ಅಭ್ಯರ್ಥಿಯ ಘನತೆಗೆ ಧಕ್ಕೆ ತರುವ ಸುದ್ದಿ ಪ್ರಚಾರ ಸಲ್ಲದು: ಹೈಕೋರ್ಟ್‌

7

ಅಭ್ಯರ್ಥಿಯ ಘನತೆಗೆ ಧಕ್ಕೆ ತರುವ ಸುದ್ದಿ ಪ್ರಚಾರ ಸಲ್ಲದು: ಹೈಕೋರ್ಟ್‌

Published:
Updated:

ಬೆಂಗಳೂರು: ‘ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿಯ ಘನತೆಗೆ ಧಕ್ಕೆ ತರುವ ಸುದ್ದಿಯನ್ನು ಟಿ.ವಿ‌. ಚಾನೆಲ್‌ಗಳು, ವೃತ್ತ ಪತ್ರಿಕೆಗಳು, ಸಾಮಾಜಿಕ ಜಾಲತಾಣ, ರೇಡಿಯೊ, ವೆಬ್ ಪೋರ್ಟಲ್, ಮನರಂಜನಾ ಚಾನೆಲ್‌ಗಳಲ್ಲಿ ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಶ್ರೀರಾಮುಲು, ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಪಾತದ ತೀರ್ಪು ಪಡೆಯಲು ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಪ್ರಭಾವ ಬೀರಿದ್ದರು ಎಂದು ಟಿ.ವಿ. ಚಾನೆಲ್‌ಗಳು ಪ್ರಸಾರ ಮಾಡುತ್ತಿರುವುದನ್ನು ನಿರ್ಬಂಧಿಸಬೇಕು’ ಎಂದು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಈ ಕುರಿತಂತೆ ಬಿಜೆಪಿ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲು ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು, ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ರಜಾ ಕಾಲದ ಏಕಸದಸ್ಯ ವಿಶೇಷ ನ್ಯಾಯಪೀಠ ಶುಕ್ರವಾರ ನಡೆಸಿತು.

ನಿರ್ಬಂಧ ಏಕೆ?: ‘ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಹಣ, ಮದ್ಯ ಹಂಚುವ ಸುದ್ದಿಯನ್ನು ಅಥವಾ ಮತದಾರರ ಹಿತದೃಷ್ಟಿಯಿಂದ ನಡೆಸುವ ಮಾರುವೇಷದ ಕಾರ್ಯಾಚರಣೆಗಳನ್ನು ಟಿ.ವಿ. ಚಾನೆಲ್‌ಗಳು ಬಿತ್ತರಿಸಿದರೆ ತಪ್ಪೇನು’ ಎಂದು ನ್ಯಾಯಮೂರ್ತಿ, ಚುನಾವಣಾ ಆಯೋಗದ ಪರ ಹಾಜರಿದ್ದ ವಕೀಲ ಎಸ್‌.ಆರ್.ದೊಡವಾಡ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ದೊಡವಾಡ, ‘ಸ್ವಾಮಿ, ಹಾಗೇನೂ ಇಲ್ಲ. ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದನ್ನು ಪ್ರಸಾರ ಮಾಡುವುದಕ್ಕೆ ಯಾವುದೇ ಮಾಧ್ಯಮಗಳ ಮೇಲೂ ನಿರ್ಬಂಧ ವಿಧಿಸಲಿಲ್ಲ. ಆಯೋಗವು ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಹೆಜ್ಜೆಯನ್ನೇ ಅನುಸರಿಸುತ್ತಿದೆ’ ಎಂದರು.

ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಎಂ.ಅರುಣ್ ಶ್ಯಾಮ್ ಹಾಗೂ ಎಸ್.ರಾಜಶೇಖರ್ ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry