಾಯಿತು. ಇಲ್ಲಿನ ಶ್ರೀನಗರ, ಮಹಾಂತೇಶ ನಗರ, ರುಕ್ಮಿಣಿ ನಗರ ಹಾಗೂ ಕ್ಯಾಂಪ್‌ ಪ್ರದೇಶದಲ್ಲಿ ಸುಮಾರು 7ರಿಂದ 8 ಬೃಹದಾಕಾರದ ಮರಗಳು ಬಿದ್ದಿವೆ. ಮಹಾಂತೇಶ ನಗರದಲ್ಲಿ ಮರ ಬಿದ್ದಿದ್ದರಿಂದ ಟಂಟಂ ನಜ್ಜುಗುಜ್ಜಾಗಿದೆ.

ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆಯನ್ನು ಪಾಲಿಕೆಯ ಸಿಬ್ಬಂದಿ ಹಾಗೂ ಹೆಸ್ಕಾಂ ಸಿಬ್ಬಂದಿ ತಕ್ಷಣವೇ ಆರಂಭಿಸಿದರು. ಜೆಸಿಬಿ ಯಂತ್ರಗಳನ್ನು ಬಳಸಿದರು. ಗರಗಸ ಹಾಗೂ ಕೊಡಲಿ ಬಳಸಿ ಮರಗಳ ರಂಬೆ, ಕೊಂಬೆಗಳನ್ನು ಕತ್ತರಿಸಿದರು. ವಾಹನ ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಿದರು. ಕ್ಯಾಂಪ್‌ ಪ್ರದೇಶದಲ್ಲಿ ಬೃಹದಾಕಾರದ ಮರ ಬಿದ್ದಿದ್ದರಿಂದ ಟ್ರಾನ್ಸ್‌ಫಾರ್ಮರ್‌ ಹಾನಿಗೊಳಗಾಗಿದೆ. ಇದರಿಂದ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ವಿದ್ಯುತ್‌ ತಂತಿಗಳನ್ನು ದುರಸ್ತಿ ಮಾಡಲು ಹೆಸ್ಕಾಂ ಸಿಬ್ಬಂದಿ ತೊಡಗಿದ್ದರು. ತಡರಾತ್ರಿಯವರೆಗೆ ದುರಸ್ತಿ ಕಾರ್ಯ ಮಂದುವರಿಯಿತು.

ತಂಪೆರೆದ ಮಳೆ: ಕಳೆದ 2–3 ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿತ್ತು. ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರಿಗೆ ಮಳೆ ತಂಪೆರೆಯಿತು. ಮಳೆಯ ನೀರು ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯಿತು. ಹೊಲ ಗದ್ದೆಗಳಲ್ಲಿ ಮಳೆಯ ನೀರು ಹರಿದು, ಕೃಷಿ ಹೊಂಡ ತುಂಬಿಸಿದವು. ಕೆರೆ, ಬಾವಿಗಳಲ್ಲಿ ನೀರು ಹರಿಯಿತು.

ಹಿರೇಬಾಗೇವಾಡಿ, ಅಥಣಿ, ಬೈಲಹೊಂಗಲ, ಎಂ.ಕೆ.ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry