ಸೋಮವಾರ, ಮಾರ್ಚ್ 1, 2021
31 °C

ನಾವೆಲ್ಲ ಒಟ್ಟಿಗೆ ಹುಟ್ಟಿದ್ವಿ... ಅಲ್ವೇನಮ್ಮಾ?

ರಶ್ಮಿ ಎಸ್ Updated:

ಅಕ್ಷರ ಗಾತ್ರ : | |

ನಾವೆಲ್ಲ ಒಟ್ಟಿಗೆ ಹುಟ್ಟಿದ್ವಿ... ಅಲ್ವೇನಮ್ಮಾ?

ನಿನ್ನ ಮಡಿಲಲ್ಲಿ ಬೆಚ್ಚಗಿದ್ದಾಗಲೇ ಅಪ್ಪನ ಸಾಂಗತ್ಯ ಸಿಕ್ಕಿದ್ದು. ಸಣ್ಣದೊಂದು ಜೀವಕಣ, ದೇವಕಣದಂತೆ ನಾವು ಒಟ್ಟಾದೆವು. ಆ ಮಿಲನ ನಿಂಗೆ ಗೊತ್ತಾಗಿತ್ತಲ್ವಾ.. ಮೊಗದಲ್ಲೊಂದು ಕಿರುನಗೆ ಚೆಲ್ಲಿ ನೀ ಮಲಗಿದಾಗ... ನಾವು ಒಳಗೆ ದ್ವಿಗುಣ ಆಗ್ತಿದ್ವಿ. ನಿಧಾನಕ್ಕೆ ಜೀವಕೋಶಗಳೆಲ್ಲವೂ ಹೆಚ್ಚಾಗುತ್ತಿದ್ದವು. ನಿನಗದು ಗೊತ್ತಾಗಿರಲಿಲ್ಲ... ಆದ್ರೆ ನಾವು ಹಂಗೇನೆ... ಸುಮ್ಮನಿರಲೇ ಇಲ್ಲ. ಹೀಗೆ ಒಗ್ಗೂಡುತ್ತ, ನಿನ್ನ ಗರ್ಭಗೋಡೆಗೆ ಅಂಟಿಕೊಂಡಾಗಲೇ ನಮ್ಮ ಚಲನೆ ನಿನಗೂ ಗೊತ್ತಾಗಲಿ, ನಮ್ಮ ಇರುವ ಹೇಳುವ ಅಂದುಕೊಂಡಾಗಲೇ ಹೃದಯದ ಮಿಡಿತ ಆರಂಭವಾಗಿದ್ದು.

ಅಷ್ಟು ಹೊತ್ತಿಗಾಗಲೇ ನಿನಗೂ ನಿನ್ನೊಳಗಿನ ಬದಲಾವಣೆಯ ಅನುಭವ ಆಗಿತ್ತು. ಬೆಳಗೆದ್ದ ತಕ್ಷಣ, ಪಿತ್ತ ಯಾಕೋ ಹೆಚ್ಚಾಯಿತು ಎಂಬಂತೆ ಹೊಟ್ಟೆಯೊಳಗಿನದ್ದೆಲ್ಲ ಕಿತ್ತು ಹಾಕುತ್ತಿದ್ದೆ. ನಾವೆಲ್ಲ ಆಗ ಕುಣಿದಾಡುತ್ತಿದ್ದೆವು. ಏನೋ ಒಗ್ಗರಣೆ ವಾಸನೆಗೆ, ಏನಾದರೂ ಉಂಡರೆ, ತಿಂದರೆ ನಮ್ಮ ಜಾಗಕ್ಕೆಲ್ಲಿ ಕುತ್ತು ಬಂತೋ ಎಂಬಂತೆ ಹಾರಾಡುತ್ತಿದ್ದೆವು. ಒಳಗಿನದ್ದೆಲ್ಲ ಹೊರ ದಬ್ಬುತ್ತಿದ್ದೆವು. ಆ ಆಯಾಸವಿದ್ದರೂ ನೀನು ಮುಖ ಸಿಂಡರಿಸಲಿಲ್ಲ, ಮುಖ ಬಾಡಿಸಿಕೊಳ್ಳಲಿಲ್ಲ... ಇದ್ಯಾಕೋ ಅತಿ ಆಯ್ತು ಅನ್ನುವಂತೆ ತುಟಿಯಂಚಿನಲ್ಲೇ ನಗುತ್ತಿದ್ದೆ. ನಿಂಗೊತ್ತಿತ್ತು ಅಲ್ವಾ... ಮುಂದೆ ಇನ್ನೂ ತುಂಟತನ ಸಹಿಸಲಿದೆಯೆಂದು!

ವೈದ್ಯರ ಬಳಿ ಹೋದಾಗ ಮೊದಲ ಹೃದಯ ಬಡಿತ ಕೇಳಿದಾಗ ಅದ್ಯಾಕಮ್ಮ.. ನಿಂಗೆ ಕಣ್ಣೀರು... ನಗೆಮಿಂಚುವ ಕಣ್ಣಿನಲ್ಲೂ ಉಪ್ಪುಪ್ಪು ಕಣ್ಣೀರು.. ಇದ್ದಕ್ಕಿದ್ದಂತೆ ನೀನು ಬದಲಾಗುವೆ. ತಲೆನೋವಿದ್ದರೂ, ಪ್ರಾಣಹೋಗುವಂಥ ಮೈಕೈ ನೋವಿದ್ದರೂ ಮಾತ್ರೆ ನುಂಗದವಳು, ಮೈ ಸುಡುವ ಜ್ವರವಿದ್ದಾಗಲೂ ಔಷಧಿ ಬೇಡವೆಂದು ಆಲಸ್ಯ ತೋರುವವಳು, ವೈದ್ಯರು ಕೊಟ್ಟ ಮಾತ್ರೆಗಳನ್ನೆಲ್ಲ ಜೋಪಾನವಾಗಿಸಿಕೊಳ್ಳುವೆ. ಪ್ರತಿದಿನವೂ ಕರಾರುವಕ್ಕಾಗಿ ನುಂಗುವೆ. ಮೊದಲೆಲ್ಲ ಬಣ್ಣ ಚೆನ್ನಾಗಿಲ್ಲ, ಕಡುವಾಸನೆ, ಗಾತ್ರ ದೊಡ್ಡದಾಯಿತು, ನುಂಗಲಾಗುವುದಿಲ್ಲ ಎಂದು ಎಷ್ಟೆಲ್ಲ ನೆಪ ಹೇಳುತ್ತಿದ್ದೆ.. ಈಗ ನೋಡು ಮೂರು ಹೊತ್ತೂ ಮಾತ್ರೆ ನುಂಗ್ತೀಯ.. ಕಾಳಜಿ, ನಿನ್ನ ಬಗೆಗಲ್ಲ ನನ್ನ ಬಗೆಗೆ ಅನ್ನುವುದೂ ನನಗೆ ಗೊತ್ತು.

ನಾಲ್ಕು ತಿಂಗಳಾಗುವ ಹೊತ್ತಿಗೆ ಇಷ್ಟಿಷ್ಟೇ ನಿನ್ನ ಚರ್ಮ ಹಿಗ್ಗುವ ಪ್ರಕ್ರಿಯೆ ಆರಂಭವಾಗಿರುತ್ತದೆ. ಆಗೆಲ್ಲ ಹೊಟ್ಟೆಯನ್ನು ಕೆರೆದುಕೊಳ್ಳಬೇಕೆನಿಸಿದರೂ ಅದೆಲ್ಲಿ ನನಗೆ ತಾಕುವುದೋ ಎಂಬಂತೆ ಕೈ ಆಡಿಸುವೆ. ಗುರುತು ಮೂಡುವವು ಎಂಬ ಆತಂಕವೂ ನಿನ್ನ ಉಗುರುಗಳನ್ನು ತಡೆದಿರುತ್ತದೆ. ಅಷ್ಟರಲ್ಲಾಗಲೇ ಮುಖದ ಮೇಲೊಂದು ಕಾಂತಿ, ನೀನೊಬ್ಬಳೇ ಅಲ್ಲ ಎಂಬುದನ್ನು ಹೇಳುವಂತೆ ಮಿಂಚುತ್ತಿರುತ್ತದೆ. ಚೂರೆಚೂರು, ಊತ ಬಂದಂತಿರುವ ಹೊಟ್ಟೆಯಲ್ಲಾಗ ನನಗೆ ಕಣ್ಣೆವೆ ಮೂಡಿರುತ್ತವೆ. ಪುಟ್ಟ ಕೈ, ಕಾಲುಗಳೂ ಟಿಸಿಲೊಡೆದಿರುತ್ತವೆ.

ಐದು ಮುಗಿಯುತ್ತ ಬಂದಂತೆ ನಾನು ರೂಪತಳೆಯುತ್ತೇನೆ. ಆಗಾಗ ಕೈಕಾಲು ಆಡಿಸುತ್ತೇನೆ. ಹಸಿವಾದಾಗ ಒಂದೆರಡು ಸಲ ಎಚ್ಚರಿಕೆ ನೀಡುತ್ತೇನೆ. ಆರು ತಿಂಗಳು ಮುಗಿಯುತ್ತ ಬಂದಾಗ, ನನಗಿಷ್ಟವಾದುದೆಲ್ಲವೂ ನೀ ತಿನ್ನುವಂತೆ ಉತ್ತೇಜಿಸುತ್ತೇನೆ. ಇಷ್ಟದ್ದೆಲ್ಲ ಹೊಟ್ಟೆಗಿಳಿದಾಗ ಆನಂದದಿಂದ ಗಿರಕಿ ಹೊಡೆಯುತ್ತೇನೆ. ಏಳು ತಿಂಗಳಾದಾಗ ನಾನು ನಿನ್ನ ಶಿಶು. ಆದರೆ ಇನ್ನೂ ಶ್ವಾಸಕೋಶ ಬೆಳೆಯಬೇಕು. ಮಿದುಳಿನ ನರವ್ಯೂಹ ಬೆಳೆಯಬೇಕು. ಅದಾಗಲೇ ಹೊರ ಸದ್ದುಗಳನ್ನೆಲ್ಲ ಕೇಳುತ್ತಿರುತ್ತೇನೆ. ನಿನ್ನ ಕೈ ಬಳೆ ನಾದ ಕೇಳಿದರೆ ಸಾಕು, ನನಗೊಂದು ಬೆಚ್ಚನೆಯ ಭಾವ ಸಿಗುತ್ತದೆ. ಅಪ್ಪನ ಧ್ವನಿ ಕೇಳುತ್ತಲೇ ಬೆಳೆಯುತ್ತೇನೆ. ನನಗಿನ್ನು ಎಲ್ಲವೂ ತಿಳಿಯುತ್ತದೆ. ನೀನು ಆನಂದದಲ್ಲಿರುವೆಯೋ ಇಲ್ಲವೋ, ದುಗುಡದಲ್ಲಿದ್ದರೆ ನನ್ನ ಹೃದಯ ಬಡಿತವೂ ಹೆಚ್ಚಾಗುತ್ತದೆ. ಕೆಲವೊಮ್ಮೆ ನಿನ್ನ ರಕ್ತದ ಏರೊತ್ತಡದಿಂದಾಗಿ ನಾನು ಚಲಿಸುವುದು ನಿಲ್ಲಿಸುತ್ತೇನೆ. ಆಗೆಲ್ಲ ಒಂಚೂರು ಗಮನ ಕೊಡೇ ಅಮ್ಮ... ಗಂಟೆಗೊಂದೆರಡು ಸಲವಾದರೂ ನಾನು ನಿನ್ನ ತಟ್ಟಿದೆನಾ? ಒದ್ದೆನಾ ಎನ್ನುವುದರ ಕಡೆಗೆ ಗಮನ ಕೊಡು ಅಮ್ಮ...

ನಿನ್ನ ದೇಹವೂ ನನ್ನಂತೆಯೇ ರೂಪುಗೊಳ್ಳುತ್ತಿರುತ್ತದೆ. ನೀ ನನಗೆ ಹಾಲುಣಿಸಬೇಕು. ರಾತ್ರಿಯೆಲ್ಲ ಎದ್ದಿರಬೇಕು. ನನ್ನ ಭಾರ ಹೊರಬೇಕು. ಹೊಟ್ಟೆ ಹೊತ್ತು ಮಲಗಲಾಗುವುದಿಲ್ಲ. ಅಂಗಾತ ಮಲಗಿದರೆ ಎದುಸಿರು, ತಿರುಗಿ ಮಲಗಿದರೂ ನಿದ್ದೆಯಿಲ್ಲ... ಕೊನೆಕೊನೆಯ ತಿಂಗಳುಗಳನ್ನು ನಾ ಹುಟ್ಟಿದ ಮೇಲೆ ನಿದ್ದೆ ಕಸಿಯುವುದನ್ನು ಅಭ್ಯಾಸ ಮಾಡಿಸುತ್ತಿರುವೆ ಅಮ್ಮಾ... ನೀ ಕೈ ಆಡಿಸುತ್ತ ಕಾಣುವ ಕನಸುಗಳು ನನ್ನೊಟ್ಟಿಗೆ ಹಂಚಿಕೊಳ್ಳುವೆ ಎಂಬುದು ಗೊತ್ತಿದೆಯಾ?

ಇನ್ನೇನು ಕೊನೆಯ ದಿನಗಳು. ನಾನು ತಲೆ ಕೆಳಗಾಗಿರುವೆ. ಆಗಾಗ ಒದೆಒದೆದು ನಿನಗೆ ಎಚ್ಚರಿಸುತ್ತಲೇ ಇರುವೆ. ಇನ್ನೇನು ನಾನು ಹೊರಬರಬೇಕು ಎನ್ನುವಾಗ ನಿನ್ನ ನಾಭಿಯಾಳದಲ್ಲೊಂದು ಛಳಕು. ನೋವಿನ ಆ ಎಳೆ ಮಿಂಚು ನಾಭಿಯಿಂದ ಬೆನ್ನು ಮೂಳೆಯವರೆಗೂ ಸಂಚರಿಸಿ ಬರುತ್ತದೆ.  ಇಡೀ ಮೈ ನಡುಗಿಸುವಂಥ ನೋವಿದು. ಹಣೆಯ ಮೇಲೆ ಬೆವರ ಹನಿ, ಕಿವಿ ಹಿಂದಿನಿಂದ ಕತ್ತಿನ ಮೇಲೆ ಜಾರಿ ಮೈ ಒದ್ದೆಗೊಳಿಸುವಾಗಲೂ ನೋವು ಅವಡುಗಚ್ಚಿ ಹಿಡಿಯುವೆ. ಅದೆಲ್ಲಿಂದ ಆ ಶಕ್ತಿ ಬರುವುದೋ ನಿನ್ನಲ್ಲಿ... ನನ್ನ ಬರುವಿಗಾಗಿ ಇಡೀ ದೇಹವನ್ನೇ ಅಗಲಗಲವಾಗಿಸುವೆ... ನಾನೋ... ನನ್ನ ಪುಟ್ಟ ಭುಜ, ತಲೆ ಎಲ್ಲವನ್ನೂ ಆ ಕಿರುದಾರಿಯಿಂದಲೇ ಜಾರುವ ಯತ್ನ ಮಾಡುತ್ತಿರುತ್ತೇನೆ. ಅದೂ ನಿನಗೆ ನೋವು... ಆದರೆ ಅದೋ.. ಅಲ್ಲಿ ಬೆಳಕು... ಬೆಚ್ಚನೆಯ ನಿನ್ನ ಮಡಿಲಿನಿಂದ ಜಾರಿ ಲೋಕಕ್ಕೆ ಬಂದಾಗ ಒಂದು ಸಣ್ಣ ಎಳೆಗಾಳಿ ಸೋಕುತ್ತದೆ. ಅತಿಗಾಳಿ ಮುಖಕ್ಕೆ ಸೋಕಿದೊಡನೆ ಅಳು.. ಆ ಅಳು ನಿನ್ನ ಕಿವಿಗೆ ಬಿತ್ತೇನಮ್ಮಾ... ಆ ನೋವಿನಲ್ಲೂ ಕಣ್ರೆಪ್ಪೆ ನಿಧಾನವಾಗಿ ತೆಗೆದು ನೋಡಿ, ನಕ್ಕೆಯಲ್ಲ... ಅದು ನಂಗೆ ತಿಳೀತು. ನಾನಷ್ಟೇ ಹುಟ್ಟಲಿಲ್ಲ... ನೀನೂ ಅಮ್ಮನಾಗಿ ಹುಟ್ಟಿದೆ. ಅಪ್ಪನೂ ಹುಟ್ಟಿದ.

ಹ್ಯಾಪ್ಪಿ ಮದರ್ಸ್‌ ಡೇ ಅಮ್ಮ... 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.