ಮತಗಟ್ಟೆಗಳಿಗೆ ವೆಬ್‌ ಕ್ಯಾಮೆರಾ ಕಣ್ಗಾವಲು: ಡಿ.ಸಿ

7
132 ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ತೀವ್ರ ನಿಗಾ: ಜಿಲ್ಲಾಧಿಕಾರಿ ಪ್ರಿಯಾಂಕ

ಮತಗಟ್ಟೆಗಳಿಗೆ ವೆಬ್‌ ಕ್ಯಾಮೆರಾ ಕಣ್ಗಾವಲು: ಡಿ.ಸಿ

Published:
Updated:

ಉಡುಪಿ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಯಲ್ಲಿ ವೆಬ್‌ ಕ್ಯಾಮೆರಾ (ವೆಬ್‌ಕಾಸ್ಟಿಂಗ್) ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೈಂದೂರು, ಕುಂದಾಪುರ, ಉಡುಪಿ, ಕಾರ್ಕಳ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ 132 ಮತಗಟ್ಟೆಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆ ಮೂಲಕ ಮತಗಟ್ಟೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಕೇಂದ್ರ ಆಯೋಗದ ಕಚೇರಿಯಿಂದ ವೀಕ್ಷಿಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಮತದಾರರ ಅನುಕೂಲಕ್ಕಾಗಿ ಈ ಬಾರಿ ಚುನಾವಣಾ ಆಯೋಗವು ಚುನಾವಣಾ ಆ್ಯಪ್‌ ಅಭಿವೃದ್ಧಿಪಡಿಸಿದೆ. ಈ ಮೂಲಕ ಉಡುಪಿ, ಕುಂದಾಪುರ, ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಗರ ಪ್ರದೇಶಗಳಲ್ಲಿನ ಮತಗಟ್ಟೆಗಳಲ್ಲಿನ ಮತದಾರರ ಸಾಲಿನ ಸರದಿ ಮಾಹಿತಿ ಪ್ರತಿ 10 ನಿಮಿಷಕ್ಕೊಮ್ಮೆ ಪಡೆಯಬಹುದಾಗಿದೆ. ಕುಂದಾಪುರದಲ್ಲಿ ಮತದಾನಕ್ಕಾಗಿ ಬರುವವರಿಗೆ ಟೋಕನ್‌ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 6,342 ಮಂದಿ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಇದೇ ಮೊದಲ ಬಾರಿ ರಾಷ್ಟ್ರೀಕೃತ ಬ್ಯಾಂಕ್‌ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದೇ 12 ಮತ್ತು 13ರಂದು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಗ್ರಾಹಕರಿಗೆ ಸಮಸ್ಯೆಯಾಗದಂತೆ ಎಟಿಎಂ ಹಣವನ್ನು ತುಂಬಿಸುವುದಾಗಿ ಬ್ಯಾಂಕ್‌ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಅಂಗವಿಕಲ ಮತದಾರರ ಅನುಕೂಲಕ್ಕಾಗಿ 55 ಮತಗಟ್ಟೆಗಳಲ್ಲಿ ವೀಲ್‌ಚೇರ್ ಸೌಲಭ್ಯ ಮತ್ತು ಮಂದ ದೃಷ್ಟಿಯ ಮತದಾರರಿಗೆ 328 ಮತಗಟ್ಟೆಗಳಲ್ಲಿ ಬೂತಗನ್ನಡಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 274 ಸೂಕ್ಷ್ಮ ವೀಕ್ಷಕರು ತೀವ್ರ ನಿಗಾ ವಹಿಸಲಿದ್ದಾರೆ. ಚುನಾವಣೆ ಕರ್ತವ್ಯಕ್ಕೆ ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಅಧಿಕಾರಿ, ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ಊಟ, ಚಹಾ, ಉಪಾಹಾರದ ವ್ಯವಸ್ಥೆಯನ್ನು ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ ಮಾಡಲಿದ್ದಾರೆ. ಮತಗಟ್ಟೆ ಸಿಬ್ಬಂದಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಪಂಚಾಯಿತಿ, ನಗರಾಡಳಿತ ಸಂಸ್ಥೆಗಳು ವ್ಯವಸ್ಥೆ ಮಾಡುವಂತೆ ಆದೇಶ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ 10 ಪಿಂಕ್‌ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕಾಪು, ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 5, ಕಾರ್ಕಳ ವಿಧಾನ ಸಭಾಕ್ಷೇತ್ರದಲ್ಲಿ 2 ಪಿಂಕ್‌ ಮತಗಟ್ಟೆಗಳು ಇರಲಿವೆ. ಪ್ರತಿ ಮತಗಟ್ಟೆಗೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಒಟ್ಟು ಐವರನ್ನು ನಿಯೋಜಿಸಲಾಗುತ್ತದೆ. ಮತಗಟ್ಟೆ ಅಧಿಕಾರಿ, ಚುನಾವಣೆ ಹಾಗೂ ರಕ್ಷಣಾ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಇರುತ್ತಾರೆ. ಈ ಮತಗಟ್ಟೆಗಳಲ್ಲಿ ವಿಶೇಷ ಶೌಚಗೃಹ, ಕೆಲ ಕಾಲ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಲಾಡ್ಜ್, ಛತ್ರಗಳಿಗೆ ಸೂಚನೆ ಚುನಾವಣಾ ಆಯೋಗ ನಿರ್ದೇಶನದಂತೆ ಮತದಾನ ಮುಗಿಯುವ ಮುಂಚಿನ 48 ಗಂಟೆಗಳ ಕಾಲ ಅವಧಿಯಲ್ಲಿ ಪ್ರಚಾರಕಾರ್ಯ ಮುಕ್ತಾಯಗೊಳ್ಳುತ್ತದೆ. ಪ್ರಚಾರದ ಅವಧಿ ಕೊನೆಗೊಂಡ ನಂತರ ಹೊರಗಿನ ಮತಕ್ಷೇತ್ರದಿಂದ ಕರೆತಂದ ವಿಧಾನಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಮುಖಂಡರು, ಕಾರ್ಯಕರ್ತರು ಕ್ಷೇತ್ರದಿಂದ ಹೊರ ಹೋಗಬೇಕು. ಒಂದು ವೇಳೆ ವ್ಯಕ್ತಿಗಳು ಲಾಡ್ಜ್, ಛತ್ರ, ಕಲ್ಯಾಣಮಂಟಪದಲ್ಲಿ ತಂಗಿದ್ದರೇ ಸಂಬಂಧಪಟ್ಟವರು ಅವರನ್ನು ಹೊರಕಳಿಸಬೇಕು. ಇದೇ 12ರವರೆಗೆ ಲಾಡ್ಜ್‌ಗಳಲ್ಲಿ ತಂಗುವ ವ್ಯಕ್ತಿಗಳ ಸಂಪೂರ್ಣ ವಿವರ ಪಡೆದು, ಬಂದ ಉದ್ದೇಶದ ಸ್ಪಷ್ಟ ವಿವರಗಳನ್ನು ತಿಳಿದುಕೊಳ್ಳಬೇಕು. ಆಯೋಗದ ಸೂಚನೆ ಉಲ್ಲಂಘಿಸಿದ್ದಲ್ಲಿ ಲಾಡ್ಜ್, ಛತ್ರ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮದ್ಯ ಮಾರಾಟ ನಿಷೇಧ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮೇ 12ರಂದು ಮತದಾನ, ಮೇ15ರಂದು ಮತಗಳ ಎಣಿಕೆ ಹಿನ್ನೆಲೆಯಲ್ಲಿ, ಶಾಂತಿಯುತ ವಾತಾವರಣದಲ್ಲಿ ಚುನಾವಣೆ ನಡೆಯಲು ಮೇ.10ರ ಮಧ್ಯರಾತ್ರಿ 12 ಗಂಟೆಯಿಂದ  12ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ 14ರ ಮಧ್ಯರಾತ್ರಿ 12ರಿಂದ 15ರ ಮದ್ಯರಾತ್ರಿ 12 ಗಂಟೆಯವರೆಗಿನ ಅವಧಿಯಲ್ಲಿ ಜಿಲ್ಲೆಯಾದ್ಯಂತ ಮದ್ಯಪಾನ ಮಾರಾಟ ನಿಷೇಧ ಮಾಡಲಾಗಿದೆ ಎಂದರು.

48 ಗಂಟೆ 144 ಸೆಕ್ಷನ್ ಜಾರಿ:

ಶಾಂತ ಮತ್ತು ಮುಕ್ತ ಮತದಾನಕ್ಕಾಗಿ ಮೇ.10ರ ಸಂಜೆ 6ರಿಂದ 13ರ ಸಂಜೆ 6ವರೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ. ಜಿಲ್ಲೆಯಲ್ಲಿ ಗುಂಪು, ಗುಂಪಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದನ್ನು ತಡೆಯುವ ಸಲುವಾಗಿ ಮತದಾನ ಮುಕ್ತಾಯದ 48 ಗಂಟೆ ಮುಂಚಿತವಾಗಿ ಹಾಗೂ ಮತದಾನ ಮುಕ್ತಾಯದ ನಂತರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆಕ್ಷನ್ 144 ಹಾಕಲಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಸಾರ್ವಜನಿಕ ಸ್ಥಳ, ಮತ ಕೇಂದ್ರಗಳಲ್ಲಿ ಐದಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಸೇರುವಂತಿಲ್ಲ. ಯಾವುದೇ ರೀತಿಯ ಮಾರಕ ಆಯುಧಗಳನ್ನು ಹೊಂದಿರುವಂತಿಲ್ಲ. ಜಿಲ್ಲಾ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಸಮಾರಂಭ ನಡೆಸುವಂತಿಲ್ಲ ಎಂದರು.

ವಾಹನ ಸೌಲಭ್ಯ

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಇತರೆ ತಾಲ್ಲೂಕುಗಳಿಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿದೆ. 303 ರೂಟ್‌ಗಳಿದ್ದು, 303 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮತ್ತು ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ.

ಪ್ರಥಮ ಚಿಕಿತ್ಸೆ ಕಿಟ್

ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಕಿಟ್ ನೀಡಲಾಗಿದೆ. ಕರ್ತವ್ಯದ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಮುನ್ನೆಚ್ಚೆರಿಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಉಳಿದುಕೊಳ್ಳುವ ಸಿಬ್ಬಂದಿಗಳಿಗೆ ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಬತ್ತಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಪ್ರಥಮ ಚಿಕಿತ್ಸೆ ಕಿಟ್ ವಿತರಣೆ

ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಕಿಟ್ ನೀಡಲಾಗಿದೆ. ಕರ್ತವ್ಯದ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಮುನ್ನೆಚ್ಚೆರಿಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಉಳಿದುಕೊಳ್ಳುವ ಸಿಬ್ಬಂದಿಗಳಿಗೆ ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಬತ್ತಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry