ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನೊಂದಿಗೆ ಸವಿನೆನಪಿನ ಸೆಲ್ಫಿ

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ತಾಯಿ ಎಂದರೆ ಭರವಸೆ, ಪತ್ರಿ ಮಗುವಿನ ಸೋಲು-ಗೆಲುವಿನಲ್ಲೂ ತಾಯಿಯ ಪಾತ್ರ ಬಹಳ ದೊಡ್ಡದು. ಅದರಲ್ಲೂ ಹೆಣ್ಣುಮಗುವಿಗೆ ತಾಯಿಯ ಮಡಿಲಿನ ಆಸರೆ ಸದಾ ಬೇಕು, ತಮ್ಮ ಮಗಳನ್ನು ಗಂಡು ಮಕ್ಕಳಂತೆ ಧೈರ್ಯಶಾಲಿಯಾಗಿ ಬೆಳೆಸಬೇಕು ಎಂಬ ಆಸೆಯೊಂದಿಗೆ ತಾಯಿ ಕೆಲವೊಮ್ಮೆ ಮಗಳೊಂದಿಗೆ ನಿಷ್ಠೂರವಾಗಿ ನಡೆದುಕೊಳ್ಳುತ್ತಾಳೆ. ಆದರೆ ಈ ನಿಷ್ಠೂರದ ಹಿಂದೆ ತಾಯಿಯ ಕಾಳಜಿಯ ಭಾವವಿರುತ್ತದೆ. ಜೀವನದಲ್ಲಿ ತಾಯಿಯೊಂದಿಗೆ ಕಳೆದ ಎಲ್ಲಾ ಕ್ಷಣಗಳು ಮಕ್ಕಳಿಗೆ ಅಮೂಲ್ಯವೇ ಅಂತಹುದರಲ್ಲಿ ಒಂದನ್ನು ಹೆಕ್ಕಿ, ತಮಗೆ ಅವಿಸ್ಮರಣೀಯ ಎನ್ನಿಸಿದ ಒಂದು ಘಟನೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಕೆಲ ಸೆಲಬ್ರೆಟಿಗಳು, ಇದು ತಾಯಂದಿರ ದಿನದ ವಿಶೇಷವೂ ಹೌದು…

 ನನ್ನ ಹೊಗಳಿದ ಆ ದಿನ... : ಸ್ವರ್ಶಾ ಆರ್‌ಕೆ, ಗಾಯಕಿ
ನಾನು ಚಿಕ್ಕ ವಯಸ್ಸಿನಿಂದಲೂ ತುಂಬಾ ತಲೆ ಹರಟೆಯಾಗಿದ್ದೆ. ಆದರೆ ನೃತ್ಯ, ಸಂಗೀತ, ಕ್ರೀಡೆ, ಓದು – ಎಲ್ಲದರಲ್ಲೂ ಮುಂದಿದ್ದೆ. ನನಗೆ ನಾನು ಹಾಡುಗಾರ್ತಿ ಆಗುತ್ತೇನೆ ಎಂಬ ಭರವಸೆ ಇರಲಿಲ್ಲ. ಆದರೆ ಅಮ್ಮನಿಗೆ ನಾನು ಹಾಡುಗಾರ್ತಿ ಆಗೇ ಆಗುತ್ತೇನೆ ಎನ್ನುವ ನಂಬಿಕೆ ಇತ್ತು. ಅವಳು ಯಾವಾಗಲೂ ನನ್ನ ‘ಬೆಸ್ಟ್‌ ಕ್ರಿಟಿಕ್‌’ ಆಗಿದ್ದಳು. ನಾನು ಮಾಡಿದ ಯಾವುದೇ ಕೆಲಸವಾಗಲಿ ಅಮ್ಮ ಹೊಗಳಿದರೆ ಮಾತ್ರ ಆ ಕೆಲಸ ಪರಿಪೂರ್ಣವಾಗಿತ್ತು ಎಂದು ಅಂದುಕೊಳ್ಳುತ್ತೇನೆ. ಯಾಕೆಂದರೆ ಅಮ್ಮ ಅಷ್ಟು ಸುಲಭವಾಗಿ ನನ್ನನ್ನು ಹೊಗಳುತ್ತಿರಲಿಲ್ಲ. ನಾನು ದೊಡ್ಡವಳಾದ ಮೇಲೆ ಹಾಡುವುದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆದಾಗ, ಮೊದಲ ಬಾರಿ ಹಿನ್ನೆಲೆ ಗಾಯನಕ್ಕೆ ಹಾಡಿದಾಗ ಅಮ್ಮ ’ನಿಜವಾಗಲೂ ತುಂಬಾ ಚೆನ್ನಾಗಿ ಹಾಡಿದ್ದೀಯಾ, ಇವತ್ತು ನೀನು ನನ್ನ ಕನಸನ್ನು ನನಸು ಮಾಡಿದ್ದೀಯಾ ಅಂತ ಅನ್ನಿಸುತ್ತಿದೆ’ ಎಂದು ಹೇಳಿದ್ದರು. ಆ ಒಂದು ದಿನ, ಘಟನೆ ನನ್ನ ಜೀವನದಲ್ಲಿ ತುಂಬಾ ಅಮೂಲ್ಯ ಎಂದು ನನಗನ್ನಿಸಿತ್ತು. ಯಾಕೆಂದರೆ ತಾಯಿ ನಂಬಿಕೆಯನ್ನು ನಾನು ಉಳಿಸಿಕೊಂಡೆ ಎನ್ನುವುದೊಂದು, ಜೊತೆಗೆ ನನ್ನ ‘ಬೆಸ್ಟ್ ಕ್ರಿಟಿಕ್’ ಶಹಬ್ಬಾಸ್ ಗಿರಿ ಕೊಟ್ಟಳು ಎನ್ನುವ ಕಾರಣಕ್ಕೆ. ನನಗೂ ಅವಳಿಗೂ ಸಂತೋಷ ನೀಡಿದ ಆ ದಿನ ನಿಜಕ್ಕೂ ನನ್ನ ಜೀವನದ ಅಮೂಲ್ಯ ಘಟನೆ ಎನ್ನಿಸಿತ್ತು.
*
ಧೈರ್ಯದ ಪ್ರತಿರೂಪ ಅವ್ವಾ…: ಸುಮನಾ ಕಿತ್ತೂರು, ನಿರ್ದೇಶಕಿ

ತಾಯಿ ಅಂದರೆ ನನ್ನವ್ವಳ ಜೊತೆ ಕಳೆದ ಪ್ರತಿ ಕ್ಷಣ, ಪ್ರತಿ ಘಟನೆಯೂ ನನಗೆ ಅಮೂಲ್ಯವೇ. ಬದುಕಿನ ಎಲ್ಲಾ ಸಮಸ್ಯೆಗೂ ಪರಿಹಾರ ಕಂಡುಕೊಂಡು ಮುಂದೆ ಸಾಗಬೇಕು, ಎಲ್ಲಿಯೂ ಹತಾಶರಾಗಬಾರದು ಎಂಬ ಜೀವನ ಪಾಠ ಹೇಳಿಕೊಟ್ಟ ನಮ್ಮವ್ವ ಇಂದು ಸಾವಿನ ಮನೆ ಬಾಗಿಲು ತಟ್ಟುತ್ತಿದ್ದಾಳೆ. ಈ ಹೊತ್ತಿನಲ್ಲೂ ನನಗೆ ಅವಳೊಂದಿಗೆ ಕಳೆದ, ಈಗಲೂ ನಾನು ನೆನಪಿಸಿಕೊಳ್ಳುವ ಒಂದು ಘಟನೆ ಎಂದರೆ ಒಮ್ಮೆ ನಾನು ಅವ್ವನೊಂದಿಗೆ ನಮ್ಮೂರಿನ ದೇವಸ್ಥಾನಕ್ಕೆ ಹೋಗಿದ್ದೆ, ಅಲ್ಲಿ ಒಬ್ಬರ ಮೈ ಮೇಲೆ ದೇವರು ಬಂದಿತ್ತು. ಆ ದೇವರು ಎಲ್ಲರಿಗೂ ಏನೋನೋ ಹೇಳ್ತಾ ಇತ್ತು. ನಮ್ಮವ್ವ ಅದರ ಕಡೆ ಲಕ್ಷ್ಯ ಕೊಡದೇ ಅವರ ಪಾಡಿಗೆ ಅವರು ಗೊಣಗಿಕೊಂಡು ಹೋಗುತ್ತಿದ್ದರು. ಆ ದೇವರು ಸುಮ್ಮನಿರಲಾರದೆ ‘ನಿಂಗೇನ್ ಬೇಕು, ಹೇಳು ತಾಯಿ’ ಎಂದಿತ್ತು. ಆಗ ನಮ್ಮವ್ವ ಇರೋರು ‘ಲೋ ದ್ಯಾವ್ರೇ, ಮೈ ಮೇಲೆ ಬಂದ ದೇವರು ನಿನಗೆ ಏನು ಮಾಡ್ತಾ ಇಲ್ಲ, ಇನ್ನು ನನಗೆ ಮಾಡ್ತಾದಾ, ಸುಮ್ನೆ ಮುಚ್ಕೊಂಡು ನಿನ್ ಕ್ಯಾಮೆ ನೀನ್ ಮಾಡ್ಲಾ’ ಎಂದಿದ್ದರು. ಅಷ್ಟಕ್ಕೆ ಮೈಮೇಲೆ ಬಂದಿದ್ದ ದೇವರು ಹಾಗೇ ಹೊರಟುಹೋಗಿತ್ತು. ನನಗೆ ಇವತ್ತಿಗೂ ಆ ದೇವಸ್ಥಾನದ ಬಳಿ ಹೋದರೆ ಆ ಘಟನೆ ನೆನಪಿಗೆ ಬಂದು ನಗು ಬರುತ್ತದೆ. ಒಬ್ಬಳು ಹೆಣ್ಣಾಗಿ ಹೇಗೆ ಸ್ವಾತಂತ್ರಳಾಗಿ ಇರಬೇಕು ಎಂಬುದನ್ನು ಕಲಿಸಿದ್ದ ನನ್ನವ್ವಳ ಬಗ್ಗೆ ನನಗೆ ಹೆಮ್ಮೆ ಎನ್ನಿಸುತ್ತದೆ.
*


ನಿವೇದಿತಾ ಗೌಡ, ಬಿಗ್‌ಬಾಸ್ ಸ್ಪರ್ಧಿ

ಅಮ್ಮನ ಪ್ರೀತಿಯ ಪರಿ ಅರಿವಾದಾಗ.. : ನಿವೇದಿತಾ ಗೌಡ, ಬಿಗ್‌ಬಾಸ್ ಸ್ಪರ್ಧಿ

ನನ್ನ ಅಮ್ಮನ ಬಗ್ಗೆ ಸದಾ ನೆನಪಿನಲ್ಲುಳಿಯುವ ಘಟನೆ ಎಂದರೆ ಬಿಗ್‌ಬಾಸ್ ಮನೆಯದ್ದು. ನಾನು ಆ ಮನೆಯೊಳಗೆ ಹೋದ ಮೇಲೆ ಸುಮಾರು 2, 1/2 ತಿಂಗಳುಗಳ ಕಾಲ ಅವಳನ್ನು ನೋಡೇ ಇರಲಿಲ್ಲ. ಹುಟ್ಟಿದಾಗಿನಿಂದ ಅದೇ ಮೊದಲ ಬಾರಿ ಅಷ್ಟು ದಿನಗಳ ಕಾಲ ನಾನು ಅಮ್ಮನಿಂದ ದೂರ ಉಳಿದಿದ್ದು. ಅಷ್ಟು ದಿನಗಳು ಕಳೆದ ಮೇಲೆ ಒಂದು ದಿನ ಅಮ್ಮನನ್ನು ನೋಡುವ ಅವಕಾಶ ಸಿಕ್ಕಿತ್ತು. ಆ ಕ್ಷಣ ಹೇಗಿತ್ತು ಎಂದರೆ ನನ್ನ ಬಾಯಿಂದ ಒಂದೇ ಒಂದು ಮಾತು ಕೂಡ ಹೊರಡಲಿಲ್ಲ, ನಾನು ಸುಮ್ಮನೆ ಅಮ್ಮನನ್ನು ನೋಡುತ್ತಾ ನಿಂತಿದ್ದೆ. ನನಗೆ ಜೊತೆಗಿರುವಾಗ ಅವರು ನನ್ನನ್ನು ಎಷ್ಟು ಪ್ರೀತಿಸುತ್ತಾರೆ, ಕಾಳಜಿ ತೋರುತ್ತಾರೆ ಎಂಬುದೆಲ್ಲಾ ಅಷ್ಟರ ಮಟ್ಟಿಗೆ ಅರಿವಾಗಿರಲಿಲ್ಲ. ಆಗೆಲ್ಲಾ ಹಾಸ್ಟೆಲ್‌ಗೆ ಹೋಗಬೇಕು ಎಂದೆಲ್ಲಾ ಅಂದುಕೊಳ್ಳುತ್ತಿದ್ದೆ. ಆದರೆ ಬಿಗ್‌ಬಾಸ್‌ ಮನೆ ಒಳಗೆ ಅಮ್ಮ ಬಂದ ಎರಡೇ ನಿಮಿಷದಲ್ಲಿ ಅಮ್ಮನ ಪ್ರೀತಿ, ಕಾಳಜಿ ಎಲ್ಲವೂ ಅರಿವಾಗಿತ್ತು.

*
ಅಮ್ಮ ಅತ್ತ ಆ ದಿನ...: ಮಯೂರಿ, ಡಾನ್ಸರ್‌

ಚಿಕ್ಕವಳಾಗಿದ್ದಾಗ ನನ್ನದು ತುಂಬಾ ಕೀಟಲೆಯ ಸ್ವಭಾವ. ಅಮ್ಮ ನಾನು ಡಾನ್ಸ್ ಚೆನ್ನಾಗಿ ಮಾಡುತ್ತೇನೆ, ನನಗೆ ಅದರಲ್ಲಿ ಆಸಕ್ತಿ ಎಂದುಕೊಂಡು ಭರತನಾಟ್ಯ ತರಗತಿಗೆ ಸೇರಿಸಿದ್ದರು. ಭರತನಾಟ್ಯ ಕಲಿಯಲು ತುಂಬಾ ಶಿಸ್ತು ಬೇಕಿತ್ತು. ನನಗೆ ಅದನ್ನು ಕಲಿಯಲು ತುಂಬಾ ಕಷ್ಟವಾಗುತ್ತಿತ್ತು. ಕಾರಣ ನನಗೆ ಸುಮ್ಮನೆ ಓಡಾಡಿಕೊಂಡು, ಆಟವಾಡಿಕೊಂಡು ಡಾನ್ಸ್ ಮಾಡುವುದು ಇಷ್ಟವಿತ್ತು. ಶಿಸ್ತು, ಸಂಪ್ರದಾಯಬದ್ಧವಾದ ಭರತನಾಟ್ಯ ಕಲಿಯಲು ನನ್ನಿಂದ ಆಗುತ್ತಿರಲಿಲ್ಲ. ಅದಕ್ಕಾಗಿ ಏನು ಮಾಡುತ್ತಿದ್ದೆ ಎಂದರೆ ಮನೆಯಿಂದ ಭರತನ್ಯಾಟ ತರಗತಿಗೆ ಎಂದು ಹೇಳಿ ಹೊರಟು ಅಲ್ಲಿಗೆ ಹೋಗುತ್ತಿರಲಿಲ್ಲ. ಬದಲಾಗಿ ಅಲ್ಲಿ, ಇಲ್ಲಿ ಆಟ ಆಡಿಕೊಂಡು ಕ್ಲಾಸ್ ಮುಗಿಯುವ ಸಮಯಕ್ಕೆ ಮನೆಗೆ ಹೊರಡುತ್ತಿದ್ದೆ. ಹೀಗೆ ಒಂದೆರಡು ಸಲ ಮಾಡಿದ ಮೇಲೆ ನನ್ನ ಅಮ್ಮ ಹಾಗೂ ಟೀಚರ್‌ಗೆ ವಿಷಯ ತಿಳಿಯಿತು. ಅಮ್ಮ ವಿಷಯ ತಿಳಿದ ಮೇಲೆ ತುಂಬಾ ಬೇಜಾರಾಗಿ ಅಳಲು ಪ್ರಾರಂಭಿಸಿದ್ದರು. ನಾನು ಆಗ ಚಿಕ್ಕ ಹುಡುಗಿಯಾಗಿದ್ದರೂ ಅವರು ಅತ್ತಿದ್ದು ನೋಡಿ ಸಂಕಟವಾಗಿತ್ತು. ಅಮ್ಮನ ಅಳು ನಿಲ್ಲಿಸಬೇಕೆಂದು ನಾನು ಆ ದಿನ ಅಮ್ಮನಿಗೆ ‘ನಾನು ದೊಡ್ಡ ಡಾನ್ಸರ್ ಆಗಿಯೇ ಆಗುತ್ತೇನೆ’ ಎಂದು ಪ್ರಾಮಿಸ್ ಮಾಡಿದ್ದೆ. ಈಗಲೂ ನನಗೆ ಆ ದಿನದ ಅಮ್ಮನ ಕಣ್ಣಿರು ನೆನಪಿಸಿಕೊಂಡರೆ ನಾನು ಇಂದು ಡಾನ್ಸರ್‌ ಆಗಲು ಅದೇ ಕಾರಣವಿರಬಹುದು ಎನ್ನಿಸುತ್ತದೆ. ಅಮ್ಮನ ಕನಸು ನನಸು ಮಾಡಿದ ಖುಷಿ ನನ್ನಲ್ಲಿದೆ.


ಮಯೂರಿ

*
ಅಮ್ಮನೂ ಹಾಡಿದಾಗ : ವಾರಿಜಶ್ರೀ ವೇಣುಗೋಪಾಲ್‌, ಗಾಯಕಿ

ನಾನು ಸೇಲಂ ಸುಂದರೇಶನ್ ಅವರ ಬಳಿ ಸಂಗೀತ ಅಭ್ಯಾಸ ಮಾಡಲು ಆರಂಭಿಸಿದ್ದು, ಆಗ ನನಗೆ 10ರಿಂದ 11 ವರ್ಷ ಇರಬಹುದು. ಆಗ ಅಮ್ಮ ನನ್ನನ್ನು ಪಾಠಕ್ಕೆ ಕರೆದುಕೊಂಡು ಹೋಗಿ ಬರುವುದು ಮಾಡುತ್ತಿದ್ದರು. ನಮ್ಮ ತಾಯಿಯೂ ಸಣ್ಣ ವಯಸ್ಸಿನಿಂದಲೇ ಸಂಗೀತಾಭ್ಯಾಸ ಮಾಡಿದವರು. ಪಾಠಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಒಂದು ದಿನ ಸುಂದರೇಶನ್ ಅವರ ಮುಂದೆ ಹಾಡಿದರು. ಅವತ್ತು ಅವರ ಹಾಡು ಕೇಳಿದ ಮೇಲೆ ನಮ್ಮ ಗುರುಗಳಿಗೆ ತುಂಬಾ ಸಂತೋಷವಾಗಿತ್ತು. ಇಂಥ ಒಳ್ಳೆ ಸ್ವರ ಇಟ್ಟುಕೊಂಡು ಯಾಕೆ ಸುಮ್ಮನಿದ್ದೀರಿ, ನೀವು ಹಾಡಬೇಕು, ನೀವು ಕಛೇರಿ ಮಾಡಬೇಕು, ಬನ್ನಿ ಪಾಠಕ್ಕೆ ಸೇರಿಕೊಳ್ಳಿ ಎಂದು ಅಮ್ಮನನ್ನು ಅಲ್ಲಿ ಪಾಠಕ್ಕೆ ಸೇರಿಸಿಕೊಂಡರು. ಆ ದಿನ ನನಗೆ ತಿಳಿದಿದ್ದು ತಾಯಿಯಾದವಳು ತನ್ನಲ್ಲಿರುವ ಎಲ್ಲಾ ಪ್ರತಿಭೆಯನ್ನು ತನ್ನೊಳಗೆ ಇರಿಸಿಕೊಂಡು ಮಕ್ಕಳಲ್ಲಿ ಅದು ನೋಡುತ್ತಾಳಲ್ಲ, ಆ ಗುಣ ತಾಯಿ ಬಿಟ್ಟರೆ ಬೇರೊಬ್ಬರಲ್ಲಿ ಕಾಣಲಿಕಿಲ್ಲ ಎಂಬುದು. ನಿಜಕ್ಕೂ ಆ ದಿನ ನನ್ನಲ್ಲಿ ಅಮ್ಮ ಎಂದರೆ ಏನು ಎನ್ನುವುದನ್ನು ಅರ್ಥ ಮಾಡಿಸಿದ ದಿನವಾಗಿತ್ತು.

*
ಅಮ್ಮನೆಂಬ ವಿರ್ಮಶಕಿ : ರೂಪ ಗುರುರಾಜ್‌

ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ
ನನ್ನ ಹಡೆದವ್ಗೆ ಬಲು ಇಷ್ಟ ಬಳೆಗಾರ
ಕೊಂಡ್ಹೊಯ್ಯೊ ಇದನು ತವರೀಗೆ .......

ಈ ಹಾಡು ಕೇಳಿದಾಗಲೆಲ್ಲಾ ....ಅಮ್ಮನ ದುಂಡಗಿನ ಕೈ , ಅದರಲ್ಲಿ ಸದಾ ನಗುವ ಕೆಂಪು ಕಚ್ಚಿನ ಬಳೆ ಮತ್ತೆ ಹೃದಯವನ್ನು ಹಸಿಯಾಗಿಸಿ, ಮುಖದ ಮೇಲೊಂದು ಪುಟ್ಟ ಪ್ರೀತಿಯ ನಗು ತೇಲಿಸುತ್ತದೆ.

ಗಾಢ ಕೆಂಪು, ಹಸಿರು ನೀಲಿ ಅಮ್ಮನಿಗೆ ಇಷ್ಟವಾದ ಬಣ್ಣಗಳು. ಸದಾ ನನ್ನನ್ನೂ ಗಾಢ ಬಣ್ಣದ ಬಟ್ಟೆಗಳಲ್ಲೇ ಸಿಂಗರಿಸುತ್ತಾ... ಅಬ್ಬ ಕೆಂಪು ನಿನಗೆ ಚೆನ್ನಾಗಿ ಒಪ್ಪುತ್ತೆ ಅಂತ ಕಣ್ತುಂಬಿಕೊಳ್ಳುವ ಮುಗ್ದೆ.

ಅತಿಯಾದ ಪ್ರೀತಿ, ನಚ್ಚು ಇವ್ಯಾವುದೂ ಅಮ್ಮನಿಗೆ ಹೇಳಿ ಮಾಡಿಸಿದ್ದಲ್ಲ. ಜ್ವರ ಬಂದು ಮಲಗಿದಾಗಲೂ ಆರೈಕೆ ಮಾಡುತ್ತದ್ದಳೇ ಹೊರತು ಅತಿಯಾಗಿ ಮುದ್ದಿಸುವುದು ಅವಳ ಜಾಯಮಾನದಲ್ಲೇ ಇಲ್ಲ.

ಹೀಗಾಗೇ ನಾನು ನನ್ನ ತಮ್ಮ ಒಂದು ರೀತಿ ಗಟ್ಟಿಯಾಗುತ್ತಲೇ ಬೆಳೆದೆವೇನೋ ಅಮ್ಮನ ಸುಪರ್ದಿನಲ್ಲಿ. ತಪ್ಪನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿ, ದಂಡಿಸಿ, ಒಳಿತಿಗೆ ಸಣ್ಣದಾಗಿ ಕಿರುನಗೆಯಲ್ಲೇ ಮೆಚ್ಚುಗೆ ಸೂಚಿಸುತ್ತಿದ್ದ ಅಮ್ಮ ನಿಜ ಅರ್ಥದಲ್ಲಿ ನನ್ನ ಜೀವನದ ಅತೀ ದೊಡ್ಡ ವಿಮರ್ಶಕಿ.

ಮದುವೆಯಾಗಿ, ಮಗ ಹುಟ್ಟಿದ ನಂತರ ಮತ್ತೆ ಏನನ್ನಾದರೂ ಮಾಡುವ ಹಂಬಲಕ್ಕೆ ಚಂದನದಲ್ಲಿ ವಾರ್ತಾ ವಾಚಕಿಯಾಗಿ ಕೆಲಸ ಸಿಕ್ಕಾಗ ಅದೇನೋ ಪ್ರಪಂಚವನ್ನೇ ಗೆದ್ದ ಸಂಭ್ರಮ. ಮನೆ, ಮಗ ಸಂಸಾರ ಎಲ್ಲಾ ನಿಭಾಯಿಸಿ ತರಬೇತಿ ಮುಗಿಸಿ
ಮೊದಲ ದಿನ ಲೈವ್ ನ್ಯೂಸ್ ಓದಬೇಕಾದಾಗ ಕಾಲೆಲ್ಲಾ ತಣ್ಣಗಾದ ಅನುಭವ.

ಮನೆಯವರು, ನೆಂಟರು, ಸ್ನೇಹಿತರು ಎಲ್ಲಾ ಕಾತರದಿಂದ ನನ್ನ ವಾರ್ತಾವಾಚನ ವೀಕ್ಷಿಸಲು ಕಾದುಕುಳಿತಿದ್ದರು. ಅಂತೂ ಇಂತೂ ಅರ್ಧ ಸಂಭ್ರಮ ಅರ್ಧ ಭಯದಲ್ಲಿ ಮೊದಲ ದಿನದ ವಾರ್ತೆ ಓದಿ ಮುಗಿಸಿದಾಗ ಮನೆಯಿಂದ, ಸ್ನೇಹಿತರಿಂದ ಕರೆಗಳ ಸರಮಾಲೆ.

ಇಷ್ಟೆಲ್ಲಾ ಆದರೂ ಅಮ್ಮನಿಗೆ ಏನನ್ನಿಸಿತೋ, ಅವಳಿಗೆ ನನ್ನ ವಾರ್ತೆ ಓದುವ ರೀತಿ, ಸೀರೆ, ಅಲಂಕಾರ ಸರಿಹೋಯಿತೋ ಇಲ್ಲವೊ ಎಂದು ಅದೊಂದು ರೀತಿಯ ಅಳುಕು ಎದೆಯಲ್ಲಿ. ಕೊನೆಗೂ ಅಪ್ಪ ಕರೆಮಾಡಿ ಚೆನ್ನಾಗಿ ಓದಿದೆ, ಇನ್ನೂ ಗೆಲುವಾಗಿರು ಮುಖದಲ್ಲಿ ಆತಂಕ ಏಕೆ? ಎಂದು ಕೇಳುತಿದ್ದರೂ ಮನಸ್ಸೆಲ್ಲಾ ಅಮ್ಮನ ಮೇಲೇ. ಅಮ್ಮ ಎಲ್ಲಿ, ಅವಳು ನಾ ಓದಿದ್ದು ನೋಡಿದಳಾ, ಏನೆಂದಳು, ಇಷ್ಟವಾಯಿತಾ? ಒಂದೇ ಉಸಿರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದೆ ಅಪ್ಪನಿಗೆ. ಇಲ್ಲೇ ಇದ್ದಾಳೆ ನೋಡು, ಎಂದು ಪೋನು ಅವಳ ಕೈಗಿತ್ತಾಗ ಎದೆ ಬಡಿತ ಕಿವಿಗೆ ರಾಚುತಿತ್ತು. ಅತ್ತಲಿಂದ ಅಮ್ಮನ ದನಿ ‘ರೂಪ... ನಿನ್ನ ಟಿವಿಯಲ್ಲಿ ನೋಡಿ ಬಹಳಾ ಖುಷಿಯಾಯ್ತು. ನಿನ್ನ ಹಸಿರು ಸೀರೆ, ಕನ್ನಡ ಉಚ್ಚಾರ, ಅಲಂಕಾರ ಎಲ್ಲಾ, ನನ್ನ ಸ್ನೇಹಿತೆಯರಿಗೆಲ್ಲಾ ಹೇಳಿದ್ದೀನಿ ನೀನು ಬರ್ತಿಯಾ ಅಂತ. ಎಲ್ಲಾ ನಿನ್ನ ನೋಡಿ ಪೋನು ಮಾಡುತ್ತಾ ಇದ್ದಾರೆ ಅಂತ ಸಂಭ್ರಮದಿಂದ ಇನ್ನೂ ಅದೇನೇನು ಹೇಳುತ್ತದ್ದಳೋ ಅಮ್ಮ... ಕಣ್ಣು ಮಂಜಾಗಿ, ಅಮ್ಮನ ಅಕ್ಕರೆ,  ಮುಗ್ದತೆ, ಪ್ರೀತಿಗೆ ಹೃದಯ ತುಂಬಿ ಬಂದು ಮೆಲ್ಲಗೆ ಬಿಕ್ಕಿದೆ... ಅಮ್ಮ ನೀನು ಚೆನ್ನಾಗಿ ಓದಿದೆ ಅಂದ ಮೇಲೆ ಆಯ್ತು ಬಿಡು ಪ್ರಪಂಚವೇ ನನ್ನ ಮೆಚ್ಚಿಕೊಂಡಂತೆ.

ನಿಜವೇ ಅಮ್ಮ ಒಂದು ಪುಟ್ಟ ಪ್ರಶಂಸೆ ಅಂದಿನ ನನ್ನ ಜೀವನದ ದೊಡ್ಡ ಗೆಲುವಿನ ಮೆಟ್ಟಲಾಗಿತ್ತು .

ಇಂದಿಗೂ ಅಮ್ಮನ ಒಂದು ಕಿರುನಗೆಯ ಪ್ರಶಂಸೆಗೆ ಅದೇನೇ ಬಂದರೂ ಎದುರಿಸುವ ಹುಮ್ಮಸ್ಸು ನನ್ನದು. ನನ್ನೆಲ್ಲಾ ಕನಸುಗಳಿಗೆ ಉಸಿರಾಗುವ ಜೀವ ಮಾತ್ರ ಅಮ್ಮನದ್ದು .

*

ಕನಸು ನನಸಾಗಿಸಿದ ಖುಷಿ.. : ಅನುಶ್ರೀ, ಕಾರ್ಯಕ್ರಮ ನಿರೂಪಕಿ

ಅಮ್ಮನ ಜೊತೆ ಕಳೆದ ಪ್ರತಿ ಕ್ಷಣವೂ ನನಗೆ ಅಮೂಲ್ಯವೇ. ಆದರೆ ನಮ್ಮಿಬ್ಬರ ಒಡನಾಟದ ಒಂದು ಅಮೂಲ್ಯ ದಿನ ಎಂದರೆ 2014ರ ಎ‌ಪ್ರಿಲ್‌ 18. ಕಾರಣ ಅಂದು ನಾನು ನನ್ನ ಅಮ್ಮನ ಕನಸನ್ನು ನನಸಾಗಿಸಿದ್ದೆ. ಅಮ್ಮನಿಗೆ ಮೊದಲಿನಿಂದಲೂ ಇದ್ದಿದ್ದು ಒಂದೇ ಒಂದು ಕನಸು ಮತ್ತು ಆಸೆ, ಅದು ನಮ್ಮ ಸ್ವಂತ ಮನೆಯದ್ದು. ಆ ದಿನ ನಾನು ಅಮ್ಮನನ್ನು ಸ್ವಂತ ಮನೆ ಬಾಗಿಲಿನಲ್ಲಿ ನಿಲ್ಲಿಸಿದಾಗ ಅವಳ ಕಣ್ಣಲ್ಲಿ ಕಂಡ ಸಂತೋಷ, ಮಗಳ ಬಗ್ಗೆ ಮೂಡಿದ ಹೆಮ್ಮೆ ಎಂದೆದಿಗೂ ನನಗೆ ಮರೆಯಲಾಗುವುದಿಲ್ಲ.

*

ಅಮ್ಮನೊಂದಿಗೆ ಸ್ಟೇಜ್ ಹಂಚಿಕೊಂಡಿದ್ದು.. : ಅನುಪಮಾ, ನಟಿ

ನಾನು ‘ಡಾನ್ಸಿಂಗ್ ಸ್ಟಾರ್’ ರಿಯಾಲಿಟಿ ಷೋನಲ್ಲಿದ್ದಾಗ ಆ ಕಾರ್ಯಕ್ರಮದಲ್ಲಿ ಫ್ಯಾಮಿಲಿ ರೌಂಡ್ ಇತ್ತು. ನಾನು ನನ್ನ ತಂಗಿಯನ್ನು ಕರೆದುಕೊಂಡು ಹೋಗಿದ್ದೆ. ಆದರೆ ಚಾನೆಲ್ ಅವರು ನಮ್ಮ ತಾಯಿಯನ್ನು ಅಲ್ಲಿಗೆ ಕರೆಸಿ ಸರ್‌ಪ್ರೈಸ್‌ ನೀಡಿದ್ದರು. ಎಂದೂ ಎಣಿಸಿರದ ಆ ಘಟನೆ ನನ್ನ ಜೀವನದಲ್ಲೇ ತುಂಬಾ ಅಮೂಲ್ಯವಾದದ್ದು. ಆ ಕ್ಷಣ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.  ಅಮ್ಮ ಬಂದು ಸ್ಟೇಜ್ ಮೇಲೆ ನನ್ನೊಂದಿಗೆ ಡಾನ್ಸ್ ಮಾಡಿದ್ದು ಎಲ್ಲವೂ ನೆನಪಿನ ಬುತ್ತಿಯಲ್ಲಿ ಸದಾ ಹಸಿರಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT