ಮೆಗಾಡೀಲ್‌ನಿಂದ ನಮಗೇನು ಲಾಭ?

7

ಮೆಗಾಡೀಲ್‌ನಿಂದ ನಮಗೇನು ಲಾಭ?

Published:
Updated:
ಮೆಗಾಡೀಲ್‌ನಿಂದ ನಮಗೇನು ಲಾಭ?

ಸದ್ಯದ ಮಟ್ಟಿಗೆ ಇಡೀ ದೇಶದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯದ್ದೇ ಚರ್ಚೆ. ಇದರ ನಡುವೆಯೂ ಒಂದು ವಾಣಿಜ್ಯ ಸುದ್ದಿ ಎಲ್ಲರ ಗಮನ ಸೆಳೆದಿದೆ. ಹಲವರಲ್ಲಿ ನಿರೀಕ್ಷೆಗಳನ್ನೂ, ಕೆಲವರಲ್ಲಿ ಆತಂಕಗಳನ್ನೂ ಹುಟ್ಟುಹಾಕಿದೆ. ಚಿಲ್ಲರೆ ಮಾರಾಟದಲ್ಲಿ ದೈತ್ಯ ಕಂಪನಿ ಎನಿಸಿಕೊಂಡಿರುವ ಅಮೆರಿಕ ಮೂಲದ ‘ವಾಲ್‌ಮಾರ್ಟ್‌’, ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ದೇಶವ್ಯಾಪಿ ಇ–ಕಾಮರ್ಸ್‌ ಸೇವೆ ನೀಡುತ್ತಿದ್ದ ಫ್ಲಿಪ್‌ಕಾರ್ಟ್‌ ಕಂಪನಿಯ ಶೇ 77 ಪಾಲು ಬಂಡವಾಳವನ್ನು ₹ 1.07 ಲಕ್ಷ ಕೋಟಿ ಮೊತ್ತಕ್ಕೆ ಖರೀದಿಸಿದೆ. ಈ ವ್ಯವಹಾರ ದೇಶದ ಭವಿಷ್ಯವನ್ನೂ ತನ್ನದೇ ಆದ ರೀತಿಯಲ್ಲಿ ಪ್ರಭಾವಿಸಬಲ್ಲದು.

ಗ್ರಾಹಕರಿಗೆ ಲಾಭವಾಗಲಿದೆಯೇ?

ಕಂಪನಿಗಳ ನಡುವೆ ಸ್ಪರ್ಧೆ ಹೆಚ್ಚಾದಂತೆ ಗ್ರಾಹಕರಿಗೆ ಸಿಗುವ ರಿಯಾಯ್ತಿ ಸಹ ಹೆಚ್ಚಾಗುತ್ತದೆ. ಬಿಗ್ ಬಿಲಿಯನ್ ಸೇಲ್ಸ್ ಅಥವಾ ದಿ ಗ್ರೇಟ್ ಇಂಡಿಯನ್ ಸೇಲ್‌ನಂಥ ಕೊಡುಗೆಗಳಿಗೆ ಭಾರತದ ಗ್ರಾಹಕರು ಹೊಂದಿಕೊಂಡಿದ್ದಾರೆ. ಇಂಥ ಆಫರ್‌ಗಳನ್ನು  ಇನ್ನು ಮುಂದೆ ಇನ್ನೂ ಹೆಚ್ಚಾಗಿ ನಿರೀಕ್ಷಿಸಬಹುದು.

ಫ್ಲಿಪ್‌ಕಾರ್ಟ್‌ ಕಂಪನಿಯನ್ನು ಅಮೆಜಾನ್ ಖರೀದಿಸಲಿದೆ ಎಂಬ ಮಾತು ಈ ಹಿಂದೆ ಕೇಳಿ ಬರುತ್ತಿತ್ತು. ಒಂದು ವೇಳೆ ಅದು ನಿಜವಾಗಿದ್ದರೆ ದೇಶದ ಇ–ಕಾಮರ್ಸ್‌ ವಲಯದಲ್ಲಿ ಸಮಬಲದ ಸ್ಪರ್ಧೆಯೇ ಇರುತ್ತಿರಲಿಲ್ಲ. ಅಮೆಜಾನ್ ಹೇಳಿದ್ದೇ ನಿಯಮ, ನಿಗದಿಪಡಿಸಿದ್ದೇ ದರ ಎನ್ನುವ ಪರಿಸ್ಥಿತಿ ನಿರ್ಮಾಣವಾಗುವ ಅಪಾಯ ಇತ್ತು. ಈಗ ವಾಲ್‌ಮಾರ್ಟ್‌ ಪ್ರವೇಶದೊಂದಿಗೆ ಇ–ಕಾಮರ್ಸ್ ಕ್ಷೇತ್ರದಲ್ಲಿ ಏಕಸ್ವಾಮ್ಯದ ಸಾಧ್ಯತೆ ತಪ್ಪಿದಂತೆ ಆಗಿದೆ.

ವಾಲ್‌ಮಾರ್ಟ್‌ ಮೂಲಕ ವಿವಿಧ ದೇಶಗಳ ಉತ್ಪನ್ನಗಳು ಕಡಿಮೆ ಬೆಲೆಗೆ ಭಾರತಕ್ಕೆ ಬರಲಿವೆ ಎಂಬ ನಿರೀಕ್ಷೆ ಇದೆ. ಅಮೆಜಾನ್ ತನ್ನ ‘ಪ್ರೈಮ್’ ಗ್ರಾಹಕರಿಗೆ ಒಂದೇ ದಿನದಲ್ಲಿ ವಸ್ತುಗಳನ್ನು ತಲುಪಿಸುವ ತ್ವರಿತ ಡೆಲಿವರಿಯ ಭರವಸೆ ನೀಡಿದೆ. ವಾಲ್‌ಮಾರ್ಟ್‌ ತನ್ನ ಎಲ್ಲ ಗ್ರಾಹಕರಿಗೂ ಇಂಥದ್ದೇ ಸವಲತ್ತು ಘೋಷಣೆ ಮಾಡಿದರೆ, ಅಮೆಜಾನ್ ಸಹ ತನ್ನ ಇತರ ಗ್ರಾಹಕರಿಗೂ ಈ ಸೌಲಭ್ಯ ವಿಸ್ತರಿಸಬಹುದು.

ಮತ್ತಷ್ಟು ರಿಯಾಯ್ತಿಗಳು ಸಿಗಬಹುದೇ?

ಅಮೆರಿಕ ಮಾರುಕಟ್ಟೆಯಲ್ಲಿ ಸಿಂಹಪಾಲು ಪಡೆಯಲೆಂದು ಹೋರಾಡುತ್ತಿದ್ದ ಅಮೆಜಾನ್ ಮತ್ತು ವಾಲ್‌ಮಾರ್ಟ್‌ ಇದೀಗ ಯುವಜನರ ಸಂಖ್ಯೆಯೇ ಹೆಚ್ಚಾಗಿರುವ ಭಾರತಕ್ಕೆ ಕಾಲಿಟ್ಟಿವೆ. ಸಣ್ಣಸಣ್ಣ ಕಂಪನಿಗಳ ಖರೀದಿಯನ್ನು ಫ್ಲಿಪ್‌ಕಾರ್ಟ್‌ ತನ್ನ ಮಾರುಕಟ್ಟೆ ವಿಸ್ತರಣೆಯ ಕಾರ್ಯತಂತ್ರವನ್ನಾಗಿಸಿಕೊಂಡಿತ್ತು. ಇದೀಗ ಮಾರುಕಟ್ಟೆ ಸ್ವಾಮ್ಯಕ್ಕಾಗಿ ನಡೆಯಲಿರುವ ಹೋರಾಟದಲ್ಲಿ ಸಹಜವಾಗಿಯೇ ಇನ್ನಷ್ಟು ಸಣ್ಣ ಕಂಪನಿಗಳನ್ನು ಅಮೆಜಾನ್ ಖರೀದಿಸಬಹುದು. ಪೇಟಿಎಂ ಮತ್ತು ಸ್ನ್ಯಾಪ್‌ಡೀಲ್‌ ಮಾರುಕಟ್ಟೆಯಲ್ಲಿದ್ದರೂ ನಿಜವಾದ ಹೋರಾಟ ಅಮೆಜಾನ್– ವಾಲ್‌ಮಾರ್ಟ್‌ ನಡುವೆಯೇ ನಡೆಯಲಿದೆ. ತನ್ನದೇ ಇ–ಕಿಂಡಿಯ ಮೂಲಕ ತಮ್ಮ ಉತ್ಪನ್ನಗಳನ್ನು ಮಾರುವಂತೆ ವ್ಯಾಪಾರಿಗಳನ್ನು ಮತ್ತು ಕೊಳ್ಳುವಂತೆ ಗ್ರಾಹಕರನ್ನು ಎರಡೂ ಕಂಪನಿಗಳು ಓಲೈಸುವುದು ಸಹಜ. ಹೀಗಾಗಿ ಎರಡೂ ಕಂಪನಿಗಳು ಹೆಚ್ಚು ರಿಯಾಯ್ತಿಗಳನ್ನು ಘೋಷಿಸುವ ಸಾಧ್ಯತೆ ಇದೆ.

ದೇಶದ ಆರ್ಥಿಕತೆಗೆ ಲಾಭವಾದೀತೆ?

ಇದಕ್ಕೆ ತಜ್ಞರು ಹೌದು ಮತ್ತು ಇಲ್ಲ ಎಂಬ ಎರಡೂ ಉತ್ತರಗಳನ್ನು ಹೇಳುತ್ತಿದ್ದಾರೆ. ಅಮೆಜಾನ್, ಭಾರತದಲ್ಲಿ ₹30 ಸಾವಿರ ಕೋಟಿಯಷ್ಟು ಮೊತ್ತವನ್ನು ಹೂಡಿಕೆ ಮಾಡಲು ನಿರ್ಧರಿಸಿತ್ತು. ಇದೀಗ ವಾಲ್‌ಮಾರ್ಟ್ ರಂಗಪ್ರವೇಶ ಈ ಮೊತ್ತ ಮತ್ತಷ್ಟು ಹೆಚ್ಚಾಗಲು ಕಾರಣವಾಗಬಹುದು. ಎರಡು ದೈತ್ಯ ಕಂಪನಿಗಳ ಪೈಪೋಟಿಯು  ಪೂರೈಕೆ ಸರಣಿಗಳ ಜೊತೆಗೆ ದೊಡ್ಡ ಮಟ್ಟದ ಉದ್ಯೋಗಾವಕಾಶ ಸೃಷ್ಟಿಗೂ ಕಾರಣವಾಗಲಿದೆ. ಭಾರತದ ಒಟ್ಟು ದೇಶೀಯ ಬಳಕೆ ಪ್ರಮಾಣವು ಪ್ರಸ್ತುತ ₹ 87 ಲಕ್ಷ  ಕೋಟಿಯಷ್ಟಿದೆ. ಇದು 2027ರ ವೇಳೆಗೆ ₹ 241 ಲಕ್ಷ ಕೋಟಿಗಳಿಗೆ ಮುಟ್ಟುವ ನಿರೀಕ್ಷೆ ಇದೆ. ಸದ್ಯಕ್ಕೆ ದೇಶಿ ರಿಟೇಲ್‌ ಮಾರುಕಟ್ಟೆಯ ವಹಿವಾಟು ₹ 43.55 ಲಕ್ಷ ಕೋಟಿಗಳಷ್ಟಿದೆ.

ಇದು 2027ಕ್ಕೆ ₹ 120.6 ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಇಷ್ಟು ಅಗಾಧ ಪ್ರಮಾಣದ ಬೇಡಿಕೆಗೆ ತಕ್ಕಂತೆ ತಯಾರಿಕೆ ಮತ್ತು ಸಾಗಣೆ ಜಾಲ ನಿರ್ಮಾಣವಾಗುವುದರಿಂದ ಆರ್ಥಿಕತೆಗೆ ಲಾಭವಾಗಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಸ್ಥಳೀಯ ಉದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳು ಈ ಇಬ್ಬರೂ ದೈತ್ಯರ ನೆರಳಿನಲ್ಲೇ ವಹಿವಾಟು ನಡೆಸಬೇಕಾಗುವುದರಿಂದ ದೀರ್ಘಾವಧಿಯಲ್ಲಿ ಈ ಬೆಳವಣಿಗೆ ಅನಪೇಕ್ಷಿತ ಪರಿಣಾಮಗಳನ್ನೂ ತಂದೊಡ್ಡಬಲ್ಲದು ಎಂಬ ಆತಂಕ ವ್ಯಕ್ತವಾಗಿದೆ.

ಫ್ಲಿಪ್‌ಕಾರ್ಟ್‌ ಖರೀದಿಯಿಂದ ವಾಲ್‌ಮಾರ್ಟ್‌ಗೆ ಲಾಭವಾಗಲಿದೆಯೇ?

ಭಾರತದ ಚಿಲ್ಲರೆ ಮಾರಾಟ ಕ್ಷೇತ್ರ ಪ್ರವೇಶಿಸಬೇಕೆಂದು ವಾಲ್‌ಮಾರ್ಟ್ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿತ್ತು. ಆದರೆ ಕಠಿಣ ಕಾನೂನು ಕಾರಣಗಳಿಂದಾಗಿ ಈವರೆಗೆ ಕೇವಲ ಸಗಟು ಮಾರಾಟ ಕ್ಷೇತ್ರಕ್ಕೆ ಸೀಮಿತಗೊಂಡಿತ್ತು. ದೇಶದ 19 ನಗರಗಳಲ್ಲಿ ವಾಲ್‌ಮಾರ್ಟ್‌ ತನ್ನ 21 ‘ಬೆಸ್ಟ್‌ ಪ್ರೈಸ್ ಸ್ಟೋರ್ಸ್‌’ಗಳ ಮೂಲಕ ಕಾರ್ಯಾಚರಣೆ ಮಾಡುತ್ತಿದೆ. ಫ್ಲಿಪ್‌ಕಾರ್ಟ್‌ ಮೂಲಕ ಇ–ಕಾಮರ್ಸ್‌ನ ದೊಡ್ಡ ಸಾಧ್ಯತೆಯೊಂದು ವಾಲ್‌ಮಾರ್ಟ್‌ಗೆ ಸಿಕ್ಕಂತೆ ಆಗಿದೆ.

ಫ್ಲಿಪ್‌ಕಾರ್ಟ್‌ ಜೊತೆಗೆ ಮಿಂತ್ರಾ, ಜಬಾಂಗ್, ಫೋನ್‌ಪೆ (ಡಿಜಿಟಲ್ ಪೇಮೆಂಟ್), ಇ ಕಾರ್ಟ್ ಸಹ ವಾಲ್‌ಮಾರ್ಟ್‌ ತೆಕ್ಕೆ ಸೇರಿವೆ. ಆನ್‌ಲೈನ್ ಮಾರುಕಟ್ಟೆಯ ಫ್ಯಾಷನ್‌ ವಿಭಾಗದಲ್ಲಿ ಫ್ಲಿಪ್‌ಕಾರ್ಟ್‌, ಮಿಂತ್ರಾ ಮತ್ತು ಜಬಾಂಗ್ ಶೇ 70ರಷ್ಟು ಪಾಲು ಹೊಂದಿವೆ. ಇ–ಕಾರ್ಟ್ 800 ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರತಿದಿನ 5 ಲಕ್ಷ ವಿಳಾಸಗಳಿಗೆ ಸರಕು ವಿಲೇವಾರಿ ಮಾಡುತ್ತಿದೆ.

ಭಾರತದ ಇ–ಕಾಮರ್ಸ್‌ ಸ್ಥಿತಿಗತಿ

ಭಾರತದ ಇಂಟರ್ನೆಟ್ ಬಳಕೆದಾರರ ಸಂಖ್ಯೆ 45 ಕೋಟಿ. ಈ ಪೈಕಿ ಶೇ 14ರಷ್ಟು ಮಂದಿ ಮಾತ್ರ ವಸ್ತುಗಳನ್ನು ಖರೀದಿಸಲು ಇ–ಕಾಮರ್ಸ್‌ ಜಾಲತಾಣಗಳನ್ನು ಬಳಸುತ್ತಿದ್ದಾರೆ. 2020ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಯುವಜನರ ಸಂಖ್ಯೆ ಶೇ 50ರಷ್ಟಾಗುತ್ತದೆ. ಈ ಹೊಸ ತಲೆಮಾರು ಇ–ಕಾಮರ್ಸ್‌ಗೆ ಒಲಿಯಲಿದೆ ಎಂಬ ನಿರೀಕ್ಷೆಯನ್ನು ದೊಡ್ಡ ಕಂಪನಿಗಳು ಹೊಂದಿವೆ. ಇದೀಗ ವಾಲ್‌ಮಾರ್ಟ್‌ ಅಷ್ಟುದೊಡ್ಡ ಮೊತ್ತಕ್ಕೆ ಫ್ಲಿಪ್‌ಕಾರ್ಟ್‌ ಖರೀದಿಸಲು ಇರುವ ಅನೇಕ ಕಾರಣಗಳ ಪೈಕಿ ಇದೂ ಒಂದು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry