ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ಪಕ್ಷಗಳಿಂದ ಜನರ ಸಮಸ್ಯೆ ಅವಗಣನೆ

ಬೈಂದೂರು: ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರೋಪ
Last Updated 11 ಮೇ 2018, 7:24 IST
ಅಕ್ಷರ ಗಾತ್ರ

ಬೈಂದೂರು: ‘ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಸಂದರ್ಭ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಜನರ ನೈಜ ಮತ್ತು ಕ್ಷೇತ್ರದ ಮೂಲ ಸಮಸ್ಯೆಗಳನ್ನು ಕಡೆಗಣಿಸಿ, ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದುವು’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.

ಗುರುವಾರ ಬೈಂದೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕ್ಷೇತ್ರದಲ್ಲಿ ಮನೆ ಇಲ್ಲದ ಬಡಜನರು ಇದ್ದಾರೆ. ಅವರಿಗೆ 94ಸಿ ಮತ್ತು 94ಸಿಸಿ ನಿಯಮದ ಅಡಿ ಸೌಲಭ್ಯ ದೊರಕಿಲ್ಲ. ದೊರಕಿದವರಿಗೂ ಇನ್ನೂ ಆರ್‌ಟಿಸಿ ನೀಡಿಲ್ಲ. ನಿಯಮ 50, 52ರ ಅಧೀನದ ಅಕ್ರಮ ಸಕ್ರಮದ ಒಂದು ಲಕ್ಷ ಅರ್ಜಿ ವಿಲೇವಾರಿಯಾಗದೆ ಉಳಿದಿವೆ. ಇಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾಗುವ ಬಾಕ್ಸೈಟ್‌ ಗಣಿಗಾರಿಕೆ, ರಬ್ಬರ್ ಬೆಳೆ, ಶಾಂತಿಯುತ ಬದುಕಿಗೆ ಅಗತ್ಯವಾಗಿರುವ ಕೋಮುಸಾಮರಸ್ಯದತ್ತ ಅವು ಗಮನ ಹರಿಸಿಲ್ಲ. ಎಡಪಕ್ಷಗಳ ಒತ್ತಾಯದ ಫಲವಾಗಿ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆಯ ದೋಷಪೂರಿತ ಅನುಷ್ಠಾನವನ್ನು ಸರಿದಾರಿಗೆ ತರುವ ಭರವಸೆ ಬಂದಿಲ್ಲ. ಸಿಪಿಐ (ಎಂ) ಇವುಗಳನ್ನು ಚುನಾವಣಾ ವಿಷಯವನ್ನಾಗಿ ಮಾಡಿದೆ. ನಮ್ಮ ಅಭ್ಯರ್ಥಿ ಗೆದ್ದರೆ ವಿಧಾನಸಭೆಯಲ್ಲಿ, ಇಲ್ಲವಾದರೆ ಹೊರಗೆ ಇವುಗಳ ಕುರಿತು ಹೋರಾಟ ನಡೆಸುವುದು’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ವೆಂಕಟೇಶ ಕೋಣಿ ಮಾತನಾಡಿ, ‘ಡೀಮ್ಡ್‌ ಫಾರೆಸ್ಟ್‌ ಮತ್ತು ಗೋಮಾಳ ಸಮಸ್ಯೆ ಬಗೆಹರಿದಿಲ್ಲ. ಕಂದಾಯ ಇಲಾಖೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಪ್ರಮುಖ ಪಕ್ಷಗಳು ಇವನ್ನೆಲ್ಲ ಮರೆತಿವೆ. ತಮ್ಮ ಪಕ್ಷ ಮುಂದೆಯೂ ಇವುಗಳಿಗಾಗಿ ಹೋರಾಟ ನಡೆಸಲಿದೆ’ ಎಂದರು.

ಮೂವರೂ ಕ್ಷೇತ್ರದ ಎಲ್ಲ ಮತದಾರರು 12ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸಬೇಕು ಎಂಬ ಸಂದೇಶ ನೀಡಿದರು.

ಜನರ ಸಮಸ್ಯೆಗಳಿಗೆ ದನಿಯಾಗದ ಜನನಾಯಕರು: ಸುರೇಶ

‘ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಶಾಸಕರಾಗಲಿ, ಸಂಸದರಾಗಲಿ ಪ್ರಯತ್ನ ನಡೆಸಿಲ್ಲ. ಮರಳಿನ ಕೊರತೆಯಿಂದ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಹಿನೀರಿನ ಮರಳು ತೆಗೆಯಲು ಆದ್ಯತೆ ನೀಡಬೇಕಾಗಿತ್ತು. ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗಿರುವ ₹6000 ಕೋಟಿ ಹಣ ಸದ್ವಿನಿಯೋಗ ಆಗಿಲ್ಲ. ಕಟ್ಟಡ ಕಾರ್ಮಿಕರಿಗೆ ಈಗ ನೀಡಲಾಗುತ್ತಿರುವ ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ. ಪಕ್ಷ ಇವೆಲ್ಲ ವಿಚಾರಗಳನ್ನು ಕೈಗೆತ್ತಿಕೊಳ್ಳುವುದು’ ಎಂದು ಅಭ್ಯರ್ಥಿ ಸುರೇಶ ಕಲ್ಲಾಗರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT