ಗುರುವಾರ , ಫೆಬ್ರವರಿ 25, 2021
18 °C
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 619 ಅಂಕಗಳಿಸಿದ ಮೊದಲ ಅಂಧ ವಿದ್ಯಾರ್ಥಿ

ಇತಿಹಾಸ ಸೃಷ್ಟಿಸಿದ ಅಂಧ ಅಭಿರಾಮ್

ಅನಿಲ್ ಸಾಗರ್ Updated:

ಅಕ್ಷರ ಗಾತ್ರ : | |

ಇತಿಹಾಸ ಸೃಷ್ಟಿಸಿದ ಅಂಧ ಅಭಿರಾಮ್

ಶಿವಮೊಗ್ಗ: ಅದೊಂದು ಪುಟ್ಟ ಕುಟುಂಬ. ಎಲ್ಲರಂತೆ ಆ ಕುಟುಂಬದ ಸದಸ್ಯರು ಕೂಡ ತಮಗೂ ಒಂದು ಗಂಡು ಮಗು ಆಗಬೇಕು. ಆ ಮಗು ತಮ್ಮ ಕುಟುಂಬಕ್ಕೆ ಊರುಗೋಲು ಆಗಬೇಕು ಎಂದು ಬಯಸಿದ್ದರು. ನಿರೀಕ್ಷೆಯಂತೆ ಮದುವೆಯಾದ ಕೆಲವೇ ವರ್ಷದಲ್ಲಿ ಗಂಡು ಮಗು ಆಯಿತು. ಆದರೆ, ಮಗುವಿಗೆ ಹುಟ್ಟಿನಿಂದಲೇ ಸಂಪೂರ್ಣ ಅಂಧತ್ವ ಆವರಿಸಿತ್ತು.

ತಮ್ಮ ಮಗುವನ್ನು ಹೇಗಾದರೂ ಈ ಸಮಸ್ಯೆಯಿಂದ ಹೊರತರಬೇಕು ಎಂದು ಹತ್ತಾರು ಆಸ್ಪತ್ರೆ, ದೇವಸ್ಥಾನಗಳನ್ನು ಸುತ್ತಿದರು. ಅವರಿವರ ಬಳಿ ಸಾಲ ಮಾಡಿ ದೂರದ ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಗೂ ಹೋಗಿ ಬಂದರು. ಆದರೆ ಇದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ.

ಕೊನೆಗೆ ಹೀಗೆ ಇದ್ದರೇ ಮಗನ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅರಿತ ಪೋಷಕರು ಗಟ್ಟಿ ಮನಸ್ಸು ಮಾಡಿಕೊಂಡರು. ಮಗುವಿಗೆ ಅಂಧತ್ವ ಕಾಡದಂತೆ ನೋಡಿಕೊಳ್ಳಬೇಕು. ಎಲ್ಲರಂತೆ ಆತನೂ ಕೂಡ ಸಾಧನೆಯ ಮೆಟ್ಟಿಲು ತುಳಿಯುವಂತೆ ಮಾಡಬೇಕು ಎಂದು ದೃಢ ಸಂಕಲ್ಪ ಮಾಡಿದರು. ಮಗನ ಪ್ರತಿಯೊಂದು ಹಂತದಲ್ಲೂ ಜತೆಯಾದರು. ಹೆತ್ತವರ ಸಂಕಲ್ಪಕ್ಕೆ ಮಗಳು ಸ್ನೇಹಾ ಕೈಜೋಡಿಸಿದರು.

ಅವರ ಶ್ರಮ ಇದೀಗ ಫಲ ನೀಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಇತಿಹಾಸದಲ್ಲಿ ಒಬ್ಬ ಸಂಪೂರ್ಣ ಅಂಧ ವಿದ್ಯಾರ್ಥಿ ರಾಜ್ಯದಲ್ಲಿ ಅತಿ ಹೆಚ್ಚು ಅಂಕ (619) ಪಡೆದು ದಾಖಲೆ ನಿರ್ಮಿಸಿದ್ದಾನೆ. ಮಗನ ಸಾಧನೆ ಕಂಡು ಈವರೆಗೆ ಪಟ್ಟ ಕಷ್ಟ, ದುಃಖ ವೇದನೆಗಳು ಹೆತ್ತವರಿಗೆ ಕ್ಷಣ ಮಾತ್ರದಲ್ಲಿ ಕರಗಿ ಹೋಗಿವೆ.

ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಕೆ.ಅಭಿರಾಮ್‌ ಭಾಗವತ್‌ ಅವರೇ ಈ ಸಾಧನೆ ಮಾಡಿರುವ ವಿದ್ಯಾರ್ಥಿ. ಆತನ ಸಾಧನೆಗೆ ಬೆನ್ನೆಲುಬಾದವರೇ ತಾಯಿ ಉಮಾ ಭಾಗವತ್‌ ಹಾಗೂ ತಂದೆ ಕೆ.ಗೋಪಾಲಕೃಷ್ಣ ಭಾಗವತ್‌. ಸಾಧನೆಗೆ ಅಂಧತ್ವ ಅಡ್ಡಿಯಲ್ಲ. ಸಾಧಿಸುವ ಛಲವೊಂದಿದ್ದರೇ ಅಸಾಧ್ಯವಾದುದನ್ನು ಸಾಧ್ಯ ವಾಗಿಸಬಹುದು ಎಂಬುದನ್ನು ಅಭಿರಾಮ್‌ ಸಾಬೀತು ಮಾಡಿದ್ದಾರೆ. ಈ ಮೂಲಕ ಎಲ್ಲಾ ಇದ್ದು ಏನು ಇಲ್ಲದಂತಿರುವ ಅನೇಕರಿಗೆ ಅಭಿರಾಮ್‌ ಮಾದರಿಯಾಗಿದ್ದಾರೆ.

ಬಹುಮುಖ ಪ್ರತಿಭೆ: ಅಭಿರಾಮ್‌ ಓದಿನಲ್ಲಿ ಮಾತ್ರವೇ ಮುಂದಿಲ್ಲ. ಕೊಳಲು, ಮೃದಂಗ, ತಬಲದಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಕೊಳಲು ಜೂನಿಯರ್‌ ಪರೀಕ್ಷೆಯಲ್ಲಿ ಅಭಿರಾಮ್‌ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಇದೀಗ

ಸೀನಿಯರ್‌ ಪರೀಕ್ಷೆಗೆ ಸಜ್ಜುಗೊಂಡಿದ್ದಾರೆ. ಇವರ ಪ್ರತಿಭೆಗೆ ಈಗಾಗಲೇ ಅನೇಕ ಪ್ರಶಸ್ತಿಗಳು, ಗೌರವಗಳು ಹುಡುಕಿಕೊಂಡು ಬಂದಿವೆ.

ಇತಿಹಾಸ ಸೃಷ್ಟಿಸಿದ ಅಭಿರಾಮ್‌: ಎರಡೂವರೆ ದಶಕಗಳಿಂದ ದೃಷ್ಟಿವಂಚಿತ ಮಕ್ಕಳಿಗೆ ಊರುಗೋಲಾಗಿರುವ ನಗರದ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಈವರೆಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರೈಸಿದ್ದಾರೆ. ಆದರೆ ಇಲ್ಲಿವರೆಗೆ ಮಾಡಿರುವ ವಿದ್ಯಾರ್ಥಿಗಳ ಸಾಧನೆಯ ದಾಖಲೆಯನ್ನು ಅತಿ ಹೆಚ್ಚು ಅಂಕ ಗಳಿಸಿದ ಅಭಿರಾಮ್‌ ಅಳಿಸಿ ಹಾಕಿದ್ದಾರೆ.

‘ಸೋಲು ಗೆಲುವಿನ ಮೊದಲ ಮೆಟ್ಟಿಲು’

‘ಸೋಲು ಸಂಗಾತಿಯಂತೆ ಕಂಡವರಿಗೆ ಕಣ್ಣೀರು ಸದಾ ಜತೆಗಿರುತ್ತದೆ. ನಾವು ಪುಟ್ಟ ಸೋಲಿಗೆ ಆಕಾಶವೇ ಮೇಲೆ ಬಿದ್ದಂತೆ, ಜೀವನವೇ ಮುಗಿದು ಹೋದಂತೆ ಭಾವಿಸಬಾರದು. ಚಿಕ್ಕ ಸೋಲಿಗೆ ವಿಚಲಿತರಾಗಬಾರದು. ಸೋಲು ಗೆಲುವಿನ ಮೊದಲ ಮೆಟ್ಟಿಲು ಎಂಬುದನ್ನು ಅರಿಯಬೇಕು. ಆಗ ಮಾತ್ರವೇ ಯಶಸ್ಸಿನ ಶಿಖರವೇರಲು ಸಾಧ್ಯ. ನನ್ನ ಸಾಧನೆಯ ಹಿಂದೆ ನನ್ನ ಹೆತ್ತವರು, ಶಿಕ್ಷಕರು, ಸ್ನೇಹಿತರು ಇದ್ದಾರೆ. ಅವರೆಲ್ಲರಿಗೂ ನಾನು ಅಭಾರಿ. ಮುಂದೆ ಐಎಎಸ್‌ ಮಾಡಿ ನನ್ನಂತ ಅನೇಕರಿಗೆ ಹಾಗೂ ಸಮಾಜಕ್ಕೆ ಉತ್ತಮ ಕೆಲಸ ಮಾಡಬೇಕು ಎಂಬ ಆಸೆ ಹೊತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಅಭಿರಾಮ್‌ ಭಾಗವತ್‌ ಮನದಾಳವನ್ನು ಹಂಚಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.