ಗುರುವಾರ , ಮಾರ್ಚ್ 4, 2021
30 °C
ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿಕೆ

ರಿಷಭ್‌ಗೆ ಉಜ್ವಲ ಭವಿಷ್ಯವಿದೆ: ಗಂಗೂಲಿ

ಪಿಟಿಐ Updated:

ಅಕ್ಷರ ಗಾತ್ರ : | |

ರಿಷಭ್‌ಗೆ ಉಜ್ವಲ ಭವಿಷ್ಯವಿದೆ: ಗಂಗೂಲಿ

ಕೋಲ್ಕತ್ತ: ‘ರಿಷಭ್‌ ಪಂತ್‌ ಪ್ರತಿಭಾವಂತ ಬ್ಯಾಟ್ಸ್‌ಮನ್‌. ಸನ್‌ರೈಸರ್ಸ್‌ ಹೈದರಾಬಾದ್‌ ಎದುರಿನ ಐಪಿಎಲ್‌ ಪಂದ್ಯದಲ್ಲಿ ಅವರು ಸಿಡಿಸಿದ ಶತಕ ಅಮೋಘವಾದುದು. ಅವರಿಗೆ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತದೆ’ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

ಗುರುವಾರ ನಡೆದಿದ್ದ ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ರಿಷಭ್‌, 68 ಎಸೆತಗಳಲ್ಲಿ ಅಜೇಯ 128ರನ್‌ ದಾಖಲಿಸಿದ್ದರು. ಈ ಮೂಲಕ ಐ‍ಪಿಎಲ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.

ಭಾರತದ ಪರ ನಾಲ್ಕು ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ಅವರು ಒಟ್ಟು 73ರನ್‌ ಗಳಿಸಿದ್ದಾರೆ. ಎಂ.ಎಸ್‌.ಕೆ.‍ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಇತ್ತೀಚೆಗೆ ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ಎದುರಿನ ಟ್ವೆಂಟಿ–20 ಕ್ರಿಕೆಟ್‌ ಸರಣಿಗಳಿಗೆ ಪ್ರಕಟಿಸಿದ್ದ ತಂಡದಲ್ಲಿ ರಿಷಭ್‌ಗೆ ಅವಕಾಶ ನೀಡಿರಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಗಂಗೂಲಿ ‘ರಿಷಭ್‌ ಮತ್ತು ಇಶಾನ್‌ ಕಿಶನ್‌ ‍ಪ್ರತಿಭಾವಂತರು. ಇವರು ಇನ್ನಷ್ಟು ಪ್ರಬುದ್ಧರಾಗಬೇಕು. ಹೊಸ ಕೌಶಲಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಳ್ಳಬೇಕು. ಜೊತೆಗೆ ಆಟದಲ್ಲಿ ಸ್ಥಿರತೆ ಕಾಪಾಡಿಕೊಂಡು ಸಾಗಬೇಕು. ಹಾಗಾದಲ್ಲಿ ಖಂಡಿತವಾಗಿಯೂ ಭಾರತ ತಂಡದಲ್ಲಿ ಸ್ಥಾನ ಸಿಗಲಿದೆ’ ಎಂದಿದ್ದಾರೆ.

‘ಮಹೇಂದ್ರ ಸಿಂಗ್‌ ದೋನಿ ವಿಶ್ವದ ಶ್ರೇಷ್ಠ ವಿಕೆಟ್‌ ಕೀಪರ್‌. ಅವರು ಬ್ಯಾಟಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ದಿನೇಶ್‌ ಕಾರ್ತಿಕ್‌ ಕೂಡ ಮೋಡಿ ಮಾಡುತ್ತಿದ್ದಾರೆ. ಇವರನ್ನು ತಂಡದಿಂದ ಹೊರಗಿಟ್ಟು ರಿಷಭ್‌ ಅಥವಾ ಕಿಶನ್‌ಗೆ ಸ್ಥಾನ ನೀಡಲು ಸಾಧ್ಯವಿಲ್ಲ‌’ ಎಂದು ನುಡಿದಿದ್ದಾರೆ.

‘ಐಪಿಎಲ್‌ ಮೊದಲ ಆವೃತ್ತಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಬ್ರೆಂಡನ್‌ ಮೆಕ್ಲಮ್‌ 73 ಎಸೆತಗಳಲ್ಲಿ 158ರನ್‌ ಗಳಿಸಿದ್ದನ್ನು ಹತ್ತಿರದಿಂದ ನೋಡಿದ್ದೆ. ರಿಷಭ್‌ ಗಳಿಸಿದ ಶತಕ, ಮೆಕ್ಲಮ್‌ ಅವರ ಆಟ ನೆನಪಿಸುವಂತಿತ್ತು. ಡೆಲ್ಲಿ ತಂಡ ಆರಂಭದಲ್ಲೇ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಒತ್ತಡದ ಪರಿಸ್ಥಿತಿಯಲ್ಲೂ ರಿಷಭ್‌ ಕೆಚ್ಚೆದೆಯಿಂದ ಹೋರಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ರಿಷಭ್‌ ಅವರ ಇನಿಂಗ್ಸ್‌ ವಿಶೇಷವಾದುದು. ಭುವನೇಶ್ವರ್‌ ಕುಮಾರ್‌ ಹಾಕಿದ ಎಸೆತಗಳನ್ನು ಅವರು ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟುತ್ತಿದ್ದ ರೀತಿ ಮನ ಸೆಳೆಯುವಂತಿದ್ದವು’ ಎಂದು ವೀರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.