ಸೋಮವಾರ, ಮಾರ್ಚ್ 8, 2021
24 °C

ಮತ್ತೆ ಅಸ್ಮಿತೆಯ ಶೋಧದಲ್ಲಿ

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

ಮತ್ತೆ ಅಸ್ಮಿತೆಯ ಶೋಧದಲ್ಲಿ

ಸುಶಿಕ್ಷಿತ ಮಹಿಳೆಯರು ಸುಮ್ಮನೆ ಮನೆಯಲ್ಲಿ ಕೂರುವ ಕಾಲ ಇದಲ್ಲ. ಅಗತ್ಯ ಇದೆಯೋ, ಇಲ್ಲವೋ ಕಚೇರಿಗಳಲ್ಲಿ ದುಡಿಯುವುದು ಸಾಮಾನ್ಯ. ಆರ್ಥಿಕ ಸ್ವಾವಲಂಬನೆ ಬಯಸುವ ಹೆಣ್ಣುಮಕ್ಕಳು ಸುಲಭಕ್ಕೆ ಉದ್ಯೋಗದ ಹಾದಿ ತೊರೆಯುವುದಿಲ್ಲ. ಆದರೆ, ಮದುವೆಯಾದ ನಂತರ ಕೆಲವು ಸಂದರ್ಭಗಳು ಆಕೆಗೆ ಸವಾಲಾಗುತ್ತವೆ. ಮಗುವಾದ ನಂತರ ಅದನ್ನು ಬೆಳೆಸುವ ಜವಾಬ್ದಾರಿ ಇಬ್ಬರದ್ದಾದರೂ, ಜವಾಬ್ದಾರಿ ಹೊತ್ತುಕೊಳ್ಳುವ ವಿಷಯ ಬಂದಾಗ ತ್ಯಾಗ ಮಾಡುವ ಸರದಿ ಹೆಣ್ಣಿನದ್ದೇ.

ಮಗುವಿಗೆ ಆರು ತಿಂಗಳು ತುಂಬುತ್ತಿದ್ದಂತೆ ಹೆರಿಗೆ ರಜೆ ಮುಗಿಸಿಕೊಂಡು ಮಗುವನ್ನು ಕೆಲಸದವರ ಬಳಿ ಬಿಟ್ಟು ದುಡಿಯಲು ಹೋಗುವ ಮಹಿಳೆಯರಿಗೆ ಆತಂಕ ಇದ್ದದ್ದೇ. ಅದರಲ್ಲೂ ಮಹಾನಗರಗಳಲ್ಲಿ ವಾಸ ಮಾಡುವ ಯುವ ದಂಪತಿಯ ಆತಂಕ ಅಷ್ಟಕ್ಕೇ ಮುಗಿಯುವುದಿಲ್ಲ. ಕೆಲಸದವರನ್ನು ಸಾಕುವುದೇ ದೊಡ್ಡ ಸವಾಲೆನಿಸುವುದೂ ಇದೆ. ಈ ಎಲ್ಲಾ ಸವಾಲುಗಳ ನಡುವೆ ಮಕ್ಕಳನ್ನು ಹೆತ್ತ ನಂತರ ಒಂದಷ್ಟು ವರ್ಷ ಕೆಲಸಕ್ಕೆ ಗುಡ್‌ಬೈ ಹೇಳಿ ಮಕ್ಕಳ ಪಾಲನೆಯಲ್ಲೇ ಖುಷಿ ಪಡುವ ಅಮ್ಮಂದಿರೂ ಇದ್ದಾರೆ.

ಮಕ್ಕಳಿಗಾಗಿಯಷ್ಟೇ ಅಲ್ಲ, ತಮ್ಮ ಹೆತ್ತವರ ಪೋಷಣೆಗಾಗಿ ಉನ್ನತ ಹುದ್ದೆಗಳನ್ನೇ ತ್ಯಾಗ ಮಾಡಿದ ಹೆಣ್ಣುಮಕ್ಕಳೂ ಇದ್ದಾರೆ. ಹೀಗೆ ಕುಟುಂಬದ ನೆಮ್ಮದಿ, ಏಳಿಗೆಗಾಗಿ ತಮ್ಮ ವೈಯಕ್ತಿಕ ಬದುಕು, ಆಸೆ–ಆಕಾಂಕ್ಷೆಗಳನ್ನು ತ್ಯಾಗ ಮಾಡಿದ ಮಹಿಳೆಯರು ಗುರುತಾಗುವುದೇ ಇಲ್ಲ. ಅಮ್ಮಂದಿರ ದಿನದ ನೆಪದಲ್ಲಿ ಅಂಥ ಕೆಲವು ಅಮ್ಮಂದಿರು ಇಲ್ಲಿದ್ದಾರೆ...

ಬೆಂಗಳೂರಿನ ಅಮೃತಹಳ್ಳಿಯ ಪ್ರೇಮಾ ಕುಮಾರಿ ಎನ್ವಿರಾನ್‌ಮೆಂಟ್‌ ಎಂಜಿನಿಯರ್ ಪದವೀಧರರು. ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದವರು. 2009ರಲ್ಲಿ ಮಗ ನೀಲ್‌ ಹುಟ್ಟಿದ ನಂತರ ಆರು ತಿಂಗಳು ಹೆರಿಗೆ ರಜೆ ಮುಗಿಸಿ, ಅಮ್ಮನ ಮಡಿಲಲ್ಲಿ ಮಗನನ್ನಿಟ್ಟು ಮತ್ತೆ ಕೆಲಸಕ್ಕೆ ಹಾಜರಾಗುತ್ತಾರೆ. ಅಮ್ಮ ಊರಿಗೆ ಹೊರಡುವ ಸಮಯ ಬಂದೇ ಬಿಟ್ಟಿತು. ಡೇ ಕೇರ್‌ ಬಗ್ಗೆ ವಿಶ್ವಾಸವಿಲ್ಲದ ಪ್ರೇಮಾ ಕೆಲಸಕ್ಕೆ ರಾಜೀನಾಮೆ ನೀಡಿ ಮಗುವಿನ ಆರೈಕೆಯ ಹೊಣೆ ಹೊರುತ್ತಾರೆ. ಅದೂ ಒಂದೆರಡು ವರ್ಷ ಅಲ್ಲ ಮಗನಿಗೆ ಎಂಟು ವರ್ಷ ತುಂಬುವವರೆಗೂ ಗೃಹಿಣಿಯಾಗಿಯೇ ಇದ್ದರು. ಈಗ ಒಂದು ತಿಂಗಳಿಂದ ಮತ್ತೆ ಕೆಲಸಕ್ಕೆ ಸೇರಿದ್ದಾರೆ.

ಪುತ್ರ ನೀಲ್‌ ಜೊತೆ ಪ್ರೇಮಾ

‘ಡೇ ಕೇರ್‌ ಕೇಂದ್ರಗಳಲ್ಲಿ ಮಗುವನ್ನು ಬಿಡುವುದು ಅಷ್ಟು ಸುರಕ್ಷಿತ ಎಂಬ ನಂಬಿಕೆ ನನಗಿರಲಿಲ್ಲ. ಹಾಗಾಗಿ ಮಗನನ್ನು ನಾನೇ ನೋಡಿಕೊಳ್ಳುವ ನಿರ್ಧಾರಕ್ಕೆ ಬಂದೆ. ಬೆಳೆಯುತ್ತಾ ಮಗನಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಎರಡು ವರ್ಷಗಳಿಂದ ಹುಷಾರಾಗಿದ್ದಾನೆ. ಈಗ ಅವನಿಗೆ ಜವಾಬ್ದಾರಿ ಬಂದಿದೆ. ಒಂದು ತಿಂಗಳ ಹಿಂದೆ ಮತ್ತೆ ಎನ್ವಿರಾನ್‌ಮೆಂಟ್‌ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿದೆ. ಎಂಟು ವರ್ಷಗಳ ಬಿಡುವಿನ ನಂತರ ಕೆಲಸಕ್ಕೆ ಹೋಗುವುದು ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸುತ್ತದೆ. ಕೆಲಸ ಬಿಟ್ಟು ಮನೆಯಲ್ಲಿ ಇರುವುದೂ ಆರಂಭದಲ್ಲಿ ಕಷ್ಟ ಎನಿಸಿತ್ತು’ ಎಂದು ಪ್ರೇಮಾ ಹೇಳುತ್ತಾರೆ.

ಅಮ್ಮನಿಗಾಗಿ ಹುದ್ದೆ ತ್ಯಾಗ

ಗುಜರಾತಿನಲ್ಲಿ ಐಎಎಸ್‌ ಅಧಿಕಾರಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಅಗ್ಗಳಿಕೆಗೆ ಪಾತ್ರರಾಗಿದ್ದ ಗೌರಿ ತ್ರಿವೇದಿ 1986ರ ಕರ್ನಾಟಕ ಕೇಡರ್‌ನಲ್ಲಿ ಆಯ್ಕೆಯಾಗಿ ಇಪ್ಪತ್ತು ವರ್ಷ ಇಲ್ಲಿನ ವಿವಿಧ ಇಲಾಖೆಯ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರು. 2006ರಲ್ಲಿ ಅವರ ಅಮ್ಮ ಬಿದ್ದು ಸೊಂಟದ ಮೂಳೆ ಮುರಿಯುತ್ತದೆ. ಅದಾಗಲೇ ಅಪ್ಪ ಕೂಡಾ ಇದೇ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದರು. ಗೌರಿ ಅವರಿಗೆ ಅಮ್ಮನ ಆರೋಗ್ಯ ಕಾಳಜಿ ಮುಖ್ಯ ಎನಿಸಿದ್ದೇ ತಡ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಅಹಮದಾಬಾದಿಗೆ ತೆರಳಿ ಅಮ್ಮನ ಆರೈಕೆಯಲ್ಲಿ ತೊಡಗುತ್ತಾರೆ.

ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಗಳಿಸಿದ್ದ ಗೌರಿ ಅವರನ್ನು ಕಳುಹಿಸಲು ಸಾರ್ವಜನಿಕರು ಒಪ್ಪದೇ ಪ್ರತಿಭಟನೆಯನ್ನೂ ಮಾಡುತ್ತಾರೆ. ಗೌರಿ ಅವರ ಪೋಷಕರಿಗೆ ಪ್ರತ್ಯೇಕ ಮನೆಯ ವ್ಯವಸ್ಥೆ ಮಾಡಿ ಬೇಕಿರುವ ಎಲ್ಲ ಸೌಲಭ್ಯ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದರೂ, ‘ಅಮ್ಮನ ಮೇಲಿನ ಪ್ರೀತಿಗೆ ಇವ್ಯಾವುದೂ ಪರ್ಯಾಯವಾಗಲಾರದು’ ಎಂದು ಗೌರಿ ಹೇಳುತ್ತಾರೆ. ಹಾಗೆಯೇ ಮಾಡುತ್ತಾರೆ. ಅಮ್ಮನನ್ನು ಕೈ ಹಿಡಿದು ನಡೆಸುತ್ತಾರೆ. ಸೊಂಟದ ಮೂಳೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ, ಅದೂ 82ನೇ ವಯಸ್ಸಿನಲ್ಲಿ ಗೌರಿ ಅವರ ಅಮ್ಮ ಕೈಲಾಸ ಪರ್ವತ ಹತ್ತುತ್ತಾರೆ. ಕೈಲಾಸ ಪರ್ವತ ಏರಿದ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. ಈ ಸಾಧನೆಯ ಹಿಂದೆ ಮಗಳ ತ್ಯಾಗ, ಪರಿಶ್ರಮವಿದೆ.

‘ಮದುವೆಯ ನಂತರ ಓದಿ ಉದ್ಯಮಿಯಾದೆ’

ವಿಜಯಪುರ ಮೂಲದ ಪೂನಾ ನಿವಾಸಿ ಸುನೀತಾಗೆ 9ನೇ ತರಗತಿಯಲ್ಲಿರುವಾಗಲೇ ಮದುವೆಯಾಗುತ್ತದೆ. ನಂತರ ಶಿಕ್ಷಣ ಮುಂದುವರಿಸುತ್ತಾರೆ. ಪಿಯುಸಿಯಲ್ಲಿದ್ದಾಗ ಮಗುವಾಗುತ್ತದೆ. ಮಗುವಿನ ಪಾಲನೆಯ ಜೊತೆಗೆ ಹೊಟೇಲ್‌ ಮ್ಯಾನೇಜ್‌ಮೆಂಟ್ ಬಿಎಸ್ಸಿ ಪದವಿ ಪೂರೈಸಿ ಮುಂಬೈನ ‘ಐಟಿಸಿ ಗ್ರ್ಯಾಂಡ್‌ ಮರಾಠಾ’ ಹೊಟೇಲಿನಲ್ಲಿ ಬಾಣಸಿಗರಾಗಿ ಕಾರ್ಯ ನಿರ್ವಹಿಸುತ್ತಾರೆ. ಈಗ ತಮ್ಮದೇ ಸ್ವಂತ ಬ್ರ್ಯಾಂಡ್‌ ‘ಮ್ಯಾಜಿಕ್‌ ಫುಡ್ಸ್‌’ ಹೆಸರಿನಲ್ಲಿ ಉಪ್ಪಿನಕಾಯಿ, ಮಸಾಲೆ ಪದಾರ್ಥಗಳ ಉದ್ಯಮ ನಡೆಸುತ್ತಿದ್ದಾರೆ. 

‘ಮೂಲ ವಿಜಯಪುರದವರಾದರೂ ನಾನು ಹುಟ್ಟಿ ಬೆಳೆದಿದ್ದು ಪೂನಾದಲ್ಲಿ. ಮನೆಯಲ್ಲಿ ಬಡತನವಿತ್ತು. ಬೇಗನೇ ಮದುವೆಯಾಯಿತು. ಅಪ್ಪನ ಡ್ರೈವಿಂಗ್‌ ಸ್ಕೂಲ್‌ನಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದೆ. ನಂತರ ಬಿಎಸ್ಸಿ ಮಾಡಿ ಮುಂಬೈನಲ್ಲಿ ಕೆಲಸಕ್ಕೆ ಸೇರಿದೆ. ಸ್ವಂತದ್ದೇನಾದರೂ ಮಾಡುವ ಉದ್ದೇಶದಿಂದ ಒಂದು ವರ್ಷದ ಹಿಂದೆ ಸ್ವಂತ ಮಸಾಲೆ ಉದ್ಯಮ ಆರಂಭಸಿದ್ದೇನೆ. ಒಂಟಿಯಾಗಿ ಮಗಳನ್ನು ಬೆಳೆಸುತ್ತಾ ಉದ್ದಿಮೆಯನ್ನೂ ನಡೆಸುತ್ತಿದ್ದೇನೆ. ಕಷ್ಟಪಟ್ಟು ಬದುಕು ಕಟ್ಟಿಕೊಂಡ ಖುಷಿ ಇದೆ’ ಎನ್ನುತ್ತಾರೆ ಸುನೀತಾ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.