ಸೋಮವಾರ, ಮಾರ್ಚ್ 1, 2021
31 °C
ಬೈಂದೂರು ವಿಧಾನಸಭಾ ಕ್ಷೇತ್ರ: ಮತದಾನಕ್ಕೆ ಒಂದು ದಿನ ಬಾಕಿ

ಕೊನೆಯ ಕ್ಷಣದ ಪ್ರಚಾರ, ಆಮಿಷದ ವಾಸನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊನೆಯ ಕ್ಷಣದ ಪ್ರಚಾರ, ಆಮಿಷದ ವಾಸನೆ

ಕುಂದಾಪುರ: ಚುನಾವಣೆ ದೃಷ್ಟಿಕೋನದಲ್ಲಿ ಜಿಲ್ಲೆಯಲ್ಲಿಯೇ ಶ್ರೀಮಂತ ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆಗೆ ಬಹುತೇಕ ಸಜ್ಜಾಗಿದ್ದು, ಮತಕ್ಕಾಗಿ ಮತದಾರರನ್ನು ವಿವಿಧ ರೀತಿಯಿಂದ ಓಲೈಸುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ.

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಚುನಾವಣಾ ರಂಗದ ಪ್ರಮುಖ ಪಾತ್ರಧಾರಿಗಳಾಗಿವೆ. ಈ ಪೈಕಿ ಒಂದು ವರ್ಷದಿಂದಲೇ ರಂಗ ತಾಲೀಮು ಆರಂಭಿಸಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ ಚುನಾವಣೆಗಾಗಿ ಉಳಿದಿರುವ ಕೊನೆಯ ಕೆಲವು ಗಂಟೆಗಳ ಅವಧಿಯನ್ನು ಉಪಯೋಗಿಸಿಕೊಂಡು ಮತದಾರರ ವಿಶ್ವಾಸವನ್ನು ಗಳಿಸಲು ಎಲ್ಲ ಮಾರ್ಗಗಳ ಮೊರೆ ಹೋಗಿವೆ. ಬಹುತೇಕ ಬುಧವಾರದ ಬಳಿಕ ಸಾರ್ವಜನಿಕ ಸಭೆ ಹಾಗೂ ಭಾಷಣಗಳಿಗೆ ಕಡಿವಾಣ ಬಿದ್ದಿದೆ. ಮನೆ ಮನೆಗೆ ಭೇಟಿ ಹಾಗೂ ಕಾಲ್ನಡಿಗೆಯ ರೋಡ್‌ ಷೋಗಳ ಮೂಲಕ ಮತ ಬೇಟೆ ಆರಂಭಿಸಿದ್ದಾರೆ.

ಮತ ಯಾಚನೆಗಾಗಿ ಮನೆ ಬಾಗಿಲಿಗೆ ಬರುವ ಅಭ್ಯರ್ಥಿಗಳಿಗೆ ಸಂಭ್ರಮದ ಸ್ವಾಗತ ದೊರಕುತ್ತಿದೆ. ಸಾಂಪ್ರದಾಯಿಕ ಆರತಿ ಎತ್ತಿ, ದೇವರ ಪ್ರಸಾದ ನೀಡಿ ಶುಭ ಹಾರೈಸುವುದು. ಸಿಹಿ ತಿಂಡಿ, ಬಾಯಾರಿಕೆ ಸತ್ಕರಿಸುವುದು ಮಾಮೂಲಿಯಾಗಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ಗಂಗೊಳ್ಳಿಯಲ್ಲಿ ಬಿಜೆಪಿ ಪಾದಯಾತ್ರೆ ನಡೆಸಿದರೆ, ಸಂಜೆಯ ವೇಳೆಗೆ ಕಾಂಗ್ರೆಸ್‌ ಪಾದಯಾತ್ರೆ ನಡೆಸಿ ಮತ ಯಾಚನೆ ಮಾಡಿದೆ. ಪೂರ್ವ ನಿರ್ಧರಿತ ಕಾರ್ಯಕ್ರಮಗಳ ಒತ್ತಡವಿಲ್ಲದ ಅಭ್ಯರ್ಥಿಗಳು ಸಮಯಾವಕಾಶವನ್ನು ಬಳಸಿಕೊಂಡು ಮತ ಬೇಟೆಗೆ ಅಂತಿಮ ಕಸರತ್ತು ನಡೆಸುತ್ತಿದ್ದಾರೆ.

ಪ್ರತಿ ಬಾರಿಯ ಚುನಾವಣೆಯಂತೆ ಈ ಬಾರಿಯೂ ಬೈಂದೂರಿನಲ್ಲಿ ಚುನಾವಣೆಯ ಕಾಂಚಣದ ಸದ್ದು ಜೋರಾಗಿಯೇ ಕೇಳಿಸುತ್ತಿದೆ. ಹಿಂದೆಲ್ಲ ಬಾಡೂಟಗಳಿಂದ ಗಮನ ಸೆಳೆಯುತ್ತಿದ್ದ ಬೈಂದೂರಿನಲ್ಲಿ ಈ ಬಾರಿ ಬೆರಳೆಣಿಕೆ ಅತಿಥ್ಯಗಳು ಮಾತ್ರ ನಡೆದಿದೆ. ಪ್ರಮುಖ ರಾಜಕೀಯ ಪಕ್ಷಗಳಿಂದ ಮಧ್ಯವರ್ತಿಗಳಿಲ್ಲದೆ ನೇರವಾಗಿ ಮತದಾರರನ್ನು ತಲುಪುವ ಪ್ರಯತ್ನ ನಡೆದಿದೆ. ಚುನಾವಣಾ ಆಯೋಗದ ಕಟ್ಟು ನಿಟ್ಟಿನ ಪ್ರಯತ್ನಗಳ ನಡುವೆಯೂ ಬುಧವಾರ ರಾತ್ರಿ ಸುರಿದ ಭಾರಿ ಮಳೆಯ ನಡುವೆ ಭರ್ಜರಿ ಓಲೈಕೆ ತಂತ್ರಗಳು ನಡೆದಿವೆ.

ಗುರುವಾರ ಸಂಜೆಯ ಕತ್ತಲನ್ನು ಕಾಯುತ್ತಿರುವ ಬಾಟ್ಲಿ ಪ್ರಿಯ ಮತದಾರರಿಗೆ ಈ ಬಾರಿ ನಿರಾಶೆ ಖಂಡಿತ. ಚುನಾವಣಾ ಆಯೋಗದ ಕಟ್ಟು ನಿಟ್ಟಿನ ಕ್ರಮಗಳ ಜೊತೆಯಲ್ಲಿ, ಪೊಲೀಸ್‌ ಹಾಗೂ ಅಬಕಾರಿ ಇಲಾಖೆ ತೀವ್ರವಾದ ಕಣ್ಗಾವಲು ನಡೆಸುತ್ತಿದೆ. ಹಿಂದಿನ ಯಾವುದೆ ಚುನಾವಣೆಯಲ್ಲಿಯೂ ಕಣ್ಣಿಗೆ ಬೀಳದ ಮಧ್ಯ ಮಾರಾಟ ಅಂಗಡಿಗಳು ಈ ಬಾರಿ ಚುನಾವಣಾಧಿಕಾರಿಗಳ ಕಣ್ಣಿಗೆ ಬಿದ್ದು ದಂಡನೆಯನ್ನು ಅನುಭವಿಸಿದೆ. 9–11 ಮದ್ಯ ಅಂಗಡಿಗಳು ಈ ಕಾರಣಕ್ಕಾಗಿಯೇ ಮುಚ್ಚಿವೆ.

ರಾಜೇಶ್‌ ಕೆ.ಸಿ ಕುಂದಾಪುರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.