ನಕ್ಸಲ್ ಪೀಡಿತ ಪ್ರದೇಶದಲ್ಲಿ ಪೊಲೀಸ್‌ ಕಟ್ಟೆಚ್ಚರ 

7
ವಿಧಾನಸಭಾ ಚುನಾವಣೆ: ನಾಳೆ ಮತದಾನ

ನಕ್ಸಲ್ ಪೀಡಿತ ಪ್ರದೇಶದಲ್ಲಿ ಪೊಲೀಸ್‌ ಕಟ್ಟೆಚ್ಚರ 

Published:
Updated:

ಹೆಬ್ರಿ: ಶನಿವಾರ ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಬಿಗಿ ಭದ್ರತೆ ಒದಗಿಸಲು ರಾಜ್ಯ ಪೊಲೀಸ್ ಇಲಾಖೆ, ಭಾರತೀಯ ಗಡಿಭದ್ರತಾ ಪಡೆಯ ಯೋಧರು ಮತ್ತು ನಕ್ಸಲ್ ನಿಗ್ರಹ ಪಡೆಯ ಯೋಧರು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮತ್ತು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆಯ ಯೋಧರು ಪೊಲೀಸ್ ಉನ್ನತಾಧಿಕಾರಿಗಳ ಮಾರ್ಗದರ್ಶನದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿ ಬಿರುಸಿನ ಕೂಂಬಿಂಗ್ ನಡೆಸುವುದರ ಜತೆಗೆ ಪರಿಸ್ಥಿತಿಯ ಬಗ್ಗೆ ಕಟ್ಟೆಚ್ಚರ ವಹಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಬಿಎಸ್‌ಎಫ್ ಯೋಧರು ಹಳ್ಳಿ ಮತ್ತು ಪೇಟೆಯಲ್ಲಿ ಪಥಸಂಚಲನ ನಡೆಸಿ ನಿರ್ಭೀತ ಹಾಗೂ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ ಸಂದೇಶ ರವಾನಿಸಿದ್ದಾರೆ. ಈ ಬಾರಿ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲದೆ ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಪೊಲೀಸ್ ಪಥಸಂಚಲನ ನಡೆಸಿ ಭಯಮುಕ್ತ ವಾತಾವರಣ ನಿರ್ಮಿಸಲಾಗಿದೆ.

ಉಡುಪಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳನ್ನೊಳಗೊಂಡಂತೆ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6, ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 7 ಮತ್ತು ಕಾರ್ಕಳ ಠಾಣೆಯ ವ್ಯಾಪ್ತಿಯಲ್ಲಿ 13 ಸೇರಿದಂತೆ ಒಟ್ಟು 26 ನಕ್ಸಲ್ ಪೀಡಿತ ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಅವುಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ನಕ್ಸಲ್ ಪೀಡಿತ ಹೆಬ್ರಿಯ ಸೋಮೇಶ್ವರ ಮತ್ತು ಬಜಗೋಳಿ ಹಾಗೂ ತಾಲ್ಲೂಕಿನ ಬೆಳ್ಮಣ್, ಸಾಣೂರಿನಲ್ಲಿ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಮತದಾನದ ದಿನ ಮತದಾರರು ಭಯವಿಲ್ಲದೆ ಮುಕ್ತ ಮತದಾನ ಮಾಡಲು ನಕ್ಸಲ್ ನಿಗ್ರಹ ಪಡೆಯು ಶಸ್ತ್ರಸಜ್ಜಿತರಾಗಿ ಸೂಕ್ತ ಭಿಗಿ ಭದ್ರತೆ ಒದಗಿಸಲು ಪೂರ್ವಸಿದ್ಧತೆ ನಡೆಸಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮಾರ್ಗದರ್ಶನದಲ್ಲಿ, ಕಾರ್ಕಳ ಪೊಲೀಸ್ ಸಹಾಯಕ ಅಧೀಕ್ಷಕ ಋಷಿಕೇಶ್ ಸೋನಾವಣೆ ನಿರ್ದೇಶನದಲ್ಲಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಜಾಯ್ ಅಂತೋನಿ ನೇತೃತ್ವದಲ್ಲಿ ಹೆಬ್ರಿ, ಅಜೆಕಾರು, ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿಗಳು ಸೇರಿದಂತೆ ನಕ್ಸಲ್ ನಿಗ್ರಹ ಪಡೆಯ ಸಹಾಯಕ ಕಮಾಂಡೆಂಟ್ ಮತ್ತು ಅಧಿಕಾರಿಗಳು  ವಿವಿಧೆಡೆಯ ಭದ್ರತೆಯ ಹೊಣೆಹೊತ್ತಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ದೇಶದ ವಿವಿಧ ರಾಜ್ಯಗಳ ಪೊಲೀಸರು ಕೂಡ ಹಲವೆಡೆ ಬೀಡು ಬಿಟ್ಟಿದ್ದಾರೆ.

‌ಭೋಜ ಶೆಟ್ಟಿ ಹತ್ಯೆಗೆ 10 ವರ್ಷ

ನಕ್ಸಲರ ಬಂದೂಕಿನ ಗುಂಡಿಗೆ ಹೆಬ್ರಿ ನಾಡ್ಪಾಲಿನ ಬಾಳೆಬ್ಬಿ ಭೋಜ ಶೆಟ್ಟಿ ಮತ್ತವರ ಸಂಬಂಧಿ ಸುರೇಶ ಶೆಟ್ಟಿಯವರನ್ನು ನಕ್ಸಲರು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ನಡೆದು ಇದೇ 15ಕ್ಕೆ ಸರಿಯಾಗಿ 10 ವರ್ಷ ತುಂಬುತ್ತದೆ. 2008ರ ವಿಧಾನಸಭಾ ಚುನಾವಣೆಯ ಮುನ್ನಾದಿನ ಮೇ 15ರಂದು ಸಂಜೆ ವೇಳೆಯಲ್ಲಿ ಅವರ ಮನೆಯ ಮುಂದೆಯೇ ನಕ್ಸಲರ ತಂಡ ಭೋಜ ಶೆಟ್ಟಿಯವರನ್ನು ಹತ್ಯೆ ಮಾಡಿತ್ತು.

ಸುಕುಮಾರ್‌ ಮುನಿಯಾಲು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry