ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ತೆರೆ

7
ಕ್ಷೇತ್ರಗಳಲ್ಲೇ ಬೀಡುಬಿಟ್ಟ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಬಿರುಸಿನ ಪ್ರಚಾರ

ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ತೆರೆ

Published:
Updated:
ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ತೆರೆ

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ.

ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದರೂ ಗುರುವಾರ ಸಂಜೆಯ ನಂತರ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಮತಯಾಚನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಐವರಿಗಿಂತ ಹೆಚ್ಚು ಜನರು ಒಂದು ಕಡೆ ಗುಂಪಾಗಿ ಪ್ರಚಾರ ನಡೆಸುವಂತಿಲ್ಲ. ಧ್ವನಿ ವರ್ಧಕ ಬಳಸುವಂತಿಲ್ಲ. ಸಭೆ, ಸಮಾರಂಭ ನಡೆಸುವಂತಿಲ್ಲ.

ಕೊನೆಯ ದಿನದ ಭರಾಟೆ: ಬಹಿರಂಗ ಪ್ರಚಾರಕ್ಕೆ ಗುರುವಾರ ಕೊನೆಯ ದಿನವಾದ ಕಾರಣ ವಿವಿಧ ಪಕ್ಷಗಳ ಗಣ್ಯರು ಬೆಳಿಗ್ಗೆಯಿಂದಲೇ ಬಿರುಸಿನ ಪ್ರಚಾರ ಕೈಗೊಂಡರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಡೀ ದಿನ ತಾವು ಸ್ಪರ್ಧಿಸಿರುವ ಶಿಕಾರಿಪುರ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದು, ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ಬಿಜೆಪಿಯ ಸ್ಟಾರ್ ಪ್ರಚಾರಕ ಕೆ.ಎಸ್. ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದ ನಂತರ ಹೆಚ್ಚು ಸಮಯ ಕ್ಷೇತ್ರದಲ್ಲೇ ಕಳೆದಿದ್ದು, ಗುರುವಾರವೂ ವಿವಿಧ ಬಡಾವಣೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಅಭ್ಯರ್ಥಿ ಎಚ್‌.ಎನ್‌. ನಿರಂಜನ್, ಎಲ್ಲ ಪಕ್ಷೇತರರೂ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.

ಕ್ಷೇತ್ರಗಳನ್ನು ತೊರೆದ ಮುಖಂಡರು: ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಬಂದಿದ್ದ ಬೇರೆ ಜಿಲ್ಲೆಗಳ ಮುಖಂಡರು ಗುರುವಾರ ಸಂಜೆ ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು. ಕ್ಷೇತ್ರದ ಮತದಾರರಲ್ಲದ ಪ್ರಮುಖ ಪಕ್ಷಗಳ ಪ್ರಚಾರಕರು ಕ್ಷೇತ್ರ ಬಿಟ್ಟು ತೆರಳುವಂತೆ ಜಿಲ್ಲಾ ಚುನಾವಣಾಧಿಕಾರಿ ಬುಧವಾರವೇ ಆದೇಶ ಹೊರಡಿಸಿದ್ದರು.

ಕಾಂಗ್ರೆಸ್‌ಗೆ ವಿವಿಧ ಸಮಾಜ, ಸಂಘಟನೆಗಳ ಬೆಂಬಲ: ಆದಿ ಕರ್ನಾಟಕ ಸಮುದಾಯ, ದಸಂಸ, ಭೋವಿ ಸಮಾಜದ ಮುಖಂಡರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದರು.

ಆದಿ ಕರ್ನಾಟಕ (ಮಾದಿಗ) ಸಮುದಾಯ: ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಅಖಿಲ ಕರ್ನಾಟಕ ಮಾದಿಗ ಮಹಾಸಭಾದ ಅಧ್ಯಕ್ಷ ಆರ್. ಶಿವಣ್ಣ ಮನವಿ ಮಾಡಿದರು.

ಕಾಂಗ್ರೆಸ್ ಮಾದಿಗ ಸಮಾಜಕ್ಕೆ ಹಲವು ಸೌಲಭ್ಯ ನೀಡಿದೆ ಹಾಗೂ ಚುನಾವಣೆಯಲ್ಲಿ ಸಮಾಜದವರಿಗೆ ಟಿಕೆಟ್ ನೀಡಿದೆ. ಹಾಗಾಗಿ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಅವರನ್ನು ಪುನಃ ಆಯ್ಕೆ ಮಾಡಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಲಕ್ಷ್ಮಣ್, ಚಂದ್ರಶೇಖರ್, ರಂಗನಾಥ್, ವಿ.ರಾಜು, ನಾಗರಾಜ್, ಅಣ್ಣಪ್ಪ ಉಪಸ್ಥಿತರಿದ್ದರು.

ಪಾವಗಡ ಪ್ರಕಾಶ್ ಬೆಂಬಲ: ಕೆ.ಬಿ ಪ್ರಸನ್ನಕುಮಾರ್ ಅವರು ಶುದ್ಧ ಚಾರಿತ್ರ್ಯದ ರಾಜಕಾರಣಿ. ಅಂಥವರು ಸಿಗುವುದು ತುಂಬಾ ವಿರಳ. ಅವರನ್ನು ಈ ಚುನಾವಣೆಯಲ್ಲಿ ಮತದಾರರು ಪುನಃ ಆಯ್ಕೆ ಮಾಡಬೇಕು ಎಂದು ವಾಗ್ಮಿ ಪಾವಗಡ ಪ್ರಕಾಶ್ ರಾವ್ ಮನವಿ ಮಾಡಿದರು.

ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಹಾಗಾಗಿ ಅವರಿಗೆ ಮತ ನೀಡುವಂತೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಎಲ್ಲಾ ಸಮಾಜದವರನ್ನು ಒಂದೇ ರೀತಿಯಲ್ಲಿ ಕಾಣುತ್ತಾರೆ. ಎಲ್ಲಾ ಸಮಾಜದವರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಸ್ಲಿಮರಿಗೆ ಹೆಚ್ಚಿನ ರಕ್ಷಣೆ ದೊರಕಿದೆ ಎಂದರು.

ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರಿಗೆ ಅಲ್ಲಿ ಇನ್ನೂ 2 ವರ್ಷಗಳ ಅವಧಿ ಇದೆ. ಅವರು ಸೋತರೂ ಅವರಿಗೇನು ನಷ್ಟವಿಲ್ಲ. ಆದರೆ, ಕೆ.ಬಿ. ಪ್ರಸನ್ನಕುಮಾರ್ ಸೋಲು ಕಂಡರೆ ನಗರದ ಅಭಿವೃದ್ಧಿಗೆ ನಷ್ಟ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಪ್ರಸಾದ್, ರವಿಶಂಕರ್, ಅನಂತಮೂರ್ತಿ, ಸುಬ್ರಹ್ಮಣ್ಯ, ಎಚ್.ಎಸ್. ನಾಗರಾಜ್, ಛಾಯಾಪತಿ, ಭಾರದ್ವಾಜ್, ಸುಂದರರಾಜ್ ಉಪಸ್ಥಿತರಿದ್ದರು

ದಸಂಸ ಬೆಂಬಲ: ಜಿಲ್ಲೆಯ 7 ಕ್ಷೇತ್ರಗಳ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ದಸಂಸ ನಿರ್ಧರಿಸಿದೆ ಎಂದು ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಜನಪರ ಕಾರ್ಯಕ್ರಮ ಜಾರಿಗೊಳಿಸಿದೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕಿದೆ. ಹಾಗಾಗಿ, ಶಿವಮೊಗ್ಗದ ನಗರ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಅವರನ್ನು ಬೆಂಬಲಿಸಲಿದ್ದೇವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿತ್ತು. ಆದರೆ ಈಗ ಕಡೆಗಣಿಸುತ್ತಿದೆ. ಜೆಡಿಎಸ್ ಸಹ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್‌ಗೆ ಮತ ನೀಡಿದರೆ ಬಿಜೆಪಿಗೆ ಮತ ನೀಡಿದಂತೆ. ಈ ಎರಡು ಪಕ್ಷಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸಮಾಜದವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ಮುಖಂಡರಾದ ಹಾಲೇಶಪ್ಪ, ಚಂದ್ರಪ್ಪ, ಹನುಮಂತಪ್ಪ, ಷಣ್ಮುಗಂ, ಯಡವಾಲ ಉಪಸ್ಥಿತರಿದ್ದರು.

ಭೋವಿ ಸಮಾಜದ ಬೆಂಬಲ: ಜಿಲ್ಲೆಯ ಎಲ್ಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಭೋವಿ ಸಮಾಜ ಬೆಂಬಲಿಸಲಿದೆ ಎಂದು ಭೋವಿ ಸಮಾಜದ ಮುಖಂಡ ಎಸ್. ರವಿಕುಮಾರ್ ತಿಳಿಸಿದರು.

ಭೋವಿ ಸಮಾಜದ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುಕೂಲ ಮಾಡಿಕೊಟ್ಟಿದೆ ಹಾಗಾಗಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದೇವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ತಿಮ್ಮಣ್ಣ, ಕೆ. ಮಾರಪ್ಪ, ಹರ್ಷ ಭೋವಿ ಉಪಸ್ಥಿತರಿದ್ದರು.

ಬಿಜೆಪಿಗೆ ಮಾದಿಗ ಮಹಾಸಭಾ ಬೆಂಬಲ

ಅಖಿಲ ಕರ್ನಾಟಕ ಮಾದಿಗ ಮಹಾಸಭಾ ಬಿಜೆಪಿಗೆ ಬೆಂಬಲ ನೀಡುತ್ತದೆ ಎಂದು ಮಹಾಸಭಾದ ಮುಖಂಡರು ತಿಳಿಸಿದರು.

ಮಹಾಸಭಾ ಮೊದಲಿನಿಂದಲೂ ಬಿಜೆಪಿಗೆ ಬೆಂಬಲ ನೀಡುತ್ತಿದೆ. ಆದರೆ, ಸಮಾಜದ ಕೆಲವು ಮುಖಂಡರು, ಸಮಿತಿಯ ಪದಾಧಿಕಾರಿಗಳ ಒಪ್ಪಿಗೆ ಪಡೆಯದೇ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸಭಾದ ಮುಖಂಡ ಎಚ್‌.ಎನ್‌. ಮಂಜುನಾಥ್ ದೂರಿದರು.

ಸುಮಾರು 13 ವರ್ಷಗಳಿಂದ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಹಲವಾರು ಪ್ರತಿಭಟನೆ, ಹೋರಾಟ ನಡೆಸಿದರೂ ಕಾಂಗ್ರೆಸ್ ವರದಿ ಜಾರಿಗೊಳಿಸದೇ ವಂಚಿಸಿದೆ. ಇದುವರೆಗೂ ಆಡಳಿತ ನಡೆಸಿದ ಕಾಂಗ್ರೆಸ್ ಈ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಗೆ ಯಾವುದೇ ಕಾರ್ಯಕ್ರಮ ನಡೆಸಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕೀಯ ಮಾಡಿದೆ.ಹಾಗಾಗಿ, ಸಮುದಾಯ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಲು ಮುಂದಾಗಿದೆ ಎಂದರು.

ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಮಾದಿಗ ಸಮುದಾಯದ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್. ಲಕ್ಷ್ಮಣ್, ಶಿವಾಜಿ, ಡಿ.ಎಂ. ರಾಮಯ್ಯ, ತೇಜೇಶ್ ರಾಮಚಂದ್ರ, ಮಧುಸೂದನ್, ಪ್ರಭು, ಭಗವಾನ್, ಸೂಲಯ್ಯ, ಎಸ್. ರವಿಕುಮಾರ್, ರಾಮಪ್ಪ, ಗೋಪಾಲ್, ರಾಜು ಉಪಸ್ಥಿತರಿದ್ದರು.

ಇಂದು ಮತಗಟ್ಟೆಗಳತ್ತ ಸಿಬ್ಬಂದಿ ಪಯಣ

ಜಿಲ್ಲೆಯ ಮಸ್ಟರಿಂಗ್ ಕ್ಷೇತ್ರಗಳಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಪಡೆದ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ಬೆಳಿಗ್ಗೆಯೇ ಜಿಲ್ಲೆಯ 1,756 ಮತಗಟ್ಟೆಗಳತ್ತ ಪಯಣ ಬೆಳೆಸಲಿದ್ದಾರೆ. ಎಲ್ಲ ಮತಗಟ್ಟೆಗಳಲ್ಲೂ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ರಾತ್ರಿ ಅಲ್ಲೇ ಉಳಿದುಕೊಳ್ಳಲೂ ಅವಕಾಶ ಮಾಡಿಕೊಡಲಾಗಿದೆ. 325 ಸೂಕ್ಷ್ಮ ಅವಲೋಕನಾಧಿಕಾರಿಗಳು, 9563 ಮತಗಟ್ಟೆ ಸಿಬ್ಬಂದಿ ಹೊತ್ತ 300 ಬಸ್‌ಗಳು ಸಂಜೆಯ ಒಳಗಾಗಿ ಎಲ್ಲ ಮತಗಟ್ಟೆ ತಲುಪಲಿವೆ. ಶನಿವಾರ ಬೆಳಿಗ್ಗೆ 6ರಿಂದಲೇ ಮತದಾನ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry